ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ಎಲೆಕ್ಟ್ರಿಕ್ ವರ್ಷನ್ ಟಾಟಾ ಏಸ್ ಲಘು ವಾಣಿಜ್ಯ ವಾಹನ
ಟಾಟಾ ಮೋಟಾರ್ಸ್ ವಾಣಿಜ್ಯ ವಾಹನಗಳ ವಿಭಾಗದಲ್ಲಿನ ಮಾರಾಟದಲ್ಲಿ ಸದ್ಯ ಅಗ್ರಸ್ಥಾನದಲ್ಲಿರುವ ಏಸ್ ಲಘು ವಾಣಿಜ್ಯ ವಾಹನವು ಕಾಲ ಕಾಲಕ್ಕೆ ತಕ್ಕಂತೆ ಹಲವಾರು ಹೊಸ ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, ಕಂಪನಿಯು ಇದೀಗ ತನ್ನ ಜನಪ್ರಿಯ ವಾಣಿಜ್ಯ ವಾಹನ ಮಾದರಿಗಾಗಿ ಎಲೆಕ್ಟ್ರಿಕ್ ಮಾದರಿಯನ್ನು ಪರಿಚಯಿಸುವ ಸಿದ್ದತೆಯಲ್ಲಿದೆ.

ದೇಶಿಯ ಮಾರುಕಟ್ಟೆಯಲ್ಲಿ ಸದ್ಯ ಎಲೆಕ್ಟ್ರಿಕ್ ಕಾರುಗಳ ವಿಭಾಗದಲ್ಲಿ ಪ್ರಮುಖ ಇವಿ ಕಾರು ಮಾದರಿಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದ್ದು, ಶೀಘ್ರದಲ್ಲೇ ಕಂಪನಿಯು ವಾಣಿಜ್ಯ ವಾಹನ ವಿಭಾಗದಲ್ಲೂ ಎಲೆಕ್ಟ್ರಿಕ್ ಮಾದರಿಯ ಮೂಲಕ ಹೊಸ ಸಂಚಲನ ಮೂಡಿಸುವ ತವಕದಲ್ಲಿದೆ.

ಟಾಟಾ ಮೋಟಾರ್ಸ್ ಕಂಪನಿಯು ಜಿಪ್‌ಟ್ರಾನ್ ತಂತ್ರಜ್ಞಾನದ ಮೂಲಕ ಇವಿ ಕಾರುಗಳ ಮಾರಾಟದಲ್ಲಿ ಮುಂಚೂಣಿ ಸಾಧಿಸಿದ್ದು, ವಾಣಿಜ್ಯ ವಾಹನಗಳ ವಿಭಾಗದಲ್ಲೂ ಕಂಪನಿಯು ಮುಂಚೂಣಿ ಸಾಧಿಸುವ ನೀರಿಕ್ಷೆಯಲ್ಲಿದೆ.

ವಾಣಿಜ್ಯ ವಾಹನಗಳ ವಿಭಾಗದಲ್ಲಿ ತನ್ನ ಪ್ರಮುಖ ಮಾದರಿಯಾದ ಏಸ್ ಲಘು ವಾಣಿಜ್ಯ ವಾಹನವನ್ನು ಮೊದಲ ಹಂತದಲ್ಲಿ ಎಲೆಕ್ಟ್ರಿಕ್ ಆವೃತ್ತಿಯೊಂದಿಗೆ ಬಿಡುಗಡೆ ಮಾಡುವ ಯೋಜನೆಯಲ್ಲಿದ್ದು, ಬಿಡುಗಡೆಯ ಉದ್ದೇಶದಿಂದ ಕಂಪನಿಯು ಈಗಾಗಲೇ ಏಸ್ ಇವಿ ಕಾರ್ಯಕ್ಷಮತೆ ಕುರಿತಂತೆ ವಿವಿಧ ರಸ್ತೆ ಪರೀಕ್ಷೆಗಳನ್ನು ಸಹ ಪೂರ್ಣಗೊಳಿಸಿದೆ.

ಹೊಸ ಇವಿ ವಾಹನದ ಕಾರ್ಯಕ್ಷಮತೆ, ರಸ್ತೆ ಉಪಸ್ಥಿತಿ ಕುರಿತಂತೆ ಈಗಾಗಲೇ ವಿವಿಧ ಹಂತದ ಪರೀಕ್ಷೆಗಳನ್ನು ಪೂರ್ಣಗೊಳಿಸಿ ಬಿಡುಗಡೆಗಾಗಿ ಸಿದ್ದಗೊಳ್ಳುತ್ತಿದ್ದು, ಬಿಡುಗಡೆಗೂ ಮುನ್ನ ಕಂಪನಿಯು ಹೊಸ ವಾಹನ ಕಾರ್ಯಕ್ಷಮತೆ ಕುರಿಂತೆ ಟಿವಿ ಜಾಹೀರಾತು ಚಿತ್ರೀಕರಣ ನಡೆಸುತ್ತಿರುವುದು ಸಾರ್ವಜನಿಕವಾಗಿ ಬಹಿರಂಗವಾಗಿದೆ.

ಹೌದು, ಹೊಸ ಏಸ್ ಇವಿ ಕಾರ್ಯಕ್ಷಮತೆ ಕುರಿಂತೆ ಕಂಪನಿಯು ದೇಶದ ಪ್ರಮುಖ ನಗರಗಳ ವಿಶೇಷ ಸ್ಥಳಗಳನ್ನು ತಲುಪುವ ಸನ್ನಿವೇಶವನ್ನು ಒಳಗೊಂಡ ಟಿವಿ ಜಾಹೀರಾತು ಚಿತ್ರೀಕರಣ ಮಾಡುತ್ತಿದ್ದು, ಸಂಪೂರ್ಣವಾಗಿ ಮುಚ್ಚಿದ ಕಾರ್ಗೋ ಕ್ಯಾಬಿನ್‌ನಲ್ಲಿ ಪ್ರಮುಖ EV ಬ್ಯಾಡ್ಜಿಂಗ್ ಹೊರತುಪಡಿಸಿ, ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಸ್ಟ್ಯಾಂಡರ್ಡ್ ಮಾದರಿಗಿಂತ ಯಾವುದೇ ಹೊಸತರದ ಬದಲಾವಣೆಗಳನ್ನು ಪಡೆದುಕೊಂಡಿಲ್ಲ.

ಮೊದಲ ನೋಟದಲ್ಲಿ ಹೊಸ ಇವಿ ವಾಹನ ಮಾದರಿಯು ಸಂಪೂರ್ಣವಾಗಿ ಸ್ಟ್ಯಾಂಡರ್ಡ್ ಮಾದರಿಗೆ ಹೋಲಿಕೆಯಾಗಲಿದ್ದು, ಇದು ಇತ್ತೀಚೆಗೆ ಬಿಡುಗಡೆಯಾಗಿರುವ ಪ್ರಮುಖ ಲಘು ವಾಣಿಜ್ಯ ವಾಹನಗಳಿಗೆ ಉತ್ತಮ ಪೈಪೋಟಿ ನೀಡುವ ನೀರಿಕ್ಷೆಯಿದೆ.

ಟಾಟಾ ಏಸ್ ಮಾದರಿಯು ಕಾರ್ಖಾನೆಯಲ್ಲಿ ಅಳವಡಿಸಲಾಗಿರುವ EV ಪವರ್‌ಟ್ರೇನ್‌ನೊಂದಿಗೆ ಬಿಡುಗಡೆ ಮಾಡುತ್ತಿರುವುದು ಇದೇ ಮೊದಲ ಬಾರಿಯಾದರೂ, ಲಘು ವಾಣಿಜ್ಯ ಪಿಕಪ್ ಟ್ರಕ್ ಬ್ಯಾಟರಿ ಚಾಲಿತವಾಗುತ್ತಿರುವುದು ಇದೇ ಮೊದಲಲ್ಲ.

ಎಟ್ರಿಯೊ ಮತ್ತು ನಾರ್ತ್‌ವೇ ಮೋಟಾರ್‌ಸ್ಪೋರ್ಟ್‌ನಂತಹ ಹಿಂದಿನ ಇವಿ ಸ್ಟಾರ್ಟ್‌ಅಪ್‌ಗಳು ಟಾಟಾ ಏಸ್‌ಗಾಗಿ ಸುಮಾರು 10 ವರ್ಷಗಳ ಹಿಂದೆಯೆ ಕ್ರಮವಾಗಿ 20kWh ಮತ್ತು 18kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ಗಳೊಂದಿಗೆ ರೆಟ್ರೊ-ಫಿಟ್ಡ್ ಎಲೆಕ್ಟ್ರಿಕ್ ಪವರ್‌ಟ್ರೇನ್‌ಗಳನ್ನು ತಯಾರಿಸಿದ್ದವು.

ಆದರೆ ಇವಿ ವಾಹನಗಳ ಸಿಗದ ಮಾನ್ಯತೆಯಿಂದಾಗಿ ಮಹತ್ವದ ಯೋಜನೆಯು ಆರಂಭದಲ್ಲಿಯೇ ಮೊಟಕುಗೊಂಡಿತ್ತು. ಇದೀಗ ಮತ್ತೆ ಇವಿ ವಾಹನಗಳ ಸುಗ್ಗಿ ಕಾಲ ಶುರುವಾಗಿದ್ದು, ಏಸ್ ಮಾದರಿಯು ಹಲವಾರು ಹೊಸ ತಾಂತ್ರಿಕ ಸೌಲಭ್ಯಗಳು ಮತ್ತು ಬ್ಯಾಟರಿ ಪ್ಯಾಕ್ ಹೊಂದಿರಲಿದೆ.

ಟಾಟಾ ಏಸ್ ಎಲೆಕ್ಟ್ರಿಕ್ ಬಗೆಗೆ ಕಂಪನಿಯು ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಿಲ್ಲವಾದರೂ ಆದರೆ ಮುಂಬರುವ ಕೆಲವು ವಾರಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದ್ದು, ಹೊಸ ಇವಿ ಮಾದರಿಗಾಗಿ ಕಂಪನಿಯು 18kWh ಮತ್ತು 20kWh ಸಾಮರ್ಥ್ಯದ ನಡುವಿನ ಬ್ಯಾಟರಿ ಪ್ಯಾಕ್ ಜೋಡಣೆ ಮಾಡಬಹುದಾಗಿದೆ.

ಈ ಮೂಲಕ ಇದು ಪ್ರತಿ ಚಾರ್ಜ್‌ಗೆ 120 ಕಿ.ಮೀ ನಿಂದ ರಿಂದ 150 ಕಿ.ಮೀ ಮೈಲೇಜ್ ನೀಡುವ ಸಾಧ್ಯತೆಗಳಿದ್ದು, ಇದು ಸಾಮಾನ್ಯ ಮಾದರಿಗಿಂತ ಹೆಚ್ಚುವರಿಯಾಗಿ ರೂ. 1 ಲಕ್ಷದಿಂದ ರೂ. 1.50 ಲಕ್ಷ ಹೆಚ್ಚುವರಿ ಬೆಲೆ ಪಡೆದುಕೊಳ್ಳಬಹುದಾಗಿದೆ.

ಇನ್ನು ಟಾಟಾ ಮೋಟಾರ್ಸ್ ಕಂಪನಿಯು ಇವಿ ಕಾರಿಗಳ ಭವಿಷ್ಯದ ಬೃಹತ್ ಯೋಜನೆಗಳಿಗಾಗಿ ಇದೀಗ ಪ್ರತ್ಯೇಕ ನಿಯಂತ್ರಣ ಹೊಂದಿರುವ ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್ (TPEML) ಅಂಗಸಂಸ್ಥೆಯನ್ನು ಆರಂಭಿಸಿದ್ದು, ಹೊಸ ಅಂಗಸಂಸ್ಥೆಯ ಮೇಲೆ ಟಾಟಾ ಕಂಪನಿಯು ಸುಮಾರು ರೂ.15 ಸಾವಿರ ಕೋಟಿ ಹೂಡಿಕೆ ಮಾಡಿದೆ.

ಹೊಸ ಹೂಡಿಕೆಯೊಂದಿಗೆ ಟಾಟಾ ಕಂಪನಿಯು ಮುಂದಿನ ಐದು ವರ್ಷಗಳಲ್ಲಿ ಗ್ರಾಹಕರ ಬೇಡಿಕೆಯೆಂತೆ ವಿವಿಧ ಸೆಗ್ಮೆಂಟ್‌ಗಳಲ್ಲಿ ಒಟ್ಟು ಹತ್ತು ಇವಿ ಕಾರುಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದ್ದು, ಜೊತೆಗೆ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಪ್ರಮುಖ ವಾಣಿಜ್ಯ ವಾಹನಗಳಲ್ಲಿ ಇವಿ ಮಾದರಿಗಳನ್ನು ಸಹ ಪರಿಚಯಿಸಲಿದೆ.


Click it and Unblock the Notifications