5 ವರ್ಷಗಳಲ್ಲಿ 10 ಎಲೆಕ್ಟ್ರಿಕ್ ಕಾರುಗಳು: ಟಾಟಾ ದೊಡ್ಡ ಪ್ಲ್ಯಾನ್

ಭಾರತದ ಪ್ರಮುಖ ವಾಹನ ತಯಾರಿಕ ಕಂಪನಿ ಟಾಟಾ ಮೋಟಾರ್ಸ್, ಹೊಸ ಟಿಯಾಗೊ ಇವಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ತನ್ನ ಮಾಸಿಕ ಎಲೆಕ್ಟ್ರಿಕ್ ವಾಹನಗಳ ಉತ್ಪಾದನಾ ಪ್ರಮಾಣವನ್ನು ಸುಮಾರು 8,000-10,000 ಯುನಿಟ್‌ಗಳಿಗೆ ದ್ವಿಗುಣಗೊಳಿಸುವ ಗುರಿಯನ್ನು ಹೊಂದಿದೆ ಎಂದು ಈಗಾಗಲೇ ಹೇಳಿದ್ದು, ಇದೀಗ ದೊಡ್ಡ ಯೋಜನೆಯೊಂದನ್ನು ಪ್ಲ್ಯಾನ್ ಮಾಡಿದೆ.

ಟಾಟಾ ಮೋಟಾರ್ಸ್ 2023 ರಲ್ಲಿ 50,000 ಯುನಿಟ್ ಇವಿ ಮಾರಾಟದ ಗುರಿ ದಾಟಲು ಯೋಜಿಸಿದೆ. ಅಂದರೆ, ಮುಂಬರುವ ದಿನಗಳಲ್ಲಿ ಇವಿ ವ್ಯವಹಾರದಿಂದ ಶತಕೋಟಿ ಡಾಲರ್ ಆದಾಯವನ್ನು ಗಳಿಸಲು ಸಿದ್ಧವಾಗಿದೆ. ನೆಕ್ಸಾನ್ ಮತ್ತು ಟಿಗೊರ್ ಇವಿಗಳೊಂದಿಗೆ ಟಾಟಾ ಮೋಟಾರ್ಸ್ ಈಗಾಗಲೇ ವಾರ್ಷಿಕವಾಗಿ 55,000 ರಿಂದ 60,000 ಯುನಿಟ್‌ ಮಾರಾಟ ಪ್ರಮಾಣವನ್ನು ತಲುಪಿದೆ. ಈಗ ಟಿಯಾಗೊ ಇವಿ ಸೇರ್ಪಡೆಯೊಂದಿಗೆ, 2024ರ ವೇಳೆಗೆ 1 ಲಕ್ಷ ಯುನಿಟ್‌ ಮಾರಾಟ ಪ್ರಮಾಣ ಮುಟ್ಟವ ನೀರಿಕ್ಷೆಯಲ್ಲಿ ಕಂಪನಿ ಇದೆ.

ಇದೀಗ, ಟಾಟಾ ಮೋಟಾರ್ಸ್ ಕಂಪನಿಯು ಪ್ರತಿ ವರ್ಷ 1 ರಿಂದ 2 ಇವಿಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಯೋಜಿಸಿದೆ ಎಂದು ಸದ್ಯ ವರದಿಯಾಗಿದೆ. ಈ ಬಗ್ಗೆ ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಮತ್ತು ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಶೈಲೇಶ್ ಚಂದ್ರ ಮಾತನಾಡಿ, ಕಂಪನಿಯು ಮುಂದಿನ 5 ವರ್ಷಗಳಲ್ಲಿ 10 ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆ ಮಾಡುವ ಹಾದಿಯಲ್ಲಿದೆ ಎಂದು ಹೇಳಿದ್ದಾರೆ.

ಟಾಟಾ ಮೋಟಾರ್ಸ್ ಮುಂದಿನ 12-18 ತಿಂಗಳುಗಳಲ್ಲಿ 1 ಲಕ್ಷ ಇವಿಗಳನ್ನು ನಿರ್ಮಿಸುವ ಗುರಿ ಹೊಂದಿದೆ. ಇದು ಭಾರತೀಯ ಇವಿ ಮಾರುಕಟ್ಟೆಯಲ್ಲಿ ದೊಡ್ಡಮಟ್ಟದ ಕ್ರಾಂತಿಗೆ ಕಾರಣವಾಗಬಹುದು. ಈ ರೀತಿಯಾಗಿ ತನ್ನ ಮಾರಾಟದ ವೇಗವನ್ನು ಟಾಟಾ ಕಂಪನಿ ಕಾಪಾಡಿಕೊಂಡರೆ, ಅದರ ಇವಿ ಉದ್ಯಮವು ಸುಮಾರು 12,000 ಕೋಟಿಗಳಿಂದ 15,000 ಕೋಟಿ ರೂಪಾಯಿಗಳಷ್ಟು ಆದಾಯವನ್ನು ಗಳಿಸಬಹುದು. ಅದು ಮೂರು ವರ್ಷಗಳ ಹಿಂದೆ ಅದರ ಸಾಂಪ್ರದಾಯಿಕ ಕಾರು ವ್ಯಾಪಾರದಂತೆಯೇ ಇರುತ್ತದೆ ಎಂದು ಹೇಳಲಾಗಿದೆ.

ಟಿಯಾಗೊ ಇವಿ ಬೆಲೆಯನ್ನು ಘೋಷಿಸಿದ 10 ದಿನಗಳಲ್ಲಿ, ಟಾಟಾ ಮೋಟಾರ್ಸ್ ತನ್ನ ಹೊಸ ಎಂಟ್ರಿ ಲೆವೆಲ್ ಇವಿಗಾಗಿ 20,000ಕ್ಕೂ ಹೆಚ್ಚು ಬುಕಿಂಗ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ. ಈಗಾಗಲೇ, 50,000ಕ್ಕೂ ಹೆಚ್ಚು ಜನರು ಟಿಯಾಗೊ ಇವಿ ಖರೀದಿಗೆ ಆಸಕ್ತಿ ತೋರಿದ್ದಾರೆ. ಅವರಲ್ಲಿ ಶೇಕಡ 23% ಜನರು ಮೊದಲ ಬಾರಿಗೆ ಕಾರು ಖರೀದಿದಾರರಾಗಿದ್ದಾರೆ. ಆದರೆ, ಇದರ ನಿರ್ದಿಷ್ಟ ಸಂಖ್ಯೆಗಳನ್ನು ಹಂಚಿಕೊಳ್ಳಲು ನಿರಾಕರಿಸಿದ ಟಾಟಾ ಮೋಟಾರ್ಸ್, ಹೊಸ ಟಿಯಾಗೊ ಇವಿಯೊಂದಿಗೆ ದೇಶದ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಗ್ರಾಹಕರನ್ನು ಪಡೆಯುವ ಮೂಲಕ ಗಟ್ಟಿಯಾಗಿ ನೆಲೆಯೂರಲಿದೆ.

ಈ ವರ್ಷದ ಆರಂಭದಲ್ಲಿ ಸ್ವಾಧೀನಪಡಿಸಿಕೊಂಡ ಸನಂದ್‌ನಲ್ಲಿರುವ ಫೋರ್ಡ್ ಫ್ಯಾಕ್ಟರಿಯಲ್ಲಿ ICE ಮತ್ತು EV ಕಾರುಗಳ ತಯಾರಿಕೆಗೆ ಸರಿಹೊಂದಿಸಲು ಕಾರ್ಖಾನೆಯನ್ನು ಸಿದ್ಧಗೊಳಿಸಲು ಟಾಟಾ ಮೋಟಾರ್ಸ್ ಯೋಜಿಸುತ್ತಿದೆ. 18 ತಿಂಗಳುಗಳಲ್ಲಿ ಅದರ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವುದು ಕಂಪನಿಯ ಉದ್ದೇಶವಾಗಿದೆ. ಭಾರತೀಯ ಎಲೆಕ್ಟ್ರಿಕ್ ವಾಹನಗಳು ದಶಕದ ಅಂತ್ಯದ ವೇಳೆಗೆ 2 ಮಿಲಿಯನ್‌ವರೆಗೆ ಬೆಳೆಯಲಿದೆ. ಟಾಟಾ ಮೋಟಾರ್ಸ್ ಹೊಸ ಇವಿ ಮಾರುಕಟ್ಟೆಯಲ್ಲಿ ಹಿಡಿತ ಸಾಧಿಸುವ ಮೂಲಕ ತಾನೇ ನಾಯಕತ್ವ ವಹಿಸಿಕೊಳ್ಳಲು ಬಯಸಿದೆ.

ಕಂಪನಿಯು ಈಗಾಗಲೇ ಟಾಟಾ ಪವರ್ ಸಹಭಾಗಿತ್ವದಲ್ಲಿ 4,000 ಚಾರ್ಜಿಂಗ್ ಸ್ಟೇಷನ್‌ಗಳನ್ನು ತೆರೆಯಲು ಸಿದ್ಧವಾಗಿದೆ. ಮುಂದಿನ 18-24 ತಿಂಗಳಲ್ಲಿ ಅದು 10,000 ಸ್ಟೇಷನ್‌ಗಳನ್ನು ದಾಟುತ್ತದೆಯಂತೆ. ಕಂಪನಿಯು ಸಂಗ್ರಹಿಸಿದ US $1 ಶತಕೋಟಿಯಲ್ಲಿ US $500 ಮಿಲಿಯನ್ ಅನ್ನು ಈಗಾಗಲೇ ಈ ವ್ಯವಹಾರದಲ್ಲಿ ಹೂಡಿಕೆ ಮಾಡಲಾಗಿದೆ. ಕಂಪನಿಯು ಕೆಲವು ಉನ್ನತ ಗುರಿಗಳನ್ನು ಸಾಧಿಸಿದ ನಂತರ ಉಳಿದ US$500 ಮಿಲಿಯನ್ ಅನ್ನು ಮುಂದಿನ 12-18 ತಿಂಗಳುಗಳಲ್ಲಿ ಹೂಡಿಕೆ ಮಾಡಲಿದೆ ಎಂದು ಹೇಳಲಾಗಿದೆ.

ಇಷ್ಟೇಅಲ್ಲದೆ, ಇವಿ ವಾಹನಗಳಿಗೆ ಬೇಕಿರುವ ಬ್ಯಾಟರಿ ಬೆಲೆ ಕಡೆಗೂ ಟಾಟಾ ಮೋಟಾರ್ಸ್ ಗಮನ ಹರಿಸಿದೆ. ಲಾಂಚ್ ಆಫರ್ ಮುಗಿದ ನಂತರ, ಕಂಪನಿಯು ಟಿಯಾಗೊ ಇವಿ ಬೆಲೆಯನ್ನು ಹೆಚ್ಚಿಸಲಿದೆ. ಬೆಲೆ ಏರಿಕೆಯು ಎಷ್ಟಿರಲಿದೆ ಎಂಬುದರ ಬಗ್ಗೆ ಈವರೆಗೆ ಮಾಹಿತಿ ಇಲ್ಲ. ಅದು ರೂ. 30,000 ರಿಂದ 35,000 ಇರಬಹುದು. ಕಳೆದ ಆರು ತಿಂಗಳಲ್ಲಿ ಬ್ಯಾಟರಿ ಬೆಲೆಗಳು ಶೇಕಡ 30-35% ಹೆಚ್ಚಾಗಿದೆ. ಆದರೆ, ಈಗ ಸ್ಥಿರವಾಗುತ್ತಿದೆ ಎಂದು ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್‌ನ ಎಂಡಿ ಹೇಳಿದ್ದು, ಟಿಯಾಗೊ ಬೆಲೆಗಳು ಹೆಚ್ಚಾಗಲಿವೆ ಎಂದು ದೃಢಪಡಿಸಿದ್ದಾರೆ. ಆದರೆ ನಿಖರವಾದ ಮೊತ್ತವನ್ನು ಶೀಘ್ರದಲ್ಲೇ ಪ್ರಕಟಿಸಲಾಗುತ್ತದೆ.

Most Read Articles

Kannada
English summary
10 electric cars in 5 years tatas big plan
Story first published: Thursday, December 22, 2022, 11:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X