ಹೊಸ ವಿನ್ಯಾಸ, ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಬಿಡುಗಡೆಗೊಂಡ 2022ರ ಮಾರುತಿ ಸುಜುಕಿ ಎರ್ಟಿಗಾ
ಮಾರುತಿ ಸುಜುಕಿ(Maruti Suzuki) ಕಂಪನಿಯು ತನ್ನ ಜನಪ್ರಿಯ ಎಂಪಿವಿ ಮಾದರಿಯಾದ ಎರ್ಟಿಗಾ 2022ರ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಹೊಸ ಕಾರು ಈ ಬಾರಿ ಹಲವಾರು ಹೊಸ ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

2022ರ ಎರ್ಟಿಗಾದಲ್ಲಿ ಮಾರುತಿ ಸುಜುಕಿ ಕಂಪನಿಯು ಎಂಜಿನ್ ಬದಲಾವಣೆ ಸೇರಿದಂತೆ ಹಲವಾರು ಹೆಚ್ಚುವರಿ ಸುರಕ್ಷಾ ಸೌಲಭ್ಯಗಳು ಮತ್ತು ಪ್ರಮುಖ ಪ್ರೀಮಿಯಂ ಸೌಲಭ್ಯಗಳನ್ನು ಅಳವಡಿಸಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 8.35 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 12.79 ಲಕ್ಷ ಬೆಲೆ ಹೊಂದಿದೆ.

ಹೊಸ ಎರ್ಟಿಗಾ ಮಾದರಿಯು ಈ ಹಿಂದಿನಂತೆ ಎಲ್ಎಕ್ಸ್ಐ, ವಿಎಕ್ಸ್ಐ, ಜೆಡ್ಎಕ್ಸ್ಐ ಮತ್ತು ಜೆಡ್‌ಎಕ್ಸ್ಐ ಪ್ಲಸ್ ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ವಾಣಿಜ್ಯ ಬಳಕೆದಾರರಿಗಾಗಿಯೇ ಪ್ರತ್ಯೇಕವಾಗಿ ಎರ್ಟಿಗಾ ಟೂರ್ ಎಂ ವೆರಿಯೆಂಟ್ ಮಾರಾಟಗೊಳಿಸಲಿದೆ.

2022ರ ಎರ್ಟಿಗಾ ಮಾದರಿಯ ನವೀಕೃತ ಪೆಟ್ರೋಲ್ ಎಂಜಿನ್ ಜೊತೆಗೆ ಸಿಎನ್‌ಜಿ ಮಾದರಿಯ ಆಯ್ಕೆಯನ್ನು ಸಹ ಹೊಂದಿದ್ದು, ಹೊಸ ಮಾದರಿಯಲ್ಲಿ ಈ ಹಿಂದಿನ 1.5 ಲೀಟರ್ ಕೆ15ಬಿ ಪೆಟ್ರೋಲ್ ಎಂಜಿನ್ ಬದಲಾಗಿ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಪ್ರೇರಿತ 1.5 ಲೀಟರ್ ಕೆ15ಸಿ ಡ್ಯುಯಲ್‌ಜೆಟ್ ಪೆಟ್ರೋಲ್ ಮಾದರಿಯನ್ನು ಅಳವಡಿಸಲಾಗಿದೆ.

ಹೊಸ ಪೆಟ್ರೋಲ್ ಎಂಜಿನ್ ಮಾದರಿಯು ಹಳೆಯ ಮಾದರಿಗಿಂತಲೂ ಹೆಚ್ಚು ಇಂಧನ ದಕ್ಷತೆ ಹೊಂದಿದ್ದು, ಹೊಸ ಎಂಜಿನ್ ಮಾದರಿಯು 5-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 103 ಬಿಎಚ್‌ಪಿ ಮತ್ತು 136.8 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

2022ರ ಎರ್ಟಿಗಾ ಮಾದರಿಯು ಹೊಸ ಎಂಜಿನ್ ಆಯ್ಕೆಯೊಂದಿಗೆ ಪ್ರತಿ ಲೀಟರ್ ಪೆಟ್ರೋಲ್ ಮ್ಯಾನುವಲ್ ಮಾದರಿಯು 20.51 ಕಿ.ಮೀ ಮತ್ತು ಆಟೋಮ್ಯಾಟಿಕ್ ಮಾದರಿಯು 20.03 ಕಿ.ಮೀ ಮೈಲೇಜ್ ನೀಡಿದಲ್ಲಿ ಸಿಎನ್‌ಜಿ ಮಾದರಿಯು ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ಪ್ರತಿ ಕೆ.ಜಿ ಸಿಎನ್‌ಜಿಗೆ ಗರಿಷ್ಠ 26.11 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಇನ್ನುಳಿದಂತೆ ಹೊಸ ಕಾರು ಮಾದರಿಯಲ್ಲಿ ಮರುವಿನ್ಯಾಸಗೊಳಿಸಲಾದ ಕ್ರೋಮ್ ಒಡಲ್ಸ್ ಗ್ರಿಲ್, ಹೊಸ ವಿನ್ಯಾಸದ ಡ್ಯುಯಲ್ ಟೋನ್ ಅಲಾಯ್ ವ್ಹೀಲ್ ಆಕರ್ಷಕವಾಗಿದ್ದು, ಕಾರಿನ ಒಳಭಾಗದಲ್ಲೂ ಕೆಲವು ಬದಲಾವಣೆಗಳನ್ನು ಪರಿಚಯಿಸಲಾಗಿದೆ.

ಹೊಸ ಎರ್ಟಿಗಾ ಮಾದರಿಯ ಒಳಪ್ರವೇಶಿಸುತ್ತಿದ್ದಂತೆ ವುಡನ್ ಫಿನಿಶಿಂಗ್ ಹೊಂದಿರುವ ಡ್ಯಾಶ್‌ಬೋರ್ಡ್ ಮತ್ತು ಡ್ಯುಯಲ್-ಟೋನ್ ಫಿನಿಶಿಂಗ್ ಹೊಂದಿರುವ ಅಪ್ಹೋಲ್‌ಸ್ಟರಿ ಗಮನಸೆಳೆಯುತ್ತವೆ. ಜೊತೆಗೆ ಹೊಸ 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್‌ಪ್ಲೇಯು ಇದೀಗ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಸರ್ಪೊಟ್ ಹೊಂದಿದೆ.

ಹೊಸ ಇನ್ಫೋಟೈನ್‌ಮೆಂಟ್ ಡಿಸ್‌ಪ್ಲೇಯು ಇದೀಗ ವಾಯ್ಸ್ ಅಸಿಸ್ಟೆಂಟ್ ಸರ್ಪೊಟ್ ಹೊಂದಿದ್ದು, 'ಹೇ ಸುಜುಕಿ' ಕಾರ್ ಕನೆಕ್ಟ್ ಮೂಲಕ 40ಕ್ಕೂ ಸಂಪರ್ಕಿತ ಕಾರ್ ವೈಶಿಷ್ಟ್ಯಗಳನ್ನು ಸ್ಮಾರ್ಟ್‌ವಾಚ್ ಮೂಲಕ ಮಾಹಿತಿ ಪಡೆದುಕೊಳ್ಳಬಹುದಾಗಿದೆ.

ಇದರೊಂದಿಗೆ ಹೊಸ ಸುಜುಕಿ ಎರ್ಟಿಗಾದಲ್ಲಿ ಮಾರುತಿ ಸುಜುಕಿ ಕಂಪನಿಯು 4 ಏರ್‌ಬ್ಯಾಗ್‌ಗಳು (ಚಾಲಕ, ಮುಂಭಾಗದ ಪ್ರಯಾಣಿಕರು, ಮುಂಭಾಗದ ಬದಿಗಳು), ಇಎಸ್‌ಪಿ, ಹಿಲ್ ಹೋಲ್ಡ್ ಅಸಿಸ್ಟ್, ಇಬಿಡಿ ಜೊತೆಗೆ ಎಬಿಎಸ್, ಮಕ್ಕಳ ಆಸನಗಳಿಗಾಗಿ ಐಸೋಫಿಕ್ಸ್ ಆಂಕರ್‌ಗಳು ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್, ಸ್ಪೀಡ್ ಅಲರ್ಟ್, ಸೀಟ್ ಬೆಲ್ಟ್ ಅಲರ್ಟ್ ಸೇರಿದಂತೆ ಪ್ರಮುಖ ಸುರಕ್ಷಾ ಫೀಚರ್ಸ್ ಹೊಂದಿದೆ.

ಈ ಮೂಲಕ ಎರ್ಟಿಗಾ ಮಾದರಿಯು ಎಂಪಿವಿ ವಿಭಾಗದಲ್ಲಿ ತನ್ನ ಪ್ರಾಬಲ್ಯ ಮುಂದುವರಿಸಿದ್ದು, ಇದುವರೆಗೆ ಭಾರತದಲ್ಲಿ ಸುಮಾರು 7.50 ಲಕ್ಷ ಗ್ರಾಹಕರ ಹೊಂದಿರುವ ಎರ್ಟಿಗಾ ಮಾದರಿಯು ಅದರ ವಿನೂತನ ಶೈಲಿ, ಸ್ಥಳಾವಕಾಶ, ತಂತ್ರಜ್ಞಾನ, ಸುರಕ್ಷತೆ, ಸೌಕರ್ಯ ಮತ್ತು ಒಟ್ಟಿಗೆ ಪ್ರಯಾಣಿಸುವ ಅನುಕೂಲತೆಯನ್ನು ಮರು ವ್ಯಾಖ್ಯಾನಿಸುತ್ತದೆ.

ಮಾರುತಿ ಸುಜುಕಿ ಕಾರುಗಳ ಮಾರಾಟದಲ್ಲಿ ಸದ್ಯ ಉತ್ತಮ ಬೇಡಿಕೆ ಪಡೆದುಕೊಂಡಿರುವ ಎರ್ಟಿಗಾ ಮಾದರಿಯ ಪ್ರಮುಖ ಎರಡು ಮಾದರಿಯಲ್ಲಿ ಮಾರಾಟಗೊಳ್ಳುತ್ತಿದ್ದು, ಸಾಮಾನ್ಯ ಎರ್ಟಿಗಾ ಮಾದರಿಯು ಮಾರುತಿ ಸುಜುಕಿ ಅರೆನಾ ಮಾರಾಟ ಮಳಿಗೆಯಲ್ಲಿ ಪ್ರೀಮಿಯಂ ಆವತ್ತಿಯಾದ ಎಕ್ಸ್‌ಎಲ್ 6 ಮಾದರಿಯು ಮಾರುತಿ ನೆಕ್ಸಾ ಮಾರಾಟ ಮಳಿಗೆಗಳಲ್ಲಿ ಮಾರಾಟಗೊಳ್ಳುತ್ತಿದೆ.

ಎರ್ಟಿಗಾ ಮಾದರಿಯಲ್ಲಿ ತುಸು ಹೆಚ್ಚುವರಿ ಪ್ರೀಮಿಯಂ ವೈಶಿಷ್ಟ್ಯತೆಗಳನ್ನು ಹೊಂದಿರುವ ಎಕ್ಸ್‌ಎಲ್6 ಮಾದದರಿಯು ಕೂಡಾ ಉತ್ತಮ ಬೇಡಿಕೆ ಹೊಂದಿದ್ದು, ಇದೇ ತಿಂಗಳಾಂತ್ಯಕ್ಕೆ ಎಕ್ಸ್ಎಲ್6 ಹೊಸ ಮಾದರಿಯು ಕೂಡಾ ಪ್ರಮುಖ ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದೆ.


Click it and Unblock the Notifications