ಭಾರತದಲ್ಲಿ ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ಕಿಯಾ ಕಾರೆನ್ಸ್ ಸಿಎನ್‌ಜಿ ವರ್ಷನ್
ಕಿಯಾ ಇಂಡಿಯಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ತನ್ನ ಪ್ರಮುಖ ಕಾರು ಉತ್ಪನ್ನಗಳ ತಂತ್ರಜ್ಞಾನದಲ್ಲಿ ಸಾಕಷ್ಟು ಬದಲಾವಣೆಗಳನ್ನು ಪರಿಚಯಿಸುತ್ತಿದ್ದು, ಕಂಪನಿಯು ಶೀಘ್ರದಲ್ಲಿಯೇ ಸೊನೆಟ್ ಮತ್ತು ಕಾರೆನ್ಸ್ ಮಾದರಿಯನ್ನು ಸಿಎನ್‌ಜಿ ಆವೃತ್ತಿಯಲ್ಲೂ ಬಿಡುಗಡೆಯ ಸುಳಿವು ನೀಡಿದೆ.

ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ದುಬಾರಿ ಇಂಧನಗಳ ಪರಿಣಾಮ ಗ್ರಾಹಕರು ಪರ್ಯಾಯ ಇಂಧನಗಳ ಪ್ರೇರಿತ ವಾಹನಗಳ ಖರೀದಿಯತ್ತ ಆಸಕ್ತಿ ವಹಿಸುತ್ತಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಮಾದರಿಗಳ ಬದಲಾಗಿ ಸಿಎನ್‌ಜಿ, ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ಕಾರು ಮಾದರಿಗಳತ್ತ ಮುಖ ಮಾಡುತ್ತಿದ್ದಾರೆ.

ದೇಶಾದ್ಯಂತ ಸದ್ಯ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಮಟ್ಟದ ಚಾರ್ಜಿಂಗ್ ಸೌಲಭ್ಯವಿಲ್ಲದಿರುವುದು ಮತ್ತು ಸಾಮಾನ್ಯ ಮಾದರಿಗಳಿಂತಲೂ ದುಪ್ಪಟ್ಟು ಬೆಲೆ ಹೊಂದಿರುವುದು ಇವಿ ವಾಹನಗಳನ್ನು ತುರ್ತಾಗಿ ಅಳವಡಿಸಿಕೊಳ್ಳಲು ಜನ ಹಿಂದೇಟು ಹಾಕುತ್ತಿದ್ದು, ಇವಿ ವಾಹನಗಳಿಗೆ ಬದಲಾಗಿ ಪೆಟ್ರೋಲ್ ಮತ್ತು ಡೀಸೆಲ್ ಮಾದರಿಗಳಿಂತಲೂ ಹೆಚ್ಚು ಮೈಲೇಜ್ ಖಾತ್ರಿಪಡಿಸುವ ಸಿಎನ್‌ಜಿ ಮಾದರಿಗಳತ್ತ ಒಲವು ತೋರುತ್ತಿದ್ದಾರೆ.

ಸದ್ಯ ಮಾರುಕಟ್ಟೆಯಲ್ಲಿ ಸಿಎನ್‌ಜಿ ಮಾದರಿಗಳ ಮಾರಾಟವು ಸಾಕಷ್ಟು ಬೇಡಿಕೆ ಪಡೆದುಕೊಳ್ಳುತ್ತಿದ್ದು, ಮಾರುತಿ ಸುಜುಕಿ ಮತ್ತು ಟಾಟಾ ಮೋಟಾರ್ಸ್ ಕಂಪನಿಗಳು ತಮ್ಮ ಪ್ರಮುಖ ಕಾರುಗಳಿಗೆ ಫ್ಯಾಕ್ಟರಿ ಫಿಟೆಡ್ ಸಿಎನ್‌ಜಿ ಕಿಟ್ ಅಳವಡಿಸುತ್ತಿವೆ.

ಸಂಕುಚಿತ ನೈಸರ್ಗಿಕ ಅನಿಲ (ಸಿಎನ್‌ಜಿ) [Compressed natural gas] ವಾಹನಗಳು ಹೆಚ್ಚು ಮೈಲೇಜ್ ಖಾತ್ರಿಪಡಿಸುವುದಲ್ಲದೆ ವಾತಾವರಣಕ್ಕೆ ಹೊರಬಿಡುವ ಮಾಲಿನ್ಯದ ಪ್ರಮಾಣವೂ ಕಡಿಮೆಯಾಗಿದ್ದು, ಮಿತವ್ಯಯವೆನಿಸಿಕೊಂಡಿದೆ. ಹಾಗಿದ್ದರೂ ಪೆಟ್ರೋಲ್ ಅಥವಾ ಡೀಸೆಲ್ ಕಾರುಗಳಿಗೆ ಹೋಲಿಸಿದಾಗ ಸಿಎನ್‌ಜಿ ಕಾರುಗಳ ಕಾರ್ಯಕ್ಷಮತೆಯಲ್ಲಿ ಸ್ವಲ್ಪ ಕಡಿಮೆಯಾಗಿರುತ್ತದೆ.

ಆದರೂ ಸಾಮಾನ್ಯ ಇಂಧನ ಚಾಲಿತ ಕಾರಿಗಿಂತಲೂ ಹೆಚ್ಚು ಮೈಲೇಜ್ ಪಡೆಯಲು ಸಿಎನ್‌ಜಿ ಕಾರುಗಳಿಂದ ಸಾಧ್ಯ. ಇವು ಸಾಮಾನ್ಯ ಡೀಸೆಲ್ ಮಾದರಿಗಿಂತಲೂ ಶೇ.30 ರಷ್ಟು ಮೈಲೇಜ್ ನೀಡಲಿದ್ದು, ಗ್ರಾಹಕರ ಬೇಡಿಕೆಯೆಂತೆ ದೇಶಾದ್ಯಂತ ಪ್ರಮುಖ ನಗರಗಳಲ್ಲಿ ಸಿಎನ್‌ಜಿ ಪೂರೈಕೆಯನ್ನು ವೇಗಗೊಳಿಸಲಾಗಿದೆ.

ಹೀಗಾಗಿ ಭವಿಷ್ಯದ ಮಾದರಿಗಳ ಮೇಲೆ ಗಮನಹರಿಸಿರುವ ಕಿಯಾ ಇಂಡಿಯಾ ಕಂಪನಿಯು ಸಹ ತನ್ನ ಪ್ರತಿಸ್ಪರ್ಧಿ ಮಾದರಿಗಳಿಗೆ ಪೂರಕವಾಗಿ ಸಿಎನ್‌ಜಿ ಮಾದರಿಯನ್ನು ಬಿಡುಗಡೆ ಮಾಡಲು ಸಿದ್ದವಾಗುತ್ತಿದ್ದು, ಸೊನೆಟ್ ಮತ್ತು ಕಾರೆನ್ಸ್ ಸಿಎನ್‌ಜಿ ಮಾದರಿಗಳ ಕಾರ್ಯಕ್ಷಮತೆ ಕುರಿತಂತೆ ಕಂಪನಿಯು ಇತ್ತೀಚೆಗೆ ರೋಡ್ ಟೆಸ್ಟಿಂಗ್ ನಡೆಸುತ್ತಿರುವುದು ಕಂಡುಬಂದಿದೆ.

ಹೊಸ ಮಾದರಿಗಳು ಟರ್ಬೊ ಪೆಟ್ರೋಲ್ ಮ್ಯಾನುವಲ್ ಮಾದರಿಯನ್ನು ಆಧರಿಸಿ ಸಿಎನ್‌ಜಿ ಆವೃತ್ತಿಯುನ್ನು ಪಡೆದುಕೊಂಡಿದ್ದು, ಸ್ಟ್ಯಾಂಡರ್ಡ್ ಮಾದರಿಗಿಂತಲೂ ರೂ. 1 ಲಕ್ಷದಿಂದ ರೂ.1.50 ಲಕ್ಷದೊಳಗೆ ಬಿಡುಗಡೆಯಾಗಲಿರುವ ಹೊಸ ಕಾರುಗಳು ಪ್ರತಿ ಕೆಜಿ ಸಿಎನ್‌ಜಿಗೆ ಕನಿಷ್ಠ 23 ಕಿ.ಮೀ ನಿಂದ 26 ಕಿ.ಮೀ ಮೈಲೇಜ್ ನೀಡಬಹುದಾಗಿದೆ.

ಸದ್ಯ ಕಾರೆನ್ಸ್ ಕಾರು ಮಾದರಿಯು ವಿವಿಧ ಎಂಜಿನ್ ಆಯ್ಕೆಯೊಂದಿಗೆ ಅತ್ಯುತ್ತಮ ಪರ್ಫಾಮೆನ್ಸ್ ಹೊಂದಿರುವ ಎಂಪಿವಿ ಕಾರು ಮಾದರಿಯಾಗಿದ್ದು, ಹೊಸ ಕಾರು ಪ್ರೀಮಿಯಂ, ಪ್ರೆಸ್ಟಿಜ್, ಪ್ರೆಸ್ಟಿಜ್ ಪ್ಲಸ್, ಲಗ್ಷುರಿ ಮತ್ತು ಲಗ್ಷುರಿ ಪ್ಲಸ್ ಎನ್ನುವ ಐದು ವೆರಿಯೆಂಟ್‌ಗಳಲ್ಲಿ ಹೊಸ ಕಾರು ಖರೀದಿಗೆ ಲಭ್ಯವಿದೆ.

ಹೊಸ ಕಾರು 6 ಸೀಟರ್ ಮತ್ತು 7 ಸೀಟರ್ ಸೌಲಭ್ಯದೊಂದಿಗೆ ಮಧ್ಯಮ ಕ್ರಮಾಂಕದ ಎಂಪಿವಿ ಮತ್ತು ಎಸ್‌ಯುವಿ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡುತ್ತಿದ್ದು, ಹೊಸ ಕಾರು ಮಾದರಿಯಲ್ಲಿ ಪೆಟ್ರೋಲ್ ಮಾದರಿಗಳಿಂತಲೂ ಡೀಸೆಲ್ ಮಾದರಿಗಳಿಗೆ ಹೆಚ್ಚು ಬೇಡಿಕೆಯಿದೆ.

ಹೊಸ ಕಾರಿನಲ್ಲಿ ವಿವಿಧ ಎಂಜಿನ್ ಆಯ್ಕೆಯೊಂದಿಗೆ 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮ್ಯಾಟಿಕ್ ಅಥವಾ 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಮಾದರಿಯನ್ನು ಆಯ್ಕೆ ಮಾಡಬಹುದಾಗಿದ್ದು, 1.5-ಲೀಟರ್ ಪೆಟ್ರೋಲ್ ಮಾದರಿಯು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 115-ಬಿಎಚ್‌ಪಿ, 144-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ 1.4-ಲೀಟರ್ ಟರ್ಬೊ ಪೆಟ್ರೋಲ್ ಮಾದರಿಯು 6-ಸ್ಪೀಡ್ ಮ್ಯಾನುವಲ್ ಮತ್ತು 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 140-ಬಿಎಚ್‌ಪಿ, 242-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

1.5-ಲೀಟರ್ ಡೀಸೆಲ್ ಮಾದರಿಯು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 115-ಬಿಎಚ್‌ಪಿ, 250-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದ್ದು, 1.5 ಲೀಟರ್ ಡೀಸೆಲ್ ಮ್ಯಾನುವಲ್ ಮಾದರಿಯು ಪ್ರತಿ ಲೀಟರ್‌ಗೆ ಗರಿಷ್ಠ 21.3 ಕಿ.ಮೀ ಮೈಲೇಜ್ ನೀಡುತ್ತದೆ.

ಜೊತೆಗೆ ಹೊಸ ಕಾರು ಪ್ರತಿಸ್ಪರ್ಧಿ ಮಾದರಿಗಳಿಂತಲೂ ಹೆಚ್ಚಿನ ಸ್ಥಳಾವಕಾಶದೊಂದಿಗೆ 4540 ಎಂಎಂ ಉದ್ದ, 1800 ಎಂಎಂ ಅಗಲ, 1700 ಎಂಎಂ ಎತ್ತರ, 2780 ಎಂಎಂ ವ್ಹೀಲ್ ಬೆಸ್ ಮತ್ತು 195 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿದ್ದು, ಇದರೊಂದಿಗೆ ಆಕರ್ಷಕವಾದ ಡಿಸೈನ್ ಮತ್ತು ಗುಣಮಟ್ಟದ ಫೀಚರ್ಸ್ ಹೊಂದಿರುವುದು ಗ್ರಾಹಕರ ಆಯ್ಕೆಗೆ ಪ್ರಮುಖ ಆಕರ್ಷಣೆಯಾಗಿದೆ.

ಇದರೊಂದಿಗೆ ಹೊಸ ಕಾರಿನಲ್ಲಿ ಕಿಯಾ ಕಂಪನಿಯು ಬೆಸ್ ವೆರಿಯೆಂಟ್‌ನಲ್ಲೂ ಲಭ್ಯವಾಗುವಂತೆ ಸ್ಟ್ಯಾಂಡರ್ಡ್ ಆಗಿ 6 ಏರ್‌ಬ್ಯಾಗ್ ಮತ್ತು ಆಲ್ ವ್ಹೀಲ್ ಡಿಸ್ಕ್ ಬ್ರೇಕ್ ಜೋಡಿಸಿದ್ದು, ಇನ್ನುಳಿದಂತೆ ವಿವಿಧ ವೆರಿಯೆಂಟ್‌ಗಳಿಗೆ ಅನ್ವಯಿಸುವಂತೆ ಎಬಿಎಸ್ ಜೊತೆ ಇಬಿಡಿ, ಇಎಸ್‌ಸಿ, ಹಿಲ್ ಸ್ಟಾರ್ಟ್ ಅಸಿಸ್ಟ್, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, ರಿಯರ್ ಪಾರ್ಕಿಂಗ್ ಸೆನ್ಸಾರ್ ಸೌಲಭ್ಯಗಳಿವೆ.


Click it and Unblock the Notifications








