ಎಲೆಕ್ಟ್ರಿಕ್ ವಾಹನ ನೋಂದಣಿಯಲ್ಲಿ ಟಾಪ್ 5 ಸ್ಥಾನದಲ್ಲಿರುವ ರಾಜ್ಯಗಳಿವು
ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಕರೋನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಜನರು ವೈಯಕ್ತಿಕ ವಾಹನಗಳ ಬಳಕೆಗೆ ಆದ್ಯತೆ ನೀಡಿದರು. ಸ್ವಂತ ವಾಹನಗಳನ್ನು ಖರೀದಿಸುವ ಸಂದರ್ಭದಲ್ಲಿ ಜನರು ಎಲೆಕ್ಟ್ರಿಕ್ ವಾಹನಗಳ ಕಡೆಗೆ ಹೆಚ್ಚು ಆಸಕ್ತಿಯನ್ನು ತೋರಿಸಿದರು. ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಅಭಿವೃದ್ಧಿಯಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಪ್ರಮುಖ ಪಾತ್ರ ವಹಿಸುತ್ತಿವೆ.

ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ರವರು ಬುಧವಾರ ಸಂಸತ್ತಿನಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಅಗ್ರ ಪಟ್ಟಿಯಲ್ಲಿರುವ ಭಾರತೀಯ ರಾಜ್ಯಗಳ ಪಟ್ಟಿಯನ್ನು ಬಹಿರಂಗಪಡಿಸಿದರು. ಎಲೆಕ್ಟ್ರಿಕ್ ವಾಹನಗಳ ನೋಂದಣಿಯಲ್ಲಿ ಉತ್ತರ ಪ್ರದೇಶ, ದೆಹಲಿ ಹಾಗೂ ಕರ್ನಾಟಕ ರಾಜ್ಯಗಳು ಮೊದಲ ಮೂರು ಸ್ಥಾನಗಳಲ್ಲಿವೆ. ಭಾರತದಲ್ಲಿ ಇದುವರೆಗೂ 8,70,141 ಯುನಿಟ್ ಎಲೆಕ್ಟ್ರಿಕ್ ವಾಹನಗಳು ನೋಂದಣಿಯಾಗಿವೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಅಂದರೆ 2,55,700 ಯುನಿಟ್ ಎಲೆಕ್ಟ್ರಿಕ್ ವಾಹನಗಳನ್ನು ನೋಂದಾಯಿಸಲಾಗಿದೆ. ದೆಹಲಿಯಲ್ಲಿ 1,25,347 ಯುನಿಟ್ ಎಲೆಕ್ಟ್ರಿಕ್ ವಾಹನಗಳು ಹಾಗೂ ಕರ್ನಾಟಕದಲ್ಲಿ 72,544 ಯುನಿಟ್ ಎಲೆಕ್ಟ್ರಿಕ್ ವಾಹನಗಳು ನೋಂದಣಿಯಾಗಿವೆ. ಅಗ್ರ ಐದು ರಾಜ್ಯಗಳ ಪಟ್ಟಿಯಲ್ಲಿ ಬಿಹಾರ ರಾಜ್ಯವು 58,014 ಯುನಿಟ್ ಎಲೆಕ್ಟ್ರಿಕ್ ವಾಹನಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದರೆ, ಮಹಾರಾಷ್ಟ್ರ ರಾಜ್ಯವು 52,506 ಯುನಿಟ್ ಎಲೆಕ್ಟ್ರಿಕ್ ವಾಹನಗಳ ನೋಂದಣಿಯೊಂದಿಗೆ ಐದನೇ ಸ್ಥಾನದಲ್ಲಿದೆ.

ಎಲೆಕ್ಟ್ರಿಕ್ ವಾಹನಗಳ ಮಾರಾಟ ಹಾಗೂ ಉತ್ಪಾದನೆಯನ್ನು ಉತ್ತೇಜಿಸುವ ಸಲುವಾಗಿ, ಕೇಂದ್ರ ಸರ್ಕಾರವು 2015ರಲ್ಲಿ ಫೇಮ್ ಯೋಜನೆಯನ್ನು ಆರಂಭಿಸಿತು. 2019ರ ಏಪ್ರಿಲ್ ನಲ್ಲಿ ಕೇಂದ್ರ ಸರ್ಕಾರವು ಫೇಮ್ II ಯೋಜನೆಯನ್ನು ಘೋಷಿಸುವ ಮೂಲಕ ರೂ. 10,000 ಕೋಟಿಗಳ ಹೆಚ್ಚುವರಿ ಬಜೆಟ್ ಅನ್ನು ಘೋಷಿಸಿ, ಈ ಯೋಜನೆಯನ್ನು ಐದು ವರ್ಷಗಳವರೆಗೆ ವಿಸ್ತರಿಸಿತು.

ಇದಲ್ಲದೇ ಎಲೆಕ್ಟ್ರಿಕ್ ವಾಹನಗಳ ಮೇಲಿನ ಜಿಎಸ್‌ಟಿಯನ್ನು 28% ನಿಂದ 12% ಗೆ ಇಳಿಸಲಾಗಿದೆ. ಫೇಮ್ II ಯೋಜನೆಯಡಿಯಲ್ಲಿ ಚಾರ್ಜಿಂಗ್ ಸ್ಟೇಷನ್‌ಗಳ ಅಭಿವೃದ್ಧಿಯನ್ನು ಉತ್ತೇಜಿಸಲು ಚಾರ್ಜಿಂಗ್ ಮೂಲಸೌಕರ್ಯಗಳ ಮೇಲಿನ ಜಿಎಸ್‌ಟಿಯನ್ನು ಸಹ ಕಡಿಮೆ ಮಾಡಲಾಗಿದೆ. ಎಲೆಕ್ಟ್ರಿಕ್ ವಾಹನಗಳ ಮಾರಾಟವನ್ನು ಉತ್ತೇಜಿಸಲು ಹಲವಾರು ರಾಜ್ಯ ಸರ್ಕಾರಗಳು ತಮ್ಮ ಎಲೆಕ್ಟ್ರಿಕ್ ವಾಹನ ನೀತಿಯನ್ನು ಜಾರಿಗೊಳಿಸಿವೆ.

ಎಲೆಕ್ಟ್ರಿಕ್ ವೆಹಿಕಲ್ ಪಾಲಿಸಿಯ ಉದ್ದೇಶವು ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಉತ್ಪಾದನೆಯನ್ನು ಉತ್ತೇಜಿಸುವುದಾಗಿದೆ. ಎಲೆಕ್ಟ್ರಿಕ್ ವೆಹಿಕಲ್ ಪಾಲಿಸಿ ಅಡಿಯಲ್ಲಿ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಗಳಿಗೆ ಹಲವು ರೀತಿಯ ಸಬ್ಸಿಡಿಗಳನ್ನು ನೀಡಲಾಗುತ್ತದೆ. ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರುತ್ತಿರುವ ಹಿನ್ನೆಲೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿದೆ.

ಕೇಂದ್ರ ಸರ್ಕಾರವು ಮುಂಬರುವ ವರ್ಷಗಳಲ್ಲಿ ಎಲೆಕ್ಟ್ರಿಕ್ ವಾಹನಗಳಿಂದ ಉಂಟಾಗುವ ಮಾಲಿನ್ಯವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಇನ್ನು ಎರಡು ವರ್ಷಗಳಲ್ಲಿ ಎಲೆಕ್ಟ್ರಿಕ್ ವಾಹನದ ಬೆಲೆ ಡೀಸೆಲ್, ಪೆಟ್ರೋಲ್ ವಾಹನಗಳ ಬೆಲೆಗೆ ಸಮನಾಗಿರಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ರವರು ಹೇಳಿದ್ದಾರೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿವೆ.

ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ಕ್ರಮಗಳ ನಡುವೆಯೂ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ನಿರೀಕ್ಷಿತ ಮಟ್ಟದಲ್ಲಿಲ್ಲ. ಇದಕ್ಕೆ ಪ್ರಮುಖ ಕಾರಣವೆಂದರೆ ಎಲೆಕ್ಟ್ರಿಕ್ ವಾಹನಗಳ ಬೆಲೆ. ಅದರಲ್ಲೂ ವಿಶೇಷವಾಗಿ ಎಲೆಕ್ಟ್ರಿಕ್ ಕಾರುಗಳ ಹೆಚ್ಚಿನ ಬೆಲೆಗಳನ್ನು ಹೊಂದಿವೆ. ಎಲೆಕ್ಟ್ರಿಕ್ ವಾಹನಗಳ ಚಾಲನಾ ವೆಚ್ಚವು ಪೆಟ್ರೋಲ್, ಡೀಸೆಲ್ ವಾಹನಗಳಿಗಿಂತ ತುಂಬಾ ಕಡಿಮೆಯಾಗಿದೆ.

ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ದೊಡ್ಡ ಪ್ರಮಾಣದಲ್ಲಿ ಬಳಸುವುದರಿಂದ ಪೆಟ್ರೋಲ್, ಡೀಸೆಲ್ ಬಳಕೆ ಕಡಿಮೆಯಾಗಿ, ಅವುಗಳ ಆಮದು ಪ್ರಮಾಣವು ಸಹಕಡಿಮೆಯಾಗುತ್ತದೆ. ಇದರಿಂದ ಭಾರತವು ಲಕ್ಷಾಂತರ ಕೋಟಿ ರೂಪಾಯಿಗಳನ್ನು ಉಳಿಸಲು ಸಾಧ್ಯವಾಗಲಿದೆ. ಎಲೆಕ್ಟ್ರಿಕ್ ವಾಹನಗಳ ಮೇಲೆ ಕೇವಲ 5% ನಷ್ಟು ಮಾತ್ರ ಜಿಎಸ್‌ಟಿ ವಿಧಿಸಲಾಗುತ್ತದೆ.

ಇನ್ನು ಪೆಟ್ರೋಲ್ ವಾಹನಗಳ ಮೇಲೆ 48% ನಷ್ಟು ಜಿಎಸ್‌ಟಿ ವಿಧಿಸಲಾಗುತ್ತದೆ. ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿಗಳಲ್ಲಿ ಬಳಸುವ ಲಿಥಿಯಂನ ಬೆಲೆ ಹೆಚ್ಚಾಗಿರುವ ಕಾರಣಕ್ಕೆ ಎಲೆಕ್ಟ್ರಿಕ್ ವಾಹನಗಳ ಬೆಲೆಯು ಹೆಚ್ಚಾಗಿದೆ. ಭವಿಷ್ಯದಲ್ಲಿ ಲಿಥಿಯಂ ಉತ್ಪಾದನೆ ಹೆಚ್ಚಾಗುವುದರಿಂದ ಅದರ ಬೆಲೆ ಕಡಿಮೆಯಾಗುತ್ತದೆ. ಇದರಿಂದ ಎಲೆಕ್ಟ್ರಿಕ್ ವಾಹನಗಳ ಬೆಲೆಯೂ ಕಡಿಮೆಯಾಗಲಿದೆ.

ಈಗ ಭಾರತದ ಲಿಥಿಯಂ ಅಗತ್ಯತೆಯ 81% ನಷ್ಟು ಮಾತ್ರ ಸ್ಥಳೀಯವಾಗಿ ಉತ್ಪಾದನೆಯಾಗುತ್ತಿದೆ. ಪರ್ಯಾಯ ಬ್ಯಾಟರಿ ತಂತ್ರಜ್ಞಾನಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಂಶೋಧನೆಗಳು ನಡೆಯುತ್ತಿವೆ. 2030 ರ ವೇಳೆಗೆ ಎಲೆಕ್ಟ್ರಿಕ್ ವಾಹನಗಳ ಮಾರಾಟವು ಖಾಸಗಿ ಕಾರುಗಳಿಗೆ 30% ನಷ್ಟು, ಕಮರ್ಷಿಯಲ್ ಕಾರುಗಳಿಗೆ 70% ನಷ್ಟು, ಬಸ್‌ಗಳಿಗೆ 40% ನಷ್ಟು ಹಾಗೂ ದ್ವಿಚಕ್ರ, ತ್ರಿಚಕ್ರ ವಾಹನಗಳಿಗೆ 80% ನಷ್ಟು ಆಗಲಿದೆ ಎಂದು ಸರ್ಕಾರ ನಿರೀಕ್ಷಿಸುತ್ತಿದೆ.

ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜ್ ಮಾಡಲು ಕಲ್ಲಿದ್ದಲಿನ ಬದಲು ಸೋಲಾರ್ ಹಾಗೂ ಬಯೋಮಾಸ್‌ನಂತಹ ನವೀಕರಿಸಬಹುದಾದ ಇಂಧನ ಮೂಲಗಳಿಂದ ವಿದ್ಯುತ್ ಉತ್ಪಾದಿಸಲು ಕೇಂದ್ರ ಸರ್ಕಾರವು ಚಿಂತನೆ ನಡೆಸುತ್ತಿದೆ. ಎಲೆಕ್ಟ್ರಿಕ್ ವಾಹನಗಳನ್ನು ಸುಲಭವಾಗಿ ಚಾರ್ಜ್ ಮಾಡಲು, ಪೆಟ್ರೋಲ್ ಬಂಕ್ ಗಳಲ್ಲಿ ಚಾರ್ಜಿಂಗ್ ಪಾಯಿಂಟ್‌ಗಳನ್ನು ಒದಗಿಸುವ ಕೆಲಸಗಳು ಪ್ರಗತಿಯಲ್ಲಿವೆ.

ಎಲೆಕ್ಟ್ರಿಕ್ ವಾಹನಗಳನ್ನು ಹೊಂದುವುದರಿಂದ ಮಾಲಿನ್ಯ ಮುಕ್ತ ಪರಿಸರಕ್ಕೆ ಕೊಡುಗೆ ನೀಡಬಹುದು. ಎಲೆಕ್ಟ್ರಿಕ್ ವಾಹನಗಳಿಂದ ಯಾವುದೇ ಮಾಲಿನ್ಯ ಉಂಟಾಗುವುದಿಲ್ಲ. ಹೀಗಾಗಿ ವಾಯು ಮಾಲಿನ್ಯವನ್ನು ಗಣನೀಯವಾಗಿ ಕಡಿಮೆ ಮಾಡಬಹುದು. ಎಲೆಕ್ಟ್ರಿಕ್ ವಾಹನಗಳು ಆರ್ಥಿಕ ಮಿತವ್ಯಯಕಾರಿಯಾಗಿರುವುದರ ಜೊತೆಗೆ ಪರಿಸರಕ್ಕೂ ಪ್ರಯೋಜನಕಾರಿಯಾಗಿವೆ.

ಇನ್ನು ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯನ್ನು ಭಾಗಶಃ ಅಥವಾ ಸಂಪೂರ್ಣವಾಗಿ ಬದಲಾಯಿಸುವ ಮಹತ್ವಾಕಾಂಕ್ಷೆಯ ಗುರಿಗಳನ್ನು ಹೊಂದಿದ್ದು, ಮಾರುಕಟ್ಟೆಯಲ್ಲಿ ಆಕರ್ಷಕವಾದ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸುತ್ತಿವೆ.
ಗಮನಿಸಿ: ಈ ಲೇಖನದಲ್ಲಿರುವ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.


Click it and Unblock the Notifications