ಎಲೆಕ್ಟ್ರಿಕ್ ವಾಹನ ಉದ್ಯಮಕ್ಕೆ ಕಾಲಿಡಲಿದೆ ಮತ್ತೊಂದು ಮೊಬೈಲ್ ತಯಾರಕ ಕಂಪನಿ
ವಿಶ್ವಾದ್ಯಂತ ದಿನೇ ದಿನೇ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಪರಿಸರ ಸ್ನೇಹಿಯಾಗಿರುವ ಹಿನ್ನೆಲೆಯಲ್ಲಿ ಹಲವಾರು ದೇಶಗಳು ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಉತ್ತೇಜನ ನೀಡುತ್ತಿವೆ. ನಾರ್ವೆ ಸೇರಿದಂತೆ ಯುರೋಪಿನ ಹಲವು ದೇಶಗಳಲ್ಲಿ 2030ರ ವೇಳೆಗೆ ಸಂಪೂರ್ಣವಾಗಿ ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳಲು ನಿರ್ಧರಿಸಲಾಗಿದೆ. ಭಾರತದಲ್ಲಿಯೂ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹಲವು ಯೋಜನೆಗಳನ್ನು ರೂಪಿಸಲಾಗುತ್ತಿದೆ.

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ಫೇಮ್ 2ನಂತಹ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಕೆಲವು ರಾಜ್ಯಗಳಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವವರಿಗೆ ಸಬ್ಸಿಡಿ ನೀಡಲಾಗುತ್ತಿದೆ. ಇನ್ನು ಕೆಲವು ರಾಜ್ಯಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಖರೀದಿ ಮೇಲೆ ವಿಶೇಷ ಕೊಡುಗೆಗಳನ್ನು ನೀಡಲಾಗುತ್ತದೆ. ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬಹುತೇಕ ಎಲ್ಲಾ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗೆ ಮುಂದಾಗಿವೆ.

ವಾಹನ ತಯಾರಕ ಕಂಪನಿಗಳು ಮಾತ್ರವಲ್ಲದೇ ಸೆಲ್ ಫೋನ್ ತಯಾರಕ ಕಂಪನಿಗಳು ಸಹ ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸಲು ಮುಂದಾಗಿವೆ. ಕೆಲವು ತಿಂಗಳ ಹಿಂದಷ್ಟೇ Lenovo ಕಂಪನಿಯು ತನ್ನ ಸ್ಕೂಟರ್ ಮಾದರಿಯ ಎಲೆಕ್ಟ್ರಿಕ್ ವಾಹನವನ್ನು ಬಿಡುಗಡೆಗೊಳಿಸಿತ್ತು. ಈ ಹಿಂದೆ Apple, Huwai ನಂತಹ ಕಂಪನಿಗಳು ಸಹ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗೆ ಮುಂದಾಗಿರುವ ಬಗ್ಗೆ ವರದಿಯಾಗಿತ್ತು.

ಕೆಲ ದಿನಗಳ ಹಿಂದಷ್ಟೇ ಜನಪ್ರಿಯ ಮೊಬೈಲ್ ಫೋನ್ ತಯಾರಕ ಕಂಪನಿಯಾದ Xiomi ಸಹ ಎಲೆಕ್ಟ್ರಿಕ್ ವಾಹನ ಉತ್ಪಾದನೆಗೆ ಮುಂದಾಗಿರುವ ಬಗ್ಗೆ ವರದಿಯಾಗಿತ್ತು. ಕೆಲವು ದಿನಗಳಿಂದ ಸಣ್ಣ ಎಲೆಕ್ಟ್ರಿಕ್ ವಾಹನಗಳನ್ನು ಪರಿಚಯಿಸುತ್ತಿರುವ Xiomi ಕಂಪನಿಯು ಈಗ ಪೂರ್ಣ ಪ್ರಮಾಣದ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸಲು ನಿರ್ಧರಿಸಿರುವ ಬಗ್ಗೆ ವರದಿಯಾಗಿದೆ.

ಈಗ ಮತ್ತೊಂದು ಜನಪ್ರಿಯ ಸೆಲ್ ಫೋನ್ ತಯಾರಕ ಕಂಪನಿಯಾದ RealMe ಸಹ ಶೀಘ್ರದಲ್ಲೇ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆ ಮಾಡಲಿದೆ ಎಂದು ವರದಿಯಾಗಿದೆ. RealMe ಕಂಪನಿಯು ಶೀಘ್ರದಲ್ಲೇ ಆಟೋ ಉದ್ಯಮಕ್ಕೆ ಕಾಲಿಡಲಿದೆ ಎಂದು ವರದಿಯಾಗಿದೆ. ಕಂಪನಿಯು ವಾಹನ ಉತ್ಪಾದನೆಗೆ ಮುಂದಾಗುತ್ತಿದೆ ಎಂಬ ಸುದ್ದಿಗಳು ಹರಿದಾಡುತ್ತಿದ್ದ ಬೆನ್ನಲ್ಲೇ ಈ ಸುದ್ದಿ ಹೊರ ಬಂದಿದೆ.

ವೇಗವಾಗಿ ಬೆಳೆಯುತ್ತಿರುವ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯ ಅಗತ್ಯವನ್ನು RealMe ಅರಿತಿದ್ದು, ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಗೆ ಕಾಲಿಡುತ್ತಿದೆ ಎಂದು ಹೇಳಲಾಗಿದೆ. ವರದಿಗಳ ಪ್ರಕಾರ ಕಂಪನಿಯು ಮೊದಲು ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ. ಇದೇ ವೇಳೆ ಕಂಪನಿಯು ಭೂಮಿ, ಗಾಳಿ ಅಥವಾ ನೀರಿನಲ್ಲಿ ಪ್ರಯಾಣಿಕ ವಾಹನಗಳನ್ನು ಸಹ ಉತ್ಪಾದಿಸಬಹುದು ಎಂದು ಹೇಳಲಾಗಿದೆ.

ಆದರೆ ಕಂಪನಿಯು ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಸ್ಮಾರ್ಟ್ ಫೋನ್ ಮಾರಾಟದಲ್ಲಿ ಕ್ರಾಂತಿಯನ್ನುಂಟು ಮಾಡುತ್ತಿರುವ RealMe ತನ್ನ ಹೊಸ ಬ್ರಾಂಡ್ ಅನ್ನು ವಾಹನಗಳ ಅಡಿಯಲ್ಲಿ ನೋಂದಾಯಿಸಿಕೊಂಡಿರುವುದು ವಾಹನ ಉತ್ಸಾಹಿಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ಉಂಟು ಮಾಡಿದೆ. ವಿಶ್ವದೆಲ್ಲೆಡೆ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ.

ಈ ಪರಿಸ್ಥಿತಿಯ ಲಾಭ ಪಡೆಯಲು ಕಂಪನಿಯು ಎಲೆಕ್ಟ್ರಿಕ್ ವಾಹನವನ್ನು ಶೀಘ್ರವೇ ಬಿಡುಗಡೆ ಮಾಡುವ ನಿರೀಕ್ಷೆಗಳಿವೆ. 2020ರ ಏಪ್ರಿಲ್ ವೇಳೆಗೆ ಕಂಪನಿಯು ಚೀನಾದಲ್ಲಿ ಒಂದು ಮಿಲಿಯನ್ ಸ್ಮಾರ್ಟ್ ಫೋನ್ ಮಾರಾಟದ ದಾಖಲೆಯನ್ನು ಸ್ಥಾಪಿಸಿದೆ. ಕಂಪನಿಯು ಕೇವಲ 37 ತಿಂಗಳ ಜಾಗತಿಕ ಸ್ಮಾರ್ಟ್‌ಫೋನ್ ಮಾರಾಟದಲ್ಲಿ 100 ಮಿಲಿಯನ್‌ಗಿಂತಲೂ ಹೆಚ್ಚು ಸ್ಮಾರ್ಟ್‌ಫೋನ್‌ಗಳನ್ನು ರಫ್ತು ಮಾಡಿದೆ. RealMe ಕಂಪನಿಯ ಪ್ರಮುಖ ಮಾರುಕಟ್ಟೆ ಭಾರತ ಎಂಬುದು ಗಮನಾರ್ಹ.

ಲೆನೊವೊ, ಆಪಲ್, ಹುವೈ ನಂತಹ ಮೊಬೈಲ್ ಫೋನ್ ತಯಾರಕ ಕಂಪನಿಗಳು ಈಗಾಗಲೇ ಎಲೆಕ್ಟ್ರಿಕ್ ವಾಹನ ತಯಾರಿಕೆಯಲ್ಲಿ ತೊಡಗಿವೆ. ಗೂಗಲ್ ಹಾಗೂ ಅಮೆಜಾನ್ ನಂತಹ ಕಂಪನಿಗಳು ಸ್ವಯಂಚಾಲಿತ ವಾಹನಗಳನ್ನು ತಯಾರಿಸುವ ಪ್ರಕ್ರಿಯೆಯಲ್ಲಿ ನಿರತವಾಗಿವೆ. ಈ ಸಾಲಿಗೆ ಶಿಯೋಮಿ ಕಂಪನಿಯ ಜೊತೆಗೆ ರಿಯಲ್ ಮೀ ಹೊಸ ಸೇರ್ಪಡೆಯಾಗಿದೆ.

ರಿಯಲ್ ಮೀ ಕಂಪನಿಯ ಸೆಲ್ ಫೋನ್'ಗಳು ಮೊಬೈಲ್ ಮಾರುಕಟ್ಟೆಯಲ್ಲಿ ತಮ್ಮದೇ ಆದ ಪ್ರಾಬಲ್ಯವನ್ನು ಸಾಧಿಸಿವೆ. ಕಂಪನಿಯ ಮೊಬೈಲ್ ಗಳು ಭಾರತದಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತವೆ ಎಂಬುದು ಗಮನಾರ್ಹ. ಕಂಪನಿಯು ಎಲೆಕ್ಟ್ರಿಕ್ ವಾಹನ ಮಾರಾಟದಲ್ಲಿಯೂ ತನ್ನ ಅಧಿಪತ್ಯವನ್ನು ಸ್ಥಾಪಿಸುವ ನಿರೀಕ್ಷೆಗಳಿವೆ. ರಿಯಲ್ ಮೀ ಕಂಪನಿಯು ಕಡಿಮೆ ಬೆಲೆಯಲ್ಲಿ ಹೆಚ್ಚು ಫೀಚರ್ ಗಳಿರುವ ಮೊಬೈಲ್ ಫೋನ್ ಗಳನ್ನು ಮಾರಾಟ ಮಾಡುತ್ತದೆ.

ಇದೇ ರೀತಿ ಕಡಿಮೆ ಬೆಲೆಯ ಎಲೆಕ್ಟ್ರಿಕ್ ವಾಹನಗಳನ್ನು ಮಾರಾಟ ಬಹುದು ಎಂಬುದು ವಾಹನ ಪ್ರಿಯರ ನಿರೀಕ್ಷೆ. ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರಿರುವ ಹಿನ್ನೆಲೆಯಲ್ಲಿ ವಾಹನ ಸವಾರರು ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಮುಂದಾಗುತ್ತಿದ್ದಾರೆ. ಆದರೆ ಇವಿ ಚಾರ್ಜಿಂಗ್ ಕೇಂದ್ರಗಳು ಸಾಕಷ್ಟು ಸಂಖ್ಯೆಯಲ್ಲಿ ಇಲ್ಲದೇ ಇರುವುದರಿಂದ ಈಗಲೂ ಸಹ ಹಲವಾರು ಜನರು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಹೆಚ್ಚಿನ ಸಂಖ್ಯೆಯಲ್ಲಿ ಇವಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲು ಮುಂದಾಗುತ್ತಿವೆ.
ಗಮನಿಸಿ: ಮೊದಲ ಮೂರು ಚಿತ್ರಗಳನ್ನು ಹೊರತುಪಡಿಸಿ ಉಳಿದ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.


Click it and Unblock the Notifications