ಚಾರ್ಜಿಂಗ್ ನಿಲ್ದಾಣಗಳ ಆರಂಭಕ್ಕಾಗಿ ಹಿಂದೂಸ್ತಾನ್ ಪೆಟ್ರೋಲಿಯಂ ಜೊತೆಗೂಡಿದ ಹೀರೋ ಮೋಟೊಕಾರ್ಪ್
ಎಲೆಕ್ಟ್ರಿಕ್ ವಾಹನಗಳಿಗೆ ಪೂರಕವಾಗಿ ವಿವಿಧ ಕಂಪನಿಗಳು ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯಲು ಹೆಚ್ಚಿನ ಮಟ್ಟದ ಹೂಡಿಕೆ ಮಾಡುತ್ತಿದ್ದು, ಹೀರೋ ಮೋಟೊಕಾರ್ಪ್ ಕಂಪನಿಯು ಸಹ ಇವಿ ಚಾರ್ಜಿಂಗ್ ಸೌಲಭ್ಯ ಯೋಜನೆಗಾಗಿ ಹಿಂದೂಸ್ತಾನ್ ಪೆಟ್ರೋಲಿಯಂ ಜೊತೆಗೂಡಿದೆ.

ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ಹಲವಾರು ಹೊಸ ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ಫೇಮ್ 2 ಸಬ್ಸಡಿ ಯೋಜನೆ ಅಡಿಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸಲು ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದಿರುವುದು ಹೊಸ ಬದಲಾವಣೆಗೆ ಕಾರಣವಾಗಿದೆ.

ಹೆಚ್ಚುತ್ತಿರುವ ಇಂಧನಗಳ ಬೆಲೆ ಮತ್ತು ಮಾಲಿನ್ಯದ ಪರಿಣಾಮ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹ ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳುವ ವಾಹನ ಮಾಲೀಕರಿಗೆ ಹೆಚ್ಚಿನ ಮಟ್ಟದ ಪ್ರೋತ್ಸಾಹ ನೀಡಲಾಗುತ್ತಿದೆ.

ಪರಿಸರ ಸ್ನೇಹಿಯಾಗಿರುವ ಎಲೆಕ್ಟ್ರಿಕ್ ವಾಹನಗಳ ಬಳಕೆಯು ನಿಧಾನವಾಗಿ ಹೆಚ್ಚಳವಾಗುತ್ತಿದ್ದರೂ ಇವಿ ವಾಹನಗಳಿಗೆ ಸೂಕ್ತವಾದ ಚಾರ್ಜಿಂಗ್ ನಿಲ್ದಾಣಗಳ ನಿರ್ಮಾಣವು ಇದೀಗ ಹೊಸ ಸವಾಲಾಗಿದೆ.

ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನಗಳ ಖರೀದಿ ಮಾಡುವ ಗ್ರಾಹಕರಿಗೆ ಮಾತ್ರವಲ್ಲ ಉತ್ಪಾದಕ ಕಂಪನಿಗಳಿಗೂ ಗರಿಷ್ಠ ಧನಸಹಾಯ ಒದಗಿಸುತ್ತಿದ್ದು, ಇವಿ ವಾಹನಗಳು ಹೆಚ್ಚಿದಂತೆ ಅವುಗಳಿಗೆ ಸೂಕ್ತವಾದ ಚಾರ್ಜಿಂಗ್ ನಿಲ್ದಾಣಗಳನ್ನು ನಿರ್ಮಾಣಕ್ಕೂ ಕ್ರಮ ಕೈಗೊಳ್ಳಲಾಗುತ್ತಿದೆ.

ಸದ್ಯ ಕೇಂದ್ರ ಸರ್ಕಾರದ ಹೊಸ ಯೋಜನೆಗೆ ಅನುಗುಣವಾಗಿ ವಿವಿಧ ನಗರಗಳಲ್ಲಿ ಚಾರ್ಜಿಂಗ್ ನಿಲ್ದಾಣಗಳ ಸಂಖ್ಯೆ ನಿಧಾನವಾಗಿ ಹೆಚ್ಚಳವಾಗುತ್ತಿದ್ದು, ಖಾಸಗಿ ಮತ್ತು ಸರ್ಕಾರಿ ಸಹಭಾಗೀತ್ವದಲ್ಲಿ ಚಾರ್ಜಿಂಗ್ ನಿಲ್ದಾಣಗಳು ಒಂದೊಂದಾಗಿ ಕಾರ್ಯನಿರ್ವಹಣೆ ಆರಂಭಿಸುತ್ತಿವೆ.

ಈ ನಿಟ್ಟಿನಲ್ಲಿ ದೇಶದ ಅಗ್ರಗಣ್ಯ ದ್ವಿಚಕ್ರ ವಾಹನ ಕಂಪನಿಯಾಗಿರುವ ಹೀರೋ ಮೋಟೊಕಾರ್ಪ್ ಕಂಪನಿಯು ಹಿಂದೂಸ್ತಾನ್ ಪೆಟ್ರೋಲಿಯಂ ಜೊತೆಗೂಡಿ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ತೆರೆಯುವ ಸಹಭಾಗಿತ್ವ ಯೋಜನೆ ಆರಂಭಿಸಿದ್ದು, ಹೊಸ ಒಪ್ಪಂದದ ಪ್ರಕಾರ ಹೀರೋ ಮೋಟೊಕಾರ್ಪ್ ಕಂಪನಿಯು ಹೆಚ್‌ಪಿ ಪೆಟ್ರೋಲ್ ಬಂಕ್‌ಗಳಲ್ಲಿ ಫಾಸ್ಟ್ ಚಾರ್ಜಿಂಗ್ ಸೌಲಭ್ಯಗಳನ್ನು ಸ್ಥಾಪಿಸಿ ನಿರ್ವಹಣೆ ಮಾಡಲಿದೆ.

ಉಪಕ್ರಮದ ಭಾಗವಾಗಿ ಉಭಯ ಕಂಪನಿಗಳು ದೇಶಾದ್ಯಂತ ಅಗತ್ಯವಾದ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಮೂಲಸೌಕರ್ಯವನ್ನು ಸ್ಥಾಪಿಸಲಿದ್ದು, ಸದ್ಯ ಇವಿ ನಿಲ್ದಾಣಗಳ ಜೊತೆಗೆ ತದನಂತರ ಇವಿ ವಾಹನ ಉದ್ಯಮ ಸಂಬಂಧಿತ ವ್ಯಾಪಾರ ಅವಕಾಶಗಳಿಗಾಗಿ ಸಹಯೋಗವನ್ನು ವಿಸ್ತರಿಸುವ ಸಾಧ್ಯತೆಯಿದೆ.

ಇದರಿಂದ ಕೇವಲ ನಗರಪ್ರದೇಶಗಳಿಗೆ ಮಾತ್ರ ಸೀಮಿತವಾಗಿರುವ ಇವಿ ವಾಹನಗಳ ಮೂಲಕ ದೂರದ ಪ್ರಯಾಣಕ್ಕೂ ಅನುಕೂಲಕರವಾಗಲಿದ್ದು, ಹೆಚ್ಚುತ್ತಿರುವ ಇಂಧನ ಬೆಲೆ ತಗ್ಗಿಸಲು ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಮಟ್ಟದ ವಿನಾಯ್ತಿಗಳನ್ನು ನೀಡುತ್ತಿದೆ.

ಪರಿಸರ ಸ್ನೇಹಿಯಾಗಿರುವ ಎಲೆಕ್ಟ್ರಿಕ್ ವಾಹನಗಳತ್ತ ಸೆಳೆಯಲು ಕೇಂದ್ರ ಸರ್ಕಾರವು ಫೇಮ್ 2 ಸಬ್ಸಡಿ ಯೋಜನೆಯೊಂದಿಗೆ ಎಲೆಕ್ಟ್ರಿಕ್ ವಾಹನಗಳ ಉತ್ಪಾದಕ ಕಂಪನಿಗಳಿಗೆ ಮತ್ತು ಖರೀದಿ ಮಾಡುವ ಗ್ರಾಹಕರಿಗೆ ಗರಿಷ್ಠ ಧನಸಹಾಯ ಒದಗಿಸುತ್ತಿದ್ದು, ಫೇಮ್ 2 ಯೋಜನೆ ಅಡಿ ಇದೀಗ ಮತ್ತೆ ಇವಿ ವಾಹನಗಳ ಖರೀದಿ ಮೇಲೆ ಪ್ರೋತ್ಸಾಹ ಧನ ಹೆಚ್ಚಿಸಿದೆ.

ಫೇಮ್ 2 ಸಬ್ಸಡಿ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರವು ಈಗಾಗಲೇ ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಜಿಎಸ್‌ಟಿ ವಿನಾಯ್ತಿ, ಗರಿಷ್ಠ ಸಬ್ಸಡಿ ಮತ್ತು ತೆರಿಗೆ ವಿನಾಯ್ತಿಗಳನ್ನು ನೀಡಲಾಗುತ್ತಿದ್ದು, ವಾಹನ ಉತ್ಪಾದನಾ ಕಂಪನಿಗಳಿಗೂ ಹಲವಾರು ಪ್ರೋತ್ಸಾಹ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಕಳೆದ ಕೆಲ ತಿಂಗಳಿನಿಂದ ಒಟ್ಟಾರೆ ವಾಹನಗಳ ನೋಂದಣಿ ಪ್ರಮಾಣದಲ್ಲಿ ಶೇ.2 ರಿಂದ ಶೇ. 3 ರಷ್ಟು ಪಾಲು ಹೊಂದಿದ್ದ ಇವಿ ವಾಹನಗಳ ನೋಂದಣಿ ಪ್ರಮಾಣ ಇದೀಗ ಗರಿಷ್ಠ ಪ್ರಮಾಣಕ್ಕೆ ಏರಿಕೆ ಕಂಡಿದ್ದು, ಹೆಚ್ಚುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ದರಗಳ ಪರಿಣಾಮ ಇವಿ ವಾಹನಗಳು ಇನ್ನು ಹೆಚ್ಚಿನ ಮಟ್ಟದಲ್ಲಿ ರಸ್ತೆಗಿಳಿಯಲಿವೆ.

ಮಾಹಿತಿಗಳ ಪ್ರಕಾರ ದೇಶಾದ್ಯಂತ ಇದುವರೆಗೆ ಸುಮಾರು 15 ಲಕ್ಷಕ್ಕೂ ಹೆಚ್ಚು ಇವಿ ವಾಹನಗಳು ನೋಂದಣಿಯಾಗಿವೆ ಎನ್ನಲಾಗಿದ್ದು, ಸಾಮಾನ್ಯ ವಾಹನಗಳ ನೋಂದಣಿ ಪ್ರಮಾಣಕ್ಕೆ ಹೋಲಿಕೆ ಮಾಡಿದರೆ ತೀರಾ ಕಡಿಮೆ ಪ್ರಮಾಣ ಎನ್ನಬಹುದು. ಆದರೂ ಇದು ಇವಿ ವಾಹನಗಳ ಮಾರಾಟ ಪ್ರಮಾಣವು ಕಳೆದ ವರ್ಷಕ್ಕಿಂತಲೂ ಉತ್ತಮವಾಗಿದೆ ಎನ್ನಬಹುದಾಗಿದ್ದು, ಇವಿ ವಾಹನಗಳ ಹೆಚ್ಚಳಕ್ಕೆ ಮುಖ್ಯವಾಗಿ ಚಾರ್ಜಿಂಗ್ ನಿಲ್ದಾಣಗಳನ್ನು ಹೆಚ್ಚಿಸುವ ಪ್ರಮುಖವಾಗಿದೆ.


Click it and Unblock the Notifications