ಮೇ ತಿಂಗಳಿನಲ್ಲಿ ಕೊನೆಗೊಳ್ಳಲಿರುವ ಕಾರುಗಳ ವಾರಂಟಿ ಅವಧಿ ವಿಸ್ತರಿಸಿದ ಸ್ಕೋಡಾ
ಸ್ಕೋಡಾ ಇಂಡಿಯಾ ಕಂಪನಿಯು ಕೋವಿಡ್ ಪರಿಣಾಮ ತನ್ನ ಗ್ರಾಹಕರಿಗೆ ಹೆಚ್ಚುವರಿ ವಾರಂಟಿ ಆಫರ್ ಘೋಷಿಸಿದ್ದು, ಕೋವಿಡ್ ಪರಿಣಾಮ ಏಪ್ರಿಲ್ ಮತ್ತು ಮೇ ಅವಧಿಯಲ್ಲಿ ಕೊನೆಗೊಳ್ಳುವ ವಾರಂಟಿ ಅವಧಿಯನ್ನು ಮುಂದಿನ ಜುಲೈ 31ರ ಅಂತ್ಯದ ತನಕ ವಿಸ್ತರಿಸಿದೆ.

ಕೋವಿಡ್ 2ನೇ ಅಲೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಹೊಸ ವಾಹನ ಮಾರಾಟಕ್ಕೆ ಕೆಲವು ಕಡೆಗಳಲ್ಲಿ ಷರತ್ತುಬದ್ದ ಅವಕಾಶಗಳಿದ್ದರೂ ಗ್ರಾಹಕರ ಸೇವೆಗಳು ಆಟೋ ಉತ್ಪಾದನಾ ಕಂಪನಿಗಳಿಗೆ ಸವಾಲಾಗಿ ಪರಿಣಮಿಸಿವೆ. ಇದರಿಂದ ಲಾಕ್‌ಡೌನ್ ಅವಧಿಯಲ್ಲಿ ನಿಗದಿತ ಅವಧಿಯ ಸೇವೆಗಳನ್ನು ಪಡೆದುಕೊಳ್ಳಬೇಕಿದ್ದ ವಾಹನಗಳ ವಾರಂಟಿ ಅವಧಿಯನ್ನು ಸ್ಕೋಡಾ ಕಂಪನಿಯು ಮುಂದಿನ ಜುಲೈ ಕೊನೆಯ ತನಕ ವಿಸ್ತರಣೆ ಮಾಡಿದೆ.

ಲಾಕ್ಡೌನ್ ಸಂದರ್ಭದಲ್ಲಿ ಸ್ಟ್ಯಾಂಡರ್ಡ್ ವಾರಂಟಿ ಸೇವೆಗಳನ್ನು ನಿಗದಿತ ಅವಧಿಯಲ್ಲಿ ನೀಡುವುದು ಸವಾಲಾಗಿದ್ದು, ಇದರಿಂದ ಪರಿಸ್ಥಿತಿ ಅನುಗುಣವಾಗಿ ಬಹುತೇಕ ಆಟೋ ಉತ್ಪಾದನಾ ಕಂಪನಿಗಳು ವಾರಂಟಿ ಅವಧಿಯನ್ನು ಮುಂದಿನ ಎರಡು ತಿಂಗಳಿಗೆ ಹೆಚ್ಚಿಸಿವೆ.

ಸ್ಕೋಡಾ ಕಂಪನಿಯು ಸಹ ತನ್ನ ಪ್ರಮುಖ ಕಾರುಗಳ ಸ್ಟ್ಯಾಂಡರ್ಡ್ ವಾರಂಟಿ, ಪಾವತಿ ಮಾಡಲಾದ ವಾರಂಟಿ, ಆಫರ್‌ಗಳ ಅಡಿ ನೀಡಲಾಗಿರುವ ವಾರಂಟಿಗಳನ್ನು ಜುಲೈ 31ರ ತನಕ ವಿಸ್ತರಿಸಲಾಗಿದ್ದು, ಲಾಕ್‌ಡೌನ್ ಸಡಿಲಿಕೆ ನಂತರವಷ್ಟೇ ತಾಂತ್ರಿಕ ಸೇವೆಗಳನ್ನು ಹಂತ ಹಂತವಾಗಿ ಪೂರ್ಣಗೊಳಿಸಲಿದೆ.

ವಿಸ್ತರಿತ ವಾರಂಟಿ ಅವಧಿಯಿಂದಾಗಿ ಗ್ರಾಹಕರು ಮುಂದಿನ ದಿನಗಳಲ್ಲಿ ಪರಿಸ್ಥಿತಿ ತುಸು ಸುಧಾರಣೆಗೊಂಡ ನಂತರ ಸ್ಟ್ಯಾಂಡರ್ಡ್ ಕಾರ್ ಸರ್ವಿಸ್‌ಗಳನ್ನು ಪಡೆದುಕೊಳ್ಳಬಹುದಾಗಿದ್ದು, ಸುರಕ್ಷತೆಯ ದೃಷ್ಠಿಯಿಂದ ವಾಹನಗಳ ಖರೀದಿ ಮತ್ತು ಗ್ರಾಹಕರ ಸೇವೆಗಳಿಗಾಗಿ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ಬಳಕೆ ಮಾಡುತ್ತಿದೆ.

ಇನ್ನು ದೇಶಾದ್ಯಂತ ಕೋವಿಡ್ 2ನೇ ಅಲೆ ಹೆಚ್ಚಿರುವುದರಿಂದ ವಿವಿಧ ರಾಜ್ಯಗಳಲ್ಲಿ ಹಲವು ಕಠಿಣ ಕ್ರಮಗಳೊಂದಿಗೆ ಲಾಕ್ಡೌನ್ ಮುಂದುವರಿಸಲು ನಿರ್ಧರಿಸಿದ್ದು, ಹೊಸ ಸುರಕ್ಷಾ ಕ್ರಮಗಳ ಪರಿಣಾಮ ಆಟೋ ಉದ್ಯಮ ಹಿಂದೆಂಗಿಂತಲೂ ಹೆಚ್ಚು ನಷ್ಟ ಎದುರಾಗುವ ಭೀತಿಯಲ್ಲಿದೆ.

ಕಳೆದ ವರ್ಷದ ಲಾಕ್‌ಡೌನ್ ಹೊಡೆತಕ್ಕೆ ಸಿಲುಕಿ ಸುಧಾರಣೆಯ ಹಾದಿಯಲ್ಲಿದ್ದ ಆಟೋ ಉದ್ಯಮವು ಇದೀಗ ಮತ್ತೆ ಸಂಕಷ್ಟ ಎದುರಿಸುತ್ತಿದ್ದು, ದೇಶಾದ್ಯಂತ ಹಲವು ಆಟೋ ಕಂಪನಿಗಳು ಈಗಾಗಲೇ ಕನಿಷ್ಠ ಪ್ರಮಾಣದ ಉದ್ಯೋಗಿಗಳೊಂದಿಗೆ ಕಾರ್ಯನಿರ್ವಹಿಸುತ್ತಿದ್ದರೆ ಇನ್ನು ಕೆಲವು ವಾಹನ ಕಂಪನಿಗಳು ಉದ್ಯೋಗಿಗಳ ಆರೋಗ್ಯದ ದೃಷ್ಠಿಯಿಂದ ಹೊಸ ವಾಹನಗಳ ಉತ್ಪಾದನೆಯನ್ನೇ ತಾತ್ಕಾಲಿಕವಾಗಿ ಬಂದ್ ಮಾಡಿವೆ.
MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಹೊಸ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿರುವ ಸಂದರ್ಭದಲ್ಲೇ ವಾಹನ ಉತ್ಪಾದನೆಯು ತಗ್ಗಿರುವುರುವುದು ಭಾರೀ ನಷ್ಟ ಎದುರಿಸುವ ಭೀತಿ ಎದುರಾಗಿದ್ದು, ಹೊಸ ಸುರಕ್ಷಾ ಕ್ರಮಗಳೊಂದಿಗೆ ಕೆಲವೇ ಕೆಲವು ಕಂಪನಿಗಳು ಮಾತ್ರ ವಾಹನ ಉತ್ಪಾದನೆ ಕೈಗೊಳ್ಳುತ್ತಿವೆ.

ಇದರ ನಡುವೆ ಹೊಸ ವಾಹನಗಳ ಖರೀದಿಗೆ ಬುಕ್ಕಿಂಗ್ ಸಲ್ಲಿಕೆ ತೀವ್ರ ಕಂಡಿರುವುದಲ್ಲದೆ ಈಗಾಗಲೇ ಬುಕ್ಕಿಂಗ್ ಸಲ್ಲಿಕೆ ಮಾಡಿದ್ದ ಲಕ್ಷಾಂತರ ಹೊಸ ವಾಹನ ಖರೀದಿದಾರರು ಈಗಾಗಲೇ ಮಾಡಲಾಗಿರುವ ಬುಕ್ಕಿಂಗ್ ಹಿಂಪಡೆಯುತ್ತಿದ್ದಾರೆ.
MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ಸದ್ಯದ ಪರಿಸ್ಥಿತಿಯಲ್ಲಿ ಹೊಸ ವಾಹನ ಖರೀದಿಯು ಆರ್ಥಿಕ ಸಂಕಷ್ಟ ಇನ್ನಷ್ಟು ಹೆಚ್ಚಳವಾಗುವ ಭೀತಿಯಿಂದ ಗ್ರಾಹಕರು ಹೊಸ ವಾಹನ ಖರೀದಿ ಪ್ರಕ್ರಿಯೆಯಿಂದ ಹಿಂದೆ ಸರಿಯುತ್ತಿದ್ದು, ಈ ಪರಿಸ್ಥಿತಿ ಸುಧಾರಣೆಯಾಗಲು ಇನ್ನು ಕೆಲ ವರ್ಷಗಳೇ ಬೇಕಾಗಬಹುದು ಎನ್ನಲಾಗುತ್ತಿದೆ.


Click it and Unblock the Notifications