'ರಿಟೇಲ್ ಆಫ್ ದಿ ಫ್ಯೂಚರ್' ಪ್ಲ್ಯಾಟ್‌ಫಾರ್ಮ್ ತೆರೆದ Mercedes-Benz
ಮರ್ಸಿಡಿಸ್ ಬೆಂಝ್ ಇಂಡಿಯಾ(Mercedes-Benz India) ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಕಾರು ಮಾರಾಟವನ್ನು ಸರಳಗೊಳಿಸಲು ಹೊಸ ಯೋಜನೆಯೊಂದನ್ನು ಜಾರಿಗೆ ತಂದಿದ್ದು, ಕಂಪನಿಯು ಹೊಸ ಮಾದರಿಯ ಮಾರಾಟ ವೈಶಿಷ್ಟ್ಯತೆಗಳನ್ನು ಒಳಗೊಂಡ ರಿಟೇಲ್ ಆಫ್ ದಿ ಫ್ಯೂಚರ್(ROTF) ಪ್ಲ್ಯಾಟ್‌ಫಾರ್ಮ್ ತೆರೆದಿದೆ.

ರಿಟೇಲ್ ಆಫ್ ದಿ ಫ್ಯೂಚರ್ ಪ್ಲ್ಯಾಟ್‌ಫಾರ್ಮ್ ಕಾರ್ಯನಿರ್ವಹಣೆಯನ್ನು ಅಧಿಕೃವಾಗಿ ಜಾರಿಗೆ ತಂದಿರುವ ಮರ್ಸಿಡಿಸ್ ಬೆಂಝ್ ಕಂಪನಿಯು ಹೊಸ ಪ್ಲ್ಯಾಟ್‌ಫಾರ್ಮ್ ಮೂಲಕ ತನ್ನ ಐಷಾರಾಮಿ ಕಾರು ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲಿದ್ದು, ಹೊಸ ಪ್ಲ್ಯಾಟ್‌ಫಾರ್ಮ್ ಮೂಲಕ ಗ್ರಾಹಕರು ಮತ್ತು ಕಂಪನಿಯ ನಡುವೆ ಪಾರದರ್ಶಕತೆಯನ್ನು ಹೆಚ್ಚಿಸುವ ಗುರಿ ಹೊಂದಲಾಗಿದೆ.

ಹೊಸ ಕಾರು ಮಾರಾಟ ಪ್ರಕ್ರಿಯೆಯಲ್ಲಿ ಫ್ರ್ಯಾಂಚೈಸ್ ಪಾಲುದಾರರ ಕನಿಷ್ಠ ಹಸ್ತಕ್ಷೇಪದೊಂದಿಗೆ ನೇರವಾಗಿ ಕಂಪನಿಯೇ ಗ್ರಾಹಕರೊಂದಿಗೆ ವ್ಯವಹರಿಸಲಿದ್ದು, ಕಾರು ಖರೀದಿಯ ನಂತರ ಮಾರಾಟ ಸೇವೆಗಳು ಯಥಾ ಪ್ರಕಾರವಾಗಿ ನಡೆಯಲಿವೆ.

ಹೊಸ ಯೋಜನೆಯಿಂದ ಫ್ರ್ಯಾಂಚೈಸ್ ಪಾಲುದಾರರು ಸ್ಟಾಕ್ ಪ್ರಮಾಣದಿಂದ ಅನುಭವಿಸುತ್ತಿದ್ದ ಆರ್ಥಿಕ ಸಂಕಷ್ಟವನ್ನು ತಡೆಯಲು ಹೊಸ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲಾಗಿದ್ದು, ಇದು ಪ್ರಸ್ತುತ ಮಾರಾಟ ಪ್ರಕ್ರಿಯೆಯಲ್ಲಿ ಮಾದರಿಗಿಂತಲೂ ತುಸು ಭಿನ್ನವಾಗಿರುತ್ತದೆ.

ಪ್ರಸ್ತುತ ಮಾರಾಟ ವಿಧಾನದಲ್ಲಿ ವಿತರಕರು ಮರ್ಸಿಡಿಸ್‌ನಿಂದ ಷೇರುಗಳನ್ನು ಖರೀದಿಸಿ ನಂತರ ಗ್ರಾಹಕರಿಗೆ ಕಾರು ಮಾರಾಟ ಮಾಡುತ್ತಾರೆ. ಆದರೆ ಹೊಸ ವಿಧಾನದಲ್ಲಿ ಅಧಿಕೃತ ಮಾರಾಟಗಾರರಿಂದ ಕನಿಷ್ಠ ಹಸ್ತಕ್ಷೇಪದೊಂದಿಗೆ ಹೊಸ ಕಾರುಗಳು ಗ್ರಾಹಕರನ್ನು ತಲುಪಲಿದ್ದು, ಈ ಮೂಲಕ ಕಾರು ತಯಾರಕರೇ ಇನ್ವಾಯ್ಸ್ ಮಾಡಲಿದ್ದಾರೆ.

ಅಂದರೆ ಮರ್ಸಿಡಿಸ್ ಬೆಂಝ್ ಕಂಪನಿಯು ದೇಶಾದ್ಯಂತ ಎಲ್ಲಾ ರಾಜ್ಯಗಳಲ್ಲೂ ಗ್ರಾಹಕರಿಗೆ ಒಂದೇ ಬೆಲೆಗಳನ್ನು ನಿಗದಿಪಡಿಸಲಿದ್ದು, ಕಾರು ಮಾರಾಟವನ್ನೇ ಕಂಪನಿಯೇ ನಿರ್ವಹಿಸಿದರೂ ವಿತರಣೆಗಾಗಿ ಶೋರೂಂಗಳ ಮೂಲಕ ಪಡೆದುಕೊಳ್ಳಬೇಕಿರುತ್ತದೆ.

ಹೊಸ ಮಾರಾಟ ಸೌಲಭ್ಯದಿಂದ ವಿತರಕರು ದೊಡ್ಡ ಪ್ರಮಾಣದ ಸ್ಟಾಕ್ ಮಾದರಿಗಳಿಂದ ಅನುಭವಿಸುವ ನಷ್ಟ ತಡೆಯಲು ಈ ವ್ಯವಸ್ಥೆಯನ್ನು ಜಾರಿಗೆ ತರಲಾಗಿದ್ದು, ಹೊಸ ವಿಧಾನ ಮತ್ತೊಂದು ಪ್ರಯೋಜವೆಂದರೆ ಗ್ರಾಹಕರಿಗೆ ಡೀಲರ್ಸ್‌ಗಳಿಂದಾಗುವ ಮೋಸ ಮತ್ತು ಸ್ಟಾಕ್ ಮಾರಾಟದಲ್ಲಾಗುವ ಒಳಸಂಚುಗಳನ್ನು ತಪ್ಪಿಸಲು ಸಹ ಸಹಕಾರಿಯಾಗಿದೆ.

ರಿಟೇಲ್ ಆಫ್ ದಿ ಫ್ಯೂಚರ್ ಪ್ಲ್ಯಾಟ್‌ಫಾರ್ಮ್‌ನಿಂದಾಗಿ ಗ್ರಾಹಕರಿಗೆ ಮತ್ತು ಡೀಲರ್ಸ್‌ಗಳ ನಡುವೆ ಯಾವುದೇ ವ್ಯವಹಾರ ಇಲ್ಲವಾದರೂ ಕಾರು ಮಾರಾಟದಲ್ಲಿನ ಲಾಭಾಂಶಗಳ ಪಾಲು ಕಂಪನಿಯೊಂದಿಗೆ ಹಂಚಿಯಾಗಲಿದ್ದು, ಸ್ಟಾಕ್ ಪ್ರಮಾಣದ ಮಾರಾಟವು ಮತ್ತಷ್ಟು ಸರಳಗೊಳ್ಳಲಿದೆ. ಕಂಪನಿಯು ಹೊಸ ಮಾರಾಟ ವ್ಯವಸ್ಥೆಯನ್ನು ಈಗಾಗಲೇ ಸ್ವಿಡನ್, ಆಸ್ಟ್ರೀಯಾ, ದಕ್ಷಿಣ ಆಫ್ರಿಕಾದಲ್ಲಿ ಯಶಸ್ವಿ ಜಾರಿಗೆ ತಂದಿದ್ದು, ಭಾರತದಲ್ಲೂ ಇದೀಗ ಹೊಸ ಮಾರಾಟ ಸೌಲಭ್ಯವು ಗ್ರಾಹಕರಿಗೆ ಯಾವ ರೀತಿ ಅನುಕೂಲಕರವಾಗಲಿದೆ ಎನ್ನುವುದು ಕಾಯ್ದುನೋಡಬೇಕಿದೆ.

ಇನ್ನು ಐಷಾರಾಮಿ ಕಾರು ಉತ್ಪಾದನಾ ಕಂಪನಿಯಾಗಿರುವ ಮರ್ಸಿಡಿಸ್ ಬೆಂಝ್ ಭಾರತದಲ್ಲಿ ಸದ್ಯ ಮುಂಚೂಣಿ ಐಷಾರಾಮಿ ಕಾರು ಉತ್ಪಾದನಾ ಕಂಪನಿಯಾಗಿ ಗುರುತಿಸಿಕೊಂಡಿದ್ದು, ಕಂಪನಿಯು ಕೋವಿಡ್ ಅಬ್ಬರದ ನಡುವೆಯೂ ಭರ್ಜರಿ ಬೇಡಿಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಮರ್ಸಿಡಿಸ್ ಬೆಂಝ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಐಷಾರಾಮಿ ಕಾರು ಮಾರಾಟ ವಿಭಾಗದಲ್ಲಿ ಸತತವಾಗಿ ಅಗ್ರಸ್ಥಾನ ಕಾಯ್ದುಕೊಂಡಿದ್ದು, 2021ರ ಮೂರನೇ ತ್ರೈಮಾಸಿಕ ಅವಧಿಯಲ್ಲಿ 4101 ಕಾರುಗಳನ್ನು ಮಾರಾಟ ಮಾಡುವ ಮೂಲಕ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಂಡಿದೆ.

ದೇಶಿಯ ಮಾರುಕಟ್ಟೆಯಲ್ಲಿ ಮರ್ಸಿಡಿಸ್ ಬೆಂಝ್ ಕಂಪನಿಯ ಕಳೆದ ವರ್ಷದ ಮೂರನೇ ತ್ರೈಮಾಸಿಕ ಅವಧಿಯಲ್ಲಿನ ಕಾರು ಮಾರಾಟ ಪ್ರಮಾಣಕ್ಕಿಂತಲೂ ಶೇ.99ರಷ್ಟು ಬೆಳವಣಿಗೆ ಸಾಧಿಸಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ ಕಂಪನಿಯು ಕೇವಲ 2060 ಯುನಿಟ್‌ಗಳನ್ನು ಮಾತ್ರ ಮಾರಾಟ ಮಾಡಿತ್ತು.

ಮೂರನೇ ತ್ರೈಮಾಸಿಕ ಅವಧಿಯಾದ ಜುಲೈನಿಂದ ಸೆಪ್ಟೆಂಬರ್ ಅವಧಿಯಲ್ಲಿನ ಐಷಾರಾಮಿ ಕಾರು ಮಾರಾಟದಲ್ಲಿ ಪ್ರತಿಸ್ಪರ್ಧಿ ಕಾರು ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡಿರುವ ಮರ್ಸಿಡಿಸ್ ಬೆಂಝ್ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಹಲವಾರು ಹೊಸ ಕಾರು ಮಾದರಿಗಳನ್ನು ಭಾರತದಲ್ಲಿ ಮಾರಾಟ ಮಾಡುತ್ತಿದೆ.

ಭಾರತದಲ್ಲಿ ಸದ್ಯ ಜಮರ್ನ್ ಕಾರು ಕಂಪನಿಯು ಒಟ್ಟು 24 ವಿವಿಧ ಕಾರು ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, 24 ಕಾರು ಮಾದರಿಗಳಲ್ಲಿ 13 ಕಾರು ಮಾದರಿಗಳನ್ನು ಸ್ಥಳೀಯವಾಗಿ ಉತ್ಪಾದನೆಗೊಳ್ಳುತ್ತಿರುವ ಕಾರು ಮಾದರಿಗಳಾಗಿವೆ.

ಮರ್ಸಿಡಿಸ್ ಬೆಂಝ್ ಕಂಪನಿಯು ತನ್ನ ಜನಪ್ರಿಯ ಕಾರು ಮಾದರಿಗಳಾದ ಇ-ಕ್ಲಾಸ್, ಜಿಎಲ್ಎ, ಜಿಎಲ್‌ಸಿ ಎಫ್ಎಲ್, ಎಸ್-ಕ್ಲಾಸ್, ಜಿಎಲ್ಎಸ್ ಮೇಬ್ಯಾಚ್, ಎಎಂಜಿ ಎ35, ಎಎಂಜಿ ಜಿಎಲ್ಎ 35, ಎಎಂಜಿ ಇ53, ಎಎಂಜಿ ಇ63 ಮತ್ತು ಎಎಂಜಿ ಜಿಎಲ್ಇ63 ಎಸ್ ಮಾದರಿಗಳನ್ನು ಸಂಪೂರ್ಣವಾಗಿ ಭಾರತದಲ್ಲಿ ನಿರ್ಮಾಣ ಮಾಡುತ್ತಿದೆ.

ಇನ್ನುಳಿದ ಕಾರು ಮಾದರಿಗಳನ್ನು ಕೇಂದ್ರ ಸರ್ಕಾರದ ಹೊಸ ಆಮದು ನೀತಿಯಲ್ಲಿ ಭಾರತದಲ್ಲಿ ಮಾರಾಟ ಮಾಡುತ್ತಿದ್ದು, ಕಂಪನಿಯು ಹೊಸ ಉತ್ಪನ್ನಗಳೊಂದಿಗೆ 2021ರ ಮೊದಲ ತ್ರೈಮಾಸಿಕ ಅವಧಿಯಲ್ಲಿ 3193 ಯುನಿಟ್, ಎರಡನೇ ತ್ರೈಮಾಸಿಕ ಅವಧಿಯಲ್ಲಿ 1664 ಯುನಿಟ್ ಮತ್ತು ಮೂರನೇ ತ್ರೈಮಾಸಿಕ ಅವಧಿಯಲ್ಲಿ 4101 ಯುನಿಟ್ ಕಾರುಗಳನ್ನು ಮಾರಾಟ ಮಾಡಿದೆ.


Click it and Unblock the Notifications








