ಟಾಟಾ ಕಾರುಗಳ ಖರೀದಿ ಮೇಲೆ ಅಗಸ್ಟ್ ಅವಧಿಯ ಆಫರ್ ಘೋಷಣೆ
ಕೋವಿಡ್ ಪರಿಣಾಮ ಏರಿಳಿತವಾಗುತ್ತಿರುವ ಹೊಸ ವಾಹನಗಳ ಮಾರಾಟದಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಯತ್ನಿಸುತ್ತಿರುವ ವಿವಿಧ ಆಟೋ ಉತ್ಪಾದನಾ ಕಂಪನಿಗಳು ಗ್ರಾಹಕರಿಗೆ ಹಲವಾರು ಆಫರ್‌ಗಳನ್ನು ನೀಡುತ್ತಿದ್ದು, ಟಾಟಾ ಮೋಟಾರ್ಸ್ ಕಂಪನಿಯು ಕೂಡಾ ಅಗಸ್ಟ್ ಅವಧಿಗಾಗಿ ವಿವಿಧ ಆಫರ್‌ಗಳನ್ನು ಘೋಷಿಸಿದೆ.

ಹೊಸ ವರ್ಷದ ಆರಂಭದಲ್ಲಿ ಹಲವಾರು ಹೊಸ ಆಫರ್‌ಗಳನ್ನು ಘೋಷಣೆ ಮಾಡುತ್ತಿದ್ದ ವಿವಿಧ ಆಟೋ ಉತ್ಪಾದನಾ ಕಂಪನಿಗಳು ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಇದೀಗ ಕೋವಿಡ್ ಎರಡನೇ ಅಲೆಯಿಂದಾಗಿ ಮತ್ತೆ ಹೊಸ ವಾಹನ ಮಾರಾಟದಲ್ಲಿ ತುಸು ಇಳಿಕೆಯಾಗುತ್ತಿದೆ. ಹೀಗಾಗಿ ಟಾಟಾ ಕಂಪನಿಯು ತನ್ನ ಪ್ರಮುಖ ಕಾರು ಮಾದರಿಗಳಾದ ಟಿಯಾಗೊ, ಟಿಗೋರ್, ನೆಕ್ಸಾನ್, ಮತ್ತು ಹ್ಯಾರಿಯರ್ ಕಾರು ಮೇಲೆ ಆಫರ್ ನೀಡುತ್ತಿದ್ದು, ಈ ತಿಂಗಳಾಂತ್ಯವರೆಗೂ ಹೊಸ ಆಫರ್‌ಗಳು ಲಭ್ಯವಿರಲಿವೆ.

ಟಾಟಾ ಮೋಟಾರ್ಸ್ ಕಂಪನಿಯು ಘೋಷಣೆ ಮಾಡಿರುವ ಹೊಸ ಆಫರ್‌ಗಳಲ್ಲಿ ಕ್ಯಾಶ್ ಡಿಸ್ಕೌಂಟ್, ಎಕ್ಸ್‌ಚೆಂಜ್ ಆಫರ್ ಜೊತೆಗೆ ವಿಶೇಷ ಪ್ಯಾಕೇಜ್ ನೀಡುತ್ತಿದ್ದು, ಕನಿಷ್ಠ ರೂ. 15 ಸಾವಿರದಿಂದ ಗರಿಷ್ಠ ರೂ. 65 ಸಾವಿರ ತನಕ ಉಳಿತಾಯ ಮಾಡಬಹುದಾಗಿದೆ.

ಅಗಸ್ಟ್ ತಿಂಗಳ ಹೊಸ ಆಫರ್‌ಗಳಲ್ಲಿ ಆರಂಭಿಕ ಕಾರು ಮಾದರಿಯಾದ ಟಿಯಾಗೋ ಹ್ಯಾಚ್‌ಬ್ಯಾಕ್ ಮಾದರಿಯ ಮೇಲೆ ರೂ. 25 ಸಾವಿರ ಆಫರ್ ಘೋಷಿಸಲಾಗಿದ್ದು, ರೂ.25 ಸಾವಿರದಲ್ಲಿ ರೂ. 15 ಸಾವಿರ ಕ್ಯಾಶ್ ಡಿಸ್ಕೌಂಟ್ ಮತ್ತು ರೂ. 10 ಸಾವಿರ ಎಕ್ಸ್‌ಚೆಂಜ್ ಆಫರ್ ಒಳಗೊಂಡಿದೆ.

ಟಿಯಾಗೋ ನಂತರ ಟಿಗೋರ್ ಕಂಪ್ಯಾಕ್ಟ್ ಸೆಡಾನ್ ಮಾದರಿಯ ಮೇಲೂ ಟಾಟಾ ಮೋಟಾರ್ಸ್ ಕಂಪನಿಯು ಆಕರ್ಷಕ ಡಿಸ್ಕೌಂಟ್ ನೀಡುತ್ತಿದ್ದು, ಟಿಗೋರ್ ಕಾರು ಖರೀದಿಯ ಮೇಲೆ ಗ್ರಾಹಕರು ರೂ.30 ಸಾವಿರ ತನಕ ಉಳಿತಾಯ ಮಾಡಬಹುದಾಗಿದೆ.

ರೂ.30 ಸಾವಿರದಲ್ಲಿ ರೂ. 15 ಸಾವಿರ ಕ್ಯಾಶ್‌ಬ್ಯಾಕ್ ಮತ್ತು ರೂ.15 ಸಾವಿರ ಡಿಸ್ಕೌಂಟ್ ಒಳಗೊಂಡಿದ್ದು, ಟಿಗೋರ್ ಮತ್ತು ಟಿಯಾಗೋ ಎರಡು ಮಾದರಿಗಳಲ್ಲೂ ಒಂದೇ ಮಾದರಿಯ 1.2-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿವೆ.

ಸದ್ಯ ಟಿಯಾಗೋ ಕಾರು ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 4.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 7.04 ಲಕ್ಷ ಬೆಲೆ ಹೊಂದಿದ್ದರೆ ಟಿಗೋರ್ ಕಾರು ಮಾದರಿಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 5.64 ಲಕ್ಷದಿಂದ ರೂ. 7.81 ಲಕ್ಷ ಬೆಲೆ ಹೊಂದಿದೆ.

ಟಾಟಾ ಹೊಸ ಆಫರ್‌ಗಳಲ್ಲಿ ಜನಪ್ರಿಯ ಕಾರು ಮಾದರಿಯಾದ ನೆಕ್ಸಾನ್ ಆವೃತ್ತಿಯ ಡೀಸೆಲ್ ಮಾದರಿಯ ಮೇಲೆ ಕಂಪನಿಯು ರೂ. 15 ಸಾವಿರ ಎಕ್ಸ್‌ಚೆಂಜ್ ಆಫರ್ ಮಾತ್ರ ನೀಡುತ್ತಿದೆ. ಸದ್ಯ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯಲ್ಲಿ ಅತಿ ಹೆಚ್ಚು ಬೇಡಿಕೆ ಪಡೆದುಕೊಳ್ಳುತ್ತಿರುವ ನೆಕ್ಸಾನ್ ಕಾರು ಮಾದರಿಯು ಪ್ರತಿಸ್ಪರ್ಧಿ ಕಾರು ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡುತ್ತಿದೆ.

ನೆಕ್ಸಾನ್ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 7.28 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 13.23 ಲಕ್ಷ ಬೆಲೆ ಹೊಂದಿರುವ ನೆಕ್ಸಾನ್ ಕಾರು ಮಾದರಿಯು 1.2-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಪಡೆದುಕೊಂಡಿದೆ.

ಹ್ಯಾರಿಯರ್ ಎಸ್‌ಯುವಿ ಕಾರು ಮಾದರಿಯ ಮೇಲೂ ಟಾಟಾ ಕಂಪನಿಯು ರೂ. 65 ಸಾವಿರ ಆಫರ್ ನೀಡುತ್ತಿದ್ದು, ರೂ.65 ಸಾವಿರದಲ್ಲಿ ರೂ. 25 ಸಾವಿರ ಕ್ಯಾಶ್ ಡಿಸ್ಕೌಂಟ್ ಮತ್ತು ರೂ. 40 ಸಾವಿರ ಎಕ್ಸ್‌ಚೆಂಜ್ ಆಫರ್ ಒಳಗೊಂಡಿದೆ.

ಹ್ಯಾರಿಯರ್ ಕಾರು ಮಾದರಿಯು 2.0-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 14.39 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.21.09 ಲಕ್ಷ ಬೆಲೆ ಹೊಂದಿದ್ದು, ಹೊಸ ಕಾರು ಖರೀದಿ ಮೇಲೆ ಗ್ರಾಹಕರಿಗೆ ಅತ್ಯುತ್ತಮ ಆಫರ್ ನೀಡಲಾಗುತ್ತದೆ.

ಹೊಸ ಆಫರ್‌ಗಳಲ್ಲಿ ಕಂಪನಿಯು ನ್ಯೂ ಜನರೇಷನ್ ಸಫಾರಿ, ಆಲ್‌ಟ್ರೊಜ್ ಮತ್ತು ಟಿಯಾಗೋ ಎನ್ಆರ್‌ಜಿ ಆವೃತ್ತಿಗಳ ಮೇಲೆ ಯಾವುದೇ ಆಫರ್ ನೀಡುತ್ತಿಲ್ಲವಾದರೂ ಕಾರು ಖರೀದಿಗಾಗಿ ಸುಲಭ ಮತ್ತು ಆಕರ್ಷಕ ಬಡ್ಡಿದರದಲ್ಲಿ ಸಾಲಸೌಲಭ್ಯಗಳನ್ನು ಘೋಷಣೆ ಮಾಡಿದೆ.

ಕಾರು ಉತ್ಪಾದನೆ ಮತ್ತು ಮಾರಾಟದಲ್ಲಿ ಸದ್ಯ ಮೂರನೇ ಸ್ಥಾನದಲ್ಲಿರುವ ಟಾಟಾ ಮೋಟಾರ್ಸ್ ಕಂಪನಿಯು ಕಳೆದ ವರ್ಷಕ್ಕಿಂತಲೂ ಈ ವರ್ಷ ಹೆಚ್ಚಿನ ಮಟ್ಟದ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಕೋವಿಡ್ 2ನೇ ಅಲೆ ಪರಿಣಾಮ ತಗ್ಗಿರುವ ವಾಹನಗಳ ಮಾರಾಟವನ್ನು ಸುಧಾರಿಸಲು ಹಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತಿದೆ.

ಟಾಟಾ ಮೋಟಾರ್ಸ್ ಕಂಪನಿಯು ಈಗಾಗಗಲೇ ವಿವಿಧ ಬ್ಯಾಂಕ್‌ಗಳ ಜೊತೆಗೂಡಿ ಹಲವು ಸರಳ ಸಾಲಸೌಲಭ್ಯಗಳ ಆಯ್ಕೆ ನೀಡುತ್ತಿದ್ದು, ಇದೀಗ ಸುಂದರಂ ಫೈನಾನ್ಸ್ ಜೊತೆಗೂಡಿ ಹೊಸ ಮಾದರಿಯ ಸಾಲಸೌಲಭ್ಯಗಳನ್ನು ಘೋಷಿಸಿದೆ.

ಆರ್ಥಿಕ ಸಂಕಷ್ಟ ಪರಿಸ್ಥಿತಿಯಲ್ಲಿ ಹೊಸ ವಾಹನಗಳ ಖರೀದಿಗೆ ಹಿಂದೇಟು ಹಾಕುತ್ತಿರುವ ಗ್ರಾಹಕರನ್ನು ಸೆಳೆಯಲು ವಿವಿಧ ಬ್ಯಾಂಕ್‌ಗಳ ಜೊತೆಗೂಡಿ ಹಲವಾರು ಆಕರ್ಷಕ ಲೋನ್ ಆಫರ್‌ಗಳನ್ನು ನೀಡುತ್ತಿರುವ ಟಾಟಾ ಕಂಪನಿಯು ಸುಂದರಂ ಫೈನಾನ್ಸ್ ಮೂಲಕ ಪ್ರಮುಖ ಕಾರುಗಳಿಗೆ ಸರಳ ಸಾಲ ಸೌಲಭ್ಯಗಳೊಂದಿಗೆ ಅತಿ ಕಡಿಮೆ ಇಎಂಐ ಆಯ್ಕೆಗಳನ್ನು ನೀಡುತ್ತಿದೆ.


Click it and Unblock the Notifications