ಬೆಲೆ ಹೆಚ್ಚಳ: ಇಂದಿನಿಂದ Volkswagen Polo ಮತ್ತು Vento ಕಾರುಗಳ ಬೆಲೆ ಮತ್ತಷ್ಟು ದುಬಾರಿ
Volkswagen India ಕಂಪನಿಯು ತನ್ನ ಜನಪ್ರಿಯ ಕಾರು ಮಾದರಿಗಳಾದ Polo ಹ್ಯಾಚ್‌ಬ್ಯಾಕ್ ಮತ್ತು Vento ಸೆಡಾನ್ ಮಾದರಿಗಳ ಬೆಲೆ ಹೆಚ್ಚಿಸಿದ್ದು, ವಿವಿಧ ಮಾದರಿಗಳಿಗೆ ಅನುಗುಣವಾಗಿ ಶೇ.2 ರಿಂದ ಶೇ.3 ರಷ್ಟು ಹೆಚ್ಚಳ ಮಾಡಿದೆ.

ಆಟೋ ಬಿಡಿಭಾಗಗಳ ವೆಚ್ಚ ಹೆಚ್ಚುತ್ತಿರುವ ಪರಿಣಾಮ ಹೊಸ ವಾಹನಗಳ ಬೆಲೆಯು ನಿರಂತರವಾಗಿ ಏರಿಕೆಯಾಗುತ್ತಿದ್ದು, ಕಾರು ಮಾರಾಟದಲ್ಲಿ ಉತ್ತಮ ಬೇಡಿಕೆ ಕಾಯ್ದುಕೊಂಡಿರುವ Volkswagen ಕಂಪನಿಯು ಕೂಡಾ ತನ್ನ ಪ್ರಮುಖ ಕಾರು ಮಾದರಿಗಳ ಬೆಲೆ ಹೆಚ್ಚಿಸುವ ನಿರ್ಧಾರ ಪ್ರಕಟಿಸಿದೆ.

ಕೋವಿಡ್ ಪರಿಣಾಮ ಜಾಗತಿಕ ಮಾರುಕಟ್ಟೆಯಲ್ಲಿ ಆಟೋ ಬಿಡಿಭಾಗಗಳ ಕೊರತೆಯು ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗುತ್ತಿದ್ದು, ಹೆಚ್ಚುತ್ತಿರುವ ವೆಚ್ಚಗಳ ನಿರ್ವಹಣೆಗಾಗಿ ಆಟೋ ಕಂಪನಿಗಳು ನಿರಂತರವಾಗಿ ಬೆಲೆ ಪರಿಷ್ಕರಣೆ ಮಾಡುತ್ತಿವೆ.

Volkswagen ಸಹ ಇಂದಿನಿಂದಲೇ ಬೆಲೆ ಹೆಚ್ಚಳ ಮಾಡುತ್ತಿರುವುದಾಗಿ ಮಾಹಿತಿ ಹಂಚಿಕೊಂಡಿದ್ದ, ನಿರಂತರ ಬೆಲೆ ಏರಿಕೆ ಪರಿಣಾಮ ವಾಹನ ಮಾಲೀಕತ್ವವು ದಿನದಿಂದ ದಿನಕ್ಕೆ ದುಬಾರಿಯಾಗಿ ಪರಿಣಮಿಸುತ್ತಿದೆ.

ಕೋವಿಡ್‌ಗೂ ಮುನ್ನ ಪ್ರತಿ ಆರು ತಿಂಗಳಿಗೆ ಒಂದು ಬಾರಿ ವಾಹನಗಳ ದರ ಪರಿಷ್ಕರಣೆ ಮಾಡುತ್ತಿದ್ದ ಆಟೋ ಕಂಪನಿಗಳು ಇದೀಗ ಪ್ರತಿ ಮೂರು ತಿಂಗಳಿಗೆ ಒಂದು ಬಾರಿ ದರ ಹೆಚ್ಚಿಸುತ್ತಿದ್ದು, 2021ರಲ್ಲೇ Volkswagen ಕೂಡಾ ಕಂಪನಿಯು ಮೂರನೇ ಬಾರಿಗೆ ದರ ಹೆಚ್ಚಿಸುತ್ತಿದೆ.

ಪ್ರತಿ ಮೂರು ತಿಂಗಳಿಗೆ ಒಂದು ಬಾರಿ ಬಹುತೇಕ ವಾಹನ ತಯಾರಕ ಕಂಪನಿಗಳು ತಮ್ಮ ವಾಹನಗಳ ಮೂಲ ಬೆಲೆಯಲ್ಲಿ ಶೇ.1 ರಿಂದ ಶೇ.2 ರಷ್ಟು ಬೆಲೆ ಹೆಚ್ಚಿಸುತ್ತಿದ್ದು, ಕಳೆದ ಕೆಲ ತಿಂಗಳಿನಲ್ಲಿ ಬಜೆಟ್ ಕಾರುಗಳ ಬೆಲೆಯಲ್ಲಿ ಸರಾಸರಿಯಾಗಿ ರೂ. 60 ಸಾವಿರದಿಂದ ರೂ.1.20 ಲಕ್ಷದಷ್ಟು ಬೆಲೆ ಹೆಚ್ಚಳವಾಗಿವೆ.

ಮಧ್ಯಮ ಗಾತ್ರದ ಕಾರುಗಳ ಬೆಲೆಯಲ್ಲಿ ರೂ. 80 ಸಾವಿರದಿಂದ ರೂ. 1.50 ಲಕ್ಷದವರೆಗೆ ಬೆಲೆ ಹೆಚ್ಚಳವಾಗಿದ್ದು, ವಿದೇಶಿ ಮಾರುಕಟ್ಟೆಗಳಿಂದ ಆಮದುಗೊಳ್ಳುವ ಎಲೆಕ್ಟ್ರಾನಿಕ್ ಸೆಮಿ ಕಂಡಕ್ಟರ್‌ಗಳ ಬೆಲೆ ಹೆಚ್ಚಳವಾಗುತ್ತಿರುವ ಪರಿಣಾಮವೇ ಹೊಸ ವಾಹನ ಖರೀದಿಯು ಮತ್ತಷ್ಟು ಹೊರೆಯಾಗುತ್ತಿದೆ.

ಬಿಡಿಭಾಗಗಳ ಬೆಲೆ ಹೆಚ್ಚಳ ಪರಿಣಾಮ ಕಳೆದ ಜನವರಿ, ಏಪ್ರಿಲ್‌ನಲ್ಲಿ ಬೆಲೆ ಏರಿಕೆ ಮಾಡಿದ್ದ Volkswagen ಕಂಪನಿಯು ಇದೀಗ ಮತ್ತೊಮ್ಮೆ ದರ ಹೆಚ್ಚಿಸುತ್ತಿದ್ದು, ಸೆಪ್ಟೆಂಬರ್ 1ರಿಂದಲೇ ಅನ್ವಯವಾಗುವಂತೆ ಹೊಸ ದರ ಪ್ರಕಟಿಸಿದೆ.

Polo ಹ್ಯಾಚ್‌ಬ್ಯಾಕ್ ಮಾದರಿ ಬೆಲೆಯಲ್ಲಿ ಶೇ.3ರಷ್ಟು ಮತ್ತು Vento ಸೆಡಾನ್ ಮಾದರಿಯಲ್ಲಿ ಶೇ.2 ರಷ್ಟು ಬೆಲೆ ಹೆಚ್ಚಿಸಿದ್ದು, ಅಗಸ್ಟ್ 31ರ ತನಕ ಬುಕ್ಕಿಂಗ್ ಮಾಡುವ ಗ್ರಾಹಕರಿಗೆ ಹಳೆಯ ಬೆಲೆಯಲ್ಲಿಯೇ ಕಾರು ವಿತರಣೆ ಮಾಡಲಿದೆ.

ಸೆಪ್ಟೆಂಬರ್ 1ರಿಂದ ಬುಕ್ಕಿಂಗ್ ಮಾಡುವ ಗ್ರಾಹಕರಿಗೆ ಹೊಸ ದರ ಅನ್ವಯವಾಗಲಿದ್ದು, Polo ಮಾದರಿಯಲ್ಲಿ ಸ್ಟ್ಯಾಂಡರ್ಡ್ ಮಾದರಿಯನ್ನು ಹೊರತುಪಡಿಸಿ ಜಿಟಿ ಲೈನ್ ಮಾದರಿಯ ಬೆಲೆಯಲ್ಲಿ ಯಾವುದೇ ಹೆಚ್ಚಳ ಮಾಡಿಲ್ಲ.

ಹೊಸ ದರಪಟ್ಟಿಯಲ್ಲಿ Polo ಹ್ಯಾಚ್‌ಬ್ಯಾಕ್ ಮಾದರಿಯ ಬೆಲೆಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 6.27 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.9.99 ಲಕ್ಷ ಬೆಲೆ ಹೊಂದಿದೆ.

Polo ಕಾರಿನ ಮಧ್ಯಂತರ ಆವೃತ್ತಿಗಳ ಬೆಲೆಯಲ್ಲಿ ರೂ. 5 ಸಾವಿರದಿಂದ ರೂ. 30 ಸಾವಿರ ತನಕ ಹೆಚ್ಚಳವಾಗಲಿದ್ದು, ಟಾಪ್ ಎಂಡ್ ಮಾದರಿಯಾದ ಜಿಟಿ 1.0 ಟಿಎಸ್ಐ ಮಾದರಿಯ ಬೆಲೆಯು ಈ ಹಿಂದಿನಂತೆಯೇ ರೂ. 9.99 ಲಕ್ಷ ಬೆಲೆ ಮುಂದುವರಿದಿದೆ.

ಇನ್ನು Vento ಸೆಡಾನ್ ಮಾದರಿಯು ಹೊಸ ದರ ಪಟ್ಟಿಯಲ್ಲಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 9.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 14.10 ಲಕ್ಷ ಬೆಲೆ ಹೊಂದಿದೆ.

Vento ಕಾರಿನ ಹೊಸ ದರ ಪಟ್ಟಿಯಲ್ಲಿ ಆರಂಭಿಕ ಮಾದರಿಯ ಬೆಲೆಯನ್ನು ಈ ಹಿಂದಿನಂತೆ ಮುಂದುವರಿಸಲಾಗಿದ್ದು, ಮಧ್ಯಂತರದ ಆವೃತ್ತಿಗಳ ಬೆಲೆ ರೂ. 5 ಸಾವಿರದಿಂದ ರೂ. 27 ಸಾವಿರ ತನಕ ಹೆಚ್ಚಳವಾಗಲಿದೆ.

ಇನ್ನು Volkswagen ಕಂಪನಿಯು Vento ಕಾರಿನ ಎಲ್ಲಾ ವೆರಿಯೆಂಟ್‌ಗಳಲ್ಲೂ 1.0-ಲೀಟರ್ ಟಿಎಸ್ಐ ಟರ್ಬೋ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಿದ್ದು, Polo ಮಾದರಿಯಲ್ಲಿ ಮಾತ್ರ ಎಂಪಿವಿ ಮತ್ತು ಟಿಎಸ್ಐ ಎನ್ನುವ ಎರಡು ಎಂಜಿನ್ ಆಯ್ಕೆ ನೀಡಿದೆ.

ಆರಂಭಿಕ ಮಾದರಿಯಾದ 1.0-ಲೀಟರ್ ಎಂಪಿಐ ಪೆಟ್ರೋಲ್ ಎಂಜಿನ್ ಮಾದರಿಯು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 76-ಬಿಎಚ್‌ಪಿ ಮತ್ತು 95-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು. ಹಾಗೆಯೇ ಟಿಎಸ್ಐ ಆವೃತ್ತಿಗಳಲ್ಲಿರುವ 1.0-ಲೀಟರ್ ಟಿಎಸ್ಐ ಟರ್ಬೋ ಪೆಟ್ರೋಲ್ ಕಾರು ಮಾದರಿಯು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ಗರಿಷ್ಠ 109-ಬಿಎಚ್‌ಪಿ ಮತ್ತು 170-ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಪ್ರತಿ ಲೀಟರ್ ಪೆಟ್ರೋಲ್‌ಗೆ ಗರಿಷ್ಠ 16.47 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತವೆ.


Click it and Unblock the Notifications








