2023ರಲ್ಲಿ ಭಾರತೀಯ ಮಾರುಕಟ್ಟೆಗೆ ಬರಲಿರುವ ಪ್ರಮುಖ ಎಲೆಕ್ಟ್ರಿಕ್ ಕಾರುಗಳಿವು..
ಹೊಸ ವರ್ಷಕ್ಕೆ ಕೆಲವೇ ದಿನಗಳಿದ್ದು, ಹಲವು ಕಾರುಗಳು ಮಾರುಕಟ್ಟೆಗೆ ಬರಲಿವೆ. ವಿಶೇಷವಾಗಿ ಎಲೆಕ್ಟ್ರಿಕ್ ಕಾರುಗಳು ತನ್ನದೇ ಹೈಪ್ ಸೃಷ್ಟಿಸಬಹುದು. 2023ರ ಆಟೋ ಎಕ್ಸ್‌ಪೋ ನೋಯ್ಡಾದಲ್ಲಿ ಜ.13 ರಿಂದ ಆರಂಭವಾಗಲಿದೆ. ಅಲ್ಲಿ ವಿವಿಧ ಕಾರುಗಳನ್ನು ಅನಾವರಣ ಮಾಡಬಹದು ಜೊತೆಗೆ ಬೆಲೆಯನ್ನು ಘೋಷಿಸಬಹುದು. 2023ರಲ್ಲಿ ಮಾರುಕಟ್ಟೆಗೆ ಬರಲಿರುವ EVಗಳು ಇಲ್ಲಿವೆ.
ಮಹೀಂದ್ರಾ XUV400 ಇವಿ:
ಭಾರತೀಯ ವಾಹನ ತಯಾರಕ ಮಹೀಂದ್ರಾ, XUV400 ಎಲೆಕ್ಟ್ರಿಕ್ ಎಸ್‌ಯುವಿಯನ್ನು ಸುಮಾರು 2-3 ತಿಂಗಳ ಹಿಂದೆ ಬಹಿರಂಗಪಡಿಸಿತ್ತು. XUV300ನ ಅದೇ ಪ್ಲಾಟ್ ಫಾರಂ ಅಡಿ ಈ ಎಸ್‌ಯುವಿಯನ್ನು ನಿರ್ಮಾಣ ಮಾಡಲಿದ್ದು, 4.2 ಮೀಟರ್ ಉದ್ದ ಮತ್ತು ದೊಡ್ಡ ಬೂಟ್ ಸ್ಪೇಸ್ ಅನ್ನು ಹೊಂದಿದೆ. ಕಂಪನಿಯು ವಾಹನದ ವೈಶಿಷ್ಟ್ಯಗಳು ಮತ್ತು ವಿಶೇಷತೆ ಬಗ್ಗೆ ಮಾಹಿತಿ ನೀಡಿದೆ. ಆದರೆ, ವಾಹನದ ಬೆಲೆಯನ್ನು ಎಲ್ಲಿಯೂ ಬಹಿರಂಗಪಡಿಸಿಲ್ಲ. ವರದಿ ಪ್ರಕಾರ, ಮುಂದಿನ ತಿಂಗಳು ಮಹೀಂದ್ರಾ XUV400 ಬೆಲೆ ಬಗ್ಗೆ ಕಂಪನಿಯು ತಿಳಿಸಲಿದೆ.

ಮಹೀಂದ್ರಾ XUV400 ಎಸ್‌ಯುವಿ, 39.4 kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು, ಸಂಪೂರ್ಣ ಚಾರ್ಜ್‌ನಲ್ಲಿ 456 ಕಿ.ಮೀ.ವರೆಗಿನ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದ್ದು, ಮ್ಯಾಗ್ನೆಟ್ ಸಿಂಕ್ರೊನಸ್ ಮೋಟಾರ್‌ನಿಂದ ಚಾಲಿತವಾಗಲಿದೆ. ಅದು 147.5 bhp ಪವರ್ ಮತ್ತು 310 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಸ್‌ಯುವಿಯಲ್ಲಿ ಮೂರು ಡ್ರೈವಿಂಗ್ ಮೋಡ್‌ಗಳನ್ನು ಹೊಂದಿವೆ. ಅವುಗಳೆಂದರೇ ಫನ್, ಫಾಸ್ಟ್ ಮತ್ತು ಫಿಯರ್‌ಲೆಸ್. ಟಾಟಾ ನೆಕ್ಸಾನ್ ಇವಿಗೆ ಮಹೀಂದ್ರಾದ XUV400 ಭಾರೀ ಪೈಪೋಟಿ ನಿಡಲಿದೆ.
ಟಾಟಾ ಟಿಯಾಗೊ ಇವಿ:
ದೇಶದ ಪ್ರಮುಖ ವಾಹನ ತಯಾರಿಕ ಕಂಪನಿ ಟಾಟಾ, ಎಲೆಕ್ಟ್ರಿಕ್ ಮಾರುಕಟ್ಟೆಯಲ್ಲಿಯು ಮೊದಲ ಸ್ಥಾನದಲ್ಲಿಯೇ ಇದೆ. ಇದರ ಭಾಗವಾಗಿ ಮುಂದಿನ ವರ್ಷ ಹಲವು ಎಲೆಕ್ಟ್ರಿಕ್ ಕಾರುಗಳು ಮಾರುಕಟ್ಟೆಗೆ ಬರಲಿವೆ. ಪಂಚ್ ಮತ್ತು Altroz EV ಅದರ ಪ್ರಮುಖ ಮಾದರಿಗಳಾಗಿವೆ. ಕಳೆದ ತಿಂಗಳು, ಕಂಪನಿಯು ತನ್ನ ಹ್ಯಾಚ್‌ಬ್ಯಾಕ್ ಮಾದರಿಯಾದ ಟಿಯಾಗೊದ ಎಲೆಕ್ಟ್ರಿಕ್ ಆವೃತ್ತಿಯನ್ನು ಪರಿಚಯಿಸಿತ್ತು. ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಟಿಯಾಗೊಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸಾಕಷ್ಟು ಬುಕಿಂಗ್ ಆಗುತ್ತಿದೆ.
ಟಾಟಾ ಟಿಯಾಗೊ ಇವಿ ಪ್ರಸ್ತುತ ರೂ.8.49 ಲಕ್ಷದ ಆರಂಭಿಕ (ಎಕ್ಸ್ ಶೋರೂಂ) ಬೆಲೆಯನ್ನು ಹೊಂದಿದೆ. ಮುಂದಿನ ತಿಂಗಳು ಅದರ ಬೆಲೆಯನ್ನು 35,000 ರೂ.ಗಳಷ್ಟು ಹೆಚ್ಚಿಸುವುದಾಗಿ ಕಂಪನಿ ಘೋಷಿಸಿದೆ. ಟಿಯಾಗೊ ಇವಿ ವಿತರಣೆಗಳು ಜನವರಿ 2023ರಿಂದ ಪ್ರಾರಂಭವಾಗುತ್ತವೆ. ಈ ಕಾರು, ಎರಡು ಬ್ಯಾಟರಿ ಆಯ್ಕೆಗಳಲ್ಲಿ ಲಭ್ಯವಿರುತ್ತವೆ. 19.2 kWh ಬ್ಯಾಟರಿ 250 ಕಿಮೀ ಮೈಲೇಜ್ ನೀಡಿದರೆ, ಅದರ ದೊಡ್ಡ ಬ್ಯಾಟರಿಗೆ 315 ಕಿ.ಮೀ.ವರೆಗೆ ಕ್ರಮಿಸಲಿದೆ. DC ಫಾಸ್ಟ್ ಚಾರ್ಜರ್ ಮೂಲಕ 57 ನಿಮಿಷಗಳಲ್ಲಿ ಟಿಯಾಗೊದ ಬ್ಯಾಟರಿಯು ಶೇಕಡ 10 -80ರಷ್ಟು ಚಾರ್ಜ್ ಆಗುತ್ತಿದೆ.
ಸಿಟ್ರೊಯೆನ್ C3 ಇವಿ:
ಫ್ರೆಂಚ್ ತಯಾರಕ ಸಿಟ್ರೊಯೆನ್ ಪ್ರೀಮಿಯಂ ಮಾದರಿ C5 ಏರ್‌ಕ್ರಾಸ್ ಎಸ್‌ಯುವಿಯನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತು. ಆದರೆ, ಈ ಎಸ್‌ಯುವಿ ಮಾರುಕಟ್ಟೆಯಲ್ಲಿ ಅಷ್ಟೊಂದು ಹೆಸರನ್ನು ಗಳಿಸಲು ಸಾಧ್ಯವಾಗಲಿಲ್ಲ. ಇದರ ನಂತರ, ಕಂಪನಿಯು C3 ಎಂಬ ಮಾದರಿಯನ್ನು ಸಹ ಪರಿಚಯಿಸಿತು. ಈ ಕಾರಿನ ಮಾರಾಟ ಭಾರೀ ಪ್ರಮಾಣದಲ್ಲಿ ಆಗದಿದ್ದರೂ ತಕ್ಕಮಟ್ಟಿಗೆ ಆಗುತ್ತಿದೆ ಎಂದು ಹೇಳಬಹುದು. ಇದೀಗ ಸಿಟ್ರೊಯೆನ್ ಎಲೆಕ್ಟ್ರಿಕ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ.
ಸಿ3 ಆಧಾರಿತ ವಾಹನದ ಪರೀಕ್ಷಾರ್ಥ ಸಂಚಾರ ಈಗಾಗಲೇ ರಸ್ತೆಗಳಲ್ಲಿ ನಡೆಯುತ್ತಿದೆ. 'eC3' ಎಂದು ಕರೆಯಲ್ಪಡುವ ಸಿಟ್ರೊಯೆನ್ C3ಯ ಎಲೆಕ್ಟ್ರಿಕ್ ಆವೃತ್ತಿಯು ಮುಂದಿನ ತಿಂಗಳು ದೇಶದಲ್ಲಿ ಬಿಡುಗಡೆಯಾಗಲಿದೆ. ಈ ಕಾರು ಕ್ರೂಸ್ ಕಂಟ್ರೋಲ್ ಮತ್ತು ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ನಂತಹ ಹೊಸ ವೈಶಿಷ್ಟ್ಯಗಳನ್ನು ಹೊಂದಿರಲಿದ್ದು, ಇದು ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡಿದರೆ ಸುಮಾರು 350 ಕಿ.ಮೀ ಮೈಲೇಜ್ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ.
ಹುಂಡೈ ಅಯೋನಿಕ್ 5 ಇವಿ:
2023ರ ಆರಂಭದಿಂದ ದೇಶೀಯ ಮಾರುಕಟ್ಟೆಯಲ್ಲಿ ಹುಂಡೈ ಅಯೋನಿಕ್ 5 ಮಾರಾಟವಾಗಬಹುದು. ಬೆಲೆ, ವೈಶಿಷ್ಟ್ಯಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲದಿದ್ದರೂ ಸುಮಾರು 50 ಲಕ್ಷ (ಎಕ್ಸ್ ಶೋರೂಂ) ಬೆಲೆ ಹೊಂದಿರಬಹುದು ಎಂದು ಅಂದಾಜಿಸಲಾಗಿದೆ. ಭಾರತದಲ್ಲಿ ಇದನ್ನು ದೊಡ್ಡ ಬ್ಯಾಟರಿ ಪ್ಯಾಕ್‌ನೊಂದಿಗೆ ಮಾರಾಟ ಮಾಡಲಾಗುತ್ತದೆ. ಇದು ಒಂದೇ ಚಾರ್ಜ್‌ನಲ್ಲಿ 631 ಕಿಮೀ ಮೈಲೇಜ್ ನೀಡಬಹುದು. ಈ ಇವಿಗಾಗಿ ಬುಕಿಂಗ್ ಕೂಡ ಪ್ರಾರಂಭವಾಗಿದ್ದು, ಆರಂಭಿಕ ಟೋಕನ್ ಮೊತ್ತ ರೂ.1 ಲಕ್ಷಕ್ಕೆ ವಾಹನವನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡಬಹುದು.
ಎಂಜಿ ಏರ್ ಇವಿ:
2023ರ ಆಟೋ ಎಕ್ಸ್‌ಪೋದಲ್ಲಿ ಎಂಜಿ ಏರ್ ಇವಿಯನ್ನು ಅನಾವರಣಗೊಳಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ. ಇದು ಕಡಿಮೆ ಬೆಲೆಯೊಂದಿಗೆ ದೇಶದ ಅಗ್ಗದ ಎಲೆಕ್ಟ್ರಿಕ್ ಕಾರು ಆಗಲಿದೆಯಂತೆ. ಇದು ಚಿಕ್ಕ ವಾಹನವಾಗಿದ್ದರೂ ಸಹ ಇದರ ವೈಶಿಷ್ಟ್ಯಗಳಿಗೇನೂ ಕಮ್ಮಿಯಿಲ್ಲ. 20 ಅಥವಾ 25 kWh ಬ್ಯಾಟರಿ ಪ್ಯಾಕ್‌ನೊಂದಿಗೆ ಲಭ್ಯವಾಗಲಿದ್ದು, ಇದು ಸುಮಾರು 250 ಕಿ.ಮೀ ಮೈಲೇಜ್ ನೀಡಬಹುದು. ಹಾಗಾಗಿ, ಇದರ ಬೆಲೆ 10 ಲಕ್ಷಕ್ಕಿಂತ ಕಡಿಮೆ ಇರಬಹುದೆಂದು ಹೇಳಲಾಗಿದೆ.


Click it and Unblock the Notifications








