2022ರ ಮೊದಲ ಬೆಲೆ ಏರಿಕೆ ಘೋಷಣೆ ಮಾಡಿದ ಬಿಎಂಡಬ್ಲ್ಯು ಇಂಡಿಯಾ
ಜರ್ಮನ್ ಕಾರು ತಯಾರಕ ಕಂಪನಿಯಾಗಿರುವ ಬಿಎಂಡಬ್ಲ್ಯು ದೇಶಿಯ ಮಾರುಕಟ್ಟೆಯಲ್ಲಿನ ತನ್ನ ವಿವಿಧ ಕಾರು ಶ್ರೇಣಿಯ ಬೆಲೆ ಹೆಚ್ಚಿಸಿದ್ದು, ಜನವರಿ 1ರಿಂದಲೇ ಹೊಸ ದರ ಅನ್ವಯಿಸುವಂತೆ ಬೆಲೆ ಏರಿಕೆ ಮಾಡಿದೆ.

ಆಟೋ ಬಿಡಿಭಾಗಗಳ ವೆಚ್ಚವು ಹೆಚ್ಚುತ್ತಿರುವ ಪರಿಣಾಮ ಹೊಸ ವಾಹನಗಳ ಬೆಲೆಯು ನಿರಂತರವಾಗಿ ಏರಿಕೆಯಾಗುತ್ತಿದ್ದು, ಐಷಾರಾಮಿ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಬಿಎಂಡಬ್ಲ್ಯು ಇಂಡಿಯಾ ಕಂಪನಿಯು ಕೂಡಾ ತನ್ನ ಪ್ರಮುಖ ಕಾರು ಮಾದರಿಗಳ ಬೆಲೆಯಲ್ಲಿ ಹೆಚ್ಚಳ ಮಾಡಿದೆ.

ಕಳೆದ ಕೆಲವು ತಿಂಗಳುಗಳಲ್ಲಿ ಹೊಸ ವಾಹನಗಳ ಬೆಲೆಯು ಸಾಕಷ್ಟು ಏರಿಕೆಯಾಗಿದ್ದು, ಬಿಎಂಡಬ್ಲ್ಯು ಕಂಪನಿಯು ಕೂಡಾ ಇದೀಗ ತನ್ನ ಪ್ರಮುಖ ಕಾರು ಮಾದರಿಯ ಬೆಲೆ ಹೆಚ್ಚಿಸಿದೆ. ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ಶೇ. 1 ರಿಂದ ಶೇ. 1.50 ರಷ್ಟು ಹೆಚ್ಚಳ ಮಾಡಲಾಗಿದ್ದು, ಹೊಸ ವರ್ಷದ ಸಂಭ್ರಮದಲ್ಲಿ ಕಾರು ಖರೀದಿಯ ಯೋಜನೆಯಲ್ಲಿರುವ ಗ್ರಾಹಕರಿಗೆ ಮತ್ತಷ್ಟು ಹೊರೆಯಾಗಲಿದೆ.

ಜನವರಿ 1ರಿಂದ ಬೆಲೆ ಅನ್ವಯವಾಗುವಂತೆ ಹೊಸ ದರ ಪಟ್ಟಿ ಪ್ರಕಟಿಸಿರುವ ಬಿಎಂಡಬ್ಲ್ಯು ಕಂಪನಿಯು ತನ್ನ ಪ್ರಮುಖ ಸೆಡಾನ್, ಎಸ್‌ಯುವಿ ಮಾದರಿಗಳ ಬೆಲೆಯಲ್ಲಿ ಹೆಚ್ಚಿನ ಮಟ್ಟದಲ್ಲಿ ಏರಿಕೆ ಮಾಡಿದೆ. ಹೊಸ ದರ ಪಟ್ಟಿಯಲ್ಲಿ ವಿವಿಧ ರೂಪಾಂತರಗಳು ರೂ.40 ಸಾವಿರ ರೂ. 2 ಲಕ್ಷ ತನಕ ಬೆಲೆ ಹೆಚ್ಚಳವಾಗಿದ್ದು, ಕೆಲವು ರೂಪಾಂತರಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

ಬಿಎಂಡಬ್ಲ್ಯು ಇಂಡಿಯಾ ಕಂಪನಿಯು ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಒಟ್ಟು 26 ಕಾರು ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಕೆಲವು ಮಾದರಿಗಳನ್ನು ಭಾರತದಲ್ಲಿ ಅಭಿವೃದ್ದಿಗೊಳಿಸುತ್ತಿದ್ದರೆ ಇನ್ನು ಕೆಲವು ಮಾದರಿಗಳನ್ನು ಅಂತರಾಷ್ಟ್ರೀಯ ಮಾರುಕಟ್ಟೆಗಳಿಂದ ಆಮದು ಮಾಡಿಕೊಳ್ಳುತ್ತದೆ.

ಸಿಬಿಯು ಆಮದು ನೀತಿಯಲ್ಲಿ ಮಾರಾಟವಾಗುತ್ತಿರುವ ಬಿಎಂಡಬ್ಲ್ಯು ಪ್ರಮುಖ ಕಾರು ಮಾದರಿಗಳು ಹೆಚ್ಚಿನ ಮಟ್ಟದ ಬೆಲೆಯಲ್ಲೂ ಉತ್ತಮ ಬೇಡಿಕೆ ಹೊಂದಿದ್ದು, ಭಾರತದಲ್ಲಿ ಸದ್ಯ ಐಷಾರಾಮಿ ಕಾರು ಮಾರಾಟದಲ್ಲಿ ಮರ್ಸಿಸಿಡ್ ಬೆಂಝ್ ನಂತರ ಬಿಎಂಡಬ್ಲ್ಯು ಕಂಪನಿಯೇ ಎರಡನೇ ಸ್ಥಾನದಲ್ಲಿದೆ.

ಬಿಎಂಡಬ್ಲ್ಯು ಇಂಡಿಯಾ ಕಂಪನಿಯು 2 ಸೀರಿಸ್‌ನಲ್ಲಿ ಗ್ರ್ಯಾನ್ ಕೂಪೆ, ಸೀರಿಸ್ 3ರಲ್ಲಿ ಗ್ರ್ಯಾನ್ ಲಿಮೊಸಿನ್ ಮತ್ತು ಎಂ340ಐ ಎಕ್ಸ್‌ಡ್ರೈವ್, ಸೀರಿಸ್ 5ರಲ್ಲಿ ಸೀರಿಸ್ 5 ಸೆಡಾನ್, ಸೀರಿಸ್ 6 ರಲ್ಲಿ 6 ಸೀರಿಸ್ ಗ್ರ್ಯಾನ್ ಟ್ಯೂರಿಸ್ಮೊ, 7 ಸೀರಿಸ್‌ನಲ್ಲಿ 7 ಸೀರಿಸ್ ಸೆಡಾನ್, ಸೀರಿಸ್ 8ರಲ್ಲಿ ಗ್ರ್ಯಾನ್ ಕೂಪೆ, ಎಕ್ಸ್ ಸರಣಿಯಲ್ಲಿ ಎಕ್ಸ್1, ಎಕ್ಸ್3, ಎಕ್ಸ್4, ಎಕ್ಸ್5, ಎಕ್ಸ್6, ಎಕ್ಸ್7, ಜೆಡ್ ಸರಣಿಯಲ್ಲಿ ಜೆಡ್4 ರೋಡ್‌ಸ್ಟರ್ ಮಾದರಿಗಳನ್ನು ಹೊಂದಿದೆ.

ಹಾಗೆಯೇ ಎಂ ಸರಣಿಯಲ್ಲಿ ಎಂ2 ಕಾಂಪಿಟೇಷನ್, ಎಂ4 ಕಾಂಪಿಟೇಷನ್ ಕೂಪೆ ಜೊತೆ ಎಂ ಎಕ್ಸ್‌ಡ್ರೈವ್, ಎಂ5 ಕಾಂಪಿಟೇಷನ್, ಎಂ760ಐ, ಜೆಡ್4 ಎಂ40ಐ, ಎಂ8 ಕೂಪೆ, ಎಕ್ಸ್5 ಎಂ ಕಾಂಪಿಟೇಷನ್, ಎಕ್ಸ್7 ಎಂ50ಡಿ, 3 ಸೀರಿಸ್ ಎಂ340ಐ ಎಕ್ಸ್‌ಡ್ರೈವ್ ಮತ್ತು ಇತ್ತೀಚೆಗೆ ಬಿಡುಗಡೆಯಾದ ಐಎಕ್ಸ್ ಎಲೆಕ್ಟ್ರಿಕ್ ಮಾದರಿಯನ್ನು ಹೊಂದಿದೆ.

ಇನ್ನು ಬಿಎಂಡಬ್ಲ್ಯು ಇಂಡಿಯಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ತನ್ನ ಹೊಸ ಕಾರು ಮಾರಾಟವನ್ನು ತೀವ್ರಗೊಳಿಸುತ್ತಿದ್ದು, ಮರ್ಸಿಡಿಸ್ ಬೆಂಝ್ ಕಂಪನಿಗೆ ಪೈಪೋಟಿಯಾಗಿ ಮತ್ತಷ್ಟು ಹೊಸ ಕಾರುಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ಸಿದ್ದತೆಯಲ್ಲಿದೆ.

ಭಾರತದಲ್ಲಿ ಸದ್ಯ ಐಷಾರಾಮಿ ಕಾರುಗಳ ಮಾರಾಟ ವಿಭಾಗದಲ್ಲಿ ಮರ್ಸಿಡಿಸ್ ಬೆಂಝ್ ಕಂಪನಿಗೆ ಮತ್ತು ಬಿಎಂಡಬ್ಲ್ಯು ಕಂಪನಿಯ ನಡುವೆ ಸಾಕಷ್ಟು ಪೈಪೋಟಿ ನಡೆಯುತ್ತಿದ್ದು, ಬಿಎಂಡಬ್ಲ್ಯು ಹೊಸ ಕಾರು ಉತ್ಪನ್ನಗಳು ಮರ್ಸಿಡಿಸ್‌ಗೆ ಪೈಪೋಟಿ ನೀಡುವ ತವಕದಲ್ಲಿವೆ.

ಭಾರತದಲ್ಲಿ ಸದ್ಯ ವಿವಿಧ ಸರಣಿಗಳಲ್ಲಿ ಒಟ್ಟು 26 ಕಾರುಗಳ ಮಾರಾಟ ಹೊಂದಿರುವ ಬಿಎಂಡಬ್ಲ್ಯು ಕಂಪನಿಯು ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಕಾರುಗಳನ್ನು ಬಿಡುಗಡೆ ಮಾಡುವ ಸಿದ್ದತೆಯಲ್ಲಿದ್ದು, ಹೊಸ ಕಾರುಗಳಲ್ಲಿ ಎಲೆಕ್ಟ್ರಿಕ್ ಕಾರು ಮಾದರಿಗಳು ಸಹ ಪ್ರಮುಖ ಆಕರ್ಷಣೆಯಾಗಿವೆ.

ಹೆಚ್ಚುತ್ತಿರುವ ಮಾಲಿನ್ಯ ತಡೆಗಾಗಿ ವಿವಿಧ ರಾಷ್ಟ್ರಗಳು 2030ರಿಂದಲೇ ಸಂಪೂರ್ಣವಾಗಿ ಡೀಸೆಲ್ ಮತ್ತು ಪೆಟ್ರೋಲ್ ಚಾಲಿತ ಕಾರುಗಳ ಮಾರಾಟವನ್ನು ಪೂರ್ಣಪ್ರಮಾಣದಲ್ಲಿ ಸ್ಥಗಿತಗೊಳಿಸುವ ನಿರ್ಣಯ ಕೈಗೊಂಡಿದ್ದು, ಇದಕ್ಕೆ ಪೂರಕವಾಗಿ ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಸಹ ಹೆಚ್ಚಿಸಲಾಗುತ್ತಿದೆ.

ಎಲೆಕ್ಟ್ರಿಕ್ ವಾಹನಗಳಿಗೆ ಪೂರಕವಾಗಿ ಯುರೋಪ್ ಒಕ್ಕೂಟದಲ್ಲಿನ ಪ್ರಮುಖ ರಾಷ್ಟ್ರಗಳ ನಿರ್ಣಯದಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಮಾರಾಟವು ಸಾಕಷ್ಟು ಇಳಿಕೆಯಾಗುತ್ತಿದ್ದು, ಹೈಬ್ರಿಡ್ ಮತ್ತು ಪೂರ್ಣ ಪ್ರಮಾಣದ ಎಲೆಕ್ಟ್ರಿಕ್ ವಾಹನಗಳ ಮಾರಾಟವದಲ್ಲಿ ಸಾಕಷ್ಟು ಬೆಳವಣಿಗೆ ಕಂಡುಬಂದಿದೆ.

ಹೀಗಾಗಿ ಜರ್ಮನ್ ಕಾರು ಉತ್ಪಾದನಾ ಕಂಪನಿಯಾಗಿರುವ ಬಿಎಂಡಬ್ಲ್ಯು ಕೂಡಾ ಈಗಾಗಲೇ ವಿವಿಧ ಮಾದರಿಗಳಲ್ಲಿ ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಗೆ ಸಜ್ಜುಗೊಂಡಿದ್ದು, 2022ರ ಕೊನೆಯ ವೇಳೆಗೆ ಶೇ.20 ರಷ್ಟು ಕಾರುಗಳಲ್ಲಿ ಎಲೆಕ್ಟ್ರಿಕ್ ಮಾದರಿಗಳ ಮಾರಾಟವನ್ನು ಹೊಂದಿರುವುದಾಗಿ ಸ್ಪಷ್ಟಪಡಿಸಿದೆ.


Click it and Unblock the Notifications








