ಲಾಕ್‌ಡೌನ್ ಹಿನ್ನಲೆಯಲ್ಲಿ ಕಾರುಗಳ ವಾರಂಟಿ ಅವಧಿ ಹೆಚ್ಚಿಸಿದ ರೆನಾಲ್ಟ್
ಲಾಕ್‌ಡೌನ್ ಅವಧಿಯಲ್ಲಿ ಕೊನೆಗೊಳ್ಳಲಿರುವ ವಾಹನಗಳ ವಾರಂಟಿ ಅವಧಿಯನ್ನು ರೆನಾಲ್ಟ್ ಇಂಡಿಯಾ ಕಂಪನಿಯು ವಿಸ್ತರಣೆ ಮಾಡಿದ್ದು, ಹೊಸ ಕಾರುಗಳನ್ನು ಹೊರ ತೆಗೆಯಲು ಸಾಧ್ಯವಿಲ್ಲದ ಸಂದರ್ಭದಲ್ಲಿ ತನ್ನ ಗ್ರಾಹಕರಿಗೆ ಸಿಹಿಸುದ್ದಿ ನೀಡಿದೆ.

ಕೋವಿಡ್ ಹೆಚ್ಚುತ್ತಿರುವ ಸಂದರ್ಭದಲ್ಲಿ ವಾಹನ ಮಾರಾಟಕ್ಕೆ ಕೆಲವು ಕಡೆಗಳಲ್ಲಿ ಷರತ್ತು ಬದ್ದ ಅವಕಾಶಗಳಿದ್ದರೂ ಗ್ರಾಹಕರ ಸೇವೆಗಳನ್ನು ಪೂರೈಸುವುದು ಆಟೋ ಉತ್ಪಾದನಾ ಕಂಪನಿಗಳಿಗೆ ಸವಾಲಿನ ಕೆಲಸವಾಗಿದೆ. ಆದರೆ ಲಾಕ್‌ಡೌನ್ ಅವಧಿಯಲ್ಲಿ ಮುಕ್ತಾಯಗೊಳ್ಳಲಿರುವ ನಿಗದಿತ ಅವಧಿಯ ಸೇವೆಗಳನ್ನು ಪಡೆದುಕೊಳ್ಳದ ವಾಹನಗಳ ವಾರಂಟಿ ಆಫರ್ ಮುಗಿದುಹೋಗಲಿದ್ದು, ವಾರಂಟಿ ಅವಧಿ ಮುಕ್ತಾಯದಿಂದ ಉಚಿತ ಸೇವೆಗಳನ್ನು ಕಳೆದುಕೊಳ್ಳಲಿರುವ ಗ್ರಾಹಕರಿಗೆ ರೆನಾಲ್ಟ್ ಕಂಪನಿಯು ಸಿಹಿಸುದ್ದಿ ಪ್ರಕಟಿಸಿದೆ.

ಲಾಕ್‌ಡೌನ್ ಸಂದರ್ಭದಲ್ಲಿ ವಾಹನ ವಾರಂಟಿ ಮುಕ್ತಾಯವಾಗುವುದರಿಂದ ಗ್ರಾಹಕರ ಸೇವೆಗಳು ಕಡಿತವಾಗುವುದನ್ನು ತಪ್ಪಿಸಲು ಗ್ರಾಹಕರಿಗೆ ಹೆಚ್ಚುವರಿಯಾಗಿ ಎರಡು ತಿಂಗಳ ಕಾಲ ವಾರಂಟಿ ಅವಧಿಯನ್ನು ವಿಸ್ತರಿಸಲಾಗಿದೆ.

ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಮುಕ್ತಾಯಗೊಂಡಿರುವ ಮತ್ತು ಮುಕ್ತಾಯಗೊಳ್ಳಬೇಕಿರುವ ಹೊಸ ಕಾರುಗಳ ವಾರಂಟಿ ಅವಧಿಯನ್ನು ಜುಲೈ 31ರ ತನಕ ಮುಂದೂಡಲಾಗಿದ್ದು, ಲಾಕ್‌ಡೌನ್ ಸಂದರ್ಭದಲ್ಲಿ ವಾರಂಟಿ ಮುಕ್ತಾಯಗೊಳ್ಳುವ ಉಚಿತ ಸೇವೆಗಳನ್ನು ಪಡೆದುಕೊಳ್ಳಬೇಕೆಂಬ ಗ್ರಾಹಕರ ಗೊಂದಲವನ್ನು ನಿವಾರಿಸಿದೆ.

ವಾರಂಟಿ ಅವಧಿ ವಿಸ್ತರಣೆಯಾಗಿರುವುದರಿಂದ ವಾರಂಟಿ ಪ್ಯಾಕೇಜ್‌ನಲ್ಲಿರುವ ಸೇವೆಗಳನ್ನು ಪರಿಸ್ಥಿತಿ ತುಸು ಸುಧಾರಣೆಗೊಂಡ ನಂತರ ಪಡೆದುಕೊಳ್ಳಬಹುದಾಗಿದ್ದು, ವಾರಂಟಿ ಅವಧಿಯನ್ನು ವಿಸ್ತರಿಸಿರುವುದು ಗ್ರಾಹಕರ ಮೆಚ್ಚುಗೆಗೆ ಕಾರಣವಾಗಿದೆ. ಇನ್ನು ಹೊಸ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿರುವ ಸಂದರ್ಭದಲ್ಲೇ ಮತ್ತೆ ಉತ್ಪಾದನೆಯು ತಗ್ಗಿರುವುರುವುದು ಭಾರೀ ನಷ್ಟ ಎದುರಿಸುವ ಭೀತಿ ಎದುರಾಗಿದ್ದು, ಹೊಸ ಸುರಕ್ಷಾ ಕ್ರಮ ಕೈಗೊಂಡು ಉತ್ಪಾದನೆಯನ್ನು ಕೈಗೊಳ್ಳಲಾಗುತ್ತಿದೆ.

ಪ್ರಮುಖ ಆಟೋ ಕಂಪನಿಗಳು ಶೇ.50ಕ್ಕಿಂತಲೂ ಕಡಿಮೆ ಪ್ರಮಾಣದ ಉದ್ಯೋಗಿಗಳೊಂದಿಗೆ ಕಾರ್ಯನಿರ್ವಹಣೆ ಮಾಡುತ್ತಿದ್ದು, ವಾಹನ ಮಾರಾಟದಲ್ಲೂ ಕೂಡಾ ಹೊಸ ತಂತ್ರಗಳನ್ನು ಅಳವಡಿಸಿಕೊಂಡು ವೈರಸ್ ಹರಡುವಿಕೆ ತಡೆಯೊಂದಿಗೆ ಉದ್ಯಮ ವ್ಯವಹಾರ ಕೈಗೊಳ್ಳುತ್ತಿವೆ.

ಇದರ ನಡುವೆ ಪರಿಸ್ಥಿತಿಗೆ ಅನುಗುಣವಾಗಿ ಹೊಸ ವಾಹನ ಉತ್ಪಾದನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ನಿರ್ಧರಿಸಿರುವ ಪ್ರಮುಖ ವಾಹನ ಕಂಪನಿಗಳು ಹೊಸ ವಾಹನ ಉತ್ಪಾದನೆಯನ್ನು ಸುಮಾರು ಹದಿನೈದು ದಿನಗಳ ಕಾಲ ಬಂದ್ ಮಾಡುವುದಾಗಿ ಘೋಷಣೆ ಮಾಡಿವೆ.

ಉತ್ಪಾದನೆಯನ್ನು ಬಂದ್ ಮಾಡಿದರೂ ಕೂಡಾ ತುರ್ತು ಗ್ರಾಹಕರ ಸೇವೆಗಳಲ್ಲಿ ಯಾವುದೇ ತೊಂದರೆ ಆಗದಂತೆ ಎಲ್ಲಾ ಅಗತ್ಯ ಸಿದ್ದತೆ ಮಾಡಿಕೊಂಡಿರುವುದಾಗಿ ಹೇಳಿರುವ ವಿವಿಧ ಆಟೋ ಕಂಪನಿಗಳು ಗ್ರಾಹಕರಿಗೆ ಸೇವೆಗಳಿಗೆ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ತೆರೆದಿದೆ.

ಅಗತ್ಯವಿದ್ದಲ್ಲಿ ಗ್ರಾಹಕರ ಮನೆ ಬಾಗಿಲುಗಳಿಗೆ ಸೇವೆ ಒದಗಿಸುತ್ತಿರುವ ಆಟೋ ಕಂಪನಿಯು ಸುರಕ್ಷಾ ಮಾರ್ಗಸೂಚಿ ಪಾಲಿಸುತ್ತಿದ್ದು, ಹೊಸ ವಾಹನ ಖರೀದಿ ಪ್ರಕ್ರಿಯೆಯನ್ನು ಯಾವುದೇ ರೀತಿಯಲ್ಲಿ ಸ್ಥಗಿತಗೊಳಿಸಿಲ್ಲ. ವಾಹನ ಖರೀದಿ ಪ್ರಕ್ರಿಯೆ ಎಂದಿನಂತೆ ಮುಂದುವರೆದಿದ್ದು, ಪರಿಸ್ಥಿತಿಗೆ ಅನುಗುಣವಾಗಿ ವಾಹನ ವಿತರಣೆ ಪ್ರಕ್ರಿಯೆಯನ್ನು ಕೈಗೊಳ್ಳುತ್ತಿದೆ.


Click it and Unblock the Notifications








