ಹೊಸ ವೆರಿಯೆಂಟ್ ಜೊತೆ ಬೆಲೆ ಹೆಚ್ಚಳ ಪಡೆದುಕೊಂಡ ಟಾಟಾ ಆಲ್‌ಟ್ರೊಜ್
ಟಾಟಾ ಮೋಟಾರ್ಸ್(Tata Motors) ಕಂಪನಿಯು ತನ್ನ ಜನಪ್ರಿಯ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಮಾದರಿಯಾದ ಆಲ್‌ಟ್ರೊಜ್‌ನಲ್ಲಿ ಹೊಸ ವೆರಿಯೆಂಟ್ ಬಿಡುಗಡೆ ಮಾಡಿದ್ದು, ಹೊಸ ವೆರಿಯೆಂಟ್ ಜೊತೆಗೆ ಬೆಲೆ ಹೆಚ್ಚಳ ಕೂಡಾ ಪಡೆದುಕೊಂಡಿದೆ.

ದೇಶದ ಸುರಕ್ಷಿತ ಕಾರುಗಳಲ್ಲಿ ಒಂದಾಗಿರುವ ಟಾಟಾ ಆಲ್‌ಟ್ರೊಜ್ ದೇಶದಲ್ಲಿ ಮೂರನೇ ಅತಿ ಹೆಚ್ಚು ಮಾರಾಟವಾಗುವ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಮಾದರಿಯಾಗಿದ್ದು, ಟಾಟಾ ಮೋಟಾರ್ಸ್ ಕಂಪನಿಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಆಲ್‌ಟ್ರೊಜ್ ಮಾದರಿಯಲ್ಲಿ ಕೆಲವು ಬದಲಾವಣೆಗಳೊಂದಿಗೆ ನವೀಕೃತ ಆಲ್‌ಟ್ರೊಜ್ ಬಿಡುಗಡೆ ಮಾಡಿದೆ.

ಪ್ರೀಮಿಯಂ ಹ್ಯಾಚ್‌ಬ್ಯಾಕ್ ಮಾದರಿಯು ಎಕ್ಸ್ಇ ಆವೃತ್ತಿಯೊಂದಿಗೆ ಖರೀದಿಗೆ ಲಭ್ಯವಿದ್ದು, ಇದೀಗ ಹೊಸದಾಗಿ ಎಕ್ಸ್ಇ ಪ್ಲಸ್ ರೂಪಾಂತರವನ್ನು ಬಿಡುಗಡೆ ಮಾಡಲಾಗಿದೆ. ಆಲ್‌ಟ್ರೊಜ್ ಕಾರಿನ ಎಕ್ಸ್ಇ ಮತ್ತು ಈ ಹಿಂದಿನ ಎಕ್ಸ್ಎಂ ರೂಪಾಂತರದ ನಡುವೆ ಗಮನಾರ್ಹ ಬೆಲೆಯ ಅಂತರವಿದ್ದ ಕಾರಣ ಟಾಟಾ ಮೋಟಾರ್ಸ್ ಕಂಪನಿಯು ಹೊಸ ಹೆಚ್ಚು ಕೈಗೆಟುಕುವ ಬೆಲೆಯ ಎಕ್ಸ್ಇ ಪ್ಲಸ್ ಆವೃತ್ತಿಯನ್ನು ಪರಿಚಯಿಸಿದೆ.

ಹೊಸ ಆಲ್‌ಟ್ರೊಜ್ ಎಕ್ಸ್ಇ ಪ್ಲಸ್ ರೂಪಾಂತದ ಪೆಟ್ರೋಲ್ ಆವೃತ್ತಿಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 6.35 ಲಕ್ಷ ಮತ್ತು ಡೀಸೆಲ್ ರೂಪಾಂತರವು ಆರಂಭಿಕವಾಗಿ ರೂ. 7.55 ಲಕ್ಷ ಬೆಲೆ ಪಡೆದುಕೊಂಡಿವೆ. ಹೊಸ ಮಾದರಿಯನ್ನು ಹೆಚ್ಚು ಕೈಗೆಟುಕುವಂತೆ ಮಾಡಲು ಖರೀದಿ ನಿರ್ಧಾರಗಳ ಮೇಲೆ ಪರಿಣಾಮ ಬೀರದ ಕೆಲವು ವೈಶಿಷ್ಟ್ಯಗಳನ್ನು ತೆಗೆದುಹಾಕಲಾಗಿದ್ದು, ಪ್ರಮುಖ ಪ್ರೀಮಿಯಂ ಫೀಚರ್ಸ್‌ಗಳನ್ನು ಕೈಬಿಡಲಾಗಿದೆ.

ಆಲ್‌ಟ್ರೊಜ್ ಬೇಸ್ ಮಾದರಿಯಾದ ಎಕ್ಸ್ಇ ರೂಪಾಂತರಕ್ಕೆ ಹೋಲಿಸಿದರೆ ಹೊಸ ಆವೃತ್ತಿಯಲ್ಲಿ 4 ಸ್ಪೀಕರ್‌ಗಳು, ಬ್ಲೂಟೂತ್ ಸಂಪರ್ಕ, ಎಫ್ಎಂ/ ಎಎಂ ರೇಡಿಯೋ, ಯುಎಸ್‌ಬಿ ಪೋರ್ಟ್ ಮತ್ತು ಸ್ಪೀಡ್ ಯುಎಸ್‌ಬಿ ಚಾರ್ಜರ್‌ನೊಂದಿಗೆ ಬರುತ್ತದೆ.

ಹಾಗೆಯೇ ಎಕ್ಸ್ಇ ಪ್ಲಸ್ ಆವೃತ್ತಿಯು ಹರ್ಮನ್ 8.89 ಸೆ.ಮೀ ಫ್ಲೋಟಿಂಗ್ ಡ್ಯಾಶ್‌ಬೋರ್ಡ್ ಟಾಪ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ನೊಂದಿಗೆ ಬರಲಿದ್ದು, ರಿಮೋಟ್ ಕೀಲೆಸ್ ಎಂಟ್ರಿ, ಮ್ಯಾನುವಲ್ ಹೊಂದಿರುವ ಆಟೋಫೋಲ್ಡ್ ರಿಯರ್ ವ್ಯೂ ಮಿರರ್‌ಗಳು, ವಿದ್ಯುತ್ ತಾಪಮಾನ ನಿಯಂತ್ರಣ, ಫಾಲೋ ಮಿ ಹೋಮ್ ಮತ್ತು ಫೈಂಡ್ ಮಿ ಫಂಕ್ಷನ್ ನೀಡಲಾಗಿದೆ.

ಹೊಸ ಮಾದರಿಯಲ್ಲಿ ಬೇಸ್ ರೂಪಾಂತರದಲ್ಲಿರುವಂತೆಯೇ ಕೆಲವು ಹೆಚ್ಚುವರಿ ತಾಂತ್ರಿಕ ಸೌಲಭ್ಯಗಳನ್ನು ನೀಡಲಾಗಿದ್ದು, ಹೊಸ ಮಾದರಿಯ ಆಗಮನದ ಜೊತೆಗೆ ಟಾಟಾ ಮೋಟಾರ್ಸ್ ಆಲ್‌ಟ್ರೊಜ್ ಬೆಲೆ ಹೆಚ್ಚಿಸಿದೆ.

ಹೊಸ ದರ ಪಟ್ಟಿಯಲ್ಲಿ ಕಂಪನಿಯು ಆಲ್‌ಟ್ರೊಜ್ ಕಾರಿನ ಆರಂಭಿಕ ಪೆಟ್ರೋಲ್ ಮಾದರಿಯ ಬೆಲೆಯಲ್ಲಿ ರೂ. 10 ಸಾವಿರದಷ್ಟು ಇಳಿಕೆ ಮಾಡಿದ್ದರೆ ಇನ್ನುಳಿದ ಎಲ್ಲಾ ಮಾದರಿಗಳ ಬೆಲೆಯಲ್ಲಿ ರೂ. 400 ರಿಂದ ರೂ. 8,500 ತನಕ ಬೆಲೆ ಹೆಚ್ಚಳ ಮಾಡಿದೆ.

ಆಲ್‌ಟ್ರೊಜ್ ಕಾರು ಮಾದರಿಯು ಹೊಸದಾಗಿ ಬಿಡುಗಡೆ ಮಾಡಲಾದ ಎಕ್ಸ್‌ಇ ಪ್ಲಸ್ ಜೊತೆಗೆ ಎಕ್ಸ್‌ಇ, ಎಕ್ಸ್ಎಂ, ಎಕ್ಸ್ಎಂ ಪ್ಲಸ್, ಎಕ್ಸ್‌ಟಿ, ಎಕ್ಸ್‌ಜೆಡ್, ಎಕ್ಸ್‌ಜೆಡ್ ಆಪ್ಷನ್ ಮತ್ತು ಎಕ್ಸ್‌ಜೆಡ್ ಅರ್ಬನ್ ವೆರಿಯೆಂಟ್‌ಗಳೊಂದಿಗೆ ಮಾರಾಟಗೊಳ್ಳುತ್ತಿದೆ.

ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನ ಎಲ್ಲಾ ರೂಪಾಂತರಗಳು 1.2 ಲೀಟರ್ ರೆವೊಟ್ರಾನ್ ಪೆಟ್ರೋಲ್ ಮತ್ತು 1.5 ಲೀಟರ್ ಟರ್ಬೊ ಚಾರ್ಜ್ಡ್ ರೆವೊಟಾರ್ಕ್ ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದ್ದು, ಬೆಲೆ ಹೆಚ್ಚಳದ ನಂತರ ಹೊಸ ಕಾರಿನ ಬೆಲೆಯು ಆರಂಭಿಕವಾಗಿ ರೂ. 5.89 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 9.42 ಲಕ್ಷ ಬೆಲೆ ಹೊಂದಿದೆ.

ಸದ್ಯಕ್ಕೆ ಆಲ್‌ಟ್ರೊಜ್ ಕಾರಿನಲ್ಲಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯನ್ನು ಮಾತ್ರವೇ ನೀಡಲಾಗಿದ್ದು, 1.2-ಲೀಟರ್ ಪೆಟ್ರೋಲ್ ಎಂಜಿನ್ ಮಾದರಿಯು 86-ಬಿಎಚ್‌ಪಿ, 113-ಎನ್ಎಂ ಟಾರ್ಕ್ ಮತ್ತು 1.5-ಲೀಟರ್ ಡೀಸೆಲ್ ಆವೃತ್ತಿಯು 90-ಬಿಎಚ್‌ಪಿ, 200-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಹೊಸ ಟಾಟಾ ಆಲ್‌ಟ್ರೊಜ್ ಐಟರ್ಬೋ ಪೆಟ್ರೋಲ್ ಆವೃತ್ತಿಯಲ್ಲಿ ನೀಡಲಾಗಿರುವ 1.2-ಲೀಟರ್ ಟರ್ಬೋ-ಪೆಟ್ರೋಲ್ ಎಂಜಿನ್ ಮಾದರಿಯು 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಗರಿಷ್ಠ 108-ಬಿಹೆಚ್‍ಪಿ ಮತ್ತು 140-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲಾಗುತ್ತದೆ.

ಐ-ಟರ್ಬೊ ಮಾದರಿಯು ಸಿಟಿ ಮತ್ತು ಸ್ಟೋರ್ಟ್ ಡ್ರೈವಿಂಗ್ ಮೋಡ್‌ಗಳನ್ನು ನೀಡಲಾಗಿದ್ದು, ಸದ್ಯಕ್ಕೆ ಹೊಸ ಮಾದರಿಯಲ್ಲಿ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆ ನೀಡಿರುವ ಕಂಪನಿಯು ಶೀಘ್ರದಲ್ಲೇ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ಸಹ ನೀಡಲಿದೆಯೆಂತೆ.

ಟಾಟಾ ಮೋಟಾರ್ಸ್ ಕಂಪನಿಯು ಆಲ್‌ಟ್ರೊಜ್ ಕಾರಿನ ಟರ್ಬೊ ಮಾದರಿಗಳಲ್ಲಿ ಮತ್ತು ಸಾಮಾನ್ಯ ಪೆಟ್ರೋಲ್ ಮಾದರಿಯ ಹೈ ಎಂಡ್ ವೆರಿಯೆಂಟ್‌ಗಳಲ್ಲಿ ಕನೆಕ್ಟೆಡ್ ಟೆಕ್ನಾಲಜಿ ಬಳಕೆ ಮಾಡಿದ್ದು, ಹೊಸ ತಂತ್ರಜ್ಞಾನವು ಕಾರಿಗೆ ಗರಿಷ್ಠ ಭದ್ರತೆ ನೀಡುತ್ತದೆ.

ಐರಾ(iRA) ಕನೆಕ್ಟೆಡ್ ಫೀಚರ್ಸ್ ಅನ್ನು ಆಲ್‌ಟ್ರೊಜ್ ಐಟರ್ಬೋ ಆವೃತ್ತಿಯಲ್ಲಿ ಜೋಡಣೆ ಮಾಡುವ ಮೂಲಕ ಆಟೋ ಉದ್ಯಮದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಹೊಸ ಕನೆಕ್ಟೆಡ್ ಫೀಚರ್ಸ್ ಹಲವು ಹೊಸ ವೈಶಿಷ್ಟ್ಯತೆಗಳೊಂದಿಗೆ ಕಾರುಗಳಿಗೆ ಗರಿಷ್ಠ ಭದ್ರತೆ ನೀಡುತ್ತದೆ.


Click it and Unblock the Notifications








