ಹೊಸ ಟಾಟಾ ಟಿಯಾಗೊ ಸಿಎನ್‌ಜಿ ಖರೀದಿಸುತ್ತಿದ್ದೀರಾ...ಹಾಗಾದ್ರೆ ಖಂಡಿತ ಇವನ್ನು ತಿಳಿದುಕೊಳ್ಳಿ

ಸ್ವದೇಶಿ ಕಾರು ತಯಾರಕ ಕಂಪನಿ ಟಾಟಾ ಮೋಟಾರ್ಸ್ ತನ್ನ ಗ್ರಾಹಕರ ಬೇಡಿಕೆಯಂತೆ ಹೊಸ Tiago NRG iCNG ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ.

ಹೊಸ ಟಿಯಾಗೊ ಎನ್‌ಆರ್‌ಜಿ ಸಿಎನ್‌ಜಿ ಕಾರನ್ನು ಖರೀದಿಸಲು ಬಯಸುವವರು ಬೆಲೆ ಮತ್ತು ಮೈಲೇಜ್ ಜೊತೆಗೆ ವಿನ್ಯಾಸ ಮತ್ತು ವೈಶಿಷ್ಟ್ಯಗಳನ್ನು ತಿಳಿದಿರಬೇಕು, ಈ ನಿಟ್ಟಿನಲ್ಲಿ ಸಂಭಾವ್ಯ ಗ್ರಾಹಕರಿಗಾಗಿ ಟಾಪ್ 5 ವಿಷಯಗಳನ್ನು ಇಲ್ಲಿ ತಿಳಿಸಲಾಗಿದೆ.

ರೂಪಾಂತರಗಳು ಮತ್ತು ಬೆಲೆಗಳು:
ಟಾಟಾ ಟಿಯಾಗೊ NRG ICNG ಒಟ್ಟು ಎರಡು ರೂಪಾಂತರಗಳಲ್ಲಿ ಲಭ್ಯವಿರುತ್ತದೆ. ಅವುಗಳೆಂದರೆ XT ಮತ್ತು XZ. ಈ NRG ICNG XT ರೂಪಾಂತರವು ರೂ. 7.40 ಲಕ್ಷ (ಎಕ್ಸ್ ಶೋರೂಂ) ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಎನ್‌ಆರ್‌ಜಿ ಸಿಎನ್‌ಜಿ XZ ರೂಪಾಂತರದ ಬೆಲೆಯು ರೂ. 7.80 ಲಕ್ಷ (ಎಕ್ಸ್ ಶೋ ರೂಂ)ಬೆಲೆಯನ್ನು ಪಡೆದುಕೊಂಡಿದೆ. ಈ ಬೆಲೆಗಳು ಅದರ ಪೆಟ್ರೋಲ್ ಆವೃತ್ತಿಗಿಂತ ರೂ. 90,000 ದಷ್ಟು ಹೆಚ್ಚಾಗಿದೆ.

ಎಂಜಿನ್ ಮತ್ತು ಕಾರ್ಯಕ್ಷಮತೆ:
ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಹೊಸ ಟಾಟಾ ಟಿಯಾಗೊ NRG ICNG 1.2-ಲೀಟರ್ ಮೂರು-ಸಿಲಿಂಡರ್ ರೆವೊಟ್ರಾನ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಇದು 6,000 rpm ನಲ್ಲಿ 72 bhp ಪವರ್ ಮತ್ತು 3,500 rpm ನಲ್ಲಿ 95 Nm ಟಾರ್ಕ್ ಅನ್ನು ನೀಡುತ್ತದೆ. ಇದನ್ನು 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಗೆ ಜೋಡಿಸಲಾಗಿದೆ. ಮೈಲೇಜ್ ವಿಚಾರಕ್ಕೆ ಬಂದರೆ ಇದು 26.4 km/kg ಮೈಲೇಜ್ ನೀಡುತ್ತದೆ.

ಬಣ್ಣದ ಆಯ್ಕೆಗಳು:
ಹೊಸ ಟಾಟಾ ಟಿಯಾಗೊ ಎನ್‌ಆರ್‌ಜಿ ಐಸಿಎನ್‌ಜಿ ಉತ್ತಮ ಕಾರ್ಯಕ್ಷಮತೆಯನ್ನು ನೀಡುವುದಲ್ಲದೆ ಆಕರ್ಷಕ ಬಣ್ಣಗಳ ಆಯ್ಕೆಗಳನ್ನು ಸಹ ನೀಡುತ್ತದೆ. ಆದ್ದರಿಂದ ಇದು ಒಟ್ಟು ನಾಲ್ಕು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಅವುಗಳೆಂದರೆ ಕ್ಲೌಡಿ ಗ್ರೇ, ಪೋಲಾರ್ ವೈಟ್, ಫೈರ್ ರೆಡ್ ಮತ್ತು ಫಾರೆಸ್ಟ್ ಗ್ರೀನ್ ಬಣ್ಣಗಳಲ್ಲಿ ಲಭ್ಯವಿದೆ. ಇವೆಲ್ಲವೂ ಉತ್ತಮ ಬಣ್ಣಗಳ ಪಟ್ಟಿಯಾಗಿದ್ದು ಖರೀದಿದಾರರು ತಮ್ಮಿಷ್ಟದ ಬಣ್ಣವನ್ನು ಆಯ್ಕೆ ಮಾಡಬಹುದು.

ವಿನ್ಯಾಸ:
ಟಾಟಾ ಟಿಯಾಗೊ ಎನ್‌ಆರ್‌ಜಿ ಐಸಿಎನ್‌ಜಿ ಅದರ ಹಿಂದಿನ ಮಾದರಿಯನ್ನು ಹೆಚ್ಚಾಗಿ ನೆನಪಿಸುತ್ತದೆ. ಆದರೂ ಬದಲಾವಣೆಯ ಭಾಗವಾಗಿ ಇದು ಸುತ್ತಲೂ ಕಪ್ಪು ಬಾಡಿ ಕ್ಲಾಡಿಂಗ್, ಮುಂಭಾಗ ಮತ್ತು ಹಿಂಭಾಗದಲ್ಲಿ ಹೊಸ ಫಾಕ್ಸ್ ಸ್ಕಿಡ್ ಪ್ಲೇಟ್‌ಗಳು, ಕಪ್ಪು ರೂಫ್, ರೂಫ್ ರೈಲ್ಸ್, ಫಾಗ್ ಲೈಟ್‌ಗಳು, ಟೈಲ್‌ಗೇಟ್‌ನಲ್ಲಿ ಪ್ಲಾಸ್ಟಿಕ್ ಕ್ಲಾಡಿಂಗ್ ಮತ್ತು ಡ್ಯುಯಲ್ ಟೋನ್ ಅಲಾಯ್ ವೀಲ್‌ಗಳನ್ನು ಪಡೆದಿದೆ.

ವೈಶಿಷ್ಟ್ಯಗಳು:
ಟಾಟಾ ಟಿಯಾಗೊ NRG ICNG ಇತ್ತೀಚಿನ ವೈಶಿಷ್ಟ್ಯಗಳಾದ 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಫ್ಲಾಟ್ ಬಾಟಮ್ ಸ್ಟೀರಿಂಗ್ ವೀಲ್ ಜೊತೆಗೆ ಇನ್ಫೋಟೈನ್‌ಮೆಂಟ್ ಸೆಟಪ್‌ಗಾಗಿ ಕಂಟ್ರೋಲ್‌ಗಳು, 8-ಸ್ಪೀಕರ್ ಸರೌಂಡ್ ಸೌಂಡ್ ಆಡಿಯೋ ಸಿಸ್ಟಮ್ ಮತ್ತು ಎತ್ತರ ಹೊಂದಾಣಿಕೆಯ ಡ್ರೈವರ್ ಸೀಟ್ ಅನ್ನು ಪಡೆಯುತ್ತದೆ. ಇವೆಲ್ಲವೂ ವಾಹನ ಬಳಕೆದಾರರಿಗೆ ತುಂಬಾ ಅನುಕೂಲವಾಗಿವೆ.

ಸುರಕ್ಷತಾ ವೈಶಿಷ್ಟ್ಯಗಳು ಮತ್ತು ಇತರ ವಿವರಗಳು:
ಟಾಟಾ ಕಂಪನಿಯ ಇತರ ಎಲ್ಲಾ ಕಾರುಗಳಂತೆ ಇದು ಕೂಡ ಅತ್ಯುತ್ತಮ ಸುರಕ್ಷತಾ ವೈಶಿಷ್ಟ್ಯಗಳನ್ನು ಪಡೆಯುತ್ತದೆ. ಆದ್ದರಿಂದ ಇದು ಡ್ಯುಯಲ್ ಏರ್‌ಬ್ಯಾಗ್‌ಗಳು, ರಿವರ್ಸ್ ಪಾರ್ಕಿಂಗ್ ಸೆನ್ಸಾರ್‌ಗಳು, ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ, ಕಾರ್ನರಿಂಗ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಸ್ಪೀಡ್ ಸೆನ್ಸಿಟಿವ್ ಆಟೋ ಡೋರ್ ಲಾಕ್‌ನಂತಹ ವೈಶಿಷ್ಟ್ಯಗಳನ್ನು ಪಡೆಯುತ್ತದೆ. ಆದರೆ ಇದರಲ್ಲಿರುವ ಸಿಎನ್‌ಜಿ ಟ್ಯಾಂಕ್‌ನಿಂದಾಗಿ ಬೂಟ್ ಸ್ಪೇಸ್ ಸ್ವಲ್ಪ ಕಡಿಮೆಯಾಗಿದೆ.

ಇದನ್ನು ಹೊರತುಪಡಿಸಿ ಟಾಟಾ ಟಿಯಾಗೊ ಸಿಎನ್‌ಜಿ ಉಳಿದೆಲ್ಲಾ ವಿಷಯಗಳಲ್ಲಿ ಬಹುತೇಕ ಮೂಲ ಮಾದರಿ ಐಸಿಇ ಕಾರಿನಂತೆ ಎಲ್ಲವನ್ನು ಪಡೆದುಕೊಂಡಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಸಿಎನ್‌ಜಿ ಕಾರುಗಳಿಗೆ ನಿಧಾನವಾಗಿ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಾರುತಿ ಕೂಡ ಒಂದೊಂದಾಗಿ ತನ್ನ ಕಾರುಗಳನ್ನು ಸಿಎನ್‌ಜಿ ಆವೃತ್ತಿಗಳಿಗೆ ಬದಲಿಸುತ್ತಿದೆ. ಇತ್ತೀಚೆಗೆ ಆಲ್ಟೋ k10 ಸಿಎನ್‌ಜಿ ಅನ್ನು ಬಿಡುಗಡೆ ಮಾಡಿದ ಬೆನ್ನಲ್ಲೇ ಟಾಟಾ ಟಿಯಾಗೋ ಸಿಎನ್‌ಜಿ ಆವೃತ್ತಿ ಬಿಡುಗಡೆಯಾಗಿದೆ.

ಈ ಮೂಲಕ ಮಾರುಕಟ್ಟೆಯಲ್ಲಿ ಪ್ರಮುಖ ಕಂಪನಿಗಳ ನಡುವಿನ ಪೈಪೋಟಿಯನ್ನು ನಾವು ನೋಡಬಹುದು. ಮುಂದಿನ ದಿನಗಳಲ್ಲಿ ಸಿಎನ್‌ಜಿ ಮಾದರಿಗಳು ಹೆಚ್ಚಾಗಲಿದ್ದು, ಪ್ರಮುಖ ಕಂಪನಿಗಳ ಪ್ರಮುಖ ಮಾದರಿಗಳು ಸಿಎನ್‌ಜಿಯಾಗಿ ಪರಿವರ್ತನೆಗೊಳ್ಳಲಿವೆ. ಲೇಖನ ಓದಿದವರು ಟಾಟಾ ಟಿಯಾಗೊ ಸಿಎನ್‌ಜಿ ಹಾಗೂ ಆಲ್ಟೋ k10 ಸಿಎನ್‌ಜಿ ನಡುವಿನ ಹೋಲಿಕೆಗಳನ್ನು ಬಯಸಿದರೆ ಕಮೆಂಟ್‌ನಲ್ಲಿ ತಿಳಿಸಿ, ಈ ಬಗ್ಗೆಯೂ ಲೇಖನ ಬರೆಯಲಾಗುವುದು.

Most Read Articles

Kannada
English summary
Are you buying tata tiago nrg cng then definitely know these
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X