ಭಾರತದಲ್ಲಿ ಬಿಡುಗಡೆಗೂ ಮುನ್ನ ಕಾರೆನ್ಸ್ ಕಾರು ಉತ್ಪಾದನೆಗೆ ಅಧಿಕೃತ ಚಾಲನೆ ನೀಡಿದ ಕಿಯಾ
ಕಿಯಾ ಇಂಡಿಯಾ(KIA India) ಕಂಪನಿಯು ತನ್ನ ಹೊಸ ಎಸ್‌ಯುವಿ ಮಾದರಿಯಾದ ಕಾರೆನ್ಸ್(Carens) ಎಸ್‌ಯುವಿ ಮಾದರಿಯನ್ನು ಫೆಬ್ರವರಿಯಲ್ಲಿ ಮಧ್ಯಂತರದಲ್ಲಿ ಬಿಡುಗಡೆ ಮಾಡುತ್ತಿದ್ದು, ಹೊಸ ಕಾರು ಬಿಡುಗಡೆಗೂ ಮುನ್ನ ಕಾರಿನ ಉತ್ಪಾದನೆಗೆ ಅಧಿಕೃತವಾಗಿ ಚಾಲನೆ ನೀಡಿತು.

ಭಾರತದಲ್ಲಿ ಕಿಯಾ ಕಂಪನಿಯು ಸ್ಥಳೀಯವಾಗಿ ಉತ್ಪಾದನೆ ಮಾಡುತ್ತಿರುವ ಮೂರನೇ ಕಾರು ಮಾದರಿ ಇದಾಗಿದ್ದು, ಸೆಲ್ಟೊಸ್, ಸೊನೆಟ್ ಮತ್ತು ಹೊಸ ಕಾರೆನ್ಸ್ ಕಾರು ಸ್ಥಳೀಯವಾಗಿ ಉತ್ಪಾದನೆಯಾದರೆ ಕಾರ್ನಿವಾಲ್ ಕಾರು ಮಾದರಿಯನ್ನು ಮಾದರಿಯ ದಕ್ಷಿಣ ಕೊರಿಯಾದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಮುಂಬರುವ ಎಲ್ಲಾ ಹೊಸ ಕಾರುಗಳನ್ನು ಸ್ಥಳೀಯವಾಗಿಯೇ ಉತ್ಪಾದನೆ ಮಾಡಲು ನಿರ್ಧರಿಸಲಾಗಿದ್ದು, ಬೇಡಿಕೆಗೆ ತಕ್ಕಂತೆ ಉತ್ಪಾದನೆ ಹೆಚ್ಚಿಸಲು ಉತ್ಪಾದನಾ ಘಟಕ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ.

ಕಿಯಾ ಇಂಡಿಯಾ ಕಂಪನಿಯು ಅನಂತ್‌ಪುರದಲ್ಲಿರುವ ಕಾರು ಉತ್ಪಾದನಾ ಘಟಕದಲ್ಲಿ ವಾರ್ಷಿಕವಾಗಿ 3 ಲಕ್ಷ ಕಾರುಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ಕಂಪನಿಯು ಭಾರತದಿಂದ ಈಗಾಗಲೇ ವಿಶ್ವದ ಪ್ರಮುಖ ಮಾರುಕಟ್ಟೆಗಳಿಗೆ ಸೆಲ್ಟೊಸ್ ಮತ್ತು ಸೊನೆಟ್ ಕಾರುಗಳ ರಫ್ತು ಕೈಗೊಳ್ಳುತ್ತಿದೆ.

ಇದೀಗ ಹೊಸದಾಗಿ ಬಿಡುಗಡೆಯಾಗುತ್ತಿರುವ ಕಾರೆನ್ಸ್ ಕಾರು ಕೂಡಾ ಭಾರತದಿಂದಲೇ ವಿಶ್ವದ ಪ್ರಮುಖ ಮಾರುಕಟ್ಟೆಗಳಿಗೆ ರಫ್ತುಗೊಳ್ಳುವ ಸಾಧ್ಯತೆಗಳಿದ್ದು, ಹೊಸ ಕಾರೆನ್ಸ್ ಕಾರು ಮಧ್ಯಮ ಕ್ರಮಾಂಕದ ಎಸ್‍ಯುವಿ ಮತ್ತು ಎಂಪಿವಿ ಕಾರುಗಳ ಮಾರಾಟದಲ್ಲಿ ಭಾರೀ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ಕಾರೆನ್ಸ್ ಮಾದರಿಯನ್ನು ಕಿಯಾ ಕಂಪನಿಯು ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ಮೂರನೇ ಸಾಲಿನ ಆಸನಗಳೊಂದಿಗೆ 6 ಮತ್ತು 7 ಆಸನಗಳ ಸೌಲಭ್ಯವನ್ನು ಜೋಡಣೆ ಮಾಡಲಿದ್ದು, ಮೂರನೇ ಸಾಲಿನಲ್ಲಿರುವ ಆಸನಗಳು ಪ್ರತಿಸ್ಪರ್ಧಿ ಕಾರು ಮಾದರಿಗಳಿಂತಲೂ ಹೆಚ್ಚು ಒಳಾಂಗಣದೊಂದಿಗೆ ವಯಸ್ಕ ಪ್ರಯಾಣಿಕರೂ ಸಹ ಆರಾಮವಾಗಿ ಕುಳಿತುಕೊಳ್ಳಬಹುದಾಗಿದೆ.

ಹೊಸ ಕಾರು ಹಲವಾರು ಪ್ರಯೋಗಾತ್ಮಕ ವಿಧಾನಗಳನ್ನು ಆಧರಿಸಿ ನಿರ್ಮಾಣಗೊಂಡಿದ್ದು, ಹೆಚ್ಚು ಪ್ರೀಮಿಯಂ ಮಾದರಿಯಾಗಿರದೆ ಕುಟುಂಬ ಸಮೇತರಾಗಿ ಪ್ರಯಾಣಿಸಲು ಸಹಕಾರಿಯಾಗುವಂತೆ ಅವಶ್ಯಕ ಫೀಚರ್ಸ್‌ಗಳನ್ನು ಜೋಡಣೆ ಮಾಡಿದೆ.

ಹಾಗೆಯೇ ಆಕರ್ಷಕವಾದ ಡಿಸೈನ್ ಮತ್ತು ಗುಣಮಟ್ಟದ ಫೀಚರ್ಸ್ ಹೊಂದಿರುವ ಗ್ರಾಹಕರ ಆಯ್ಕೆಗೆ ಪ್ರಮುಖ ಅಂಶವಾಗಲಿದ್ದು, ಹೊಸ ಕಾರಿನಲ್ಲಿ ಕಂಪನಿಯು ಟೈಗರ್ ನೋಸ್ ಹೊಂದಿರುವ ಸಿಗ್ನಿಚೆರ್ ಗ್ರಿಲ್ ಜೊತೆ ಏರ್ ಡ್ಯಾಮ್, ವಿಭಜಿತವಾಗಿ ಎಲ್ಇಡಿ ಹೆಡ್‌ಲ್ಯಾಂಪ್, ವೈ ಆಕಾರದ ಎಲ್ಇಡಿ ಡೇ ಟೈಮ್ ರನ್ನಿಂಗ್ ಲೈಟ್ ಮತ್ತು ಬಲಿಷ್ಠವಾಗಿರುವ ಫ್ರಂಟ್ ಬಂಪರ್ ಜೋಡಿಸಲಾಗಿದೆ.

ಹೊಸ ಕಾರಿನಲ್ಲಿ ಫ್ರಂಟ್ ಹೆಡ್‌ಲ್ಯಾಂಪ್‌ಗೆ ಹೊಂದಿಕೊಂಡಂತೆ ನೀಡಲಾಗಿರುವ ಕ್ರಿಸ್ ಲೈನ್ ಕಾರನ್ನು ಸುತ್ತುವರಿದಿರುವುದು ಕೂಡಾ ಪ್ರೀಮಿಯಂ ಲುಕ್ ಹೆಚ್ಚಿಸಲು ಸಹಕಾರಿಯಾಗಿದ್ದು, ಬಾಡಿ ಕ್ಲ್ಯಾಡಿಂಗ್, 17 ಇಂಚಿನ ಡೈಮಂಡ್ ಕಟ್ ಅಲಾಯ್ ವ್ಹೀಲ್, ವ್ಹೀಲ್ ಆರ್ಚ್, ಎಲ್ಇಡಿ ಟೈಲ್ ಲ್ಯಾಂಪ್, ಸ್ಟೈಲಿಶ್ ರಿಯರ್ ಬಂಪರ್, ಫ್ಲಕ್ಸ್ ಸಿಲ್ವರ್ ಇನ್ಸರ್ಟ್ ಜೊತೆ ಆಕರ್ಷಕವಾದ ರಿಯರ್ ಸ್ಪಾಯ್ಲರ್ ನೀಡಲಾಗಿದೆ.

ಹೊಸ ಕಾರಿನ ಒಳಭಾಗದ ವಿನ್ಯಾಸವು ಸಹ ಆಕರ್ಷಕವಾಗಿದ್ದು, ಹೊಸ ಕಾರಿನಲ್ಲಿ ಕಂಪನಿಯು ಡ್ಯುಯಲ್ ಟೋನ್ ಇಂಟಿರಿಯರ್ ಜೊತೆಗೆ ಸಾಫ್ಟ್ ಟಚ್ ಡ್ಯಾಶ್‌ಬೋರ್ಡ್, 10.25 ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ, ಫೂರ್ಣ ಪ್ರಮಾಣದ ಡಿಜಿಟಲ್ ಇನ್‌ಸ್ಟುಮೆಂಟ್ ಕ್ಲಸ್ಟರ್, ಮಲ್ಟಿ ಫಂಕ್ಷನ್ ಹೊಂದಿರುವ ಸ್ಟೀರಿಂಗ್ ವ್ಹೀಲ್, ಆ್ಯಪಲ್ ಕಾರ್ ಪ್ಲೇ ಮತ್ತು ಆಂಡ್ರಾಯಿಡ್ ಆಟೋ ನೀಡಲಾಗಿದೆ.

ಕಿಯಾ ಕಂಪನಿಯು ಹೊಸ ಕಾರಿನಲ್ಲಿ ಒಂದೇ ಸೂರಿನಡಿ ಹತ್ತಾರು ತಾಂತ್ರಿಕ ಸೌಲಭ್ಯಗಳನ್ನು ನಿಯಂತ್ರಿಸುವ ಯುವಿಓ ಕಾರ್ ಕನೆಕ್ಟ್ ಫೀಚರ್ಸ್ ಸಹ ನೀಡಿದ್ದು, ವೆಂಟಿಲೆಟೆಡ್ ಸೀಟುಗಳು, 64 ಆಂಬಿಯೆಂಟ್ ಲೈಟಿಂಗ್ಸ್, ಸೀಟ್ ಬ್ಯಾಕ್ ಟೇಬಲ್, ಕಪ್ ಹೋಲ್ಡರ್ಸ್, ಏರ್ ಪ್ಯೂರಿಫೈಯರ್ ಸೌಲಭ್ಯಗಳಿವೆ.

ಇದರೊಂದಿಗೆ ಹೊಸ ಕಾರಿನಲ್ಲಿ ಕಿಯಾ ಕಂಪನಿಯು ಬೆಸ್ ವೆರಿಯೆಂಟ್‌ನಲ್ಲೂ ಲಭ್ಯವಾಗುವಂತೆ ಸ್ಟ್ಯಾಂಡರ್ಡ್ ಆಗಿ 6 ಏರ್‌ಬ್ಯಾಗ್ ಮತ್ತು ಆಲ್ ವ್ಹೀಲ್ ಡಿಸ್ಕ್ ಬ್ರೇಕ್ ಜೋಡಿಸಿದ್ದು, ಇನ್ನುಳಿದಂತೆ ವಿವಿಧ ವೆರಿಯೆಂಟ್‌ಗಳಿಗೆ ಅನ್ವಯಿಸುವಂತೆ ಎಬಿಎಸ್ ಜೊತೆ ಇಬಿಡಿ, ಇಎಸ್‌ಸಿ, ಹಿಲ್ ಸ್ಟಾರ್ಟ್ ಅಸಿಸ್ಟ್, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, ರಿಯರ್ ಪಾರ್ಕಿಂಗ್ ಸೆನ್ಸಾರ್ ಸೌಲಭ್ಯಗಳಿವೆ.

ಹೊಸ ಕಿಯಾ ಕಾರೆನ್ಸ್ ಕಾರು ಮಾದರಿಯು ಒಟ್ಟು ಐದು ವೆರಿಯೆಂಟ್ ಮತ್ತು ಮೂರು ಎಂಜಿನ್ ಆಯ್ಕೆಗಳಲ್ಲಿ ಬಿಡುಗಡೆಗೊಳ್ಳುತ್ತಿದ್ದು, ಹೊಸ ಕಾರು ಎಸ್‌ಯುವಿ ಮತ್ತು ಎಂಪಿವಿ ಕಾರು ಮಾದರಿಗಳಿಗೆ ಉತ್ತಮ ಪೈಪೋಟಿಯಾಗಲಿದೆ. ಕಾರೆನ್ಸ್ ಕಾರು ಎಸ್‌ಯುವಿ ಮತ್ತು ಎಂಪಿವಿ ಕಾರುಗಳಿಗೆ ಪೈಪೋಟಿಯಾಗಿ ನಿರ್ಮಾಣಗೊಂಡಿದ್ದು, ಹೊಸ ಕಾರು 4,540 ಎಂಎಂ ಉದ್ದ, 1,800 ಎಂಎಂ ಅಗಲ, 1,708 ಎತ್ತರ ಮತ್ತು 2,780 ಎಂಎಂ ವ್ಹೀಲ್ ಬೆಸ್ ಹೊಂದಿದೆ.

ಕಾರೆನ್ಸ್ ಕಾರು ಮಾದರಿಯು ಸೆಲ್ಟೊಸ್ ಎಸ್‌ಯುವಿ ಮಾದರಿಯಲ್ಲಿರುವಂತೆ 1.5-ಲೀಟರ್ ಸಾಮಾನ್ಯ ಪೆಟ್ರೋಲ್, 1.4-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಪಡೆದುಕೊಂಡಿದೆ. ಎಂಜಿನ್ ಆಯ್ಕೆಗೆ ಅನುಗುಣವಾಗಿ 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮ್ಯಾಟಿಕ್ ಅಥವಾ 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಮಾದರಿಯನ್ನು ಆಯ್ಕೆ ಮಾಡಬಹುದಾಗಿದೆ.

ಹೊಸ ಕಾರು ಮಧ್ಯಮ ಕ್ರಮಾಂಕದ ಎಸ್‌ಯುವಿ ಶ್ರೇಣಿಯಲ್ಲಿರುವ 6 ಸೀಟರ್ ಮತ್ತು 7 ಸೀಟರ್ ಸೌಲಭ್ಯ ಹೊಂದಿರುವ ಹ್ಯುಂಡೈ ಅಲ್ಕಾಜರ್, ಮಹೀಂದ್ರಾ ಎಕ್ಸ್‌ಯುವಿ700 ಮತ್ತು ಎಂಜಿ ಹೆಕ್ಟರ್ ಪ್ಲಸ್, ಟಾಟಾ ಸಫಾರಿ ಮತ್ತು ಎಂಪಿವಿ ಕಾರು ಮಾದರಿಗಳಾದ ಎರ್ಟಿಗಾ ಹಾಗೂ ಇನೋವಾ ಕ್ರಿಸ್ಟಾ ಆರಂಭಿಕ ಮಾದರಿಗಳಿಗೂ ಇದು ಪೈಪೋಟಿ ನೀಡಲಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 13 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 18 ಲಕ್ಷದ ತನಕ ಬೆಲೆ ಅಂತರದಲ್ಲಿ ಮಾರಾಟಗೊಳ್ಳಬಹುದೆಂದು ಅಂದಾಜಿಸಲಾಗಿದೆ.


Click it and Unblock the Notifications








