ಜೆಡ್ಎಸ್ ಇವಿ ಗ್ರಾಹಕರಿಗಾಗಿ ಉಚಿತ ಚಾರ್ಜಿಂಗ್ ಸೌಲಭ್ಯ ಪರಿಚಯಿಸಿದ ಎಂಜಿ ಮೋಟಾರ್
ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ಎಂಜಿ ಮೋಟಾರ್ ಕಂಪನಿಯು ತನ್ನ ಗ್ರಾಹಕರಿಗೆ ಹೊಸ ಯೋಜನೆಯೊಂದನ್ನು ಪರಿಚಯಿಸಿದ್ದು, ಮಾರ್ಚ್ ಅಂತ್ಯವರೆಗೂ ಉಚಿತ ಚಾರ್ಜಿಂಗ್ ಕೊಡುಗೆಯನ್ನು ಘೋಷಿಸಿದೆ.

ಉಚಿತ ಚಾರ್ಜಿಂಗ್ ಸೌಲಭ್ಯಕ್ಕಾಗಿ ಎಂಜಿ ಕಂಪನಿಯು ಫೋರ್ಟೆಮ್ ಚಾರ್ಜ್ ಮತ್ತು ಡ್ರೈವ್ ಇಂಡಿಯಾ(Fortem Charge & Drive India) ಕಂಪನಿಯೊಂದಿಗೆ ಹೊಸ ಪಾಲುದಾರಿಕೆ ಘೋಷಣೆ ಮಾಡಿದ್ದು, ಉಚಿತ ಕೊಡುಗೆ ಪಡೆದುಕೊಳ್ಳಲು ಫೋರ್ಟೆಮ್ ಚಾರ್ಜ್ ಮತ್ತು ಡ್ರೈವ್ ಇಂಡಿಯಾ ಮೊಬೈಲ್ ಅಪ್ಲಿಕೇಶನ್‌ನೊಂದಿಗೆ ಡೌನ್‌ಲೋಡ್ ಮಾಡಿಕೊಂಡು ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ.

ಈ ಉಚಿತ ಕೊಡುಗೆಯನ್ನು ಬಳಸಿಕೊಳ್ಳಲು CCS ಚಾರ್ಜಿಂಗ್ ಪ್ರಕಾರಕ್ಕೆ ಹೊಂದಿಕೆಯಾಗುವ ಚಾರ್ಜರ್‌ಗಳಿಗೆ ಮಾತ್ರ ಸೀಮಿತಗೊಳಿಸಲಾಗಿದ್ದು, ಹೊಸ ಚಾರ್ಜಿಂಗ್ ಸೌಲಭ್ಯದ ಮೂಲಕ ಗ್ರಾಹಕರು ಕೆಲವೇ ನಿಮಿಷಗಳಲ್ಲಿ ಹೆಚ್ಚಿನ ಚಾರ್ಜಿಂಗ್ ಮಾಡಬಹುದಾಗಿದೆ.

ಇದು ಹೊಸ ಮತ್ತು ಅಸ್ತಿತ್ವದಲ್ಲಿರುವ ಜೆಡ್ಎಸ್ ಇವಿ ಕಾರು ಮಾಲೀಕರಿಗೆ ಅನ್ವಯಿಸಲಿದ್ದು,ಇದರೊಂದಿಗೆ ಕಂಪನಿಯು ತನ್ನ ಗ್ರಾಹಕರಿಗೆ ಸ್ಟ್ಯಾಂಡರ್ಡ್ 15A ಪವರ್ ಸಾಕೆಟ್‌ಗೆ ಪ್ಲಗ್ ಮಾಡಬಹುದಾದ ಪೋರ್ಟಬಲ್ ಚಾರ್ಜರ್ ಅನ್ನು ಕಂಪನಿಯು ಸಹ ನೀಡುತ್ತಿದೆ.

ಎಸಿ ಚಾರ್ಜರ್ ಮೂಲಕ ಪೂರ್ತಿಯಾಗಿ ಚಾರ್ಜ ಮಾಡಲು 18 ರಿಂದ 19 ಗಂಟೆಗಳ ಕಾಲ ಸಮಯಾವಕಾಶ ತೆಗೆದುಕೊಳ್ಳಲಿದ್ದರೆ ಡಿಸಿ ಫಾಸ್ಟ್ ಚಾರ್ಜಿಂಗ್ ಮೂಲಕ ಕೇವಲ 50 ನಿಮಿಷಗಳಲ್ಲಿ ಶೇ.80 ರಷ್ಟು ಚಾರ್ಜ್ ಮಾಡಬಹುದಾಗಿದ್ದು, ಶೀಘ್ರದಲ್ಲಿಯೇ ಕಂಪನಿಯು ಉನ್ನತೀಕರಿಸಿದ ಜೆಡ್ಎಸ್ ಇವಿ ಬಿಡುಗಡೆಯ ಮೂಲಕ ಚಾರ್ಜಿಂಗ್ ಸೌಲಭ್ಯವನ್ನು ಸುಧಾರಿಸುವ ಸುಳಿವು ನೀಡಿದೆ.

2022ರ ಜೆಡ್ಎಸ್ ಎಲೆಕ್ಟ್ರಿಕ್ ಎಸ್‌ಯುವಿ ಮಾದರಿಯು ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ಮಹತ್ವದ ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದ್ದು, ನವೀಕರಿಸಿದ ಹೊಸ ಕಾರಿನಲ್ಲಿ ವಿಸ್ತರಿತ ಬ್ಯಾಟರಿ ಪ್ಯಾಕ್ ಜೊತೆಗೆ ಇನ್ನು ಹಲವು ಹೊಸ ಬದಲಾವಣೆಗಳನ್ನು ಪರಿಚಯಿಸಿರುವುದಾಗಿ ಎಂಜಿ ಮೋಟಾರ್ ಕಂಪನಿಯು ಮಾಹಿತಿ ಹಂಚಿಕೊಂಡಿದೆ.

ಭಾರತದಲ್ಲಿ ಇದುವರೆಗೆ 4 ಸಾವಿರ ಯುನಿಟ್ ಮಾರಾಟ ಗುರಿಸಾಧಿಸಿರುವ ಜೆಡ್ಎಸ್ ಇವಿ ಮಾದರಿಯು ಹೊಸ ಆವೃತ್ತಿಯೊಂದಿಗೆ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಿದ್ದು, ಹೊಸ ಕಾರು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಾದರಿಗಿಂತಲೂ ಹೆಚ್ಚು ಪ್ರೀಮಿಯಂ ಮಾದರಿಯಾಗಿರಲಿದೆ.

ಪ್ರೀಮಿಯಂ ಮಾದರಿಗೆ ಪೂರಕವಾಗಿ ಬಣ್ಣದ ಆಯ್ಕೆಯನ್ನು ಸಹ ವಿಸ್ತರಿಸಿರುವ ಎಂಜಿ ಮೋಟಾರ್ ಕಂಪನಿಯು ಹೊಸ ಕಾರಿನಲ್ಲಿ ಈ ಹಿಂದಿನ ರೆಡ್, ವೈಟ್ ಮತ್ತು ಪೊಲಾರ್ ವೈಟ್ ಬಣ್ಣಗಳ ಜೊತೆಗೆ ಹೊಸ ಮಾದರಿಯಲ್ಲಿ ಸಿಲ್ವರ್, ಬ್ರೌನ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರಲಿದೆ ಎನ್ನಲಾಗಿದೆ.

ಇದರೊಂದಿಗೆ ಐಷಾರಾಮಿ ವೈಶಿಷ್ಟ್ಯಗಳೊಂದಿಗೆ ಅಭಿವೃದ್ದಿಗೊಂಡಿರುವ ಹೊಸ ಕಾರಿನಲ್ಲಿ ಸುಧಾರಿತ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ ಕೂಡಾ ಅಳವಡಿಸಿದ್ದು, 10.1 ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ ಅತ್ಯುತ್ತಮ ಗ್ರಾಫಿಕ್ಸ್ ಮತ್ತು ಮೆನು ಲೇಔಟ್‌ನೊಂದಿಗೆ ಆ್ಯಪಲ್ ಕಾರ್‌ಪ್ಲೇ ಹಾಗೂ ಆಂಡ್ರಾಯಿಡ್ ಆಟೋ ಜೋಡಣೆ ಹೊಂದಿದೆ.

ಇದರ ಜೊತೆ ಉನ್ನತೀಕರಿಸಿದ ಮಾದರಿಯಲ್ಲಿ ಅತ್ಯುತ್ತಮ ದರ್ಜೆಯ ಹಿಂಭಾಗದ ಆಸನದ ಸೌಕರ್ಯದ ವೈಶಿಷ್ಟ್ಯಗಳನ್ನು ನೀಡಲಾಗಿದ್ದು, ಹಿಂದಿನ ಸೀಟ್‌ನಲ್ಲಿ ಸೆಂಟರ್ ಆರ್ಮ್ ರೆಸ್ಟ್, ಕಪ್ ಹೋಲ್ಡರ್ ಮತ್ತು ಹೆಡ್‌ರೆಸ್ಟ್ ಒಳಗೊಂಡಂತೆ ಹಿಂಬದಿಯ ಪ್ರಯಾಣಿಕರಿಗೂ ಏರ್ ಕಂಡಿಷನ್ ವೆಂಟ್ಸ್ ಸೇರಿದಂತೆ ಪ್ರಮುಖ ಬದಲಾವಣೆಗಳನ್ನು ಪಡೆದುಕೊಂಡಿದೆ.

ಇನ್ನು ಸದ್ಯ ಮಾರುಕಟ್ಟೆಯಲ್ಲಿರುವ ಜೆಡ್ಎಸ್ ಎಲೆಕ್ಟ್ರಿಕ್ ಕಾರು ಮಾದರಿಯು 44.5 kWh ಬ್ಯಾಟರಿ ಪ್ಯಾಕ್ ಮೂಲಕ ಪ್ರತಿ ಚಾರ್ಚ್‌ಗೆ 419 ಕಿ.ಮೀ ಮೈಲೇಜ್ ಹಿಂದಿರುಗಿಸುವ ಸಾಮರ್ಥ್ಯ ಹೊಂದಿದ್ದು, 2022ರ ಮಾದರಿಯು 51 kWh ಬ್ಯಾಟರಿ ಪ್ಯಾಕ್ ಮೂಲಕ ಹೊಸ ಕಾರಿನ ಮೈಲೇಜ್ ರೇಂಜ್ ಇದೀಗ ಪ್ರತಿ ಚಾರ್ಜ್‌ಗೆ 480 ಕಿ.ಮೀ ಗೆ ಹೆಚ್ಚಳವಾಗಿದೆ.

ಮೈಲೇಜ್ ಹೆಚ್ಚಳದೊಂದಿಗೆ ಕಾರಿನ ಪರ್ಫಾಮೆನ್ಸ್ ಕೂಡಾ ಸಾಕಷ್ಟು ಸುಧಾರಣೆಗೊಂಡಿರುವುದು ಎಲೆಕ್ಟ್ರಿಕ್ ಎಸ್‌ಯುವಿ ಪ್ರಿಯರನ್ನು ಸೆಳೆಯಲಿದ್ದು, ಹೊಸ ಮಾದರಿಯು ಎಂಜಿ ಮೋಟಾರ್ ಕಂಪನಿಗೆ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಿದೆ.

ಜೊತೆಗೆ ಹೊಸ ಜೆಡ್ಎಸ್ ಇವಿ ಕಾರಿನಲ್ಲಿ ಎಂಜಿ ಕಂಪನಿಯು ಆಸ್ಟರ್ ಎಸ್‌ಯುವಿ ನೀಡಲಾಗಿರುವ ಭಾರತದ ಮೊದಲ ವ್ಯಯಕ್ತಿಕರಣಗೊಳಿಸಿದ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಸೌಲಭ್ಯವನ್ನು ಜೋಡಣೆ ಮಾಡುತ್ತಿದ್ದು, ಲೆವಲ್ 2 ಅಡ್ವಾನ್ಸ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ(ಎಡಿಎಎಸ್) ಹೊಸ ಕಾರಿಗೆ ಮತ್ತಷ್ಟು ಸುರಕ್ಷತೆ ನೀಡಲಿದೆ.

ಹೀಗಾಗಿ 2022ರ ಜೆಡ್ಎಸ್ ಎಲೆಕ್ಟ್ರಿಕ್ ಕಾರು ಮಾದರಿಯು ಹೆಚ್ಚಿನ ಮಟ್ಟದ ಮೈಲೇಜ್ ರೇಂಜ್‌ನೊಂದಿಗೆ ಸುರಕ್ಷತೆಯಲ್ಲೂ ಗಮನಸೆಳೆಯಲಿದ್ದು, ಹೊಸ ಕಾರು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಾದರಿಗಿಂತಲೂ ರೂ. 1.50 ಲಕ್ಷದಿಂದ ರೂ. 2 ಲಕ್ಷದ ತನಕ ಹೆಚ್ಚುವರಿ ಬೆಲೆ ಹೊಂದಬಹುದಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ ಜೆಡ್ಎಸ್ ಮಾದರಿಯು ವಿವಿಧ ಮಾದರಿಯೊಂದಿಗೆ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 21.49 ಲಕ್ಷದಿಂದ ರೂ. 25.18 ಲಕ್ಷ ಬೆಲೆ ಹೊಂದಿದ್ದು, ಹೊಸ ಮಾದರಿಯು ಮತ್ತಷ್ಟು ದುಬಾರಿಯಾಗಿರಲಿದೆ.


Click it and Unblock the Notifications