ಇದೇ ತಿಂಗಳು 18ರಂದು ಅನಾವರಣಗೊಳ್ಳಲಿರುವ ಸ್ಲಾವಿಯಾ ಸೆಡಾನ್ ಚಿತ್ರಗಳನ್ನು ಹಂಚಿಕೊಂಡ ಸ್ಕೋಡಾ
ಸ್ಕೋಡಾ ಇಂಡಿಯಾ(SKoda India) ಕಂಪನಿಯು ತನ್ನ ಬಹುನೀರಿಕ್ಷಿತ ಸ್ಲಾವಿಯಾ ಸೆಡಾನ್ ಕಾರು ಮಾದರಿಯನ್ನು ಇದೇ ತಿಂಗಳು 18ರಂದು ಅನಾವರಣಗೊಳಿಸುವ ಸಿದ್ದತೆಯಲ್ಲಿದ್ದು, ಹೊಸ ಕಾರಿನ ಉತ್ಪಾದನಾ ಆವೃತ್ತಿಯ ಅನಾವರಣಕ್ಕೂ ಮುನ್ನ ಕಂಪನಿಯು ಸ್ಲಾವಿಯಾ ಕಾರಿನ ರೇಖಾಚಿತ್ರಗಳನ್ನು ಬಿಡುಗಡೆ ಮಾಡಿದೆ.

ಹೊಸ ಸ್ಲಾವಿಯಾ ಕಾರು ರ‍್ಯಾಪಿಡ್ ಸೆಡಾನ್ ಬದಲಾಗಿ ಮಾರುಕಟ್ಟೆ ಪ್ರವೇಶಿಸುತ್ತಿದ್ದು, ಹೊಸ ಕಾರಿನ ರೇಖಾಚಿತ್ರಗಳು ಗಮನಿಸಿದರೆ ಸ್ಲಾವಿಯಾ ಕಾರು ಪ್ರಸ್ತುತ ಮಾರುಕಟ್ಟೆಯಲ್ಲಿ ಪ್ರಮುಖ ಮಧ್ಯಮ ಕ್ರಮಾಂಕದ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡುವ ತವಕದಲ್ಲಿದೆ.

ಸ್ಕೋಡಾ ಕಂಪನಿಯು ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಕುಶಾಕ್ ಕಾರು ಮಾದರಿಯನ್ನು ಬಿಡುಗಡೆ ಮಾಡಿದ ನಂತರ ಇದೀಗ ಸಿ ಸೆಗ್ಮೆಂಟ್ ಸೆಡಾನ್ ಮಾದರಿಯಲ್ಲಿ ಪ್ರಸ್ತುತ ಮಾರುಕಟ್ಟೆಯಲ್ಲಿರುವ ರ‍್ಯಾಪಿಡ್ ಸ್ಥಗಿತಗೊಳಿಸಿ ರ‍್ಯಾಪಿಡ್‌ಗಿಂತಲೂ ಉತ್ತಮ ವಿನ್ಯಾಸದ ಸ್ಲಾವಿಯಾ ಬಿಡುಗಡೆ ಮಾಡುತ್ತಿದೆ.

ಸ್ಕೋಡಾ ರ‍್ಯಾಪಿಡ್ ಮಾತ್ರವಲ್ಲದೆ ಮಾತೃಸಂಸ್ಥೆಯಾದ ಫೋಕ್ಸ್‌ವ್ಯಾಗನ್ ನಿರ್ಮಾಣದ ವೆಂಟೊ ಕಾರು ಮಾದರಿಯು ಕೂಡಾ ಮಾರಾಟದಿಂದ ಸ್ಥಗಿತಗೊಳ್ಳುತ್ತಿದ್ದು, ರ‍್ಯಾಪಿಡ್ ಮತ್ತು ವೆಂಟೊ ಸ್ಥಾನಕ್ಕೆ ಹೊಸ ವಿನ್ಯಾಸ ಮತ್ತು ಪವರ್‌ಫುಲ್ ಎಂಜಿನ್ ಆಯ್ಕೆ ಹೊಸ ಸೆಡಾನ್ ಕಾರನ್ನು ಬಿಡುಗಡೆ ಮಾಡಲಾಗುತ್ತಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿರುವ ರ‍್ಯಾಪಿಡ್ ಕಾರು ಮಾದರಿಯನ್ನು ಮುಂದಿನ ಕೆಲವೇ ದಿನಗಳಲ್ಲಿ ಮಾರಾಟದಿಂದ ಸ್ಥಗಿತಗೊಳಿಸಲಿರುವ ಸ್ಕೋಡಾ ಕಂಪನಿಯು ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ರ‍್ಯಾಪಿಡ್ ಸ್ಥಾನದಲ್ಲಿ ಸಂಪೂರ್ಣವಾಗಿ ಹೊಸ ಮಾದರಿಯಾದ ಸ್ಲಾವಿಯಾ ಪರಿಚಯಿಸುತ್ತಿದ್ದು, ಹೊಸ ಕಾರು ಪ್ರಸ್ತುತ ಮಾರುಕಟ್ಟೆಯಲ್ಲಿರುವ ರ‍್ಯಾಪಿಡ್‌ಗಿಂತಲೂ ಆಕರ್ಷಕ ವಿನ್ಯಾಸದೊಂದಿಗೆ ಲಾಂಗ್‌ವೀಲ್ಹ್ ಬೆಸ್ ಪಡೆದುಕೊಂಡಿದೆ.

ಜೊತೆಗೆ ಸಹಭಾಗಿತ್ವ ಯೋಜನೆ ಅಡಿ ಅಭಿವೃದ್ದಿಗೊಳ್ಳುತ್ತಿರುವ ಫೋಕ್ಸ್‌ವ್ಯಾಗನ್ ಮತ್ತು ಸ್ಕೋಡಾ ಹೊಸ ಸೆಡಾನ್ ಕಾರು ಮಾದರಿಗಳು ತಾಂತ್ರಿಕವಾಗಿ ಮತ್ತು ಎಂಜಿನ್ ಆಯ್ಕೆಯಲ್ಲಿ ಬಹುತೇಕ ಒಂದೇ ಆಗಿರಲಿದ್ದು, ವಿನ್ಯಾಸದಲ್ಲಿ ತುಸು ಬದಲಾವಣೆಯೊಂದಿಗೆ ತಮ್ಮದೇ ಆದ ಗ್ರಾಹಕ ವರ್ಗವನ್ನು ಸೆಳೆಯಲಿವೆ.

ಹೊಸ ಸ್ಕೋಡಾ ಸ್ಲಾವಿಯಾ ಫೋಕ್ಸ್‌ವ್ಯಾಗನ್ ಕಂಪನಿಯ ಹೊಸ ಎಂಕ್ಯೂಬಿ ಎಒ ಇನ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದ್ದು, ಕುಶಾಕ್ ಕಾಂಪ್ಯಾಕ್ಟ್ ಎಸ್‍ಯುವಿಯು ಇದೇ ಪ್ಲಾಟ್‌ಫಾರ್ಮ್ ಆಧಾರವಾಗಿದೆ. ಹೀಗಾಗಿ ಹೊಸ ಕಾರನ್ನು ಸ್ಕೋಡಾ ಕಂಪನಿಯು ಸ್ಲಾವಿಯಾ ಎಂದು ಕರೆದರೆ ಫೋಕ್ಸ್‌ವ್ಯಾಗನ್ ಕಂಪನಿಯು ಅದೇ ಕಾರನ್ನು ಕೆಲವು ಬದಲಾವಣೆಗಳೊಂದಿಗೆ ವರ್ಚಸ್ ಹೆಸರಿನಲ್ಲಿ ಬಿಡುಗಡೆ ಮಾಡಲಿದೆ.

ಸ್ಲಾವಿಯಾ ಕಾರು ಮಾದರಿಯು 4,541 ಎಂಎಂ ಉದ್ದ, 1,752 ಅಗಲ ಮತ್ತು 1,487 ಎಂಎಂ ಎತ್ತರವನ್ನು ಹೊಂದಿದ್ದು, 2,651 ಎಂಎಂ ವ್ಹೀಲ್‌ಬೇಸ್ ಅನ್ನು ಒಳಗೊಂಡಿದ್ದು, ಹೊಸ ಕಾರು ಹೋಂಡಾ ಸಿಟಿ ಸೆಡಾನ್ ಮಾದರಿಗಿಂತೂ ಹೆಚ್ಚು ಉದ್ದವಾಗಿರುವುದಲ್ಲದೆ ಎತ್ತರವಾಗಿದೆ.

ಜೊತೆಗೆ ಹ್ಯುಂಡೈ ವೆರ್ನಾ ಮತ್ತು ಮಾರುತಿ ಸುಜುಕಿ ಸಿಯಾಜ್ ಕಾರುಗಳಿಗೂ ಭರ್ಜರಿ ಪೈಪೋಟಿ ನೀಡಲಿರುವ ಸ್ಲಾವಿಯಾ ಕಾರು ಕುಶಾಕ್ ಮಾದರಿಯಂತೆ 1.0-ಲೀಟರ್ TSI ಮೂರು-ಸಿಲಿಂಡರ್ ಎಂಜಿನ್ ಮತ್ತು 1.5-ಲೀಟರ್ ನಾಲ್ಕು-ಸಿಲಿಂಡರ್ TSI ಎಂಜಿನ್ ಜೊತೆಗೆ ಎರಡೂ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಪಡೆಯಲಿದೆ.

ಹೊಸ ಕಾರಿನ 1.0-ಲೀಟರ್ TSI ಮೂರು-ಸಿಲಿಂಡರ್ ಎಂಜಿನ್ 113 ಬಿಹೆಚ್‍ಪಿ ಪವರ್ ಮತ್ತು 175 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದು, ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಟಾರ್ಕ್ ಕನ್ವರ್ಟರ್ ಆಯ್ಕೆಯನ್ನು ನೀಡಲಾಗುತ್ತದೆ.

ಹೈ ಎಂಡ್ ಮಾದರಿಯಲ್ಲಿರುವ 1.5-ಲೀಟರ್ ಎಂಜಿನ್ 148 ಬಿಹೆಚ್‍ಪಿ ಪವರ್ ಮತ್ತು 250 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನ್ಯುವಲ್ ಗೇರ್‌ಬಾಕ್ಸ್ ಮತ್ತು 7-ಸ್ಪೀಡ್ DSG ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

ಅಲ್ಲದೆ ಹೊಸ ಕಾರು ಕುಶಾಕ್‌ನಲ್ಲಿರುವಂತೆ 1.5-ಲೀಟರ್ ಎಂಜಿನ್ ಹೊಂದಿರುವ ಸ್ಲಾವಿಯಾ ಸಕ್ರಿಯ ಸಿಲಿಂಡರ್ ತಂತ್ರಜ್ಞಾನದೊಂದಿಗೆ ಬರುತ್ತದೆ (ACT) ಇದು ಎಂಜಿನ್ ವೇಗದಲ್ಲಿದ್ದಾಗ ಎರಡು ಸಿಲಿಂಡರ್‌ಗಳನ್ನು ಆಟೋಮ್ಯಾಟಿಕ್ ಆಗಿ ಸ್ಥಗಿತಗೊಳಿಸುತ್ತದೆ. ಹೀಗಾಗಿ ಇಂಧನ ದಕ್ಷತೆಯನ್ನು ಹೆಚ್ಚಿಸುತ್ತದೆ.

ಇನ್ನು ಸ್ಲಾವಿಯಾ ಸೆಡಾನ್ ನಾಚ್ ಬ್ಯಾಕ್ ತರಹದ ಸ್ಟೈಲಿಂಗ್ ಅನ್ನು ಹೊಂದಿರಲಿದ್ದು, ಕ್ರೋಮ್ ಸರೌಂಡ್‌ನೊಂದಿಗೆ ಸಿಗ್ನೆಚರ್ ಬಟರ್‌ಫ್ಲೈ ಗ್ರಿಲ್, ಎಲ್ಇಡಿ ಡಿಆರ್‌ಎಲ್‌ಗಳೊಂದಿಗೆ ಚೂಪಾದ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು, ವಿಭಿನ್ನ ಕ್ಯಾರೆಕ್ಟರ್ ಲೈನ್‌ಗಳು, ಸ್ಲೋಪಿಂಗ್ ರೂಫ್‌ಲೈನ್, ಎಲ್‌ಇಡಿ ಟೈಲ್-ಲೈಟ್ಸ್ ಮತ್ತು ಡೈಮಂಡ್-ಕಟ್ ಅಲಾಯ್ ವ್ಹೀಲ್ ಗಳನ್ನು ಕೂಡಾ ಪಡೆಯಲಿದೆ.

ಹಾಗೆಯೇ ಸ್ಕೋಡಾ ಸ್ಲಾವಿಯಾ ಕಾರು ಫಾಕ್ಟರಿ ಫಿಟೆಡ್ ಎಲೆಕ್ಟ್ರಿಕ್ ಸನ್ ರೂಫ್, ಆಟೋಮ್ಯಾಟಿಕ್ ಹೆಡ್ ಲ್ಯಾಂಪ್ ಮತ್ತು ಆಟೋಮ್ಯಾಟಿಕ್ ವೈಪರ್ ಗಳು ಒಳಗೊಂಡಿರಲಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.9 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 16 ಲಕ್ಷ ಬೆಲೆ ಅಂತರದಲ್ಲಿ ಮಾರಾಟವಾಗುವ ಸಾಧ್ಯತೆಗಳಿವೆ.


Click it and Unblock the Notifications