ಭಾರತದಲ್ಲಿ ಬಿಡುಗಡೆಯಾಗಲಿದೆ ಪ್ರತಿ ಚಾರ್ಜ್‌ಗೆ 600 ಕಿ.ಮೀ ಮೈಲೇಜ್ ಪ್ರೇರಿತ ಇಕ್ಯೂಎಸ್
ಜರ್ಮನ್ ಕಾರು ಉತ್ಪಾದನಾ ಕಂಪನಿಯಾಗಿರುವ ಮರ್ಸಿಡಿಸ್ ಬೆಂಝ್ ಈಗಾಗಲೇ ವಿವಿಧ ಎಲೆಕ್ಟ್ರಿಕ್ ಎಸ್‌ಯುವಿ ಮಾದರಿಗಳೊಂದಿಗೆ ಜಾಗತಿಕ ಮಾರುಕಟ್ಟೆಗಳಲ್ಲಿ ಹಲವು ಹೊಸ ದಾಖಲೆಗಳಿಗೆ ಕಾರಣವಾಗಿದ್ದು, ಕಂಪನಿಯು ಶೀಘ್ರದಲ್ಲಿಯೇ ಮತ್ತಷ್ಟು ಹೊಸ ಇವಿ ಕಾರುಗಳನ್ನು ಪರಿಚಯಿಸುವ ಸಿದ್ದತೆಯಲ್ಲಿದೆ.

ದುಬಾರಿ ಬೆಲೆ ನಡುವೆಯೂ ಹೊಸ ಇವಿ ಕಾರುಗಳೊಂದಿಗೆ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿರುವ ಮರ್ಸಿಡಿಸ್ ಬೆಂಝ್ ಕಂಪನಿಯು 2023ರ ವೇಳೆಗೆ ಒಟ್ಟು 8 ಎಲೆಕ್ಟ್ರಿಕ್ ಕಾರು ಮಾದರಿಗಳನ್ನು ಮಾರಾಟ ಮಾಡುವ ಗುರಿಹೊಂದಿದ್ದು, 2030ರ ವೇಳೆಗೆ ಶೇ.60 ಮಾದರಿಗಳನ್ನು ವಿದ್ಯುತ್ ಮಾದರಿಗಳಿಗೆ ಪರಿವರ್ತಿಸುವತ್ತ ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿದೆ.

ಮರ್ಸಿಡಿಸ್ ಬೆಂಝ್ ಹೊಸ ಎಲೆಕ್ಟ್ರಿಕ್ ಕಾರುಗಳ ಪಟ್ಟಿಯಲ್ಲಿ ಗ್ರಾಹಕರ ಬೇಡಿಕೆಯೆಂತೆ ಎಸ್‌ಯುವಿ, ಸೆಡಾನ್, ಎಂಪಿವಿ ಮತ್ತು ಸೂಪರ್ ಕಾರು ಮಾದರಿಗಳು ಸಹ ಒಳಗೊಂಡಿದ್ದು, ಕಂಪನಿಯು ಶೀಘ್ರದಲ್ಲಿಯೇ ತನ್ನ ಬಹುನೀರಿಕ್ಷಿತ ಇಕ್ಯೂಎಸ್ ಎಸ್‌ಯುವಿ ಮಾದರಿಯನ್ನು ಭಾರತದಲ್ಲೂ ಬಿಡುಗಡೆ ಮಾಡುತ್ತಿದೆ.

ಮಾಹಿತಿಗಳ ಪ್ರಕಾರ ಹೊಸ ಕಾರು ಮಾದರಿಯು ಮುಂದಿನ ತಿಂಗಳು 24ರಂದು ಭಾರತದಲ್ಲಿ ಬಿಡುಗಡೆಯಾಗಲಿದ್ದು, ಹೊಸ ಕಾರು ಮಾದರಿಯು ಇಕ್ಯೂಸಿ 400 ಮಾದರಿಯೆಂತೆ ಹಲವು ಪ್ರಾಯೋಗಿಕ ಅಂಶಗಳೊಂದಿಗೆ ಭಾರತದಲ್ಲಿ ಭಾರೀ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ಹೊಸ ಇಕ್ಯೂಎಸ್ ಎಸ್‌ಯುವಿ ಮಾದರಿಯು ಕಳೆದ ವರ್ಷ ಅನಾವರಣಗೊಂಡಿದ್ದ ಹೊಸ ಇಕ್ಯೂಎಸ್ ಸೆಡಾನ್ ಮಾದರಿಯನ್ನು ಆಧರಿಸಿ ನಿರ್ಮಾಣಗೊಂಡಿದ್ದು, ಪ್ರಮುಖ ತಾಂತ್ರಿಕ ಸೌಲಭ್ಯಗಳನ್ನು ಹೊಂದಿರುವ ಹೊಸ ಕಾರು ಮಾದರಿಯು EVA2 ಪ್ಲಾಟ್‌ಫಾರ್ಮ್ ಅಡಿ ಅಭಿವೃದ್ದಿಗೊಂಡಿದೆ.

ಅತ್ಯಂತ ಶಕ್ತಿಶಾಲಿ ಬ್ಯಾಟರಿ ಮತ್ತು ಎಲೆಕ್ಟ್ರಿಕ್ ಪವರ್‌ಟ್ರೇನ್‌ನೊಂದಿಗೆ ಪರಿಚಯಿಸಲಾಗುತ್ತಿರುವ ಹೊಸ ಕಾರಿನಲ್ಲಿ 108.7 kWh ಲಿಥಿಯಂ-ಐಯಾನ್ ಬ್ಯಾಟರಿಯನ್ನು ಬಳಸಲಾಗಿದೆ. ಇದು ಗ್ರಾಹಕರ ಬೇಡಿಕೆಯೆಂತೆ ಎರಡು ಟ್ರಿಮ್‌ಗಳಲ್ಲಿ ಲಭ್ಯವಿರಲಿದ್ದು, ಇಕ್ಯೂಎಸ್ 450 ಪ್ಲಸ್ ಮತ್ತು ಇಕ್ಯೂಎಸ್ 580 ಮಾದರಿಗಳೊಂದಿಗೆ ಹೈ ಎಂಡ್ ಮಾದರಿಯಲ್ಲಿ 4-ವೀಲ್ ಡ್ರೈವ್ ವ್ಯವಸ್ಥೆಯನ್ನು ಜೋಡಿಸಲಾಗಿದೆ.

ಇಕ್ಯೂಎಸ್ 450 ಪ್ಲಸ್ ಮೂಲ ರೂಪಾಂತರವಾಗಿದ್ದು, ಇದು ಹಿಂದಿನ ಆಕ್ಸಲ್‌ನಲ್ಲಿ ಎಲೆಕ್ಟ್ರಿಕ್ ಮೋಟರ್ ಅನ್ನು ಪಡೆಯುತ್ತದೆ. ಈ ಕಾರು 324 ಬಿಎಚ್‌ಪಿ ಪವರ್ ಮತ್ತು 550 ನ್ಯೂಟನ್ ಮೀಟರ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಹೈ ಎಂಡ್ ಮಾದರಿಯು 509 ಬಿಎಚ್‌ಪಿ ಪವರ್ ಮತ್ತು 828 ಎನ್ಎಂ ಟಾರ್ಕ್ ಉತ್ಪಾದಿಸುವ ಮೂಲಕ 4.1 ಸೆಕೆಂಡುಗಳಲ್ಲಿ ಗಂಟೆಗೆ 0-100 ಕಿಮೀ ವೇಗವನ್ನು ಪಡೆದುಕೊಳ್ಳಲಿದ್ದು, ಇಕೋ ಮೋಡ್‌ನಲ್ಲಿ ಇದು ಗರಿಷ್ಠ 600 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.

ಮೈಲೇಜ್ ಹೆಚ್ಚಿಸುವುದಕ್ಕಾಗಿ ಹೊಸ ಕಾರಿನಲ್ಲಿ ಗಾಳಿಯ ಒತ್ತಡವನ್ನು ಕಡಿಮೆ ಮಾಡಲು ಏರೋಡೈನಾಮಿಕ್ ವಿನ್ಯಾಸವನ್ನು ಬಳಸಲಾಗಿದ್ದು, ಸೆಡಾನ್ ಮಾದರಿಯೆಂತೆಯೇ ಹಲವು ಐಷಾರಾಮಿ ಸೌಲಭ್ಯಗಳನ್ನು ಹೊಂದಿರುವ ಹೊಸ ಕಾರು ಮೂರನೇ ಸಾಲಿನ ಆಯ್ಕೆ ಪಡೆದುಕೊಳ್ಳಲಿದೆ.

ಜೊತೆಗೆ ಮರ್ಸಿಡಿಸ್ ಸಾಂಪ್ರದಾಯಿಕ ಎಸ್‌ಯುವಿ ಮಾದರಿಗಳಲ್ಲಿ ಕಂಡುಬರುವ 56 ಇಂಚಿನ MBUX ಹೈಪರ್‌ಸ್ಕ್ರೀನ್ ಅನ್ನು ಹೊಂದಿದ್ದು, ಅದು ಸಂಪೂರ್ಣ ಡ್ಯಾಶ್‌ಬೋರ್ಡ್ ಅನ್ನು ಒಂದೇ ಪರದೆಯಂತೆ ಡಿಜಿಟಲೀಕರಣಗೊಳಿಸಲಾಗಿದೆ.

ಹೊಸ ಕಾರಿನ ಮುಂಭಾಗದ ಪ್ರಯಾಣಿಕರಿಗೂ ಅನುಕೂರವಾಗುವಂತೆ 12.3-ಇಂಚಿನ OLED ಡಿಸ್ಪ್ಲೇ ಹೊಂದಿಸಲಾಗಿದ್ದು, ಇದರಲ್ಲಿ ಪ್ರಯಾಣಿಕರು ಇಂಟರ್ನೆಟ್ ಬಳಸಿ ಬ್ರೌಸ್ ಮಾಡಬಹುಗಾದಿದೆ. ಇದಲ್ಲದೇ ಕಾರಿನೊಳಗೆ ಕ್ಯಾಮೆರಾ ಜೋಡಿಸಲಾಗಿದ್ದು, ಇದು ಚಾಲಕನು ಪರದೆಯತ್ತ ನೋಡುತ್ತಿದ್ದಾನೆಯೇ ಅಥವಾ ಇಲ್ಲವೇ ಎಂಬುದನ್ನು ಪತ್ತೆ ಮಾಡುತ್ತದೆ ಪ್ರಯಾಣಿಕರನ್ನು ಎಚ್ಚರಗೊಳಿಸುತ್ತದೆ.

ಇದರೊಂದಿಗೆ ಹೊಸ ಕಾರಿನ ಒಳಭಾಗದಲ್ಲಿ ಮರ್ಸಿಡಿಸ್-ಬೆಂಝ್ ಕಂಪನಿಯು ಐಷಾರಾಮಿ ಕ್ಯಾಬಿನ್ ಸೌಲಭ್ಯದೊಂದಿಗೆ ಅತ್ಯುತ್ತಮ ಲೆದರ್ ಸೀಟುಗಳು ಮತ್ತು ಫ್ಲಕ್ಸ್‌ವುಡ್ ಬಳಸಿದ್ದು, ಕಾರಿನ ಒಳಭಾಗಕ್ಕೆ ಮತ್ತಷ್ಟು ಐಷಾರಾಮಿ ಅನುಭವವನ್ನು ನೀಡಲು ಏಳು ವಿಭಿನ್ನ ಬಣ್ಣಗಳ ಆಂಬಿಯೆಂಟ್ ಲೈಟಿಂಗ್ಸ್, ಹಿಂಭಾಗದ ಆಸನಗಳಿಗೂ ಇನ್ಪೋಟೈನ್‌ಮೆಂಟ್ ಪ್ಯಾಕೇಜ್ ಆಯ್ಕೆಯನ್ನು ಸಹ ನೀಡಿದೆ.

ಇನ್ನು ಹೊಸ ಇವಿ ಕಾರುಗಳ ಯೋಜನೆಗಾಗಿ ಮರ್ಸಿಡಿಸ್ ಬೆಂಝ್ ಕಂಪನಿಯು ವಿಶ್ವಾದ್ಯಂತ ಕಾರ್ಯನಿರ್ವಹಣೆಯಲ್ಲಿರುವ ತನ್ನ ಪ್ರಮುಖ ಕಾರು ಉತ್ಪಾದನಾ ಘಟಕ ಉನ್ನತೀಕರಣಕ್ಕಾಗಿ ಅಂದಾಜು ರೂ. 3.50 ಲಕ್ಷ ಕೋಟಿ ಹೂಡಿಕೆ ಮಾಡುತ್ತಿದ್ದು, ಎಲೆಕ್ಟ್ರಿಕ್ ಪ್ಯಾಸೆಂಜರ್ ಕಾರುಗಳು, ಎಲೆಕ್ಟ್ರಿಕ್ ಸ್ಪೋರ್ಟ್ ವೆಹಿಕಲ್ ಮತ್ತು ಎಲೆಕ್ಟ್ರಿಕ್ ಕಮರ್ಷಿಯಲ್ ವೆಹಿಕಲ್ ವಿಭಾಗಗಳ ಮೇಲೆ ಪ್ರತ್ಯೇಕವಾಗಿ ಹೂಡಿಕೆ ಮಾಡುತ್ತಿದೆ.

ಸದ್ಯ ಇಕ್ಯೂಸಿ 400, ಇಕ್ಯೂಎ ಎಲೆಕ್ಟ್ರಿಕ್ ಕಾರುಗಳ ಮೂಲಕ ಜಾಗತಿಕ ಮಾರುಕಟ್ಟೆಗಳಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಹೊಸ ಉತ್ಪನ್ನಗಳಿಗಾಗಿ ಕಂಪನಿಯು ನಿರಂತರವಾಗಿ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಕೈಗೊಳ್ಳುತ್ತಿದೆ.


Click it and Unblock the Notifications








