ಪೊಲೊ ಮತ್ತು ವೆಂಟೊ ಟರ್ಬೊ ಎಡಿಷನ್ ಬಿಡುಗಡೆ ಮಾಡಿದ ಫೋಕ್ಸ್‌ವ್ಯಾಗನ್
ಫೋಕ್ಸ್‌ವ್ಯಾಗನ್ ಇಂಡಿಯಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ತನ್ನ ಜನಪ್ರಿಯ ಕಾರು ಮಾದರಿಗಳಾದ ಪೊಲೊ ಹ್ಯಾಚ್‌ಬ್ಯಾಕ್ ಮತ್ತು ಫೋಕ್ಸ್‌ವ್ಯಾಗನ್ ವೆಂಟೊ ಸೆಡಾನ್ ಕಾರು ಮಾದರಿಗಳಲ್ಲಿ ಟರ್ಬೊ ಎಡಿಷನ್ ಬಿಡುಗಡೆ ಮಾಡಿದೆ.

ಪೊಲೊ ಹ್ಯಾಚ್‌ಬ್ಯಾಕ್ ಮತ್ತು ಫೋಕ್ಸ್‌ವ್ಯಾಗನ್ ವೆಂಟೊ ಸೆಡಾನ್ ಕಾರಿನ ಕಂಫರ್ಟ್ ವೆರಿಯೆಂಟ್ ಆಧರಿಸಿ ಟರ್ಬೊ ಎಡಿಷನ್ ಬಿಡುಗಡೆ ಮಾಡಲಾಗಿದ್ದು, ಸ್ಟ್ಯಾಂಡರ್ಡ್ ಮಾದರಿಗಿಂತಲೂ ಹೊಸ ಆವೃತ್ತಿಗಳಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಪರಿಚಯಿಸಲಾಗಿದೆ. ಹೊಸ ಕಾರು ಮಾದರಿಗಳು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಪೊಲೊ ಟರ್ಬೊ ಎಡಿಷನ್‌ಗೆ ರೂ. 6.99 ಲಕ್ಷ ಮತ್ತು ವೆಂಟೊ ಟರ್ಬೊ ಎಡಿಷನ್‌ಗೆ ರೂ. 8.69 ಲಕ್ಷ ಬೆಲೆ ನಿಗದಿಪಡಿಸಲಾಗಿದ್ದು, ಹೊಸ ಕಾರಿನ ಬೆಲೆಯು ಸ್ಟ್ಯಾಂಡರ್ಡ್ ಮಾದರಿಗಿಂತ ತುಸು ದುಬಾರಿಯಾಗಿದೆ.

ಹೊಸ ಕಾರುಗಳಲ್ಲಿ ಫೋಕ್ಸ್‌ವ್ಯಾಗನ್ ಕಂಪನಿಯು ಸ್ಟ್ಯಾಂಡರ್ಡ್ ಮಾದರಿಯಲ್ಲಿರುವ ಫೀಚರ್ಸ್ ಒಳಗೊಂಡಂತೆ ಹೆಚ್ಚುವರಿಯಾಗಿ ಗ್ಲಾಸಿ ಬ್ಲ್ಯಾಕ್ ಸ್ಪಾಯ್ಲರ್, ರಿಯರ್ ವ್ಯೂ ಮಿರರ್ ಕ್ಯಾಪ್, ಫೆಂಡರ್ ಬ್ಯಾಡ್ಜ್, ಸ್ಪೋಟಿ ಸೀಟುಗಳನ್ನು ನೀಡಲಾಗಿದೆ.

ಹೊಸ ತಾಂತ್ರಿಕ ಅಂಶಗಳಿಂದಾಗಿ ಹೊಸ ಕಾರಿನ ನೋಟವು ಆಕರ್ಷಕವಾಗಿದ್ದು, ಸ್ಪೋರ್ಟಿ ಹ್ಯಾಚ್‌ಬ್ಯಾಕ್ ಮತ್ತು ಸೆಡಾನ್ ಕಾರು ಖರೀದಿದಾರರನ್ನು ಸೆಳೆಯಲು ಹೊಸ ಕಾರು ಮಾದರಿಯು ಸಹಕಾರಿಯಾಗಲಿದೆ ಎನ್ನಬಹುದು.

ಇನ್ನು ಹೆಚ್ಚುವರಿ ತಾಂತ್ರಿಕ ಅಂಶಗಳನ್ನು ಹೊರತುಪಡಿಸಿ ಹೊಸ ವೆರಿಯೆಂಟ್‌ಗಳ ಎಂಜಿನ್ ಆಯ್ಕೆಯನ್ನು ಈ ಹಿಂದಿನಂತೆಯೇ ಮುಂದುವರಿಸಲಾಗಿದ್ದು, ಹ್ಯಾಚ್‌ಬ್ಯಾಕ್ ಮತ್ತು ಸೆಡಾನ್ ಮಾದರಿಗಳ ಮಾದರಿಗಳ ಮಾರಾಟದಲ್ಲಿ ಉತ್ತಮ ಬೇಡಿಕೆ ಹೊಂದಿರುವ ಪೊಲೊ ಮತ್ತು ವೆಂಟೊ ಕಾರುಗಳು ಅತ್ಯುತ್ತಮ ಎಂಜಿನ್ ಆಯ್ಕೆ ಹೊಂದಿದೆ.

ಟರ್ಬೊ ಎಡಿಷನ್‌ಗಳಲ್ಲಿ ಕಾರು ಮಾದರಿಗಳಿಗೆ ಅನುಗುಣವಾಗಿ 1.0-ಲೀಟರ್ ಎಂಪಿಐ ಮತ್ತು 1.0-ಲೀಟರ್ ಟಿಎಸ್ಐ ಟರ್ಬೋ ಪೆಟ್ರೋಲ್ ಎಂಜಿನ್ ಜೋಡಿಸಲಾಗಿದ್ದು, ಎಂಜಿನ್ ಮಾದರಿಗಳಿಗೆ ಅನುಗುಣವಾಗಿ ಗೇರ್‌ಬಾಕ್ಸ್ ಆಯ್ಕೆಯನ್ನು ನೀಡಲಾಗಿದೆ.

ಪೊಲೊ ಆರಂಭಿಕ ಕಾರು ಮಾದರಿಯಲ್ಲಿರುವ 1.0-ಲೀಟರ್ ಎಂಪಿಐ ಪೆಟ್ರೋಲ್ ಎಂಜಿನ್ ಮಾದರಿಯು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 76-ಬಿಎಚ್‌ಪಿ ಮತ್ತು 95-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಟಾಪ್ ಎಂಡ್ ಮಾದರಿಗಳಲ್ಲಿರುವ 1.0-ಲೀಟರ್ ಟಿಎಸ್ಐ ಟರ್ಬೋ ಪೆಟ್ರೋಲ್ ಕಾರು ಮಾದರಿಯು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ಗರಿಷ್ಠ 109-ಬಿಎಚ್‌ಪಿ ಮತ್ತು 170-ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಪ್ರತಿ ಲೀಟರ್ ಪೆಟ್ರೋಲ್‌ಗೆ ಗರಿಷ್ಠ 16.47 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತವೆ.

ವೆಂಟೊ ಕಾರು ಮಾದರಿಯಲ್ಲಿ ಫೋಕ್ಸ್‌ವ್ಯಾಗನ್ ಕಂಪನಿಯು ಎಲ್ಲಾ ವೆರಿಯೆಂಟ್‌ಗಳಲ್ಲೂ 1.0-ಲೀಟರ್ ಟಿಎಸ್ಐ ಟರ್ಬೋ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಿದ್ದು, 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ನೀಡಲಾಗಿದೆ.

ಪೊಲೊ ಮತ್ತು ವೆಂಟೊ ಮಾದರಿಗಳಲ್ಲಿ ಟರ್ಬೊ ಎಡಿಷನ್ ಹೊರತು ಪಡಿಸಿ ಸ್ಟ್ಯಾಂಡರ್ಡ್ ಮಾದರಿಗಳಿಗೆ ಅನುಸಾರವಾಗಿ ಪೊಲೊ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 6.06 ಲಕ್ಷದಿಂದ ರೂ. 9.92 ಲಕ್ಷ ಬೆಲೆ ಹೊಂದಿದ್ದರೆ ವೆಂಟೊ ಕಾರು ಮಾದರಿಯು ಆರಂಭಿಕವಾಗಿ ರೂ. 8.69 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ. 13.68 ಲಕ್ಷ ಬೆಲೆ ಹೊಂದಿವೆ.


Click it and Unblock the Notifications








