ಭಾರತದಲ್ಲಿ ಇವಿ ಕಾರು ಬಿಡುಗಡೆ ಯೋಜನೆಗಾಗಿ ವಿನಾಯ್ತಿ ಕೋರಿದ್ದ ಟೆಸ್ಲಾ ಕಂಪನಿ ಮನವಿ ತಿರಸ್ಕಾರ
ಭಾರತದಲ್ಲಿ ಈ ವರ್ಷದ ಮೊದಲಾರ್ಧದಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ಕಾರು ಮಾದರಿಯನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದ್ದ ಅಮೆರಿಕದ ಟೆಸ್ಲಾ ಕಂಪನಿಯ ಮನವಿಯನ್ನು ಕೇಂದ್ರ ಸರ್ಕಾರವು ತಿರಸ್ಕರಿಸಿದೆ.

ಟೆಸ್ಲಾ ಕಂಪನಿಯು ಭಾರತದಲ್ಲಿ ಮೊದಲ ಕಾರು ಎಲೆಕ್ಟ್ರಿಕ್ ಕಾರು ಮಾದರಿಯಾಗಿ ಮಾಡೆಲ್ 3 ಆವೃತ್ತಿಯು ಬಿಡುಗಡೆ ಮಾಡಲು ಸಿದ್ದವಾಗುತ್ತಿದ್ದು, ಹೊಸ ಕಾರು ಬಿಡುಗಡೆಗೂ ಮುನ್ನ ವಿದೇಶಿ ಮಾರುಕಟ್ಟೆಯಿಂದ ಆಮದು ಮಾಡಿಕೊಳ್ಳಲಿರುವ ಕಾರುಗಳ ಮೇಲಿನ ತೆರಿಗೆ ವಿನಾಯ್ತಿಗಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿತ್ತು.

ಪ್ರಸ್ತುತ ಜಾರಿಯಲ್ಲಿರುವ ಆಮದು ತೆರಿಗೆ ನಿಯಮದಡಿಯಲ್ಲಿ ವಿದೇಶಿ ಮಾರುಕಟ್ಟೆಯಿಂದ ಸಂಪೂರ್ಣವಾಗಿ ಕಾರುಗಳನ್ನು ಆಮದು ಮಾಡಿಕೊಂಡು ಮಾರಾಟ ಮಾಡುವುದು ಆರ್ಥಿಕವಾಗಿ ಹಿನ್ನಡೆಯಾಗುವ ಕುರಿತಂತೆ ಕಳವಳ ವ್ಯಕ್ತಪಡಿಸಿದ್ದ ಟೆಸ್ಲಾ ಕಂಪನಿಯು ಆಮದು ತೆರಿಗೆಯಲ್ಲಿ ಎಲೆಕ್ಟ್ರಿಕ್ ಕಾರು ಮಾದರಿಗಳಿಗೆ ವಿನಾಯ್ತಿ ನೀಡುವಂತೆ ಮನವಿ ಸಲ್ಲಿಸಿತ್ತು.

ಭಾರತದಲ್ಲಿ ಸದ್ಯ ವಿದೇಶಿ ಮಾರುಕಟ್ಟೆಯಿಂದ ಆಮದುಗೊಳ್ಳುವ ಐಷಾರಾಮಿ ವಾಹನಗಳ ಬೆಲೆ ಆಧರಿಸಿ ಶೇ.60 ರಿಂದ ಶೇ.100 ರಷ್ಟು ತೆರಿಗೆ ವಿಧಿಸುತ್ತಿದ್ದು, ಇದು ವಿದೇಶಿ ಮಾರುಕಟ್ಟೆಯಿಂದ ಆಮದುಗೊಳ್ಳುವ ಕಾರು ಭಾರತದಲ್ಲಿ ದುಪ್ಪಟ್ಟು ಬೆಲೆಯಲ್ಲಿ ಮಾರಾಟಗೊಳ್ಳುತ್ತದೆ.

ವಿದೇಶಿಯಿಂದ ಆಮದುಗೊಳ್ಳುವ ವಾಹನಗಳ ಮೂಲ ಬೆಲೆ ಆಧರಿಸಿ ಶೇ.60(ರೂ.30 ಲಕ್ಷದೊಳಗಿನ ವಾಹನಗಳು) ಮತ್ತು ಶೇ. 100(ರೂ.30 ಲಕ್ಷ ಮೇಲ್ಪಟ್ಟ ವಾಹನಗಳು) ಆಮದು ಸುಂಕ ವಿಧಿಸಲಾಗುತ್ತಿದ್ದು, ಕೇಂದ್ರ ಸರ್ಕಾರವು ವಿದೇಶಿಯಿಂದಲೇ ಸಂಪೂರ್ಣವಾಗಿ ಆಮದು ವಾಹನಗಳನ್ನು ತಡೆಯಲು ಕೆಲವು ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ.

ದೇಶಿಯ ಮಾರುಕಟ್ಟೆಯಲ್ಲಿ ಸದ್ಯ ವಿದೇಶಿ ವಾಹನ ಉತ್ಪಾದನಾ ಕಂಪನಿಯು ತಮ್ಮ ಪ್ರಮುಖ ವಾಹನಗಳನ್ನು ಎರಡು ಮಾದರಿಯಲ್ಲಿ ಮಾರಾಟ ಮಾಡುತ್ತಿದ್ದು, ಸಿಕೆಡಿ(Completely Knocked Down) ಮತ್ತು ಸಿಬಿಯು(Completely Built Units) ಆಮದು ನೀತಿಗಳನ್ನು ಅನುಸರಿಸಲಾಗುತ್ತಿದೆ.

ಸಿಕೆಡಿ ಆಮದು ನೀತಿಯಡಿಯಲ್ಲಿ ಮಾರಾಟ ಮಾಡಲಾಗುವ ಐಷಾರಾಮಿ ವಾಹನಗಳು ವಿದೇಶಿ ಮಾರುಕಟ್ಟೆಯಲ್ಲಿಯೇ ಹೆಚ್ಚಿನ ಭಾಗ ಅಭಿವೃದ್ದಿಗೊಂಡು ಭಾರತಕ್ಕೆ ಆಮದುಗೊಂಡರು ಅದು ದೇಶಿಯ ಮಾರುಕಟ್ಟೆಯಲ್ಲಿನ ಕೆಲವು ಬಿಡಿಭಾಗಗಳೊಂದಿಗೆ ಇಲ್ಲಿ ಮರುಜೋಡಣೆಯಾಗಿ ಗ್ರಾಹಕರ ಕೈಸೇರುತ್ತದೆ.

ಆದರೆ ಸಿಬಿಯು ಆಮದು ನೀತಿ ಅಡಿ ಮಾರಾಟಗೊಳ್ಳುವ ಐಷಾರಾಮಿ ವಾಹನಗಳು ಸಂಪೂರ್ಣವಾಗಿ ವಿದೇಶಿ ಮಾರುಕಟ್ಟೆಯಿಂದ ಜೋಡಣೆಯಾಗಿ ಭಾರತದಲ್ಲಿ ಮಾರಾಟಗೊಳ್ಳುತ್ತವೆ. ಸಿಬಿಯು ಮಾದರಿಗಳಿಂದಾಗಿ ದೇಶದಲ್ಲಿ ಯಾವುದೇ ರೀತಿಯ ಉತ್ಪಾದನಾ ಚಟುವಟಿಕೆ ಅವಕಾಶವಿಲ್ಲದಿರುವುದರಿಂದ ಇಲ್ಲಿ ಯಾವುದೇ ರೀತಿಯ ಉದ್ಯೋಗ ಅವಕಾಶಗಳನ್ನು ಸೃಷ್ಠಿಸಲು ಸಾಧ್ಯವಿಲ್ಲ.

ಹೀಗಾಗಿ ಕೇಂದ್ರ ಸರ್ಕಾರವು ವಿದೇಶಿಗಳಿಂದ ನೇರವಾಗಿ ಭಾರತದಲ್ಲಿ ವಾಹನ ಮಾರಾಟ ಪ್ರಕ್ರಿಯೆ ಕಡಿವಾಣ ಹಾಕಲು ಮತ್ತು ಸ್ಥಳೀಯವಾಗಿ ವಾಹನಗಳ ಉತ್ಪಾದನಾ ಚಟುವಟಿಕೆಗಳನ್ನು ಪ್ರೊತ್ಸಾಹಿಸಲು ಆಮದು ನೀತಿಯಲ್ಲಿ ಅಮೂಲಾಗ್ರ ಬದಲಾವಣೆ ತಂದಿತು.

ಇದರ ಪರಿಣಾಮ ಹಲವು ಅಂತಾರಾಷ್ಟ್ರೀಯ ವಾಹನ ಉತ್ಪಾದನಾ ಕಂಪನಿಗಳು ಭಾರತದಲ್ಲಿ ವಿದೇಶಿ ಮಾರುಕಟ್ಟೆಯಿಂದ ನೇರವಾಗಿ ವಾಹನಗಳನ್ನು ಆಮದು ಮಾಡಿ ಮಾರಾಟ ಮಾಡದೆ ಭಾರತದಲ್ಲಿ ಮರುಜೋಡಣೆ ಪ್ರಕ್ರಿಯೆ ಮೂಲಕ ಆಮದು ನೀತಿಯಲ್ಲಿ ಹೆಚ್ಚಿನ ಸುಂಕದಿಂದ ವಿನಾಯ್ತಿ ಪಡೆದುಕೊಳ್ಳುತ್ತಿವೆ.

ಆದರೆ ಟೆಸ್ಲಾ ಕಂಪನಿಯು ಅಮೆರಿಕದಿಂದಲೇ ನೇರವಾಗಿ ಭಾರತಕ್ಕೆ ಕಾರುಗಳ ರಫ್ತು ಮಾಡಿ ಮಾರಾಟ ಯೋಜನೆ ಹೊಂದಿರುವುದರಿಂದ ಸಿಬಿಯು ಆಮದು ತೆರಿಗೆ ಹೊರೆಯಾಗಲಿದ್ದು, ಇವಿ ವಾಹನಗಳಿಗಾಗಿ ತೆರಿಗೆ ವಿನಾಯ್ತಿ ನೀಡುವಂತೆ ಕಳೆದ ಎರಡು ವರ್ಷಗಳಿಂದ ಸತತವಾಗಿ ಮನವಿ ಮಾಡುತ್ತಲೇ ಬಂದಿದೆ.

ಆದರೆ ಟೆಸ್ಲಾ ಮನವಿಗೆ ಸೊಪ್ಪು ಹಾಕದ ಕೇಂದ್ರ ಸರ್ಕಾರವು ಪ್ರಸ್ತುತ ಜಾರಿಯಲ್ಲಿರುವ ಸಿಕೆಡಿ ನಿಯಮದಡಿಯಲ್ಲಿ ವಿನಾಯ್ತಿ ಪಡೆದುಕೊಂಡು ಇವಿ ವಾಹನ ಮಾರಾಟ ಮಾಡುವಂತೆ ಸಲಹೆ ನೀಡಿದ್ದು, ಯಾವುದೇ ಕಾರಣಕ್ಕೂ ಸಿಬಿಯು ವಾಹನಗಳ ತೆರಿಗೆಯಲ್ಲಿ ವಿನಾಯ್ತಿ ನೀಡಲು ಸಾಧ್ಯವಿಲ್ಲ ಎಂದಿದೆ.

ಒಂದು ವೇಳೆ ಸಿಕೆಡಿ ನಿಯಮದಡಿ ಇವಿ ಕಾರುಗಳ ಮಾರಾಟ ಆರಂಭಿಸಲು ಬಯಸುವುದಾದರೆ ಟೆಸ್ಲಾ ಕಂಪನಿಯು ಭಾರತದಲ್ಲಿ ಅವಶ್ಯವಾಗಿ ಬಿಡಿಭಾಗಗಳ ಮರು ಜೋಡಣಾ ಘಟಕವನ್ನು ತೆರೆಯುವ ಅವಶ್ಯಕತೆಯಿದೆ.

ಇಲ್ಲವಾದರೆ ಸಿಬಿಯು ನೀತಿಯಡಿಯಲ್ಲಿ ಇವಿ ಕಾರುಗಳನ್ನು ಮಾರಾಟ ಮಾಡುವಾದರೆ ದುಬಾರಿ ಬೆಲೆಯಲ್ಲಿ ವಾಹನ ಮಾರಾಟ ಪ್ರಕ್ರಿಯೆಯನ್ನು ಆರಂಭಿಸಬೇಕಿದ್ದು, ದುಬಾರಿ ಬೆಲೆಯಲ್ಲಿ ವಾಹನ ಮಾರಾಟಕ್ಕೆ ಮುಂದಾದರೆ ಟೆಸ್ಲಾ ಮಾರಾಟ ಪ್ರಕ್ರಿಯೆಯು ನಷ್ಟ ಅನುಭವಿಸಬೇಕಾದ ಪರಿಸ್ಥಿತಿ ಎದುರಾಗಬಹುದಾಗಿದೆ.

ಸಿಬಿಯು ನೀತಿಯಡಿ ಟೆಸ್ಲಾ ಕಂಪನಿಯು ಭಾರತದಲ್ಲಿ ಮಾರಾಟ ಪ್ರಕ್ರಿಯೆ ಆರಂಭಿಸಿದರೂ ಕಂಪನಿಯ ಆರಂಭಿಕ ಮಾದರಿಯೇ ಸುಮಾರು ರೂ. 90 ಲಕ್ಷದಿಂದ ರೂ. 1 ಕೋಟಿ ಬೆಲೆ ಹೊಂದಬಹುದು. ಅಮೆರಿಕದಲ್ಲಿ ಭಾರತೀಯ ರೂಪಾಯಿ ಲೆಕ್ಕದಲ್ಲಿ ರೂ. 35 ಲಕ್ಷದಿಂದ ರೂ. 40 ಲಕ್ಷ ಬೆಲೆ ಹೊಂದಿರುವ ಕಾರು ಭಾರತದಲ್ಲಿ ಶೇ.100 ರಷ್ಟು ಆಮದು ತೆರಿಗೆ ಪಾವತಿಸಿ ಲಾಭಾಂಶ ಮಾಡಿಕೊಳ್ಳಬೇಕಾದರೆ ಅದು ರೂ. 1 ಕೋಟಿ ಪಡೆದುಕೊಳ್ಳಬಹುದಾಗಿದೆ. ಹೀಗಾಗಿ ಭಾರತದಲ್ಲಿ ಟೆಸ್ಲಾ ಕಾರು ಮಾರಾಟ ಯೋಜನೆಯು ಮತ್ತಷ್ಟು ವಿಳಂಬವಾಗುವ ಸಾಧ್ಯತೆಗಳಿವೆ.


Click it and Unblock the Notifications








