ಜಮ್ಶೆಡ್‌ಪುರ್ ಫುಟ್‌ಬಾಲ್ ಕ್ಲಬ್‌ನ ಅಧಿಕೃತ ವಾಹನ ಪಾಲುದಾರಿಕೆ ಪಡೆದುಕೊಂಡ ಟಾಟಾ ಪಂಚ್
ಪ್ರಸಕ್ತ ವರ್ಷದ ಇಂಡಿಯನ್ ಸೂಪರ್ ಲೀಗ್ (ISL) 2021-22 ಋತುವಿನಲ್ಲಿ ಜಮ್ಶೆಡ್‌ಪುರ ಎಫ್‌ಸಿ ಜೊತೆಗಿನ ಅಧಿಕೃತ ವಾಹನ ಪಾಲುದಾರಿಕೆಯನ್ನು ಮುಂದುವರಿಸಿರುವ ಟಾಟಾ ಮೋಟಾರ್ಸ್ ಕಂಪನಿಯು ಹೊಸದಾಗಿ ಬಿಡುಗಡೆ ಮಾಡಿದ ಮೈಕ್ರೋ ಎಸ್‌ಯುವಿ ಪಂಚ್ ಮಾದರಿಯನ್ನು ಪ್ರಾಯೋಜಿಸಿದೆ.

ಜಮ್ಶೆಡ್ಪುರ ಎಫ್‌ಸಿ ತಂಡವು ಅಧಿಕೃತ ಪಾಲುದಾರಿಕೆ ಅಡಿಯಲ್ಲಿ ಟಾಟಾ ವಿವಿಧ ಕಾರು ಮಾದರಿಗಳನ್ನು ಪ್ರಚಾರ ಮಾಡುತ್ತಿದ್ದು, 2017-18 ರ ಕ್ಲಬ್‌ನ ಚೊಚ್ಚಲ ಋತುವಿನಿಂದ ಟಾಟಾ ಮೋಟಾರ್ಸ್ ನೊಂದಿಗ ಅಧಿಕೃತ ಪಾಲುದಾರ ಸಂಸ್ಥೆಯಾಗಿ ತನ್ನ ಹೊಸ ಕಾರುಗಳನ್ನು ಪ್ರಾಯೋಜಿಸುತ್ತಿದೆ. ಇತ್ತೀಚೆಗೆ ಮುಕ್ತಾಯಗೊಂಡ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021ರ ಟೂರ್ನಿಯಲ್ಲೂ ತನ್ನ ಹೊಸ ಕಾರುಗಳನ್ನು ಪ್ರದರ್ಶನ ಮಾಡಿದ್ದ ಟಾಟಾ ಮೋಟಾರ್ಸ್ ಕಂಪನಿಯು ಗ್ರಾಹಕರ ಸೆಳೆಯುವಲ್ಲಿ ಯಶಸ್ವಿಯಾಗುತ್ತಿದೆ.

ಇಂಡಿಯನ್ ಸೂಪರ್ ಲೀಗ್ ಅಭಿಯಾನದ ಅಧಿಕೃತ ಆಟೋಮೊಬೈಲ್ ಪಾಲುದಾರರಾಗಿ ಜಮ್‌ಶೆಡ್‌ಪುರ ಎಫ್‌ಸಿಯೊಂದಿಗೆ ಪಾಲುದಾರಿಕೆ ಪ್ರಕಟಿಸುತ್ತಿರುವುದಕ್ಕೆ ಖುಷಿ ವ್ಯಕ್ತಪಡಿಸಿರುವ ಟಾಟಾ ಮತ್ತು ಜಮ್ಶೆಡ್‌ಪುರ್ ಎಫ್‌ಸಿ ತಂಡಗಳು ಪ್ರತಿ ಟೂರ್ನಿಯಲ್ಲೂ ಹೊಸ ಪಂಚ್ ಕಾರನ್ನು ಪ್ರದರ್ಶನ ಮಾಡಲಿದೆ.

ಜೊತೆಗೆ ಹೊಸ ಪಾಲುದಾರಿಕೆಯ ಭಾಗವಾಗಿ ಜಮ್ಶೆಡ್‌ಪುರ ಎಫ್‌ಸಿಯ ಕಿಟ್ ಮತ್ತು ಜರ್ಸಿ ತೋಳುಗಳ ಮೇಲೆ ಟಾಟಾ ಪಂಚ್ ಲೋಗೋ ನೀಡಲಾಗಿದ್ದು, ಇದರೊಂದಿಗೆ ಕಂಪನಿಯು ಇಂಡಿಯನ್ ಸೂಪರ್ ಲೀಗ್‌ನ ಗೋವಾ ಎಫ್‌ಸಿಯೊಂದಿಗೆ ಪ್ರಮುಖ ಪ್ರಾಯೋಜಕರಾಗಿ ಪಂಚ್ ಮಾದರಿಯ ಪ್ರದರ್ಶನಕ್ಕೆ ಒಪ್ಪಿಗೆ ಸೂಚಿಸಿವೆ.

ಸದ್ಯ ಪಂಚ್ ಮೈಕ್ರೊ ಎಸ್‌ಯುವಿ ಕಾರು ಮಾದರಿಯೊಂದಿಗೆ ಟಾಟಾ ಮೋಟಾರ್ಸ್ ಕಂಪನಿಯು ಭಾರೀ ಬೇಡಿಕೆ ಪಡೆದುಕೊಳ್ಳುತ್ತಿದ್ದು, ನೆಕ್ಸಾನ್ ನಂತರ ಎರಡನೇ ಅತಿ ಹೆಚ್ಚು ಬೇಡಿಕೆಯ ಕಾರು ಮಾದರಿಯಾಗಿ ಹೊರಹೊಮ್ಮಿದೆ. ಪಂಚ್ ಕಾರು ಮಾದರಿಯು ವಿಶೇಷ ಫೀಚರ್ಸ್, ಬಜೆಟ್ ಬೆಲೆ ಮತ್ತು ಅತ್ಯುತ್ತಮ ಎಂಜಿನ್ ಆಯ್ಕೆಯೊಂದಿಗೆ ಮೈಕ್ರೊ ಎಸ್‌ಯುವಿ ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದೆ.

ಪಂಚ್ ಕಾರಿನ ಮೂಲಕ ಟಾಟಾ ಮೋಟಾರ್ಸ್ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿನ ಕಾರು ಮಾರಾಟದಲ್ಲಿ ಶೇ.10ರಷ್ಟು ಪಾಲು ಹೊಂದುವ ವಿಶ್ವಾಸದಲ್ಲಿದ್ದು, ಹೊಸ ಕಾರು ಮುಂಬರುವ ದಿನಗಳಲ್ಲಿ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ಹೊಸ ಪಂಚ್ ಕಾರು ಮಾದರಿಯು ತಾಂತ್ರಿಕ ಅಂಶಗಳಿಗೆ ಅನುಗುಣವಾಗಿ ಪ್ರಮುಖ ನಾಲ್ಕು ವೆರಿಯೆಂಟ್‌ಗಳೊಂದಿಗೆ ಖರೀದಿಗೆ ಲಭ್ಯವಿದ್ದು, ಹೊಸ ಕಾರು ಮೈಕ್ರೊ ಎಸ್‌ಯುವಿ ಮಾದರಿಗಳಿಗೆ ಮಾತ್ರವಲ್ಲದೆ ಹ್ಯಾಚ್‌ಬ್ಯಾಕ್ ಕಾರು ಮಾದರಿಗಳಿಗೂ ಭರ್ಜರಿ ಪೈಪೋಟಿ ನೀಡುತ್ತಿದೆ.

ಪಂಚ್ ಕಾರು ಪ್ಯೂರ್, ಅಡ್ವೆಂಚರ್, ಅಕಾಂಪ್ಲಿಶೆಡ್ ಮತ್ತು ಕ್ರಿಯೆಟಿವ್ ಎನ್ನುವ ನಾಲ್ಕು ವೆರಿಯೆಂಟ್‌ಗಳೊಂದಿಗೆ ಖರೀದಿಗೆ ಲಭ್ಯವಿದ್ದು, ವಿವಿಧ ಮಾದರಿಗಳ ತಾಂತ್ರಿಕ ಸೌಲಭ್ಯಗಳಿಗೆ ಅನುಗುಣವಾಗಿ ಹೊಸ ಕಾರು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 5.49 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 9.09 ಲಕ್ಷ ಬೆಲೆ ಹೊಂದಿದೆ.

ಪಂಚ್ ಕಾರಿನಲ್ಲಿ ಪ್ಯೂರ್ ವೆರಿಯೆಂಟ್ ಆರಂಭಿಕ ಮಾದರಿಯಾಗಿ ಮಾರಾಟಗೊಳ್ಳಲಿದ್ದರೆ ಕ್ರಿಯೆಟಿವ್ ಮಾದರಿಯು ಟಾಪ್ ಎಂಡ್ ಮಾದರಿಯಾಗಿ ಮಾರಾಟಗೊಳ್ಳಲಿದ್ದು, ಬೆಸ್ ವೆರಿಯೆಂಟ್‌ನಲ್ಲೂ ಕಂಪನಿಯು ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್‌ಗಳನ್ನು ನೀಡಿದೆ.

ಸೆಗ್ಮೆಂಟ್ ಬೆಸ್ಟ್ ಫಿಚರ್ಸ್‌ಗಳೊಂದಿಗೆ ಅತ್ಯುತ್ತಮ ಎಂಜಿನ್ ಆಯ್ಕೆ ಹೊಂದಿರುವ ಟಾಟಾ ಪಂಚ್ ಕಾರಿನಲ್ಲಿ ಕಂಪನಿಯು 1.2-ಲೀಟರ್ ರಿವೊಟ್ರಾನ್ ತ್ರಿ ಸಿಲಿಂಡರ್ ನ್ಯಾಚುರಲ್ ಆಸ್ಪೆರೆಟೆಡ್ ಪೆಟ್ರೋಲ್ ಎಂಜಿನ್ ಪರಿಚಯಿಸಿದೆ. 1.2-ಲೀಟರ್ ಪೆಟ್ರೋಲ್ ಮಾದರಿಯು 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 83 ಬಿಎಚ್‌ಪಿ ಉತ್ಪಾದನಾ ಗುಣಹೊಂದಿದೆ.

ಹೊಸ ಕಾರು 3840 ಎಂಎಂ ಉದ್ದ, 1800 ಎಂಎಂ ಅಗಲ ಮತ್ತು 1635 ಎಂಎಂ ಎತ್ತರದೊಂದಿಗೆ 2450 ಎಂಎಂ ವ್ಹೀಲ್ ಬೇಸ್, 187 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್‌ನೊಂದಿಗೆ ಪ್ರತಿ ಮಾದರಿಯಲ್ಲೂ ಕಂಪನಿಯು ಅತ್ಯುತ್ತಮ ಫೀಚರ್ಸ್ ಹೊಂದಿದೆ.

ಜೊತೆಗೆ ಟಾಟಾ ಮೋಟಾರ್ಸ್ ಕಂಪನಿಯು ನೆಕ್ಸಾನ್ ನಂತರ ಎಲ್ಲಾ ಕಾರು ಮಾದರಿಗಳಲ್ಲೂ ಗರಿಷ್ಠ ಸುರಕ್ಷಾ ಫೀಚರ್ಸ್‌ಗಳೊಂದಿಗೆ ಅಭಿವೃದ್ದಿಗೊಳಿಸಿದ್ದು, ಇದೀಗ ಹೊಸದಾಗಿ ಬಿಡುಗಡೆಯಾಗಿರುವ ಪಂಚ್ ಮೈಕ್ರೊ ಎಸ್‌ಯುವಿ ಮಾದರಿಯಲ್ಲೂ ಸಹ ಗರಿಷ್ಠ ಮಟ್ಟದ ಸೇಫ್ಟಿ ರೇಟಿಂಗ್ಸ್ ಪಡೆದುಕೊಂಡಿದೆ.

ಪ್ಯೂರ್ ಮಾದರಿಯಲ್ಲಿ ಕಂಪನಿಯು ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಬ್ರೇಕ್ ಸ್ಯಾವಿ ಕಂಟ್ರೋಲ್, ಆರ್‌ಪಿಎಎಸ್, ಸೆಂಟ್ರೇಲ್ ಲಾಕಿಂಗ್ ಜೊತೆ ಕೀ, ಐಎಸಿ ಮತ್ತು ಇಎಸ್ಎಸ್ ಟೆಕ್ನಾಲಜಿ, ಫ್ರಂಟ್ ಪವರ್ ವಿಂಡೋ, ಟಿಲ್ಟ್ ಸ್ಟೀರಿಂಗ್, 90 ಡಿಗ್ರಿ ಡೋರ್ ಓಪನ್, ರಿಯರ್ ಪ್ಲ್ಯಾಟ್ ಫ್ಲೊರ್, ಬ್ಲ್ಯಾಕ್ ಒಡಿಹೆಚ್, ಹ್ಯುಮಿನಿಟಿ ಕ್ರೊಮ್ ಲೈನ್, ಪೆಟೆಂಡ್ ಬಂಪರ್, ಡೋರ್, ವೀಲ್ಹ್ ಆರ್ಚ್, ಸಿಲ್ ಕ್ಲಾಡಿಂಗ್ ಜೋಡಣೆ ಮಾಡಿದೆ.

ಹೊಸ ಕಾರು ಮುಂಭಾಗದಲ್ಲಿ ಮಾತ್ರವಲ್ಲ ಹಿಂಭಾಗದಲ್ಲಿ ಮತ್ತು ಸೈಡ್ ಪ್ರೊಫೈಲ್‌ನಲ್ಲೂ ಅತ್ಯುತ್ತಮ ಡಿಸೈನ್ ಹೊಂದಿದ್ದು, ಟೊರಾರ್ನಾಡೊ ಬ್ಲ್ಯೂ, ಟೊಪಿಕಲ್ ಮಿಸ್ಟ್, ಡೇ ಟೋನಾ ಗ್ರೆ, ಮಿಟಿಯೊರ್ ಬ್ರೊನ್ಜ್, ಆಟೊಮಿಕ್ ಆರೇಂಜ್, ಆರ್ಕಸ್ ವೈಟ್ ಮತ್ತು ಕ್ಯಾಲಿಪ್ಸೊ ರೆಡ್ ಸೇರಿ ಪ್ರಮುಖ ಏಳು ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.


Click it and Unblock the Notifications