ಪ್ರತಿ ಚಾರ್ಜ್‌ಗೆ 306 ಕಿ.ಮೀ ಮೈಲೇಜ್ ನೀಡುವ ಜಿಪ್‌ಟ್ರಾನ್ ತಂತ್ರಜ್ಞಾನ ಪ್ರೇರಿತ Tata Tigor EV ಬಿಡುಗಡೆ
Tata Motors ಕಂಪನಿಯು ಜಿಪ್‌ಟ್ರಾನ್ ತಂತ್ರಜ್ಞಾನ ಹೊಂದಿರುವ ತನ್ನ ಎರಡನೇ ಕಾರು ಮಾದರಿಯಾದ Tigor EV ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು, ಹೊಸ ಕಾರು ಹಲವಾರು ಹೊಸ ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

ಇಂಧನಗಳ ಬೆಲೆ ಹೆಚ್ಚಳ ಪರಿಣಾಮ ಎಲೆಕ್ಟ್ರಿಕ್ ಕಾರು ಮಾದರಿಗಳಿಗೆ ಹೆಚ್ಚಿನ ಬೇಡಿಕೆ ಹರಿದುಬರುತ್ತಿದ್ದು, Nexon EV ಮೂಲಕ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಂಡಿರುವ Tata Motors ಕಂಪನಿಯು Tigor EV ಮಾದರಿಯ ಮೂಲಕ ಉತ್ತಮ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯೊಂದಿಗೆ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಿದೆ.

Tigor EV ಮಾದರಿಯು ಈಗಾಗಲೇ ಮಾರುಕಟ್ಟೆಯಲ್ಲಿದ್ದರೂ Nexon EV ಮಾದರಿಯಲ್ಲಿ ಬೇಡಿಕೆ ಪಡೆದುಕೊಳ್ಳುವಲ್ಲಿ ಹಿನ್ನಡೆ ಅನುಭವಿಸಿತ್ತು. ಹೀಗಾಗಿ 2021ರ Tigor EV ಮಾದರಿಯಲ್ಲಿ ಹೊಸ ಬದಲಾವಣೆ ಪರಿಚಯಿಸಿರುವ Tata ಕಂಪನಿಯು ಹಲವಾರು ಸುಧಾರಿತ ತಂತ್ರಜ್ಞಾನ ಪ್ರೇರಿತ ತಾಂತ್ರಿಕ ಅಂಶಗಳನ್ನು ಜೋಡಣೆ ಮಾಡಿದೆ.

ಹೊಸ Tigor EV ಮಾದರಿಯು XE, XM, XZ+ ಮತ್ತು XZ+ ಡ್ಯುಯಲ್ ಟೋನ್ ವೆರಿಯೆಂಟ್ ಒಳಗೊಂಡಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 11.99 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯು 12.99 ಲಕ್ಷ ಬೆಲೆ ಹೊಂದಿದೆ.
| Tigor EV | Price |
| XE | ₹11,99,000 |
| XM | ₹12,49,000 |
| XZ+ | ₹12,99,000 |

ಜಿಪ್‌ಟ್ರಾನ್ ತಂತ್ರಜ್ಞಾನ ಪ್ರೇರಣೆಯ ಹೊಸ ಪವರ್‌ಟ್ರೈನ್ ತಂತ್ರಜ್ಞಾನ ಹೊಂದಿರುವ ನವೀಕೃತ Tigor EV ಮಾದರಿಯು ಅತ್ಯುತ್ತಮ ಪರ್ಫಾಮೆನ್ಸ್‌ನೊಂದಿಗೆ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸಲಿದ್ದು, ಹೊಸ ಪವರ್‌ಟ್ರೈನ್ ತಂತ್ರಜ್ಞಾನವು ಕಾರಿನ ಕಾರ್ಯಕ್ಷಮತೆಯನ್ನು ಹೆಚ್ಚಿಸುವಲ್ಲಿ ಸಾಕಷ್ಟು ಸಹಕಾರಿಯಾಗಿದೆ.

ಹೊಸ ತಂತ್ರಜ್ಞಾನ ಪ್ರೇರಿತ 55kW ಎಲೆಕ್ಟ್ರಿಕ್ ಮೋಟಾರ್ ಮತ್ತು 26kWh ಲೀಥಿಯಂ ಅಯಾನ್ ಬ್ಯಾಟರಿ ಜೋಡಣೆಯು ಕಾರಿನ ಕಾರ್ಯಕ್ಷಮತೆ ಹೆಚ್ಚಳದೊಂದಿಗೆ ಮೈಲೇಜ್‌ನಲ್ಲೂ ಸಾಕಷ್ಟು ಸುಧಾರಣೆಗೊಂಡಿದ್ದು, ಹೊಸ ಕಾರು ಪ್ರತಿ ಚಾರ್ಜ್‌ಗೆ ಗರಿಷ್ಠ 306 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.

ಜಿಪ್‌ಟ್ರಾನ್ ಪವರ್‌ಟ್ರೈನ್ ತಂತ್ರಜ್ಞಾನವನ್ನು ಹಲವು ಸುಧಾರಿತ ವೈಶಿಷ್ಟ್ಯತೆಗಳೊಂದಿಗೆ ಅಭಿವೃದ್ದಿಗೊಳಿಸಲಾಗಿದ್ದು, ಹೊಸ ಪವರ್‌ಟ್ರೈನ್‌ನಲ್ಲಿ ಹೈ ವೊಲ್ಟೆಜ್ ಸಿಸ್ಟಂ, ದೀರ್ಘಕಾಲಿಕ ಬ್ಯಾಟರಿ ಸಾಮಾರ್ಥ್ಯ, ಅತಿಕಡಿಮೆ ಅವಧಿಯಲ್ಲಿ ಹೆಚ್ಚು ಚಾರ್ಜಿಂಗ್ ಸಿಸ್ಟಂ ಮತ್ತು ಸೂಪಿರಿಯರ್ ಪರ್ಫಾಮೆನ್ಸ್ ವೈಶಿಷ್ಟ್ಯತೆಗಳಿಂದ ಕೂಡಿದೆ.

Nexon EV ಮಾದರಿಯಲ್ಲಿ ಹೊಸ ಜಿಪ್‌ಟ್ರಾನ್ ತಂತ್ರಜ್ಞಾನವನ್ನು ಈಗಾಗಲೇ ಅಳವಡಿಸಲಾಗಿದ್ದು, ಇದೀಗ Tigor EV ಮಾದರಿಯಲ್ಲಿ ಅಳವಡಿಸಲಾಗಿದೆ. ಜಿಪ್‌ಟ್ರಾನ್ ತಂತ್ರಜ್ಞಾನವು Tata ಕಂಪನಿಯನ್ನು ಜಾಗತಿಕ ಮಟ್ಟದಲ್ಲಿ ಗಮನಸೆಳೆಯುವಂತೆ ಮಾಡಿದ್ದು, ಎಲೆಕ್ಟ್ರಿಕ್ ಕಾರುಗಳ ಕಾರ್ಯಕ್ಷಮತೆ, ಬ್ಯಾಟರಿ ದಕ್ಷತೆ ಮತ್ತು ಗ್ರಾಹಕರ ಸ್ನೇಹಿ ವಾಹನಗಳನ್ನಾಗಿ ಗುರುತಿಸಲು ಸಹಕಾರಿಯಾಗಿದೆ.

ಹೊಸ Tigor EV ಆವೃತ್ತಿಯಲ್ಲಿರುವ 26kWh ಲೀಥಿಯಂ ಅಯಾನ್ ಬ್ಯಾಟರಿಯನ್ನು ಹೋಂ ಚಾರ್ಜರ್ ಮೂಲಕ ಪೂರ್ತಿಯಾಗಿ ಚಾರ್ಜ್ ಮಾಡಲು ಗರಿಷ್ಠ 8 ಗಂಟೆಗಳ ಸಮಯಾವಕಾಶ ತೆಗೆದುಕೊಂಡರೆ ಫಾಸ್ಟ್ ಚಾರ್ಜಿಂಗ್ ಸೌಲಭ್ಯದ ಮೂಲಕ ಕೇವಲ 1 ಗಂಟೆಯಲ್ಲಿ ಶೇ. 80 ರಷ್ಟು ಚಾರ್ಜ್ ಮಾಡಬಹುದಾಗಿದೆ.

ನೀರು ಮತ್ತು ಧೂಳಿನಿಂದ ರಕ್ಷಣೆ ಹೊಂದಿರುವ ಹೊಸ ಪವರ್‌ಟ್ರೈನ್ ಮೇಲೆ Tata ಕಂಪನಿಯು 8 ವರ್ಷ ಅಥವಾ 1.60 ಲಕ್ಷ ಕಿ.ಮೀ ಮೇಲೆ ಸ್ಟ್ಯಾಂಡರ್ಡ್ ವಾರಂಟಿ ನೀಡುತ್ತಿದ್ದು, ನವೀಕೃತ ಮಾದರಿಯಲ್ಲಿ ಹೊಸ ಪವರ್‌ಟ್ರೈನ್ ಜೊತೆ ವಿನ್ಯಾಸ ಮತ್ತು ತಾಂತ್ರಿಕ ಸೌಲಭ್ಯಗಳು ಸಹ ಬದಲಾವಣೆಗೊಂಡಿವೆ.

ಹೊಸ ಕಾರಿನಲ್ಲಿ Tata ಕಂಪನಿಯು ಹೊಸ ವಿನ್ಯಾಸದ ಹೆಡ್‌ಲ್ಯಾಂಪ್‌ಗಳು, ಹೊಸ ಫ್ರಂಟ್ ಗ್ರಿಲ್ ಜೊತೆ ಟ್ರೈ ಅರೊ ಡಿಸೈನ್, ಮರುವಿನ್ಯಾಸಗೊಳಿಸಲಾದ ಟೈಲ್‌ಲ್ಯಾಂಪ್, ಕಲರ್ ಆಕ್ಸೆಂಟ್, 15 ಇಂಚಿನ ಹೈಪರ್ ಸ್ಟೈಲ್ ಅಲಾಯ್ ವೀಲ್ಹ್ ನೀಡಲಾಗಿದೆ.

Tigor EV ಮಾದರಿಗಾಗಿ ಮೊದಲ ಬಾರಿಗೆ 30ಕ್ಕೂ ಹೆಚ್ಚು ತಾಂತ್ರಿಕ ಅಂಶಗಳನ್ನು ನಿಯಂತ್ರಿಸಬಹುದಾದ ಐರಾ ಕಾರ್ ಕನೆಕ್ಟ್ ಟೆಕ್ನಾಲಜಿ ಬಳಕೆ ಮಾಡಲಾಗಿದ್ದು, ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್, ಸೆಮಿ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಕ್ಲೈಮೆಟ್ ಕಂಟ್ರೋಲ್, ಮೊಬೈಲ್ ಚಾರ್ಜಿಂಗ್ ಪೋರ್ಟ್, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್ ಮತ್ತು 316-ಲೀಟರ್ ಸಾಮರ್ಥ್ಯದ ಬೂಟ್ ಸ್ಪೆಸ್ ನೀಡಲಾಗಿದೆ.

ಜೊತೆಗೆ ಹೊಸ ಕಾರಿನಲ್ಲಿ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಪ್ರೀಮಿಯಂ ಫೀಚರ್ಸ್‌ನೊಂದಿಗೆ ರಿಮೋಟ್ ಲಾಕಿಂಗ್, ಡ್ಯುಯಲ್ ಏರ್‌ಬ್ಯಾಗ್, ರಿಯರ್ ಪಾರ್ಕಿಂಗ್ ಸೆನ್ಸಾರ್, ಎಬಿಎಸ್ ಜೊತೆ ಇಬಿಡಿ, ಸ್ಟ್ಯಾಬಿಲಿಟಿ ಕಂಟ್ರೋಲ್, ಐಸೋಫಿಕ್ಸ್ ಚೈಲ್ಡ್ ಸೀಟ್ ಮೌಂಟ್ ಮತ್ತು ಸೀಟ್ ಬೆಲ್ಟ್ ರಿಮೆಂಡರ್ ಸೌಲಭ್ಯ ಹೊಂದಿದೆ.

ಈ ಹಿಂದೆ ಪ್ರತಿ ಚಾರ್ಜ್‌ಗೆ 142 ಕಿ.ಮೀ ಮತ್ತು ಸುಧಾರಿತ ಮಾದರಿಯೊಂದಿಗೆ 213 ಕಿ.ಮೀ ಮೈಲೇಜ್ ಹೊಂದಿದ್ದ Tigor EV ಮಾದರಿಯು ಇದೀಗ ಪ್ರತಿ ಚಾರ್ಜ್‌ಗೆ 306 ಕಿ.ಮೀ ಮೈಲೇಜ್ ಹೊಂದಿರುವುದು ಹೊಸ ಕಾರಿನ ಬೇಡಿಕೆ ಹೆಚ್ಚಿಸಲಿದ್ದು, ಹೊಸ ಕಾರು ಖರೀದಿಗೆ ಪೂರಕವಾಗಿ Tata ಕಂಪನಿಯು ದೇಶಾದ್ಯಂತ ವಿವಿಧ ನಗರಗಳಲ್ಲಿ ಮತ್ತು ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯುತ್ತಿದೆ.

2020ರ ಜನವರಿ ವೇಳೆಗೆ ದೇಶಾದ್ಯಂತ ಕೇವಲ 60 ಫಾಸ್ಟ್ ಚಾರ್ಜಿಂಗ್ ನಿಲ್ದಾಣ ಹೊಂದಿದ್ದ Tata Motors ಕಂಪನಿಯು Tata Power ಜೊತೆಗೂಡಿ ಈ ತನಕ 640 ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳಿಗೆ ಚಾಲನೆ ನೀಡಿದ್ದು, ಇವಿ ವಾಹನಗಳ ಮೂಲಕವೇ ಅಂತಾರಾಜ್ಯ ವಾಹನ ಸಂಚಾರಕ್ಕೆ ಅನುಕೂಲಕರವಾಗುವಂತೆ ಚಾರ್ಜಿಂಗ್ ನಿಲ್ದಾಣಗಳನ್ನು ಹೆಚ್ಚಿಸಲಾಗುತ್ತಿದೆ.


Click it and Unblock the Notifications