ಎಂಪಿವಿ ಕಾರು ವಿಭಾಗದಲ್ಲಿ ಮಾರುತಿ ಎಕ್ಸ್ಎಲ್6 ಹಿಂದಿಕ್ಕಿದ ಕಿಯಾ ಕಾರೆನ್ಸ್ ಎಂಯುವಿ
ಮಧ್ಯಮ ಕ್ರಮಾಂಕದ ಎಂಪಿವಿ ಕಾರುಗಳ ಮಾರಾಟದಲ್ಲಿ ಪ್ರಮುಖ ಕಾರು ಕಂಪನಿಗಳ ನಡುವೆ ಉತ್ತಮ ಪೈಪೋಟಿಯಿದ್ದು, ಇತ್ತೀಚೆಗೆ ಬಿಡುಗಡೆಗೊಂಡಿದ್ದ ಕಿಯಾ ಕಾರೆನ್ಸ್ ಕಾರು ಮಾದರಿಯು ಸಹ ಬಿಡುಗಡೆಯಾದ ಮೊದಲ ತಿಂಗಳಿನಲ್ಲಿ ಭರ್ಜರಿ ಬೇಡಿಕೆ ಪಡೆದುಕೊಂಡಿದೆ.

ಎಂಪಿವಿ ವಿಭಾಗದಲ್ಲಿ ಮಾರುತಿ ಸುಜುಕಿ ಎರ್ಟಿಗಾ, ಮಾರುತಿ ಎಕ್ಸ್ಎಲ್6, ಮಹೀಂದ್ರಾ ಮರಾಜೋ ಮತ್ತು ಟೊಯೊಟಾ ಇನೋವಾ ಕ್ರಿಸ್ಟಾ ಮಾದರಿಗಳ ನಡುವೆ ಉತ್ತಮ ಪೈಪೋಟಿಯಿದ್ದು, ಇದೀಗ ಕಿಯಾ ಕಾರೆನ್ಸ್ ಮಾದರಿಯು ಸಹ ಹೊಸ ಸಂಚಲನಕ್ಕೆ ಕಾರಣವಾಗಿದೆ. ಮಾರುತಿ ಸುಜುಕಿ ಎರ್ಟಿಗಾ ಮತ್ತು ಇನೋವಾ ಕ್ರಿಸ್ಟಾ ನಡುವಿನ ಬೆಲೆ ಅಂತರವನ್ನು ಸರಿದೂಗಿಸುವಲ್ಲಿ ಕಿಯಾ ಕಾರೆನ್ಸ್ ಯಶಸ್ವಿಯಾಗಿದ್ದು, ಹೊಸ ಕಾರೆನ್ಸ್ ಕಾರು ವಿವಿಧ ಎಂಜಿನ್ ಮತ್ತು ಆಕರ್ಷಕ ಬೆಲೆ ಹೊಂದಿದೆ.

ಪ್ರೀಮಿಯಂ ಫೀಚರ್ಸ್ ಮತ್ತು ವಿವಿಧ ಎಂಜಿನ್ ಆಯ್ಕೆ ಮಾಡುವ ಗ್ರಾಹಕರಿಗೆ ಇನೋವಾ ಕ್ರಿಸ್ಟಾ ಮಾದರಿಯು ತುಸು ದುಬಾರಿ ಎನ್ನಿಸಿದರೂ ಎಂಪಿವಿ ವಿಭಾಗದಲ್ಲಿ ಸದ್ಯ ಅಗ್ರಸ್ಥಾನದಲ್ಲಿದ್ದು, ತದನಂತರ ಬಜೆಟ್ ಬೆಲೆಯ ಮಾರುತಿ ಸುಜುಕಿ ಎರ್ಟಿಗಾ ಮತ್ತು ಎಕ್ಸ್ಎಲ್6 ಮಾದರಿಗಳು ಕೂಡಾ ಉತ್ತಮ ಬೇಡಿಕೆ ಹೊಂದಿವೆ.

ಈ ಮೂರು ಕಾರುಗಳನ್ನು ಗುರಿಯಾಗಿಸಿ ವಿವಿಧ ಎಂಜಿನ್ ಜೊತೆಗೆ ಆಕರ್ಷಕ ಬೆಲೆಯಲ್ಲಿ ಕಾರೆನ್ಸ್ ಮಾದರಿಯನ್ನು ಅಭಿವೃದ್ದಿಗೊಳಿಸಿರುವ ಕಿಯಾ ಕಂಪನಿಯು ಫೆಬ್ರವರಿ ತಿಂಗಳಿನಲ್ಲಿ ಒಟ್ಟು 5,109 ಯುನಿಟ್ ಕಾರುಗಳನ್ನು ವಿತರಣೆ ಮಾಡಿದೆ.

ಇದೇ ಅವಧಿಯಲ್ಲಿ ಮಾರುತಿ ಸುಜುಕಿ ಎರ್ಟಿಗಾ ಕಾರು 11,649 ಯುನಿಟ್, ಎಕ್ಸ್ಎಲ್6 ಮಾದರಿಯು 3,304 ಯನಿಟ್ ಮತ್ತು ಇನೋವಾ ಕ್ರಿಸ್ಟಾ ಕಾರು ಮಾದರಿಯು 4,318 ಯುನಿಟ್ ಮಾರಾಟಗೊಂಡಿದ್ದು, ಕಿಯಾ ಕಾರೆನ್ಸ್ ಕಾರು ಮಾದರಿಯು ಬೆಲೆ ಮತ್ತು ಎಂಜಿನ್ ಆಯ್ಕೆಗೆ ಅನುಗುಣವಾಗಿ ಎಕ್ಸ್ಎಲ್6 ಮಾದರಿಗೆ ಉತ್ತಮ ಪೈಪೋಟಿ ನೀಡಿದೆ.

ಕಾರೆನ್ಸ್ ಮಾದರಿಯು ಇದುವರೆಗೆ 25 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ಪಡೆದುಕೊಂಡಿದ್ದು, ಕಂಪನಿಯು ಉತ್ಪಾದನಾ ಸಾಮರ್ಥ್ಯದ ಮೇಲೆ ಮೊದಲ ತಿಂಗಳಿನಲ್ಲಿ 5 ಸಾವಿರ ಯುನಿಟ್ ವಿತರಣೆ ಮಾಡಿದೆ. ಹೊಸ ಕಾರು ಮಾದರಿಗೆ ಬೇಡಿಕೆ ಹೆಚ್ಚಿರುವುದರಿಂದ ಕಂಪನಿಯು ಉತ್ಪಾದನಾ ಪ್ರಮಾಣವನ್ನು ಹೆಚ್ಚಿಸಿದ್ದು, ಈ ಮೊದಲ ದಿನದ ಎರಡು ಶಿಫ್ಟ್‌ಗಳಲ್ಲಿ ಕಾರು ಉತ್ಪಾದನೆ ಮಾಡುತ್ತಿದ್ದ ಕಂಪನಿಯು ಇದೀಗ ಮೂರು ಶಿಫ್ಟ್‌ಗಳ ಮೂಲಕ ಉತ್ಪಾದನೆ ಆರಂಭಿಸಿದೆ.

ಹೀಗಾಗಿ ಕಾರೆನ್ಸ್ ಕಾರಿನ ಕಾಯುವಿಕೆ ಅವಧಿಯಲ್ಲಿ ತಗ್ಗಲಿದ್ದು, ಬುಕ್ಕಿಂಗ್ ನಂತರ ಕೆಲವೇ ದಿನಗಳಲ್ಲಿ ಕಾರು ವಿತರಣೆ ಮಾಡುವುದಾಗಿ ಕಂಪನಿಯು ಭರವಸೆ ನೀಡಿದೆ. ಹೊಸ ಕಾರು 6 ಸೀಟರ್ ಮತ್ತು 7 ಸೀಟರ್ ಸೌಲಭ್ಯದೊಂದಿಗೆ ಪ್ರೀಮಿಯಂ, ಪ್ರೆಸ್ಟಿಜ್, ಪ್ರೆಸ್ಟಿಜ್ ಪ್ಲಸ್, ಲಗ್ಷುರಿ ಮತ್ತು ಲಗ್ಷುರಿ ಪ್ಲಸ್ ಎನ್ನುವ ಐದು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ.

ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 8.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 16.99 ಲಕ್ಷ ಬೆಲೆ ಹೊಂದಿದ್ದು, ಇದು ಈ ವಿಭಾಗದ ಕಾರುಗಳಲ್ಲೇ ಇದು ಅತಿ ಕಡಿಮೆ ಬೆಲೆಯಾಗಿರುವುದರಿಂದ ಹೆಚ್ಚಿನ ಬೇಡಿಕೆಗೆ ಕಾರಣವಾಗಿದೆ.

ಕಿಯಾ ಕಂಪನಿಯು ಸೆಲ್ಟೊಸ್ ಎಸ್‌ಯುವಿ ಮಾದರಿಯುವಂತೆಯೇ ಹೊಸ ಕಾರೆನ್ಸ್ ಕಾರಿನಲ್ಲೂ 1.5-ಲೀಟರ್ ಸಾಮಾನ್ಯ ಪೆಟ್ರೋಲ್, 1.4-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಜೋಡಣೆ ಮಾಡಿದ್ದು, ಅತ್ಯುತ್ತಮ ಪರ್ಫಾಮೆನ್ಸ್‌ನೊಂದಿಗೆ ಈ ವಿಭಾಗದಲ್ಲಿಯೇ ಅತಿ ಹೆಚ್ಚು ಮೈಲೇಜ್ ನೀಡುವ ಮಾದರಿ ಇದಾಗಿದೆ.

ಇದರೊಂದಿಗೆ ಹೊಸ ಕಾರು ಪ್ರತಿಸ್ಪರ್ಧಿ ಮಾದರಿಗಳಿಂತಲೂ ಹೆಚ್ಚಿನ ಸ್ಥಳಾವಕಾಶದೊಂದಿಗೆ 4540 ಎಂಎಂ ಉದ್ದ, 1800 ಎಂಎಂ ಅಗಲ, 1700 ಎಂಎಂ ಎತ್ತರ, 2780 ಎಂಎಂ ವ್ಹೀಲ್ ಬೆಸ್ ಮತ್ತು 195 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿದ್ದು, ಇದರೊಂದಿಗೆ ಆಕರ್ಷಕವಾದ ಡಿಸೈನ್ ಮತ್ತು ಗುಣಮಟ್ಟದ ಫೀಚರ್ಸ್ ಹೊಂದಿರುವುದು ಗ್ರಾಹಕರ ಆಯ್ಕೆಗೆ ಪ್ರಮುಖ ಆಕರ್ಷಣೆಯಾಗಿದೆ.

ಹೊಸ ಕಾರಿನಲ್ಲಿ ಕಂಪನಿಯು ಟೈಗರ್ ನೋಸ್ ಹೊಂದಿರುವ ಸಿಗ್ನಿಚೆರ್ ಗ್ರಿಲ್ ಜೊತೆ ಏರ್ ಡ್ಯಾಮ್, ವಿಭಜಿತವಾಗಿ ಎಲ್ಇಡಿ ಹೆಡ್‌ಲ್ಯಾಂಪ್, ವೈ ಆಕಾರದ ಎಲ್ಇಡಿ ಡೇ ಟೈಮ್ ರನ್ನಿಂಗ್ ಲೈಟ್ ಮತ್ತು ಬಲಿಷ್ಠವಾಗಿರುವ ಫ್ರಂಟ್ ಬಂಪರ್ ಜೋಡಿಸಲಾಗಿದೆ.

ಹೊಸ ಕಾರಿನಲ್ಲಿ ಫ್ರಂಟ್ ಹೆಡ್‌ಲ್ಯಾಂಪ್‌ಗೆ ಹೊಂದಿಕೊಂಡಂತೆ ನೀಡಲಾಗಿರುವ ಕ್ರಿಸ್ ಲೈನ್ ಕಾರನ್ನು ಸುತ್ತುವರಿದಿರುವುದು ಕೂಡಾ ಪ್ರೀಮಿಯಂ ಲುಕ್ ಹೆಚ್ಚಿಸಲು ಸಹಕಾರಿಯಾಗಿದ್ದು, ಬಾಡಿ ಕ್ಲ್ಯಾಡಿಂಗ್, 17 ಇಂಚಿನ ಡೈಮಂಡ್ ಕಟ್ ಅಲಾಯ್ ವ್ಹೀಲ್, ವ್ಹೀಲ್ ಆರ್ಚ್, ಎಲ್ಇಡಿ ಟೈಲ್ ಲ್ಯಾಂಪ್, ಸ್ಟೈಲಿಶ್ ರಿಯರ್ ಬಂಪರ್, ಫ್ಲಕ್ಸ್ ಸಿಲ್ವರ್ ಇನ್ಸರ್ಟ್ ಜೊತೆ ಆಕರ್ಷಕವಾದ ರಿಯರ್ ಸ್ಪಾಯ್ಲರ್ ನೀಡಲಾಗಿದೆ.

ಕಿಯಾ ಕಂಪನಿಯು ಹೊಸ ಕಾರಿನಲ್ಲಿ ಒಂದೇ ಸೂರಿನಡಿ ಹತ್ತಾರು ತಾಂತ್ರಿಕ ಸೌಲಭ್ಯಗಳನ್ನು ನಿಯಂತ್ರಿಸುವ ಯುವಿಓ ಕಾರ್ ಕನೆಕ್ಟ್ ಫೀಚರ್ಸ್ ಸಹ ನೀಡಿದ್ದು, ವೆಂಟಿಲೆಟೆಡ್ ಸೀಟುಗಳು, 64 ಆಂಬಿಯೆಂಟ್ ಲೈಟಿಂಗ್ಸ್, ಸೀಟ್ ಬ್ಯಾಕ್ ಟೇಬಲ್, ಕಪ್ ಹೋಲ್ಡರ್ಸ್, ಏರ್ ಪ್ಯೂರಿಫೈಯರ್ ಸೌಲಭ್ಯಗಳಿವೆ.

ಇದರೊಂದಿಗೆ ಹೊಸ ಕಾರಿನಲ್ಲಿ ಕಿಯಾ ಕಂಪನಿಯು ಬೆಸ್ ವೆರಿಯೆಂಟ್‌ನಲ್ಲೂ ಲಭ್ಯವಾಗುವಂತೆ ಸ್ಟ್ಯಾಂಡರ್ಡ್ ಆಗಿ 6 ಏರ್‌ಬ್ಯಾಗ್ ಮತ್ತು ಆಲ್ ವ್ಹೀಲ್ ಡಿಸ್ಕ್ ಬ್ರೇಕ್ ಜೋಡಿಸಿದ್ದು, ಇನ್ನುಳಿದಂತೆ ವಿವಿಧ ವೆರಿಯೆಂಟ್‌ಗಳಿಗೆ ಅನ್ವಯಿಸುವಂತೆ ಎಬಿಎಸ್ ಜೊತೆ ಇಬಿಡಿ, ಇಎಸ್‌ಸಿ, ಹಿಲ್ ಸ್ಟಾರ್ಟ್ ಅಸಿಸ್ಟ್, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, ರಿಯರ್ ಪಾರ್ಕಿಂಗ್ ಸೆನ್ಸಾರ್ ಸೌಲಭ್ಯಗಳಿವೆ.


Click it and Unblock the Notifications








