ಸುರಕ್ಷಿತ ಕಾರು ಖರೀದಿಗಾಗಿ ಹೊಸ ವೈಶಿಷ್ಟ್ಯತೆಗಳನ್ನು ಒಳಗೊಂಡ ಎಂಜಿ ಎಕ್ಸ್‌ಪರ್ಟ್ ಪ್ಲಾಟ್‌ಫಾರ್ಮ್ ಆರಂಭ
ಎಂಜಿ ಮೋಟಾರ್ ಇಂಡಿಯಾ ಕಂಪನಿಯು ಕಾರು ಮಾರಾಟದಲ್ಲಿ ನಿರಂತರವಾಗಿ ಹೊಸ ಬದಲಾವಣೆಗಳನ್ನು ಪರಿಚಯಿಸುತ್ತಿದ್ದು, ಕಂಪನಿಯು ಕೋವಿಡ್ ಸಂದರ್ಭದಲ್ಲಿ ತನ್ನ ಸಂಭಾವ್ಯ ಗ್ರಾಹಕರಿಗೆ ಮನೆಯಲ್ಲಿಯೇ ಕುರಿತು ಶೋರೂಂ ಭೇಟಿ ಅನುಭವನ್ನು ನೀಡುವಂತಹ ಎಕ್ಸ್‌ಪರ್ಟ್ ಪ್ಲಾಟ್‌ಫಾರ್ಮ್ ಆರಂಭಿಸಿದೆ.

ಆಟೋ ಉದ್ಯಮವು ಕಳೆದ ಕೆಲ ವರ್ಷಗಳಲ್ಲಿ ಹಲವಾರು ಹೊಸ ಬದಲಾವಣೆಗಳಿಗೆ ಸಾಕ್ಷಿಯಾಗಿದ್ದು, ಹೊಸ ವಾಹನಗಳ ಮಾರಾಟವು ಪರಿಸ್ಥಿತಿಗೆ ಅನುಗುಣವಾಗಿ ಏರಿಳಿಕೆ ಆಗುತ್ತಿರುತ್ತದೆ. ಆದರೆ ಕೋವಿಡ್ ಪರಿಣಾಮದಿಂದಾಗಿ ಉಂಟಾದ ವಾಣಿಜ್ಯ ಚಟುವಟಿಕೆಗಳ ಹಿನ್ನಡೆಯನ್ನು ತಗ್ಗಿಸಲು ಆನ್‌ಲೈನ್ ಪ್ಲ್ಯಾಟ್‌ಫಾರ್ಮ್‌ಗಳು ಸಾಕಷ್ಟು ಬಳಕೆಯಾಗುತ್ತಿದ್ದು, ಇದು ಇ-ಕಾಮರ್ಸ್ ಸಂಸ್ಥೆಗಳಿಗೆ ಮಾತ್ರವಲ್ಲ ಆಟೋ ಉತ್ಪಾದನಾ ಕಂಪನಿಗಳಿಗೂ ವರವಾಗಿ ಪರಿಣಮಿಸಿತು.

ಹೊಸ ವಾಹನ ಖರೀದಿಗಾಗಿ ಬಹುತೇಕ ಗ್ರಾಹಕರು ನೇರವಾಗಿ ಮಾರಾಟ ಮಳಿಗೆಗಳಿಗೆ ಭೇಟಿ ನೀಡುವುದು ಸಾಮಾನ್ಯವಾಗಿರುತ್ತದೆ. ಆದರೆ ಕೋವಿಡ್ ಪರಿಣಾಮ ಗ್ರಾಹಕರನ್ನು ಮಳಿಗೆಗಳಿಗೆ ಭೇಟಿ ನೀಡದೆ ವಾಹನ ಖರೀದಿ ಪ್ರಕ್ರಿಯೆಯತ್ತ ಸೆಳೆಯಲು ಆಟೋ ಕಂಪನಿಗಳು ಮಾಡಿದ ಹೊಸ ಪ್ರಯತ್ನವು ಇಂದು ಸಾಕಷ್ಟು ಪ್ರಯೋಜಕಾರಿಯಾಗಿದೆ.

ವೈರಸ್ ಹರಡುವಿಕೆಯ ಸಂದರ್ಭದಲ್ಲಿ ಮಾರಾಟ ಮಳಿಗೆಗಳಿಗೆ ಗ್ರಾಹಕರು ಭೇಟಿ ನೀಡದೆ ವಾಹನ ಖರೀದಿ ಪ್ರಕ್ರಿಯೆಯನ್ನು ಸರಳಗೊಳಿಸಲು ಆನ್‌ಲೈನ್ ಮಾರಾಟ ಮಳಿಗೆಗಳು ಸಾಕಷ್ಟು ಸಹಕಾರಿಯಾಗಿದ್ದು, ಬಳಕೆದಾರರ ಸಂಖ್ಯೆಯಲ್ಲೂ ಕೂಡಾ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ.

ಕೋವಿಡ್ ಹರಡುವಿಕೆಗೂ ಮೊದಲೇ ಹಲವಾರು ಆಟೋ ಕಂಪನಿಗಳು ಆನ್‌ಲೈನ್ ಪ್ಲ್ಯಾಟ್ ತೆರೆದಿದ್ದರೂ ಬಳಕೆದಾರರ ಸಂಖ್ಯೆಯು ತೀರಾ ವಿರಳವಾಗಿತ್ತು. ಆದರೆ ಕೋವಿಡ್ ಹೆಚ್ಚಳದ ನಂತರ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್‌ಗಳ ಬಳಕೆಯು ಹೆಚ್ಚಳವಾಗುತ್ತಿದ್ದು, ಎಂಜಿ ಮೋಟಾರ್ ಇಂಡಿಯಾ ಕೂಡಾ ಎಆರ್ ತಂತ್ರಜ್ಞಾನ ಪ್ರೇರಿತ ಎಂಜಿ ಎಕ್ಸ್‌ಪರ್ಟ್(MG eXpert) ವರ್ಚುವಲ್ ಶೋರೂಂ ಆರಂಭಿಸಿದೆ.

ಇದು ಡಿಜಿಟಲ್ ಪ್ಲಾಟ್‌ಫಾರ್ಮ್ ಆಗಿದ್ದರೂ ಕಾರು ಖರೀದಿ ಪ್ರಕ್ರಿಯೆಯನ್ನು ಹೆಚ್ಚು ನೈಜವಾಗಿಸಲು ಹಲವಾರು ಹೊಸ ವೈಶಿಷ್ಟ್ಯತೆ ನೀಡಲಾಗಿದ್ದು, ಈ ಪ್ಲಾಟ್‌ಫಾರ್ಮ್‌ನಲ್ಲಿ ಯಾವುದೇ ಕಾರು ಮಾದರಿಯನ್ನು ಆಯ್ಕೆ ಮಾಡುವ ಮೂಲಕ ವಿವಿಧ ರೂಪಾಂತರದ ಬೆಲೆ, ವೈಶಿಷ್ಟ್ಯಗಳು ಮತ್ತು ಎಲ್ಲಾ ಇತರೆ ಎಲ್ಲಾ ಮಾಹಿತಿಯನ್ನು ಪಡೆದುಕೊಳ್ಳಬಹುದು.

ಹೊಸ ಪ್ಲಾಟ್‌ಫಾರ್ಮ್‌ನಲ್ಲಿ ಕಾರಿನ ಎಲ್ಲಾ ಮಾಹಿತಿಯನ್ನು ಗ್ರಾಹಕರಿಗೆ ಕಂಪನಿಯ ನುರಿತ ಮಾರಾಟ ವಿಭಾಗದ ಅಧಿಕಾರಿಗಳು ಆಡಿಯೋ ದೃಶ್ಯ ಮಾಧ್ಯಮದ ಮೂಲಕ ಪ್ರತಿಯೊಂದು ಮಾಹಿತಿಯನ್ನು ಹಂಚಿಕೊಳ್ಳಲಿದ್ದು, ಜೊತೆಗೆ ಗ್ರಾಹಕರಿಗೆ ಇಎಂಐ ದರಗಳು ಮತ್ತು ಟೆಸ್ಟ್ ಡ್ರೈವ್‌ಗೆ ಸಂಬಂಧಿಸಿದ ಮಾಹಿತಿಯನ್ನು ಸಹ ನೀಡಲಾಗುತ್ತದೆ.

ಕಾರಿನ ಎಲ್ಲಾ ಮಾಹಿತಿಯನ್ನು ಪಡೆದುಕೊಂಡ ನಂತರ ನಿಮಗೆ ಇಷ್ಟವಾದಲ್ಲಿ ಮಾತ್ರ ಮುಂದಿನ ಖರೀದಿ ಪ್ರಕ್ರಿಯೆಗೆ ಒಪ್ಪಿಗೆ ಸೂಚಿಸಬಹುದಾಗಿದ್ದು, ಟೆಸ್ಟ್ ಡ್ರೈವ್ ವಾಹನವನ್ನು ಕೂಡಾ ಗ್ರಾಹಕರ ಬೇಡಿಕೆಯೆಂತೆ ಮನೆಬಾಗಿಲಿಗೆ ತಲುಪಿಸಲಾಗುತ್ತದೆ. ತದನಂತರ ಖರೀದಿ ಪ್ರಕ್ರಿಯೆ ಕೂಡಾ ಬಹುತೇಕ ಡಿಜಿಟಲ್ ಪ್ಲ್ಯಾಟ್‌ಫಾರ್ಮ್ ಮೂಲಕವೇ ನಡೆಯಲಿದ್ದು, ಕಾರು ಖರೀದಿಯ ವೇಳೆ ಗ್ರಾಹಕರು ಮತ್ತು ಸಿಬ್ಬಂದಿಯ ನೇರ ಭೇಟಿ ತಪ್ಪಿಸಲು ಈ ವಿಧಾನವು ಸಾಕಷ್ಟು ಸಹಕಾರಿಯಾಗುತ್ತದೆ.

ಎಂಜಿ ಮೋಟಾರ್ ಕಂಪನಿಯು ಸದ್ಯ ಆಯ್ದ ನಗರಗಳಲ್ಲಿ ಮಾತ್ರ ಹೊಸ ಸೇವೆಯನ್ನು ಪರಿಚಯಿಸಿದ್ದು, ಮುಂದಿನ ಎರಡು ತಿಂಗಳ ಅವಧಿಯಲ್ಲಿ ದೇಶಾದ್ಯಂತ ಹೊಸ ಡಿಜಿಟಲ್ ಪ್ಲ್ಯಾಟ್‌ಫಾರ್ಮ್‌ಗಳು ಸೇವೆಗಳನ್ನು ಆರಂಭಿಸುವುದಾಗಿ ಹೇಳಿಕೊಂಡಿದೆ.

ಇನ್ನು ಎಂಜಿ ಮೋಟಾರ್ ಇಂಡಿಯಾ ಕಂಪನಿಯು ಮುಂದಿನ ತಿಂಗಳು ಮಾರ್ಚ್‌ನಲ್ಲಿ ನವೀಕರಿಸಿದ 2022ರ ಜೆಡ್ಎಸ್ ಎಲೆಕ್ಟ್ರಿಕ್ ಎಸ್‌ಯುವಿ ಕಾರು ಮಾದರಿಯನ್ನು ಬಿಡುಗಡೆಗೆ ಸಿದ್ದವಾಗುತ್ತಿದ್ದು, ಹೊಸ ಕಾರು ಹಲವಾರು ಹೊಸ ಸೌಲಭ್ಯಗಳೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದೆ.

2022ರ ಜೆಡ್ಎಸ್ ಎಲೆಕ್ಟ್ರಿಕ್ ಎಸ್‌ಯುವಿ ಮಾದರಿಯು ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ಮಹತ್ವದ ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದ್ದು, ನವೀಕರಿಸಿದ ಹೊಸ ಕಾರಿನಲ್ಲಿ ವಿಸ್ತರಿತ ಬ್ಯಾಟರಿ ಪ್ಯಾಕ್ ಜೊತೆಗೆ ಇನ್ನು ಹಲವು ಹೊಸ ಬದಲಾವಣೆಗಳನ್ನು ಪರಿಚಯಿಸಿರುವುದಾಗಿ ಎಂಜಿ ಮೋಟಾರ್ ಕಂಪನಿಯು ಮಾಹಿತಿ ಹಂಚಿಕೊಂಡಿದೆ.

ಹೊಸ ಕಾರು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಾದರಿಗಿಂತಲೂ ಹೆಚ್ಚು ಪ್ರೀಮಿಯಂ ಮಾದರಿಯಾಗಿರಲಿದ್ದು, ಉನ್ನತೀಕರಿಸಿದ ಬ್ಯಾಟರಿ ಪ್ಯಾಕ್ ಜೊತೆಗೆ ಹೊಸ ಕಾರಿನಲ್ಲಿ ಹಲವು ಸುಧಾರಿತ ತಂತ್ರಜ್ಞಾನ ಪ್ರೇರಿತ ತಾಂತ್ರಿಕ ಸೌಲಭ್ಯಗಳನ್ನು ನೀಡಲಾಗಿದೆ.

ಐಷಾರಾಮಿ ವೈಶಿಷ್ಟ್ಯಗಳೊಂದಿಗೆ ಅಭಿವೃದ್ದಿಗೊಂಡಿರುವ ಹೊಸ ಕಾರಿನಲ್ಲಿ ಸುಧಾರಿತ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ ಕೂಡಾ ಅಳವಡಿಸಿದ್ದು, 10.1 ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ ಅತ್ಯುತ್ತಮ ಗ್ರಾಫಿಕ್ಸ್ ಮತ್ತು ಮೆನು ಲೇಔಟ್‌ನೊಂದಿಗೆ ಆ್ಯಪಲ್ ಕಾರ್‌ಪ್ಲೇ ಹಾಗೂ ಆಂಡ್ರಾಯಿಡ್ ಆಟೋ ಜೋಡಣೆ ಹೊಂದಿದೆ.

ಇದರ ಜೊತೆ ಉನ್ನತೀಕರಿಸಿದ ಮಾದರಿಯಲ್ಲಿ ಅತ್ಯುತ್ತಮ ದರ್ಜೆಯ ಹಿಂಭಾಗದ ಆಸನದ ಸೌಕರ್ಯದ ವೈಶಿಷ್ಟ್ಯಗಳನ್ನು ನೀಡಲಾಗಿದ್ದು, ಹಿಂದಿನ ಸೀಟ್‌ನಲ್ಲಿ ಸೆಂಟರ್ ಆರ್ಮ್ ರೆಸ್ಟ್, ಕಪ್ ಹೋಲ್ಡರ್ ಮತ್ತು ಹೆಡ್‌ರೆಸ್ಟ್ ಒಳಗೊಂಡಂತೆ ಹಿಂಬದಿಯ ಪ್ರಯಾಣಿಕರಿಗೂ ಏರ್ ಕಂಡಿಷನ್ ವೆಂಟ್ಸ್ ಸೇರಿದಂತೆ ಪ್ರಮುಖ ಬದಲಾವಣೆಗಳನ್ನು ಪಡೆದುಕೊಂಡಿದೆ.

ಸದ್ಯ ಮಾರುಕಟ್ಟೆಯಲ್ಲಿರುವ ಜೆಡ್ಎಸ್ ಎಲೆಕ್ಟ್ರಿಕ್ ಕಾರು ಮಾದರಿಯು 44.5 kWh ಬ್ಯಾಟರಿ ಪ್ಯಾಕ್ ಮೂಲಕ ಪ್ರತಿ ಚಾರ್ಚ್‌ಗೆ 419 ಕಿ.ಮೀ ಮೈಲೇಜ್ ಹಿಂದಿರುಗಿಸುವ ಸಾಮರ್ಥ್ಯ ಹೊಂದಿದ್ದು, 2022ರ ಮಾದರಿಯು 51 kWh ಬ್ಯಾಟರಿ ಪ್ಯಾಕ್ ಮೂಲಕ ಹೊಸ ಕಾರಿನ ಮೈಲೇಜ್ ರೇಂಜ್ ಇದೀಗ ಪ್ರತಿ ಚಾರ್ಜ್‌ಗೆ 480 ಕಿ.ಮೀ ಗೆ ಹೆಚ್ಚಳವಾಗಿದೆ.


Click it and Unblock the Notifications