ಪ್ರಮುಖ ಕಾರುಗಳ ಖರೀದಿ ಮೇಲೆ ಇಯರ್ ಎಂಡ್ ಆಫರ್ ಘೋಷಿಸಿದ ರೆನಾಲ್ಟ್ ಇಂಡಿಯಾ
ರೆನಾಲ್ಟ್ ಇಂಡಿಯಾ(Renault India) ಕಂಪನಿಯು ಹೊಸ ಕಾರು ಮಾರಾಟದಲ್ಲಿ ಹಲವು ತಿಂಗಳಿನಿಂದ ಉತ್ತಮ ಬೇಡಿಕೆ ಕಾಯ್ದುಕೊಂಡಿದ್ದು, ಕಂಪನಿಯು ವರ್ಷಾಂತ್ಯದಲ್ಲಿ ವಿವಿಧ ಆಫರ್‌ಗಳೊಂದಿಗೆ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ಕೋವಿಡ್‌ನಿಂದಾಗಿ ಎದುರಾಗುತ್ತಿರುವ ಆರ್ಥಿಕ ಸಂಕಷ್ಟದ ನಡುವೆಯೂ ವಿವಿಧ ಕಾರು ಕಂಪನಿಗಳು ಕಳೆದ ಕೆಲ ತಿಂಗಳಿನಿಂದ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಪರಿಸ್ಥಿತಿಗೆ ಅನುಗುಣವಾಗಿ ಹೊಸ ವಾಹನ ಮಾರಾಟವು ಸಾಕಷ್ಟು ಸುಧಾರಣೆ ಕಂಡಿದೆ. ಹೊಸ ವಾಹನಗಳ ಬೇಡಿಕೆ ಹೆಚ್ಚುತ್ತಿರುವುದರಿಂದ ವಿವಿಧ ಕಾರು ಕಂಪನಿಗಳು ಭರ್ಜರಿ ಆಫರ್ ಘೋಷಣೆ ಮಾಡಿದ್ದು, ರೆನಾಲ್ಟ್ ಇಂಡಿಯಾ ಕಂಪನಿಯು ಕೂಡಾ ವಿವಿಧ ಕಾರುಗಳ ಖರೀದಿ ಮೇಲೆ ಇಯರ್ ಎಂಡ್ ಆಫರ್ ನೀಡುತ್ತಿವೆ.

ರೆನಾಲ್ಟ್ ಕಂಪನಿಯು ಕ್ವಿಡ್(Kwid) ಹ್ಯಾಚ್‌ಬ್ಯಾಕ್, ಟ್ರೈಬರ್(Triber) ಮಿನಿ ಎಂಪಿವಿ, ಡಸ್ಟರ್(Duster) ಎಸ್‌ಯುವಿ ಮತ್ತು ಕಿಗರ್(Kiger) ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾದರಿಗಳ ಮೇಲೆ ಗರಿಷ್ಠ ಮಟ್ಟದ ಆಫರ್ ಘೋಷಣೆ ಮಾಡಿದ್ದು, ಹೊಸ ಆಫರ್‌ಗಳಲ್ಲಿ ಎಕ್ಸ್‌ಚೆಂಜ್, ಕ್ಯಾಶ್ ಬ್ಯಾಕ್, ಕಾರ್ಪೊರೇಟ್ ಡಿಸ್ಕೌಂಟ್ ನೀಡಲಾಗುತ್ತಿದೆ.

ಹೊಸ ವಾಹನಗಳ ಮಾರಾಟಕ್ಕೆ ಪೂರಕವಾಗಿ ಬಹುತೇಕ ಆಟೋ ಕಂಪನಿಗಳು ಹಲವಾರು ಇಯರ್ ಎಂಡ್ ಆಫರ್ ಘೋಷಣೆ ಮಾಡುತ್ತಿರುವುದು ಕಾರು ಖರೀದಿಗೆ ಪ್ರಮುಖ ಆಕರ್ಷಣೆಯಾಗಿದ್ದು, ಈ ತಿಂಗಳಾಂತ್ಯದ ತನಕ ರೆನಾಲ್ಟ್ ಕಾರುಗಳ ಖರೀದಿ ಮೇಲೂ ಗ್ರಾಹಕರು ಆಕರ್ಷಕ ಆಫರ್ ಪಡೆದುಕೊಳ್ಳಬಹುದಾಗಿದೆ.

ಹೊಸ ಆಫರ್‌ಗಳಲ್ಲಿ ಕಿಗರ್ ಕಾರಿನ ಮೇಲೆ ಕನಿಷ್ಠ ಮತ್ತು ಡಸ್ಟರ್ ಕಾರಿನ ಮೇಲೆ ಗರಿಷ್ಠ ಆಫರ್ ಘೋಷಣೆ ಮಾಡಲಾಗಿದ್ದು, ಆಯ್ದು ಕಾರುಗಳ ಖರೀದಿ ಮೇಲೆ ಗ್ರಾಹಕರಿಗೆ ಕಂಪನಿಯು ನೀಡುತ್ತಿರುವ ಲೊಯಾಲಿಟಿ ಆಫರ್ ಕೂಡಾ ಪ್ರಮುಖ ಆಕರ್ಷಕವಾಗಲಿದೆ.

ರೆನಾಲ್ಟ್ ಕಂಪನಿಯ ಆರಂಭಿಕ ಕಾರು ಮಾದರಿಯಾದ ಕ್ವಿಡ್ ಖರೀದಿಯ ಮೇಲೆ ರೂ.35 ಸಾವಿರ ಮೌಲ್ಯದ ಆಫರ್ ಲಭ್ಯವಿದ್ದಲ್ಲಿ ಟಾಪ್ ಎಂಡ್ ಮಾದರಿಯಾದ ಡಸ್ಟರ್ ಎಸ್‌ಯುವಿ ಕಾರಿನ ಮೇಲೆ ರೂ.1.30 ಲಕ್ಷದ ತನಕ ಆಫರ್ ಪಡೆಯಬಹುದಾಗಿದೆ.

ಎಂಟ್ರಿ ಲೆವಲ್ ಕಾರು ಮಾದರಿಯಾದ ಕ್ವಿಡ್ ಕಾರಿನ ಮೇಲಿನ ರೂ. 35 ಸಾವಿರ ಮೌಲ್ಯದ ಆಫರ್‌ಗಳಲ್ಲಿ ರೂ. 10 ಸಾವಿರ ಕ್ಯಾಶ್ ಡಿಸ್ಕೌಂಟ್ ಸೇರಿದಂತೆ ರೂ. 10 ಸಾವಿರ ಮೌಲ್ಯದ ಎಕ್ಸ್‌ಚೆಂಜ್ ಆಫರ್ ನೀಡುತ್ತಿದೆ.

ಕ್ವಿಡ್ ಕಾರಿನ ಮೇಲೆ ಕಂಪನಿಯು ಆಯ್ದ ರಾಜ್ಯಗಳಲ್ಲಿ ಸಾಮಾನ್ಯ ಆಫರ್‌ಗಳಿಂತಲೂ ಕೆಲವು ಹೆಚ್ಚಿನ ಕೊಡುಗೆಗಳನ್ನು ಕೂಡಾ ಪ್ರಕಟಿಸಿದ್ದು, ಹೊಸ ಕಾರು ಖರೀದಿಗೆ ಸಹಕಾರಿಯಾಗುವಂತೆ 'ಬೈ ನೌವ್ ಪೇ ಇನ್ 2022' ಆಯ್ಕೆಯನ್ನು ಸಹ ನೀಡುತ್ತಿದೆ.

ಇನ್ನು ಬಜೆಟ್ ಬೆಲೆಯಲ್ಲಿ ಸದ್ದು ಮಾಡುತ್ತಿರುವ ಟ್ರೈಬರ್ ಕಾರಿನ ಖರೀದಿಯ ಮೇಲೂ ಕೂಡಾ ಆಕರ್ಷಕ ಆಫರ್‌ಗಳು ಲಭ್ಯವಿದ್ದು, ಗರಿಷ್ಠ ರೂ.60 ಸಾವಿರ ಮೌಲ್ಯದ ಆಫರ್‌ಗಳನ್ನು ನೀಡಲಾಗುತ್ತಿದೆ. ಇದರಲ್ಲಿ ಎಕ್ಸ್‌ಚೆಂಜ್ ಆಫರ್, ಕ್ಯಾಶ್ ಡಿಸ್ಕೌಂಟ್ ಸೇರಿದಂತೆ ರೂ.10 ಸಾವಿರ ಲೊಯಾಲಿಟಿ ಆಫರ್ ನೀಡುತ್ತಿದೆ.

ರೆನಾಲ್ಟ್ ಕಂಪನಿಯ ಹೊಸ ಕಿಗರ್ ಕಾರು ಖರೀದಿಯ ಮೇಲೂ ವಿವಿಧ ಆಫರ್‌ಗಳು ಲಭ್ಯವಿದ್ದು, ನವೆಂಬರ್ ಅವಧಿಯಲ್ಲಿ ಕಿಗರ್ ಕಾರು ಖರೀದಿಸುವ ಗ್ರಾಹಕರಿಗೆ ರೂ. 10 ಸಾವಿರ ಕಾರ್ಪೊರೇಟ್ ಡಿಸ್ಕೌಂಟ್ ನೀಡುತ್ತಿದೆ.

ಇನ್ನುಳಿದಂತೆ ಡಸ್ಟರ್ ಕಾರಿನ ಪ್ರಮುಖ ವೆರಿಯೆಂಟ್‌ಗಳ ಖರೀದಿಯ ಮೇಲೆ ರೆನಾಲ್ಟ್ ಕಂಪನಿಯು ರೂ. 1.30 ಲಕ್ಷ ಮೌಲ್ಯದ ಡಿಸ್ಕೌಂಟ್ ಮತ್ತು ರೂ.1.10 ಲಕ್ಷ ಮೌಲ್ಯದ ಲೊಯಾಲಿಟಿ ಕೊಡುಗೆಗಗಳನ್ನು ಘೋಷಣೆ ಮಾಡಿದ್ದು, ಡಸ್ಟರ್ ಕಾರಿನ ಟರ್ಬೊ ಪೆಟ್ರೋಲ್ ಆವೃತ್ತಿಯನ್ನು ಖರೀದಿಸುವ ಗ್ರಾಹಕರಿಗೆ ಗರಿಷ್ಠ ಡಿಸ್ಕೌಂಟ್ ಲಭ್ಯವಿದೆ.

ಇದರ ಜೊತೆಗೆ ರೆನಾಲ್ಟ್ ಕಂಪನಿಯು ಆರ್ಥಿಕ ಸಂಕಷ್ಟದಿಂದ ಕಾರು ಖರೀದಿಯಿಂದ ಹಿಂದೆ ಸರಿದಿರುವ ಗ್ರಾಹಕರಿಗೆ ಅತ್ಯುತ್ತಮ ಫೈನಾನ್ಸ್ ಅಸಿಸ್ಟ್ ಸೌಲಭ್ಯವನ್ನು ನೀಡುತ್ತಿದ್ದು, ಕ್ವಿಡ್, ಕಿಗರ್ ಮತ್ತು ಟ್ರೈಬರ್ ಕಾರು ಖರೀದಿಯ ಯೋಜನೆಯಲ್ಲಿರುವ ಗ್ರಾಹಕರಿಗೆ ಅತ್ಯತ್ತಮ ಫೈನಾನ್ಸ್ ಆಯ್ಕೆ ನೀಡಿದೆ.

ಸದ್ಯದ ಆರ್ಥಿಕ ಪರಿಸ್ಥಿತಿ ಕಾರು ಖರೀದಿ ಮುಂದಿನ ವರ್ಷಕ್ಕೆ ಮುಂದೂಡಿರುವ ಗ್ರಾಹಕರಿಗೆ ವಿಶೇಷ ಆಫರ್ ನೀಡಿರುವ ರೆನಾಲ್ಟ್ ಕಂಪನಿಯು ಕ್ವಿಡ್, ಟ್ರೈಬರ್ ಮತ್ತು ಕಿಗರ್ ಕಾರು ಖರೀದಿಸುವ ಗ್ರಾಹಕರಿಗೆ ಆಕರ್ಷಕ ಇಎಂಐ ಮರುಪಾವತಿ ಆಯ್ಕೆ ನೀಡಿದೆ.

ಇದರೊಂದಿಗೆ ರೆನಾಲ್ಟ್ ಕಂಪನಿಯ ಹೊಸ ವಾಹನಗಳ ಖರೀದಿಯನ್ನು ಉತ್ತೇಜಿಸಲು ತನ್ನ ಎಲ್ಲಾ ಕಾರು ಮಾದರಿಗಳ ಮೇಲೂ ರೂ. 10 ಸಾವಿರದಷ್ಟು ಆಫರ್ ಅನ್ನು ವೆಹಿಕಲ್ ಸ್ಕ್ರ್ಯಾಪಿಂಗ್ ಅಡಿ ಹಳೆಯ ವಾಹನಗಳನ್ನು ಗುಜುರಿಗೆ ಹಾಕುವ ಗ್ರಾಹಕರಿಗೆ ಪ್ರೋತ್ಸಾಹ ನೀಡುತ್ತಿದ್ದು, ಹಳೆಯ ವಾಹನಗಳನ್ನು ವೆಹಿಕಲ್ ಸ್ಕ್ರ್ಯಾಪಿಂಗ್ ನೀತಿಯಡಿ ಅಳವಡಿಸಿಕೊಳ್ಳಲು ನೆರವಾಗುವಂತೆ ಹೊಸ ಆಫರ್ ನೀಡುತ್ತಿವೆ.


Click it and Unblock the Notifications