Punch ಮೈಕ್ರೊ ಎಸ್‌ಯುವಿ ಕಾರಿನ ಹೊಸ ಟೀಸರ್ ಬಿಡುಗಡೆ ಮಾಡಿದ Tata Motors
Tata Motors ಕಂಪನಿಯು ತನ್ನ ಬಹುನೀರಿಕ್ಷಿತ Punch ಮೈಕ್ರೊ ಎಸ್‌ಯುವಿ ಅನಾವರಣಗೊಳಿಸುವ ಮೂಲಕ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಕಂಪನಿಯು ಇದೀಗ ಹೊಸ ಕಾರಿನ ಮತ್ತೊಂದು ಆಫ್ ರೋಡ್ ಕೌಶಲ್ಯತೆಯ ಟೀಸರ್ ಚಿತ್ರವನ್ನು ಹಂಚಿಕೊಂಡಿದೆ.

Punch ಕಾರಿನ ಮೂಲಕ ಎಂಟ್ರಿ ಲೆವಲ್ ಕಾರುಗಳ ಮಾರಾಟದಲ್ಲಿ ಹೊಸ ಸಂಚಲನ ಮೂಡಿಸುವ ತವಕದಲ್ಲಿರುವ Tata Motors ಕಂಪನಿಯು ಹೊಸ ಕಾರನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದ್ದು, ಸಣ್ಣ ಗಾತ್ರದ ಕಾರುಗಳಲ್ಲೇ ವಿಶೇಷ ತಾಂತ್ರಿಕ ಸೌಲಭ್ಯಗಳೊಂದಿಗೆ ಉತ್ತಮ ಚಾಲನಾ ವೈಶಿಷ್ಟ್ಯತೆಯನ್ನು ಪಡೆದುಕೊಂಡಿದೆ.

ಹೊಸ ಕಾರು ಆಕರ್ಷಕ ವಿನ್ಯಾಸ, ಅತ್ಯುತ್ತಮ ಎಂಜಿನ್ ಆಯ್ಕೆಯೊಂದಿಗೆ ನಗರ ಪ್ರದೇಶದಲ್ಲಿನ ಸಂಚಾರಕ್ಕೆ ಉತ್ತಮವಾಗಿದ್ದು, ಹೊಸ ಕಾರು ಆಫ್ ರೋಡ್‌ನಲ್ಲೂ ಸರಾಗ ಚಾಲನೆಗಾಗಿ ಸೆಗ್ಮೆಂಟ್ ಬೆಸ್ಟ್ ಗ್ರೌಂಡ್ ಕ್ಲಿಯೆರೆನ್ಸ್ ಸೇರಿದಂತೆ ಹಲವು ವಿಶೇಷತೆಗಳನ್ನು ಪಡೆದುಕೊಂಡಿದೆ.

ಬೆಸ್ಟ್ ಗ್ರೌಂಡ್ ಕ್ಲಿಯೆರೆನ್ಸ್ ಮೂಲಕ ಆಫ್-ರೋಡ್ ಚಾಲನೆಯಲ್ಲೂ ಗಮನಸೆಳೆದಿರುವ Punch ಕಾರು ಪ್ರತಿಸ್ಪರ್ಧಿ ಕಾರು ಮಾದರಿಗಳಿಂತಲೂ ಉತ್ತಮ ಕಾರ್ಯಕ್ಷಮತೆ ಹೊಂದಿದ್ದು, ಹೊಸ ಕಾರು ಮುಂಬರುವ ಕೆಲವೇ ದಿನಗಳಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ.

ಹೊಸ Punch ಕಾರು ಪ್ರೀಮಿಯಂ ಹ್ಯಾಚ್‌ಬ್ಯಾಕ್ ಮಾದರಿಯಾದ Altroz ಕಾರು ಉತ್ಪಾದನೆಗಾಗಿ ಬಳಕೆ ಮಾಡಲಾಗಿರುವ ALFA-ARC ಕಾರು ಉತ್ಪಾದನಾ ಪ್ಲ್ಯಾಟ್‌ಫಾರ್ಮ್‌ನಲ್ಲಿಯೇ ಉತ್ಪಾದನೆ ಮಾಡಲಾಗುತ್ತಿದ್ದು, Nexon ಮಾದರಿಯಲ್ಲೇ ಹೊರನೋಟ ಹೊಂದಿರುವ ಹೊಸ ಕಾರು ಗಾತ್ರದಲ್ಲಿ ಮಾತ್ರವೇ ತುಸು ಚಿಕ್ಕದಾಗಿರಲಿದೆ.

2020ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ Tata ಕಂಪನಿಯು ಹೊಸ ಕಾರನ್ನು ಮೊದಲ ಬಾರಿಗೆ H2X ನಂತರ HBX ಕೋಡ್‌ನೆಮ್ ಮೇಲೆ ಅನಾವರಣಗೊಳಿಸಿ Hornbill ಹೆಸರಿನಲ್ಲಿ ಬಿಡುಗಡೆ ಮಾಡಬಹುದು ಎಂದು ನೀರಿಕ್ಷಿಸಲಾಗಿತ್ತು. ಆದರೆ ಅಚ್ಚರಿ ಎಂಬಂತೆ ಹೊಸ ಕಾರಿನ ಬಿಡುಗಡೆಯ ಹೊತ್ತಿಗೆ Punch ಹೆಸರಿನಲ್ಲಿ ಅನಾವರಣಗೊಳಿಸಿದೆ.

SUV ಕಾರುಗಳ ಸರಣಿಯಲ್ಲಿ Harrier ಮತ್ತು Safari ಮಾದರಿಗಳಿಂದಲೂ ಹಲವಾರು ವಿನ್ಯಾಸವನ್ನು ಎರವಲು ಪಡೆದುಕೊಂಡಿರುವ Punch ಕಾರು ಸಣ್ಣ ಗಾತ್ರದ ಕಾರುಗಳಲ್ಲೇ ಉತ್ತಮ ತಾಂತ್ರಿಕ ಸೌಲಭ್ಯಗಳನ್ನು ಹೊಂದಿದ್ದು, ಕಾನ್ಸೆಪ್ಟ್ ಮಾದರಿಯಲ್ಲಿನ ಬಹುತೇಕ ಸ್ಪೋರ್ಟಿ ವಿನ್ಯಾಸಗಳನ್ನು ಉತ್ಪಾದನಾ ಮಾದರಿಯಲ್ಲೂ ಉಳಿಸಿಕೊಳ್ಳಲಾಗಿದೆ.

ಹೊಸ ಕಾರಿನಲ್ಲಿ ವಿಭಜಿತವಾಗಿರುವ ಹೆಡ್‌ಲ್ಯಾಂಪ್ ಸೆಟ್ಅಪ್, ಹ್ಯುಮಿನಿಟಿ ಲೈನ್ ಗ್ರಿಲ್, ಬಂಪರ್‌ಗೆ ಹೊಂದಿಕೊಂಡಿರುವ ಬಾಡಿ ಕ್ಲಾಡಿಂಗ್, ವ್ಹೀಲ್ ಆರ್ಚ್, ಹೊರಭಾಗದಲ್ಲಿ ಡ್ಯುಯಲ್ ಟೋನ್ ಬಣ್ಣದ ಆಯ್ಕೆ, 16-ಇಂಚಿನ ಅಲಾಯ್ ವ್ಹೀಲ್, ಕ್ರಿಸ್ ಲೈನ್ ಹೊಂದಿರುವ ಬ್ಯಾನೆಟ್, ರೂಫ್ ರೈಲ್ಸ್ ಸೇರಿದಂತೆ ಹಲವು ಸೌಲಭ್ಯಗಳನ್ನು ಹೊಂದಿದೆ.

Tata ಕಂಪನಿಯು ಸದ್ಯ Punch ಕಾರಿನ ಉತ್ಪಾದನಾ ಮಾದರಿಯ ಹೊರಭಾಗದ ಚಿತ್ರವನ್ನು ಮಾತ್ರ ಹಂಚಿಕೊಂಡಿದ್ದು, ಶೀಘ್ರದಲ್ಲೇ ಹೊಸ ಕಾರಿನ ಇಂಟಿರಿಯರ್ ಜೊತೆಗೆ ಎಂಜಿನ್ ಆಯ್ಕೆಯ ಮಾಹಿತಿಯನ್ನು ಸಹ ಹಂಚಿಕೊಳ್ಳಲಿದೆ.

ಹೊಸ ಕಾರಿನಲ್ಲಿ Tata ಕಂಪನಿಯು ಡ್ಯುಯಲ್ ಟೋನ್ ಇಂಟಿರಿಯರ್ ಜೊತೆಗೆ 7.0-ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ, ಸ್ಕ್ವಾರಿಷ್ ಏರ್ ಕಾನ್ ವೆಂಟ್ಸ್, ತ್ರಿ ಸ್ಪೋಕ್ ಪ್ಲ್ಯಾಟ್ ಬಾಟಮ್ ಸ್ಟೀರಿಂಗ್ ವೀಲ್ಹ್, ಹ್ವಾಕ್ ಕಂಟ್ರೋಲ್, ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಡಿಜಿಟಲ್ ಟಾಚೊ ಮೀಟರ್, ಅನಲಾಗ್ ಸ್ಪೀಡೋ ಮೀಟರ್ ಸೇರಿದಂತೆ ವಿವಿಧ ತಾಂತ್ರಿಕ ಸೌಲಭ್ಯಗಳನ್ನು ಹೊಂದಿರಲಿದೆ.

Punch ಮೈಕ್ರೊ ಎಸ್‌ಯುವಿ ಕಾರಿನಲ್ಲಿ Tata ಕಂಪನಿಯು 1.2-ಲೀಟರ್ ನ್ಯಾಚುರಲ್ ಆಸ್ಪೆರೆಟೆಡ್ ಪೆಟ್ರೋಲ್ ಎಂಜಿನ್ ಜೊತೆಗೆ ಪರ್ಫಾಮೆನ್ಸ್ ಪ್ರಿಯರಿಗಾಗಿ 1.0-ಲೀಟರ್ ಟರ್ಬೋ ಪೆಟ್ರೋಲ್ ಆವೃತ್ತಿಯನ್ನು ಪರಿಚಯಿಸುವ ಸಾಧ್ಯತೆಗಳಿದ್ದು, ಹೊಸ ಕಾರಿನ ಎಂಜಿನ್ ಆಯ್ಕೆ ಕುರಿತಾಗಿ ಇದುವರೆಗೂ ಯಾವುದೇ ನಿಖರ ಮಾಹಿತಿ ಲಭ್ಯವಾಗಿಲ್ಲ.

ಹೊಸ ಕಾರಿನ ಉತ್ಪಾದನಾ ಪ್ರಕ್ರಿಯೆಗೆ ಈಗಾಗಲೇ ಅಧಿಕೃತ ಚಾಲನೆ ನೀಡಿರುವ Tata ಕಂಪನಿಯು ಮುಂಬರುವ ಸೆಪ್ಟೆಂಬರ್ ಮಧ್ಯಂತರದಲ್ಲಿ ಹೊಸ ಕಾರಿನ ಉತ್ಪಾದನಾ ಆವೃತ್ತಿಯನ್ನುಅನಾವರಣಗೊಳಿಸಿ ಹೊಸ ಕಾರಿನ ಮಾಹಿತಿ ಹಂಚಿಕೊಳ್ಳುವ ಮೂಲಕ ಬುಕ್ಕಿಂಗ್ ಆರಂಭಿಸಲಿದೆ.

ಹೊಸ Punch ಕಾರು ಪ್ರತಿಸ್ಪರ್ಧಿ ಮಾದರಿಗಳಿಂತಲೂ ಹೆಚ್ಚಿನ ಮಟ್ಟದ ಫೀಚರ್ಸ್‌ಗಳನ್ನು ಪಡೆದುಕೊಳ್ಳುತ್ತಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಹೊಸ ಕಾರು ಆರಂಭಿಕವಾಗಿ ರೂ. 4.90 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 6.50 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗುವ ನೀರಿಕ್ಷೆಯಿದೆ.

ಸದ್ಯ ಮಾರುಕಟ್ಟೆಯಲ್ಲಿ ವಾಹನ ಸುರಕ್ಷತೆಯ ವಿಚಾರವಾಗಿ ಗ್ರಾಹಕರ ಮೆಚ್ಚುಗೆಗೆ ಕಾರಣವಾಗಿರುವ Tata ಕಂಪನಿಯು ಎಂಟ್ರಿ ಲೆವಲ್ ಮಾದರಿಯಲ್ಲೂ ಉತ್ತಮ ಸೇಫ್ಟಿ ರೇಟಿಂಗ್ ಕಾಯ್ದುಕೊಳ್ಳುವ ವಿಶ್ವಾಸದಲ್ಲಿದ್ದು, ಹೊಸ ಕಾರು Maruti Suzuki Ignis, Hyundai Santro ಜೊತೆಗೆ Nissan Magnite ಮತ್ತು Renault Kiger ಕಾರುಗಳ ಎಂಟ್ರಿ ಲೆವಲ್ ವೆರಿಯೆಂಟ್ ಪೈಪೋಟಿ ನೀಡುವ ನೀರಿಕ್ಷೆಯಿದೆ.


Click it and Unblock the Notifications