ಬಿಡುಗಡೆಗೂ ಮುನ್ನ ಡೀಲರ್ಸ್ ಯಾರ್ಡ್ ತಲುಪಿದ ಕಿಯಾ ಕಾರೆನ್ಸ್ ಎಸ್‌ಯುವಿ
ಭಾರತದಲ್ಲಿ ಬಿಡುಗಡೆಯಾಗಲಿರುವ ಹೊಸ ಕಾರುಗಳ ಪೈಕಿ ಕಿಯಾ ಕಾರೆನ್ಸ್ ಎಸ್‌ಯುವಿ ಭಾರೀ ನೀರಿಕ್ಷೆ ಹುಟ್ಟುಹಾಕಿದ್ದು, ಹೊಸ ಕಾರು ಬಿಡುಗಡೆಗೂ ಮುನ್ನ ಕಿಯಾ ಕಂಪನಿಯು ಡೀಲರ್ಸ್ ಯಾರ್ಡ್‌ಗಳಲ್ಲಿ ಸ್ಟಾಕ್ ಮಾಡುತ್ತಿದೆ.

ಹೊಸ ಕಾರೆನ್ಸ್ ಎಸ್‌ಯುವಿ ಮಾದರಿಯನ್ನು ಕಂಪನಿಯು ಇದೇ ತಿಂಗಳು ಮಧ್ಯಂತರದಲ್ಲಿ ಬಿಡುಗಡೆ ಮಾಡುವುದು ಬಹುತೇಕ ಖಚಿತವಾಗಿದ್ದು, ಡೀಲರ್ಸ್ ಯಾರ್ಡ್‌ಗಳಲ್ಲಿ ಹೊಸ ಕಾರನ್ನು ಸ್ಟಾಕ್ ಮಾಡುತ್ತಿರುವ ಕಂಪನಿಯು ಬುಕ್ಕಿಂಗ್ ಸಲ್ಲಿಸಿರುವ ಗ್ರಾಹಕರಿಗೆ ಶೀಘ್ರದಲ್ಲಿಯೇ ಟೆಸ್ಟ್ ಡ್ರೈವ್ ಕಲ್ಪಿಸಲಿದೆ. ಕಿಯಾ ಕಂಪನಿಯು ಆಸಕ್ತ ಗ್ರಾಹಕರಿಗಾಗಿ ಈ ವಾರದ ಕೊನೆಯಲ್ಲಿ ಟೆಸ್ಟ್ ಡ್ರೈವ್ ಆರಂಭಿಸಬಹುದಾಗಿದ್ದು, ಕೋವಿಡ್ ಹಿನ್ನಲೆಯಲ್ಲಿ ಎಲ್ಲಾ ಸುರಕ್ಷಾ ಕ್ರಮಗಳೊಂದಿಗೆ ಟೆಸ್ಟ್ ಡ್ರೈವ್ ಆರಂಭಿಸುವ ಸಿದ್ದತೆ ನಡೆಸಿದೆ.

ಕಿಯಾ ಕಂಪನಿಯು ಭಾರತದಲ್ಲಿ ಸೆಲ್ಟೊಸ್, ಸೊನೆಟ್ ಮತ್ತು ಕಾರ್ನಿವಾಲ್ ನಂತರ ನಾಲ್ಕನೇ ಕಾರು ಮಾದರಿಯಾಗಿ ಕಾರೆನ್ಸ್ ಎಸ್‌ಯುವಿಯನ್ನು ಬಿಡುಗಡೆ ಮಾಡುತ್ತಿದ್ದು, ಮಧ್ಯಮ ಕ್ರಮಾಂಕದ ಎಸ್‌ಯುವಿ ಮತ್ತು ಎಂಪಿವಿ ಕಾರುಗಳ ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಳ್ಳಲಿದೆ.

ಕಾರೆನ್ಸ್ ಮಾದರಿಯನ್ನು ಕಿಯಾ ಕಂಪನಿಯು ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ಮೂರನೇ ಸಾಲಿನ ಆಸನಗಳೊಂದಿಗೆ 6 ಮತ್ತು 7 ಆಸನಗಳ ಸೌಲಭ್ಯವನ್ನು ಜೋಡಣೆ ಮಾಡಲಿದ್ದು, ಮೂರನೇ ಸಾಲಿನಲ್ಲಿರುವ ಆಸನಗಳು ಪ್ರತಿಸ್ಪರ್ಧಿ ಕಾರು ಮಾದರಿಗಳಿಂತಲೂ ಹೆಚ್ಚು ಒಳಾಂಗಣದೊಂದಿಗೆ ವಯಸ್ಕ ಪ್ರಯಾಣಿಕರೂ ಸಹ ಆರಾಮವಾಗಿ ಕುಳಿತುಕೊಳ್ಳಬಹುದಾಗಿದೆ.

ಹೊಸ ಕಾರು ಹಲವಾರು ಪ್ರಯೋಗಾತ್ಮಕ ವಿಧಾನಗಳನ್ನು ಆಧರಿಸಿ ನಿರ್ಮಾಣಗೊಂಡಿದ್ದು, ಹೆಚ್ಚು ಪ್ರೀಮಿಯಂ ಮಾದರಿಯಾಗಿರದೆ ಕುಟುಂಬ ಸಮೇತರಾಗಿ ಪ್ರಯಾಣಿಸಲು ಸಹಕಾರಿಯಾಗುವಂತೆ ಅವಶ್ಯಕ ಫೀಚರ್ಸ್‌ಗಳನ್ನು ಜೋಡಣೆ ಮಾಡಿದೆ.

ಹಾಗೆಯೇ ಆಕರ್ಷಕವಾದ ಡಿಸೈನ್ ಮತ್ತು ಗುಣಮಟ್ಟದ ಫೀಚರ್ಸ್ ಹೊಂದಿರುವ ಗ್ರಾಹಕರ ಆಯ್ಕೆಗೆ ಪ್ರಮುಖ ಅಂಶವಾಗಲಿದ್ದು, ಹೊಸ ಕಾರಿನಲ್ಲಿ ಕಂಪನಿಯು ಟೈಗರ್ ನೋಸ್ ಹೊಂದಿರುವ ಸಿಗ್ನಿಚೆರ್ ಗ್ರಿಲ್ ಜೊತೆ ಏರ್ ಡ್ಯಾಮ್, ವಿಭಜಿತವಾಗಿ ಎಲ್ಇಡಿ ಹೆಡ್‌ಲ್ಯಾಂಪ್, ವೈ ಆಕಾರದ ಎಲ್ಇಡಿ ಡೇ ಟೈಮ್ ರನ್ನಿಂಗ್ ಲೈಟ್ ಮತ್ತು ಬಲಿಷ್ಠವಾಗಿರುವ ಫ್ರಂಟ್ ಬಂಪರ್ ಜೋಡಿಸಲಾಗಿದೆ.

ಕಾರೆನ್ಸ್ ಕಾರಿನಲ್ಲಿ ಫ್ರಂಟ್ ಹೆಡ್‌ಲ್ಯಾಂಪ್‌ಗೆ ಹೊಂದಿಕೊಂಡಂತೆ ನೀಡಲಾಗಿರುವ ಕ್ರಿಸ್ ಲೈನ್ ಕಾರನ್ನು ಸುತ್ತುವರಿದಿರುವುದು ಕೂಡಾ ಪ್ರೀಮಿಯಂ ಲುಕ್ ಹೆಚ್ಚಿಸಲು ಸಹಕಾರಿಯಾಗಿದ್ದು, ಬಾಡಿ ಕ್ಲ್ಯಾಡಿಂಗ್, 17 ಇಂಚಿನ ಡೈಮಂಡ್ ಕಟ್ ಅಲಾಯ್ ವ್ಹೀಲ್, ವ್ಹೀಲ್ ಆರ್ಚ್, ಎಲ್ಇಡಿ ಟೈಲ್ ಲ್ಯಾಂಪ್, ಸ್ಟೈಲಿಶ್ ರಿಯರ್ ಬಂಪರ್, ಫ್ಲಕ್ಸ್ ಸಿಲ್ವರ್ ಇನ್ಸರ್ಟ್ ಜೊತೆ ಆಕರ್ಷಕವಾದ ರಿಯರ್ ಸ್ಪಾಯ್ಲರ್ ನೀಡಲಾಗಿದೆ.

ಹೊಸ ಕಾರಿನ ಒಳಭಾಗದ ವಿನ್ಯಾಸವು ಸಹ ಆಕರ್ಷಕವಾಗಿದ್ದು, ಹೊಸ ಕಾರಿನಲ್ಲಿ ಕಂಪನಿಯು ಡ್ಯುಯಲ್ ಟೋನ್ ಇಂಟಿರಿಯರ್ ಜೊತೆಗೆ ಸಾಫ್ಟ್ ಟಚ್ ಡ್ಯಾಶ್‌ಬೋರ್ಡ್, 10.25 ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ, ಫೂರ್ಣ ಪ್ರಮಾಣದ ಡಿಜಿಟಲ್ ಇನ್‌ಸ್ಟುಮೆಂಟ್ ಕ್ಲಸ್ಟರ್, ಮಲ್ಟಿ ಫಂಕ್ಷನ್ ಹೊಂದಿರುವ ಸ್ಟೀರಿಂಗ್ ವ್ಹೀಲ್, ಆ್ಯಪಲ್ ಕಾರ್ ಪ್ಲೇ ಮತ್ತು ಆಂಡ್ರಾಯಿಡ್ ಆಟೋ ನೀಡಲಾಗಿದೆ.

ಕಿಯಾ ಕಂಪನಿಯು ಹೊಸ ಕಾರಿನಲ್ಲಿ ಒಂದೇ ಸೂರಿನಡಿ ಹತ್ತಾರು ತಾಂತ್ರಿಕ ಸೌಲಭ್ಯಗಳನ್ನು ನಿಯಂತ್ರಿಸುವ ಯುವಿಓ ಕಾರ್ ಕನೆಕ್ಟ್ ಫೀಚರ್ಸ್ ಸಹ ನೀಡಿದ್ದು, ವೆಂಟಿಲೆಟೆಡ್ ಸೀಟುಗಳು, 64 ಆಂಬಿಯೆಂಟ್ ಲೈಟಿಂಗ್ಸ್, ಸೀಟ್ ಬ್ಯಾಕ್ ಟೇಬಲ್, ಕಪ್ ಹೋಲ್ಡರ್ಸ್, ಏರ್ ಪ್ಯೂರಿಫೈಯರ್ ಸೌಲಭ್ಯಗಳಿವೆ.

ಇದರೊಂದಿಗೆ ಹೊಸ ಕಾರಿನಲ್ಲಿ ಕಿಯಾ ಕಂಪನಿಯು ಬೆಸ್ ವೆರಿಯೆಂಟ್‌ನಲ್ಲೂ ಲಭ್ಯವಾಗುವಂತೆ ಸ್ಟ್ಯಾಂಡರ್ಡ್ ಆಗಿ 6 ಏರ್‌ಬ್ಯಾಗ್ ಮತ್ತು ಆಲ್ ವ್ಹೀಲ್ ಡಿಸ್ಕ್ ಬ್ರೇಕ್ ಜೋಡಿಸಿದ್ದು, ಇನ್ನುಳಿದಂತೆ ವಿವಿಧ ವೆರಿಯೆಂಟ್‌ಗಳಿಗೆ ಅನ್ವಯಿಸುವಂತೆ ಎಬಿಎಸ್ ಜೊತೆ ಇಬಿಡಿ, ಇಎಸ್‌ಸಿ, ಹಿಲ್ ಸ್ಟಾರ್ಟ್ ಅಸಿಸ್ಟ್, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, ರಿಯರ್ ಪಾರ್ಕಿಂಗ್ ಸೆನ್ಸಾರ್ ಸೌಲಭ್ಯಗಳಿವೆ.

ಹೊಸ ಕಿಯಾ ಕಾರೆನ್ಸ್ ಕಾರು ಮಾದರಿಯು ಒಟ್ಟು ಐದು ವೆರಿಯೆಂಟ್ ಮತ್ತು ಮೂರು ಎಂಜಿನ್ ಆಯ್ಕೆಗಳಲ್ಲಿ ಬಿಡುಗಡೆಗೊಳ್ಳುತ್ತಿದ್ದು, ಹೊಸ ಕಾರು ಎಸ್‌ಯುವಿ ಮತ್ತು ಎಂಪಿವಿ ಕಾರು ಮಾದರಿಗಳಿಗೆ ಉತ್ತಮ ಪೈಪೋಟಿಯಾಗಲಿದೆ. ಕಾರೆನ್ಸ್ ಕಾರು ಎಸ್‌ಯುವಿ ಮತ್ತು ಎಂಪಿವಿ ಕಾರುಗಳಿಗೆ ಪೈಪೋಟಿಯಾಗಿ ನಿರ್ಮಾಣಗೊಂಡಿದ್ದು, ಹೊಸ ಕಾರು 4,540 ಎಂಎಂ ಉದ್ದ, 1,800 ಎಂಎಂ ಅಗಲ, 1,708 ಎತ್ತರ ಮತ್ತು 2,780 ಎಂಎಂ ವ್ಹೀಲ್ ಬೆಸ್ ಹೊಂದಿದೆ.

ಕಾರೆನ್ಸ್ ಕಾರು ಮಾದರಿಯು ಸೆಲ್ಟೊಸ್ ಎಸ್‌ಯುವಿ ಮಾದರಿಯಲ್ಲಿರುವಂತೆ 1.5-ಲೀಟರ್ ಸಾಮಾನ್ಯ ಪೆಟ್ರೋಲ್, 1.4-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಪಡೆದುಕೊಂಡಿದೆ. ಎಂಜಿನ್ ಆಯ್ಕೆಗೆ ಅನುಗುಣವಾಗಿ 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮ್ಯಾಟಿಕ್ ಅಥವಾ 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಮಾದರಿಯನ್ನು ಆಯ್ಕೆ ಮಾಡಬಹುದಾಗಿದೆ.

ಹೊಸ ಕಾರು ಮಧ್ಯಮ ಕ್ರಮಾಂಕದ ಎಸ್‌ಯುವಿ ಶ್ರೇಣಿಯಲ್ಲಿರುವ 6 ಸೀಟರ್ ಮತ್ತು 7 ಸೀಟರ್ ಸೌಲಭ್ಯ ಹೊಂದಿರುವ ಹ್ಯುಂಡೈ ಅಲ್ಕಾಜರ್, ಮಹೀಂದ್ರಾ ಎಕ್ಸ್‌ಯುವಿ700 ಮತ್ತು ಎಂಜಿ ಹೆಕ್ಟರ್ ಪ್ಲಸ್, ಟಾಟಾ ಸಫಾರಿ ಮತ್ತು ಎಂಪಿವಿ ಕಾರು ಮಾದರಿಗಳಾದ ಎರ್ಟಿಗಾ ಹಾಗೂ ಇನೋವಾ ಕ್ರಿಸ್ಟಾ ಆರಂಭಿಕ ಮಾದರಿಗಳಿಗೂ ಇದು ಪೈಪೋಟಿ ನೀಡಲಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 13 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 18 ಲಕ್ಷದ ತನಕ ಬೆಲೆ ಅಂತರದಲ್ಲಿ ಮಾರಾಟಗೊಳ್ಳಬಹುದೆಂದು ಅಂದಾಜಿಸಲಾಗಿದೆ.


Click it and Unblock the Notifications








