ಭಾರತದಲ್ಲಿ ಬಿಡುಗಡೆಯಾಗಲಿರುವ ಇವಿ6 ಎಸ್‌ಯುವಿ ಟೀಸರ್ ಪ್ರಕಟಿಸಿದ ಕಿಯಾ
ದೇಶಿಯ ಮಾರುಕಟ್ಟೆಯಲ್ಲಿ ವಿವಿಧ ಕಾರು ಮಾದರಿಗಳ ಮೂಲಕ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿರುವ ಕಿಯಾ ಇಂಡಿಯಾ ಕಂಪನಿಯು ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಕಾರು ಮಾದರಿಗಳನ್ನು ಬಿಡುಗಡೆ ಮಾಡುತ್ತಿದ್ದು, ಕಿಯಾ ಕಂಪನಿಯ ಹೊಸ ಕಾರುಗಳಲ್ಲಿ ಬಹುನೀರಿಕ್ಷಿತ ಇವಿ6 ಎಲೆಕ್ಟ್ರಿಕ್ ಕಾರು ಕೂಡಾ ಒಂದಾಗಿದೆ.

ಹೆಚ್ಚುತ್ತಿರುವ ಮಾಲಿನ್ಯ ತಡೆ ಮತ್ತು ಇಂಧನಗಳ ಮೇಲಿನ ಅವಲಂಬನೆಯನ್ನು ತಗ್ಗಿಸಲು ವಿವಿಧ ರಾಷ್ಟ್ರಗಳು 2030ರಿಂದ ಹಂತ-ಹಂತವಾಗಿ ಇಂಧನ ಚಾಲಿತ ವಾಹನಗಳ ಮಾರಾಟವನ್ನು ಸ್ಥಗಿತಗೊಳಿಸುವ ನಿರ್ಣಯ ಕೈಗೊಂಡಿದ್ದು, ಇದಕ್ಕೆ ಪೂರಕವಾಗಿ ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಹೆಚ್ಚಿಸಲಾಗುತ್ತಿದೆ.

ಎಲೆಕ್ಟ್ರಿಕ್ ವಾಹನಗಳಿಗೆ ಪೂರಕವಾಗಿ ಯುರೋಪ್ ಒಕ್ಕೂಟದಲ್ಲಿನ ಪ್ರಮುಖ ರಾಷ್ಟ್ರಗಳ ಹೊಸ ನಿರ್ಣಯಗಳಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಮಾರಾಟವು ಸಾಕಷ್ಟು ಇಳಿಕೆಯಾಗುತ್ತಿದ್ದು, ಹೈಬ್ರಿಡ್ ಮತ್ತು ಪೂರ್ಣ ಪ್ರಮಾಣದ ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಸಾಕಷ್ಟು ಬೆಳವಣಿಗೆ ಕಂಡುಬಂದಿದೆ.

ಪ್ರಸಕ್ತ ವರ್ಷದಲ್ಲಿ ಯುರೋಪಿನ ಪ್ರಮುಖ ರಾಷ್ಟ್ರಗಳಲ್ಲಿ ವಿವಿಧ ಆಟೋ ಉತ್ಪಾದನಾ ಕಂಪನಿಗಳು ಭಾರೀ ಪ್ರಮಾಣದ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡಿದ್ದು, ಡೀಸೆಲ್ ಕಾರುಗಳ ಮಾರಾಟದಲ್ಲಿ ಸಾಕಷ್ಟು ಇಳಿಕೆಯಾಗಿದೆ.

ಡೀಸೆಲ್ ಕಾರುಗಳ ಬಳಕೆಗೆ ಹಲವಾರು ನಿರ್ಬಂಧ ವಿಧಿಸುತ್ತಿರುವ ಯುರೋಪ್ ಒಕ್ಕೂಟವು ಎಲೆಕ್ಟ್ರಿಕ್ ವಾಹನಗಳ ಮಾರಾಟ ಮತ್ತು ಬಳಕೆಗೆ ಸಾಕಷ್ಟು ವಿನಾಯ್ತಿಗಳನ್ನು ನೀಡುತ್ತಿರುವುದೇ ಇವಿ ವಾಹನಗಳ ಬಳಕೆ ಹೆಚ್ಚಳವಾಗಲು ಪ್ರಮುಖ ಕಾರಣವಾಗಿದೆ. ಮುಂಬರುವ ದಿನಗಳಲ್ಲಿ ಡೀಸೆಲ್ ಜೊತೆಗೆ ಪೆಟ್ರೋಲ್ ವಾಹನಗಳ ಬಳಕೆಯನ್ನು ನಿರ್ಬಂಧಿಸುವತ್ತ ಹಲವಾರು ಹೊಸ ನೀತಿಗಳನ್ನು ಜಾರಿಗೆ ತರಲಾಗುತ್ತಿದ್ದು, ಇವಿ ವಾಹನಗಳ ಅಭಿವೃದ್ದಿ ಕುರಿತಂತೆ ಕಿಯಾ ಕಂಪನಿಯು ಕೂಡಾ ಹೊಸ ನಿರ್ಣಯ ಕೈಗೊಂಡಿದೆ.

ಜಗತ್ತಿನ ಎಂಟನೇ ಅತಿ ದೊಡ್ಡ ಕಾರು ಉತ್ಪಾದನಾ ಕಂಪನಿಯಾಗಿರುವ ದಕ್ಷಿಣ ಕೊರಿಯಾದ ಕಿಯಾ ಕಂಪನಿಯು ಕೂಡಾ 2040ರ ವೇಳೆಗೆ ಸಂಪೂರ್ಣವಾಗಿ ಇವಿ ವಾಹನಗಳನ್ನು ಮಾತ್ರ ಉತ್ಪಾದನೆ ಮಾಡುವುದಾಗಿ ನಿರ್ಣಯ ಕೈಗೊಂಡಿದ್ದು, ಹೊಸ ಗುರಿಸಾಧನೆಗಾಗಿ ಈಗಿನಿಂದಲೇ ಹೊಸ ಯೋಜನೆಗಳತ್ತ ಗಮನಹರಿಸುತ್ತಿದೆ.

2025ರ ವೇಳೆ ವಿವಿಧ ರಾಷ್ಟ್ರಗಳಲ್ಲಿ ಸುಮಾರು 10ಕ್ಕೂ ಹೆಚ್ಚು ಹೊಸ ಇವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡುವ ಯೋಜನೆ ಹೊಂದಿದ್ದು, ಭಾರತದಲ್ಲೂ ಕಿಯಾ ಕಂಪನಿಯು ವಿವಿಧ ಇವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲು ಸಿದ್ದವಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಈಗಾಗಲೇ ಸೊಲ್, ನಿರೋ ಮತ್ತು ಇವಿ6 ಕಾರು ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಸೀಮಿತ ಮಾರುಕಟ್ಟೆಗಳಲ್ಲಿ ಮಾತ್ರ ಖರೀದಿಗೆ ಲಭ್ಯವಿರುವ ಪ್ರಸ್ತುತ ಇವಿ ಮಾದರಿಗಳು ಶೀಘ್ರದಲ್ಲೇ ವಿವಿಧ ರಾಷ್ಟ್ರಗಳಲ್ಲಿ ಮಾರಾಟಗೊಳ್ಳಲಿವೆ.

ಚಾರ್ಜಿಂಗ್ ಸೌಲಭ್ಯಗಳ ಆಧಾರದ ಮೇಲೆ ಇವಿ ವಾಹನ ಮಾರಾಟವನ್ನು ವಿಸ್ತರಿಸುತ್ತಿರುವ ಕಾರು ಕಂಪನಿಗಳು ಹೆಚ್ಚಿನ ಸಂಖ್ಯೆಯ ಸಾರ್ವಜನಿಕ ಬಳಕೆಯ ಚಾರ್ಜಿಂಗ್ ನಿಲ್ದಾಣಗಳ ನಿರ್ಮಾಣಕ್ಕೆ ಎದುರು ನೋಡುತ್ತಿದ್ದು, 2030ರ ವೇಳೆಗೆ ಭಾರತದಲ್ಲಿ ಸುಮಾರು ಶೇ.60 ರಷ್ಟು ಇವಿ ಮಾರಾಟವು ಹೆಚ್ಚಳವಾಗುವ ನೀರಿಕ್ಷೆಯಿದೆ.

ಹೀಗಾಗಿ ಭಾರತದಲ್ಲೂ ತನ್ನ ಮೊದಲ ಇವಿ ಕಾರು ಮಾದರಿಯನ್ನು ಬಿಡುಗಡೆ ಮಾಡುವ ನೀರಿಕ್ಷೆಯಲ್ಲಿರುವ ಕಿಯಾ ಕಂಪನಿಯು ಜುಲೈ ಆರಂಭದಲ್ಲಿ ಬಿಡುಗಡೆ ಮಾಡಬಹುದಾಗಿದ್ದು, ಇದೇ ತಿಂಗಳು 26ರಿಂದ ಕಂಪನಿಯು ಅಧಿಕೃತ ಬುಕಿಂಗ್ ಪ್ರಕ್ರಿಯೆಗೆ ಚಾಲನೆ ನೀಡುತ್ತಿದೆ.

ಭಾರತದಲ್ಲಿ ಆರಂಭಿಕವಾಗಿ 100 ಯುನಿಟ್ ಇವಿ6 ಮಾದರಿಗಳನ್ನು ಮಾರಾಟ ಮಾಡಲು ನಿರ್ಧರಿಸಿರುವ ಕಂಪನಿಯು ಹೊಸ ಕಾರನ್ನು ದಕ್ಷಿಣ ಕೊರಿಯಾದಲ್ಲಿರುವ ತನ್ನ ಮುಖ್ಯ ಕಾರು ಉತ್ಪಾದನಾ ಘಟಕದಿಂದ ಆಮದು ಮಾಡಿಕೊಳ್ಳಲಿದೆ.

ಇವಿ6 ಕ್ರಾಸ್‌ಓವರ್ ಎಸ್‌ಯುವಿ ಮಾದರಿಯು ಇ-ಜಿಎಂಪಿ ಪ್ಲ್ಯಾಟ್‌ಫಾರ್ಮ್ ಆಧರಿಸಿ ಅಭಿವೃದ್ದಿಗೊಂಡಿದ್ದು, 576-ಬಿಎಚ್‌ಪಿ ಉತ್ಪಾದನಾ ಸಾಮರ್ಥ್ಯ ಹೊಂದಿರುವ ಹೊಸ ಕಾರು 400ವಿ ಮತ್ತು 800ವಿ ಸೂಪರ್ ಫಾಸ್ಟ್ ಚಾರ್ಜಿಂಗ್ ಸರ್ಪೋಟ್ ಹೊಂದಿದೆ.

ಹೊಸ ಕಾರು ಪ್ರತಿ ಚಾರ್ಜ್‌ಗೆ ಗರಿಷ್ಠ 480 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, ಸೂಪರ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯದೊಂದಿಗೆ ಅತಿ ಕಡಿಮೆ ಅವಧಿಯಲ್ಲಿ ಗರಿಷ್ಠ ಪ್ರಮಾಣ ಚಾರ್ಜ್ ಮಾಡಬಹುದಾಗಿದೆ.

ಸೂಪರ್ ಫಾಸ್ಟ್ ಚಾರ್ಜರ್ ಮೂಲಕ ಕೇವಲ 5 ನಿಮಿಷ ಚಾರ್ಜ್ ಮಾಡಿದರೆ 112 ಕಿ.ಮೀ ಮೈಲೇಜ್ ಪಡೆದುಕೊಳ್ಳಬಹುದಾಗಿದ್ದು, 18 ನಿಮಿಷ ಚಾರ್ಜ್ ಮಾಡಿದ್ದಲ್ಲಿ 330 ಕಿ.ಮೀ ಮೈಲೇಜ್ ಪಡೆದುಕೊಳ್ಳಬಹುದಾಗಿದೆ.

ಇವಿ6 ಮಾದರಿಯು ಭಾರತದಲ್ಲಿ ಮಾರಾಟಗೊಳ್ಳುತ್ತಿರುವ ಮಧ್ಯಮ ಕ್ರಮಾಂಕದ ಇವಿ ಮಾದರಿಗಳಿಂತ ತುಸು ದುಬಾರಿ ಎನ್ನಿಸಲಿದ್ದು, ಐಷಾರಾಮಿ ಫೀಚರ್ಸ್‌ಗಳೊಂದಿಗೆ ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 45 ಲಕ್ಷದಿಂದ ರೂ.55 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳಬಹುದಾಗಿದೆ.


Click it and Unblock the Notifications








