ಹೊಸ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಬುಕಿಂಗ್ ಆರಂಭ: ಮೇ 10ಕ್ಕೆ ಭಾರತದಲ್ಲಿ ಪಾದಾರ್ಪಣೆ
ಭಾರತದ ಅತಿದೊಡ್ಡ ಐಷಾರಾಮಿ ಕಾರು ತಯಾರಕ ಮರ್ಸಿಡಿಸ್-ಬೆಂಝ್ ಇಂಡಿಯಾ, ತನ್ನ ಹೊಸ ಸಿ-ಕ್ಲಾಸ್ ಸೆಡಾನ್ (2022 ಮರ್ಸಿಡಿಸ್-ಬೆಂಝ್ ಸಿ-ಕ್ಲಾಸ್)ನ ವಿಶೇಷ ಬುಕಿಂಗ್ ಅನ್ನು ಬುಧವಾರದಿಂದ (ಏಪ್ರಿಲ್ 13) ಮರ್ಸಿಡಿಸ್-ಬೆಂಝ್ ಗ್ರಾಹಕರಿಗಾಗಿ ಬಿಡುಗಡೆ ಮಾಡಿದೆ.

ಕಂಪನಿಯು ಈ ಹೊಸ ಸೆಡಾನ್ ಅನ್ನು 2022 ಏಪ್ರಿಲ್ 13 ರಿಂದ 30 ರವರೆಗೆ ಕಾಯ್ದಿರಿಸಲಿದೆ. ಉಳಿದ ಗ್ರಾಹಕರಿಗೆ ಮೇ 1, 2022 ರಿಂದ ಬುಕಿಂಗ್ ಪ್ರಾರಂಭವಾಗಲಿದೆ. ಕಾರಿನ ಬುಕಿಂಗ್ ಮೊತ್ತ 50,000 ರೂ. ನಿಗದಿಪಡಿಸಲಾಗಿದೆ. ಹೊಸ ತಲೆಮಾರಿನ ಬಹುನಿರೀಕ್ಷಿತ ಮರ್ಸಿಡಿಸ್-ಬೆಂಝ್ ಸಿ-ಕ್ಲಾಸ್ ಮೇ 10, 2022 ರಂದು ಭಾರತದಲ್ಲಿ ಪಾದಾರ್ಪಣೆ ಮಾಡಲಿದೆ.

ಇದು ತನ್ನ ಫ್ರ್ಯಾಂಚೈಸ್ ಪಾಲುದಾರ ನೆಟ್ವರ್ಕ್‌ನಲ್ಲಿ ಮತ್ತು ಮರ್ಸಿಡಿಸ್-ಬೆಂಝ್ ಇಂಡಿಯಾ ಆನ್ಲೈನ್ ಸ್ಟೋರ್‌ನಲ್ಲಿ ಡಿಜಿಟಲ್ ಆಗಿ ಲಭ್ಯವಾಗಲಿದೆ. ಹೊಸ ತಲೆಮಾರಿನ ಸಿ-ಕ್ಲಾಸ್ ಸೆಡಾನ್ ನಲ್ಲಿ ಸುಧಾರಿತ ತಂತ್ರಜ್ಞಾನವನ್ನು ಬಳಸಲಾಗಿದೆ. ಇದರ ಒಳಾಂಗಣವನ್ನು ಹೊಸ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ.

ಇದು ಪ್ರಮುಖ ಎಸ್-ಕ್ಲಾಸ್ ಸೆಡಾನ್ ಅನ್ನು ಹೋಲುತ್ತದೆ. ಹಾಗಾಗಿ ಸಿ-ಕ್ಲಾಸ್ ಅನ್ನು ಸಣ್ಣ ಎಸ್-ಕ್ಲಾಸ್ ಎಂದು ಕರೆಯಲಾಗುತ್ತದೆ. ವಿನ್ಯಾಸದ ದೃಷ್ಟಿಯಿಂದ ನೋಡುವುದಾದರೆ ಇದು ಪ್ರಮುಖ ಸಿ-ಕ್ಲಾಸ್ ಡಬ್ಲ್ಯೂ 223 ಅನ್ನು ಹೋಲುತ್ತದೆ. ಇದರ ಗಾತ್ರವನ್ನು ನೋಡುವುದಾದರೆ ಹಳೆಯ ಮಾದರಿಗಿಂತ ದೊಡ್ಡದಾಗಿದೆ.

ಇದು 4,793 ಎಂಎಂ ಉದ್ದ, 2,033 ಎಂಎಂ ಅಗಲ, 1,446 ಎಂಎಂ ಎತ್ತರ ಮತ್ತು 2,865 ಎಂಎಂ ವ್ಹೀಲ್ ಬೇಸ್ ಅನ್ನು ಹೊಂದಿದೆ. ಒಳಾಂಗಣದ ಬಗ್ಗೆ ಹೇಳುವುದಾದರೆ, ಈ ಸೆಡಾನ್ ಅವಂತ್-ದರ್ಜೆಯ ಕ್ಯಾಬಿನ್ ಅನ್ನು ಹೊಂದಿದೆ. ಇದು 12.3-ಇಂಚಿನ ಡ್ರೈವರ್ ಡಿಸ್ಪ್ಲೇ ಮತ್ತು ಫಿಂಗರ್‌ಪ್ರಿಂಟ್ ಸೆನ್ಸಾರ್‌ನೊಂದಿಗೆ 11.9-ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ಒಳಗೊಂಡಿರುವ ಸ್ಪ್ಲಿಟ್ ಡಿಸ್ಪ್ಲೇ ಸೆಟಪ್ ಅನ್ನು ಹೊಂದಿದೆ.

ಇದಲ್ಲದೆ ಸ್ಟೀರಿಂಗ್ ವ್ಹೀಲ್‌ನಲ್ಲಿ ಟಚ್-ಕೆಪಾಸಿಟಿವ್ ಸ್ವಿಚ್‌ಗಳು, ಅಡೆತಡೆಯಿಲ್ಲದ ಸೆಂಟರ್ ಕನ್ಸೋಲ್‌ಗಳು, ಹೊಸ ಏರ್-ಕಾನ್‌ವೆಂಟ್‌ಗಳು, ಆಂಬಿಯೆಂಟ್ ಲೈಟಿಂಗ್, ಸನ್‌ರೂಫ್, ಪವರ್ಡ್ ಫ್ರಂಟ್ ಸೀಟ್‌ಗಳನ್ನು ಒಳಗೊಂಡಿದೆ. ಕೆಲವು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ, ಸಿ-ಕ್ಲಾಸ್ ಸೆಡಾನ್ ಅನ್ನು ಹೈಬ್ರಿಡ್ ಎಂಜಿನ್ ಆಯ್ಕೆ ಸಿ 300 ಇ ನಲ್ಲಿ ನಾಲ್ಕು ಸಿಲಿಂಡರ್ ಆಯ್ಕೆಗಳಾದ C200, C300, C220d, C300d ನಲ್ಲಿ ಮಾರಾಟ ಮಾಡಲಾಗುತ್ತಿದೆ.

ಈ ಎಲ್ಲಾ ಎಂಜಿನ್‌ಗಳು 9-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್‌ಗಳನ್ನು ಹೊಂದಿವೆ. ಭಾರತೀಯ ಮಾರುಕಟ್ಟೆಯಲ್ಲಿ ಕಂಪನಿಯು ಹೊಸ ಸೆಡಾನ್ ಅನ್ನು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಮಾತ್ರ ಲಭ್ಯವಾಗುವಂತೆ ಮಾಡುತ್ತದೆ.

Mercedes-Benz ಇಂಡಿಯಾ ಭಾರತದಲ್ಲಿ ತನ್ನ ಅತ್ಯುತ್ತಮ ತ್ರೈಮಾಸಿಕ (ಜನವರಿ-ಮಾರ್ಚ್) ಮಾರಾಟವನ್ನು ವರದಿ ಮಾಡಿದೆ. ಕಂಪನಿಯು ಈ ತ್ರೈಮಾಸಿಕದಲ್ಲಿ 4,022 ಯುನಿಟ್ ಕಾರುಗಳನ್ನು ಜನವರಿಯಿಂದ ಮಾರ್ಚ್ 2022 ರವರೆಗೆ ವಿತರಿಸುವುದರೊಂದಿಗೆ ಅತ್ಯಧಿಕ ಬೆಳವಣಿಗೆಯನ್ನು ದಾಖಲಿಸಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ ಕಂಪನಿಯು 4,000 ಯುನಿಟ್‌ಗಳ ವಾಹನಗಳನ್ನು ಮಾರಾಟ ಮಾಡಿತ್ತು, ಇದು ಇದುವರೆಗಿನ ಅತಿ ಹೆಚ್ಚು ಯುನಿಟ್‌ಗಳ ಮಾರಾಟವಾಗಿದೆ. ತನ್ನ ಸೆಡಾನ್ ಮತ್ತು SUV ಗಳಿಗೆ ಭಾರತದಲ್ಲಿ ಹೆಚ್ಚಿನ ಬೇಡಿಕೆಯಿದೆ. ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.

ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ (ಜನವರಿ-ಮಾರ್ಚ್) Mercedes-Benz ನ E-ಕ್ಲಾಸ್ ಸೆಡಾನ್ ಕಂಪನಿಯ ಹೆಚ್ಚು ಮಾರಾಟವಾದ ಮಾದರಿಯಾಗಿದೆ, ಆದರೆ SUV ಮಾದರಿಗಳಲ್ಲಿ GLC ಮತ್ತು GLE ಮಾದರಿಗಳನ್ನು ಗ್ರಾಹಕರು ಹೆಚ್ಚು ಇಷ್ಟಪಟ್ಟಿದ್ದಾರೆ.

ಕಂಪನಿಯ ಪ್ರೀಮಿಯಂ ಎಎಂಜಿ ಮತ್ತು ಸೂಪರ್ ಐಷಾರಾಮಿ ಮಾದರಿಗಳ ಬೇಡಿಕೆಯು ಶೇಕಡಾ 35 ರಷ್ಟು ಹೆಚ್ಚಾಗಿದೆ. Mercedes-Benz ಈ ತಿಂಗಳಿನಿಂದ ತನ್ನ ವಾಹನಗಳ ಬೆಲೆಯ ಹೆಚ್ಚಳವನ್ನು ಘೋಷಿಸಬಹುದು. ಈ ಐಷಾರಾಮಿ ಕಾರು ತಯಾರಕ ಸಂಸ್ಥೆಯು ಏಪ್ರಿಲ್ 2022 ರಿಂದ ತನ್ನ ಕಾರುಗಳ ಬೆಲೆಯನ್ನು ಶೇಕಡಾ 3 ರಷ್ಟು ಹೆಚ್ಚಿಸುವುದಾಗಿ ಈ ಹಿಂದೆಯೇ ಹೇಳಿತ್ತು.

ಹೊಸ ವರ್ಷದ ಆರಂಭದಿಂದಲೂ ಕಂಪನಿಯು ತನ್ನ ಕಾರುಗಳ ಬೆಲೆಯನ್ನು ಎರಡನೇ ಬಾರಿಗೆ ಹೆಚ್ಚಿಸಿದೆ ಎಂಬುದು ಗಮನಿಸಬೇಕಾದ ಸಂಗತಿ. Mercedes-Benz ಇಂಡಿಯಾ ಪ್ರಕಾರ 50,000 ರಿಂದ 5 ಲಕ್ಷದವರೆಗೆ ಬೆಲೆ ಏರಿಕೆಯಾಗಬಹುದು.

ಇತ್ತೀಚೆಗೆ ಬಹುಭಾಷಾ ನಟಿ ಭಾವನಾ ಮೆನನ್ ಅವರು ಐಷಾರಾಮಿ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಕಾರನ್ನು ಖರೀದಿಸಿದ್ದಾರೆ. ಬೆಂಗಳೂರಿನ ಮರ್ಸಿಡಿಸ್ ಬೆಂಝ್ ಡೀಲರ್ ಆದ ಕ್ಷಯ ಮೋಟಾರ್ಸ್ ಅವರ ಬಳಿಯಿಂದ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಕಾರನ್ನು ಖರೀದಿಸಿದ್ದಾರೆ.

ಇನ್ನು ನಟಿ ಭಾವನಾ ಖರೀದಿಸಿರುವ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಕಾರು ಪೆಟ್ರೋಲ್ ಮತ್ತು ಡೀಸೆಲ್ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಆದರೆ ಇವರು ಯಾವ ಮಾದರಿಯನ್ನು ಖರೀದಿಸಿದ್ದಾರೆ ಎಂಬುದರ ಮಾಹಿತಿ ಲಭ್ಯವಾಗಿಲ್ಲ.


Click it and Unblock the Notifications








