ಭಾರತದಲ್ಲಿ ನ್ಯೂ ಜನರೇಷನ್ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಬಿಡುಗಡೆ
ಐಷಾರಾಮಿ ಕಾರು ತಯಾರಕ ಕಂಪನಿಯಾಗಿರುವ ಮರ್ಸಿಡಿಸ್ ಬೆಂಝ್ ತನ್ನ ಜನಪ್ರಿಯ ಎಸ್-ಕ್ಲಾಸ್ ಸೆಡಾನ್ ಮಾದರಿಯ ನ್ಯೂ ಜನರೇಷನ್ ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು, ಹೊಸ ಕಾರು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 2.17 ಕೋಟಿ ಬೆಲೆ ಹೊಂದಿದೆ.

ನ್ಯೂ ಜನರೇಷನ್ ಎಸ್-ಕ್ಲಾಸ್ ಕಾರು ಮಾದರಿಯನ್ನು ಕಳೆದ ವರ್ಷದ ಮಧ್ಯಂತರದಲ್ಲಿ ಪ್ರಮುಖ ಅಂತರ್‌ರಾಷ್ಟ್ರೀಯ ಮಾರುಕಟ್ಟೆಗಳಿಗೆ ಪರಿಚಯಿಸಿದ ಮರ್ಸಿಡಿಸ್ ಬೆಂಝ್ ಕಂಪನಿಯು ಇದೀಗ ಭಾರತದಲ್ಲೂ ಬಿಡುಗಡೆ ಮಾಡಿದ್ದು, ಕೋವಿಡ್ ಪರಿಣಾಮ ಹೊಸ ಕಾರಿನ ಬಿಡುಗಡೆಯನ್ನು ಮುಂದೂಡಿಕೆ ಮಾಡುತ್ತಾ ಬಂದಿತ್ತು. ಇದೀಗ ಹೊಸ ಕಾರು ದೇಶಿಯ ಮಾರುಕಟ್ಟೆಗೂ ಪ್ರವೇಶಿಸಿದ್ದು, ಹೊಸ ಎಸ್-ಕ್ಲಾಸ್ ಮಾದರಿಯು ಪ್ರಮುಖ ಎರಡು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ.

ಹೊಸ ಎಸ್-ಕ್ಲಾಸ್ ಮಾದರಿಯನ್ನು ಮರ್ಸಿಡಿಸ್ ಬೆಂಝ್ ಕಂಪನಿಯು ಎಸ್ 400ಡಿ ಲಾಂಚ್ ಎಡಿಷನ್ (ರೂ. 2.17 ಕೋಟಿ) ಮತ್ತು ಎಸ್ 450 ಲಾಂಚ್ ಎಡಿಷನ್ (ರೂ. 2.19 ಕೋಟಿ) ಎನ್ನುವ ವೆರಿಯೆಂಟ್‌ಗಳಲ್ಲಿ ಪರಿಚಯಿಸಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಎರಡು ಆವೃತ್ತಿಗಳಲ್ಲೂ ಖರೀದಿಗೆ ಲಭ್ಯವಿದೆ.

ನವೀಕರಿಸಲಾಗಿರುವ ಹೊಸ ಎಸ್-ಕ್ಲಾಸ್ ಸೆಡಾನ್ ಮಾದರಿಯು ಹಳೆಯ ಆವೃತ್ತಿಗಿಂತಲೂ ಸಾಕಷ್ಟು ಬದಲಾವಣೆಗಳನ್ನು ಪಡೆದುಕೊಂಡಿದ್ದು, ಅತ್ಯುತ್ತಮ ಫೀಚರ್ಸ್, ವಿಸ್ತರಿತ ವೀಲ್ಹ್‌ಬೆಸ್ ಮತ್ತು ಬಲಿಷ್ಠ ಎಂಜಿನ್ ಆಯ್ಕೆಯು ಗ್ರಾಹಕರ ಪ್ರಮುಖ ಆಕರ್ಷಣೆಯಾಗಲಿವೆ.

2021ರ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಕಾರು ಹಳೆಯ ಆವೃತ್ತಿಗಿಂತಲೂ ಹೆಚ್ಚುವರಿಯಾಗಿ 34 ಎಂಎಂ ಉದ್ದ, 22 ಎಂಎಂ ಅಗಲ ಮತ್ತು 12 ಎಂಎಂ ಎತ್ತರವನ್ನು ಹೊಂದಿದ್ದು, ಡಿಜಿಟಲ್ ಲೈಟ್ ಎಲ್ಇಡಿ ಹೆಡ್‌ಲ್ಯಾಂಪ್, ಹೊಸ ಕ್ರೋಮ್ ವಿನ್ಯಾಸ, ಸಿಗ್ನಿಚೆರ್ ಗ್ರಿಲ್, ಏರ್ ಇನ್‌ಟೆಕ್, ಎಲ್ಇಡಿ ಟೈಲ್‌ಲೈಟ್ ಮತ್ತು ಸ್ಪೋರ್ಟಿ ವಿನ್ಯಾಸ ಹೊಂದಿರುವ ಅಲಾಯ್ ವೀಲ್ಹ್ ಜೋಡಿಸಲಾಗಿದೆ.

ಹೊಸ ಕಾರು ಈ ಬಾರಿ ಪ್ರಮುಖ ಐದು ಬಣ್ಣಗಳ ಆಯ್ಕೆ ಹೊಂದಿದ್ದು, ಗ್ರಾಹಕರ ಬೇಡಿಕೆ ಆಧರಿಸಿ ಡೈಮಂಡ್ ವೈಟ್, ನಾಕ್ಸಿ ಬ್ಲ್ಯಾಕ್, ಬ್ಲ್ಯೂ, ರುಬೆಲ್ ಲೈಟ್ ರೆಡ್ ಮತ್ತು ಎಮೆರ್ಲಡ್ ಗ್ರೀನ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.

ಲಾಂಗ್ ವೀಲ್ಹ್ ಪರಿಣಾಮ ಕ್ಯಾಬಿನ್ ಸ್ಪೇಸ್ ಸಾಕಷ್ಟು ವಿಶಾಲವಾಗಿದ್ದು, ಹೊಸ ಸೆಡಾನ್ ಆಕರ್ಷಣೆ ಇದು ಪ್ರಮುಖ ಕಾರಣವಾಗಿದೆ. ಹೊಸ ಕಾರಿನ ಇಂಟಿರಿಯರ್ ನಲ್ಲಿ ಹಲವಾರು ಐಷಾರಾಮಿ ಮತ್ತು ಅತ್ಯಾಧುನಿಕ ಫೀಚರ್ಸ್‌ಗಳನ್ನು ಜೋಡಣೆ ಮಾಡಲಾಗಿದ್ದು, ಎಸ್-ಕ್ಲಾಸ್‌ನಲ್ಲಿ ಏರ್ ಫ್ಲೋ ಅತ್ಯುತ್ತಮವಾಗಿಸಲು ಹೊಸ ಫ್ಲಶ್-ಫಿಟ್ಟಿಂಗ್ ಅನ್ನು ನೀಡಿದೆ.

ಈ ಕಾರಿನಲ್ಲಿ ಡಿಜಿಟಲ್ ಕನ್ಸೋಲ್ ಜೊತೆಗೆ ಸೆಂಟ್ರಲ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಜೋಡಿಸಲಾಗಿದ್ದು, ಮೌಂಟಡ್ ಕಂಟ್ರೋಲ್ ನೊಂದಿಗೆ ಹೊಸ ಸ್ಟೀರಿಂಗ್ ವ್ಹೀಲ್ ಅನ್ನು ಅಳವಡಿಸಲಾಗಿದೆ.

ಜೊತೆಗೆ ಬರ್ಮೆಸ್ಟರ್ ಹೈ-ಎಂಡ್ 4ಡಿ ಸೌಂಡ್ ಸಿಸ್ಟಂ, ಕ್ಯಾಬಿನ್ ಮೂಲಕ 263 ಕ್ಕೂ ಹೆಚ್ಚು ಎಲ್ಇಡಿ ಲ್ಯಾಂಪ್ ಗಳನ್ನು ಹೊಂದಿರುವ ಆಂಬಿಯೆಂಟ್ ಲೈಟಿಂಗ್, ವಾಯ್ಸ್ ಕಮಾಂಡ್, ಫೋರ್ ಜೋನ್ ಕ್ಲೈಮೆಟ್ ಕಂಟ್ರೋಲ್, ಸುರಕ್ಷತೆಗಾಗಿ ರೇಡಾರ್ ಗೈಡೆಡ್ ಕ್ರೂಸ್ ಕಂಟ್ರೋಲ್, ಹತ್ತು ಏರ್‌ಬ್ಯಾಗ್, 360 ಡಿಗ್ರಿ ಕ್ಯಾಮೆರಾ ಮತ್ತು ನೈಟ್ ವಿಷನ್ ಕ್ಯಾಮೆರಾವನ್ನು ಹೊಂದಿದೆ.

ಎಂಜಿನ್ ಮತ್ತು ಪರ್ಫಾಮೆನ್ಸ್
ಹೊಸ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಕಾರು ಪೆಟ್ರೋಲ್ ಮತ್ತು ಡೀಸೆಲ್ ಎರಡು ಮಾದರಿಗಳಲ್ಲೂ ಖರೀದಿ ಮಾಡಬಹುದಾಗಿದ್ದು, ಪ್ರತಿ ಎಂಜಿನ್ ಆಯ್ಕೆಯಲ್ಲೂ 4 ಮ್ಯಾಟಿಕ್ ಆಲ್ ವೀಲ್ಹ್ ಡ್ರೈವ್ ಸಿಸ್ಟಂ ಮತ್ತು 9-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಜೋಡಣೆ ಮಾಡಲಾಗಿದೆ.

ಎಸ್ 450 ಪೆಟ್ರೋಲ್ ಮಾದರಿಯು 3.0-ಲೀಟರ್(2,999 ಸಿಸಿ) 6 ಸಿಲಿಂಡರ್ ಎಂಜಿನ್‌ನೊಂದಿಗೆ 362-ಬಿಎಚ್‌ಪಿ, 500-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ ಎಸ್ 400ಡಿ ಡೀಸೆಲ್ ಮಾದರಿಯು 3.0-ಲೀಟರ್(2,925 ಸಿಸಿ) 6 ಸಿಲಿಂಡರ್ ಎಂಜಿನ್‌ನೊಂದಿಗೆ 362-ಬಿಎಚ್‌ಪಿ, 700-ಎನ್ಎಂ ಟಾರ್ಕ್ ಉತ್ಪಾದನಾ ಗುಣ ಹೊಂದಿದೆ.

ಈ ಮೂಲಕ ಪ್ರತಿ ಗಂಟೆಗೆ 250ಕಿ.ಮೀ ಟಾಪ್ ಸ್ಪೀಡ್ ಹೊಂದಿರುವ ಹೊಸ ಕಾರು ಮಾರುಕಟ್ಟೆಯಲ್ಲಿನ ಬಿಎಂಡಬ್ಲ್ಯು 7 ಸೀರಿಸ್, ಆಡಿ ಎ8 ಎಲ್ ಮಾದರಿಗಳಿಗೆ ಉತ್ತಮ ಪೈಪೋಟಿ ನೀಡಲಿದ್ದು, ಹೊಸ ಕಾರನ್ನು ಕಂಪನಿಯು ಶೀಘ್ರದಲ್ಲೇ ವಿತರಣೆ ಆರಂಭಿಸಲಿದೆ.


Click it and Unblock the Notifications