ಹೋಂಡಾ ಸಿಟಿ ಕಾರಿಗೆ ಪೈಪೋಟಿಯಾಗಿ ಸ್ಲಾವಿಯಾ ಸೆಡಾನ್ ಅನಾವರಣಗೊಳಿಸಿದ ಸ್ಕೋಡಾ ಇಂಡಿಯಾ
ಸ್ಕೋಡಾ ಇಂಡಿಯಾ(SKoda India) ಕಂಪನಿಯು ತನ್ನ ಬಹುನೀರಿಕ್ಷಿತ ಸ್ಲಾವಿಯಾ ಸೆಡಾನ್ ಕಾರು ಮಾದರಿಯ ಉತ್ಪಾದನಾ ಮಾದರಿಯನ್ನು ಭಾರತದಲ್ಲಿ ಅನಾವರಣಗೊಳಿಸಿದ್ದು, ಹೊಸ ಕಾರು 2022ರ ಆರಂಭದಲ್ಲಿ ಅಧಿಕೃತವಾಗಿ ಬಿಡುಗಡೆಯಾಗಲಿದೆ.

ಹೊಸ ಪ್ಲ್ಯಾಟ್‌ಫಾರ್ಮ್ ಆಧರಿಸಿರುವ ಸ್ಲಾವಿಯಾ ಕಾರು ರ‍್ಯಾಪಿಡ್ ಸೆಡಾನ್ ಬದಲಾಗಿ ಮಾರುಕಟ್ಟೆ ಪ್ರವೇಶಿಸುತ್ತಿದ್ದು, ಸ್ಲಾವಿಯಾ ಕಾರು ಪ್ರಸ್ತುತ ಮಾರುಕಟ್ಟೆಯಲ್ಲಿ ಪ್ರಮುಖ ಮಧ್ಯಮ ಶ್ರೇಣಿಯಲ್ಲಿರುವ ಸೆಡಾನ್ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡುವ ತವಕದಲ್ಲಿದೆ.

ಸ್ಕೋಡಾ ಕಂಪನಿಯು ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಕುಶಾಕ್ ಕಾರು ಮಾದರಿಯನ್ನು ಬಿಡುಗಡೆ ಮಾಡಿದ ನಂತರ ಇದೀಗ ಸಿ ಸೆಗ್ಮೆಂಟ್ ಸೆಡಾನ್ ಮಾದರಿಯಲ್ಲಿ ಪ್ರಸ್ತುತ ಮಾರುಕಟ್ಟೆಯಲ್ಲಿರುವ ರ‍್ಯಾಪಿಡ್ ಸ್ಥಗಿತಗೊಳಿಸಿ ರ‍್ಯಾಪಿಡ್‌ಗಿಂತಲೂ ಉತ್ತಮ ವಿನ್ಯಾಸ ಮತ್ತು ಬಲಿಷ್ಠ ವಿನ್ಯಾಸದ ಸ್ಲಾವಿಯಾ ಬಿಡುಗಡೆ ಮಾಡುತ್ತಿದೆ.

ಸದ್ಯ ಹೊಸ ಕಾರಿನ ಉತ್ಪಾದನಾ ಮಾದರಿಯನ್ನು ಮಾತ್ರವೇ ಅನಾವರಣಗೊಳಿಸಿರುವ ಸ್ಕೋಡಾ ಕಂಪನಿಯು ಹೊಸ ಕಾರಿನ ತಾಂತ್ರಿಕ ಅಂಶಗಳ ಕುರಿತಾಗಿ, ಎಂಜಿನ್ ಮಾಹಿತಿ ಮತ್ತು ಬೆಲೆ ಮಾಹಿತಿಯಾಗಲಿ ಯಾವುದೇ ಮಾಹಿತಿ ಮಾಹಿತಿ ಹಂಚಿಕೊಂಡಿಲ್ಲ.

ಕೇವಲ ಉತ್ಪಾದನಾ ಮಾದರಿಯನ್ನು ಅನಾವರಣಗೊಳಿಸುವ ಮೂಲಕ ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದ್ದು, ಫೋಕ್ಸ್‌ವ್ಯಾಗನ್ ಕಂಪನಿ ಜೊತೆಗಿನ ಇಂಡಿಯಾ 2.0 ಪ್ರೊಜೆಕ್ಟ್ ಯೋಜನೆ ಅಡಿಯಲ್ಲಿ ಹೊಸ ಕಾರನ್ನು ಅಭಿವೃದ್ದಿಗೊಳಿಸಲಾಗಿದೆ.

ಫೋಕ್ಸ್‌ವ್ಯಾಗನ್ ಕಂಪನಿ ಜೊತೆಗಿನ ಇಂಡಿಯಾ 2.0 ಪ್ರೊಜೆಕ್ಟ್ ಯೋಜನೆ ಅಡಿಯಲ್ಲಿ ಒಟ್ಟು ನಾಲ್ಕು ಹೊಸ ಕಾರು ಮಾದರಿಗಳನ್ನು ಬಿಡುಗಡೆಗೊಳಿಸಲು ಯೋಜಿಸಲಾಗಿದ್ದು, ಈಗಾಗಲೇ ಸ್ಕೋಡಾದಿಂದ ಕುಶಾಕ್ ಮತ್ತು ಫೋಕ್ಸ್‌ವ್ಯಾಗನ್ ಕಂಪನಿಯಿಂದ ಟೈಗುನ್ ಕಂಪ್ಯಾಕ್ಟ್ ಎಸ್‍ಯುವಿ ಬಿಡುಗಡೆ ಮಾಡಲಾಗಿದೆ.

ಸ್ಕೋಡಾ ಮತ್ತು ಫೋಕ್ಸ್‌ವ್ಯಾಗನ್ ಯೋಜನೆ ಅಡಿ ಇದೀಗ ಮೂರನೇ ಕಾರು ಮಾದರಿಯಾಗಿ ಸ್ಲಾವಿಯಾ ಬಿಡುಗಡೆ ಮಾಡಲಾಗುತ್ತಿದ್ದು, ಹೊಸ ಸೆಡಾನ್ ಕಾರು ಹೋಂಡಾ ಸಿಟಿ, ಮಾರುತಿ ಸುಜುಕಿ ಸಿಯಾಜ್, ಹ್ಯುಂಡೈ ವೆರ್ನಾ ಕಾರುಗಳಿಗೆ ಉತ್ತಮ ಪೈಪೋಟಿ ನೀಡಲಿದೆ.

ಹೊಸ ಕಾರು ಪ್ರಸ್ತುತ ಮಾರುಕಟ್ಟೆಯಲ್ಲಿರುವ ರ‍್ಯಾಪಿಡ್‌ಗಿಂತಲೂ ಆಕರ್ಷಕ ವಿನ್ಯಾಸದೊಂದಿಗೆ ಲಾಂಗ್‌ವೀಲ್ಹ್ ಬೆಸ್ ಪಡೆದುಕೊಂಡಿದ್ದು, 4,541 ಎಂಎಂ ಉದ್ದ, 1,752 ಅಗಲ ಮತ್ತು 1,487 ಎಂಎಂ ಎತ್ತರವನ್ನು ಹೊಂದಿದ್ದು, 2,651 ಎಂಎಂ ವ್ಹೀಲ್‌ಬೇಸ್ ಅನ್ನು ಒಳಗೊಂಡಿದೆ.

ಹೊಸ ಕಾರು ಹೋಂಡಾ ಸಿಟಿ ಸೆಡಾನ್ ಮಾದರಿಯಷ್ಟೇ ಉದ್ದಳತೆಯೊಂದಿಗೆ ತುಸು ಅಗಲವಾಗಿರುವುದಲ್ಲದೆ 51 ಎಂಎಂ ನಷ್ಟು ಹೆಚ್ಚುವರಿ ವ್ಹೀಲ್ ಬೆಸ್ ಹೊಂದಿದ್ದು, ಹೊಸ ಕಾರಿನಲ್ಲಿ ಸ್ಟ್ಯಾಂಡರ್ಡ್ ಆಗಿ 16 ಇಂಚಿನ್ ಡ್ಯುಯಲ್ ಟೋನ್ ಅಲಾಯ್ ವ್ಹೀಲ್ ಪಡೆದುಕೊಂಡಿದೆ.

ಹಾಗೆಯೇ ಹೊಸ ಕಾರು ಸಿಗ್ನಿಚೆರ್ ಬಟರ್‌ಪ್ಲೈ ಗ್ರಿಲ್, ಸ್ಲಿಕ್ ಹೆಡ್‌ಲ್ಯಾಂಪ್, ಎಲ್ ಆಕಾರದಲ್ಲಿರುವ ಡೇ ಟೈಮ್ ರನ್ನಿಂಗ್ ಲ್ಯಾಂಪ್ ಸ್ಟ್ರೀಪ್, ಸ್ಪೋರ್ಟಿ ಫ್ರಂಟ್ ಬಂಪರ್, ಫಾಗ್ ಲ್ಯಾಂಪ್ ಹೌಸ್, ಎಲ್ಇಡಿ ಟೈಲ್ ಲೈಟ್ಸ್‌ನೊಂದಿಗೆ ಒಳಾಂಗಣವು ಕೂಡಾ ಸಾಕಷ್ಟು ಸುಧಾರಿತ ತಂತ್ರಜ್ಞಾನ ಪ್ರೇರಣೆ ಹೊಂದಿದೆ.

ಹೊಸ ಕಾರಿನ ಒಳಾಂಗಣ ಸೌಲಭ್ಯವು ಆಕ್ಟಿವಿಯಾ ಮಾದರಿಯನ್ನು ನೆನಪಿಸಲಿದ್ದು, 10 ಇಂಚಿನ ಇನ್ಪೋಟೈನ್‌ಮೆಂಟ್, 8 ಇಂಚಿನ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಮೈ ಸ್ಕೋಡಾ ಕಾರ್ ಕನೆಕ್ಟೆಡ್ ನೊಂದಿಗೆ ವೆಂಟಿಲೆಟೆಡ್ ಲೆದರ್ ಆಸನಗಳು, ಎಲೆಕ್ಟ್ರಿಕ್ ಸನ್‌ರೂಫ್, ವೈರ್‌ಲೆಸ್ ಚಾರ್ಜರ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಕೀ ಲೆಸ್ ಎಂಟ್ರಿ, ಆಟೋ ಡಿಮ್ಮಿಂಗ್ ಹೊಂದಿರುವ ರಿಯರ್ ವ್ಯೂ ಮಿರರ್ ಸೇರಿದಂತೆ ಪ್ರಮುಖ ಪ್ರೀಮಿಯಂ ಫೀಚರ್ಸ್ ಹೊಂದಿದೆ.

ಜೊತೆಗೆ ಹೊಸ ಕಾರಿನಲ್ಲಿ ಸುರಕ್ಷತೆಗಾಗಿ ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್ ನೀಡಲಾಗಿದ್ದು, ಸ್ಲಾವಿಯಾ ಹೈ ಎಂಡ್ ಮಾದರಿಯಲ್ಲಿ ಆರು ಏರ್‌ಬ್ಯಾಗ್‌ಗಳು ಇಎಸ್‌ಸಿ, ಇಡಿಎಸ್, ಟೈರ್ ಪ್ರೆಷರ್ ಮಾನಿಟರ್, ಹಿಲ್ ಹೋಲ್ಡ್, ರಿಯರ್ ಪಾರ್ಕಿಂಗ್ ಕ್ಯಾಮೆರಾ, ಮಲ್ಟಿ ಕೂಲಿಷನ್ ಬ್ರೇಕ್, ಐಸೋಫಿಕ್ಸ್ ಚೈಲ್ಡ್ ಸೀಟ್ ಮೌಂಟ್ಸ್ ಸೇರಿದಂತೆ ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್ ನೀಡಲಾಗಿದೆ.

ಇನ್ನ ಸ್ಲಾವಿಯಾ ಕಾರು ಕುಶಾಕ್ ಮಾದರಿಯಂತೆ 1.0-ಲೀಟರ್ ಟಿಎಸ್ಐ ಮೂರು-ಸಿಲಿಂಡರ್ ಎಂಜಿನ್ ಮತ್ತು 1.5-ಲೀಟರ್ ನಾಲ್ಕು-ಸಿಲಿಂಡರ್ ಟಿಎಸ್ಐ ಎಂಜಿನ್ ಜೊತೆಗೆ ಎರಡೂ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಪಡೆಯಲಿದೆ.

ಹೊಸ ಕಾರಿನ 1.0-ಲೀಟರ್ ಟಿಎಸ್ಐ ಮೂರು-ಸಿಲಿಂಡರ್ ಎಂಜಿನ್ 113 ಬಿಹೆಚ್‍ಪಿ ಪವರ್ ಮತ್ತು 175 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದು, ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಟಾರ್ಕ್ ಕನ್ವರ್ಟರ್ ಆಯ್ಕೆಯನ್ನು ನೀಡಲಾಗುತ್ತದೆ.

ಹೈ ಎಂಡ್ ಮಾದರಿಯಲ್ಲಿರುವ 1.5-ಲೀಟರ್ ಎಂಜಿನ್ 148 ಬಿಹೆಚ್‍ಪಿ ಪವರ್ ಮತ್ತು 250 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನ್ಯುವಲ್ ಗೇರ್‌ಬಾಕ್ಸ್ ಮತ್ತು 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

ಅಲ್ಲದೆ ಹೊಸ ಕಾರು ಕುಶಾಕ್‌ನಲ್ಲಿರುವಂತೆ 1.5-ಲೀಟರ್ ಎಂಜಿನ್ ಹೊಂದಿರುವ ಸ್ಲಾವಿಯಾ ಸಕ್ರಿಯ ಸಿಲಿಂಡರ್ ತಂತ್ರಜ್ಞಾನದೊಂದಿಗೆ ಬರುತ್ತದೆ (ACT) ಇದು ಎಂಜಿನ್ ವೇಗದಲ್ಲಿದ್ದಾಗ ಎರಡು ಸಿಲಿಂಡರ್‌ಗಳನ್ನು ಆಟೋಮ್ಯಾಟಿಕ್ ಆಗಿ ಸ್ಥಗಿತಗೊಳಿಸುತ್ತದೆ. ಹೀಗಾಗಿ ಇಂಧನ ದಕ್ಷತೆಯನ್ನು ಹೆಚ್ಚಿಸುತ್ತದೆ.
ಹೊಸ ಕಾರು ಟೊರ್ನಾಟ್ ರೆಡ್, ಕ್ರಿಸ್ಟಲ್ ಬ್ಲ್ಯೂ, ಕ್ಯಾಂಡಿ ವೈಟ್, ರೆಫ್ಲೆಕ್ಸರ್ ಸಿಲ್ವರ್ ಮತ್ತು ಕಾರ್ಬನ್ ಸ್ಟೀಲ್ ಬಣ್ಣದಲ್ಲಿ ಖರೀದಿಗೆ ಲಭ್ಯವಿರಲಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 9 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 16 ಲಕ್ಷ ಬೆಲೆ ಅಂತರದಲ್ಲಿ ಮಾರಾಟವಾಗುವ ಸಾಧ್ಯತೆಗಳಿವೆ.


Click it and Unblock the Notifications