ಆಲ್‌ಟ್ರೊಜ್ ಡಿಸಿಎ ಮಾದರಿಗಾಗಿ ಹೊಸ ಇನ್ಪೋಟೈನ್‌ಮೆಂಟ್ ಸಿಸ್ಟಂ ಜೋಡಣೆ ಮಾಡಲಿದೆ ಟಾಟಾ
ಟಾಟಾ ಮೋಟಾರ್ಸ್ ಕಂಪನಿಯು ಶೀಘ್ರದಲ್ಲಿಯೇ ಆಲ್‌ಟ್ರೊಜ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ವರ್ಷನ್ ಬಿಡುಗಡೆ ಮಾಡಲು ಸಜ್ಜಾಗುತ್ತಿದ್ದು, ಹೊಸ ಕಾರು ಹೊಸ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ಸುಧಾರಿತ ತಂತ್ರಜ್ಞಾನ ಪ್ರೇರಿತ ಹೆಚ್ಚುವರಿ ಫೀಚರ್ಸ್ ಹೊಂದಿರಲಿದೆ.

ಹೊಸ ಆಲ್‌ಟ್ರೊಜ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಆವೃತ್ತಿಗಾಗಿ ಕಂಪನಿಯು ಈಗಾಗಲೇ ರೂ. 21 ಸಾವಿರ ಮುಂಗಡದೊಂದಿಗೆ ಅಧಿಕೃತ ಬುಕ್ಕಿಂಗ್ ಪ್ರಕ್ರಿಯೆಗೂ ಸಹ ಚಾಲನೆ ನೀಡಿದ್ದು, ಹೊಸ ಮಾದರಿಯು ಎಕ್ಸ್‌ಟಿ, ಎಕ್ಸ್‌ಜೆಡ್ ಮತ್ತು ಎಕ್ಸ್‌ಜೆಡ್ ಪ್ಲಸ್ ಮಾದರಿಗಳ 1.2 ಲೀಟರ್ ಪೆಟ್ರೋಲ್ ಆವೃತ್ತಿಯಲ್ಲಿ ಖರೀದಿಗೆ ಲಭ್ಯವಿರಲಿದೆ.

ಆಟೋಮ್ಯಾಟಿಕ್ ಆವೃತ್ತಿಗಳು ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ಮ್ಯಾನುವಲ್ ಮಾದರಿಗಿಂತಲೂ ರೂ. 15 ಸಾವಿರದಿಂದ ರೂ.30 ಸಾವಿರದಷ್ಟು ಹೆಚ್ಚುವರಿ ಬೆಲೆ ಹೊಂದಿರಲಿದ್ದು, ಆಲ್‌ಟ್ರೊಜ್ ಹ್ಯಾಚ್‌ಬ್ಯಾಕ್ ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿ ಯಶಸ್ವಿ ಎರಡು ವರ್ಷಗಳನ್ನು ಪೂರೈಸಿರುವ ಹಿನ್ನಲೆಯಲ್ಲಿ ಹೊಸ ಮಾದರಿಯನ್ನು ಬಿಡುಗಡೆ ಮಾಡಲಾಗುತ್ತಿದೆ.

ಹೊಸ ಕಾರಿನಲ್ಲಿ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಜೊತೆ ಹೊಸ ಇನ್ಪೋಟೈನ್‌ಮೆಂಟ್ ಸಿಸ್ಟಂ ಪಡೆದುಕೊಳ್ಳಲಿದ್ದು, ಹೊಸ ಇನ್ಪೋಟೈನ್‌ಮೆಂಟ್ ಸಿಸ್ಟಂ ಪ್ರಸ್ತುತ ಮಾರುಕಟ್ಟೆಯಲ್ಲಿನ ಮಾದರಿಗಿಂತಲೂ ದೊಡ್ಡ ಪರದೆಯೊಂದಿಗೆ ಹೆಚ್ಚಿನ ತಾಂತ್ರಿಕ ಅಂಶಗಳನ್ನು ಹೊಂದಿರಲಿದೆ.

ಆಲ್‌ಟ್ರೊಜ್ ಹೊಸ ಕಾರು ಮಾದರಿಯು ಸದ್ಯ ಎಕ್ಸ್‌ಇ ಪ್ಲಸ್ ಜೊತೆಗೆ ಎಕ್ಸ್‌ಇ, ಎಕ್ಸ್ಎಂ ಪ್ಲಸ್, ಎಕ್ಸ್‌ಟಿ, ಎಕ್ಸ್‌ಜೆಡ್, ಎಕ್ಸ್‌ಜೆಡ್ ಆಪ್ಷನ್ ಮತ್ತು ಎಕ್ಸ್‌ಜೆಡ್ ಅರ್ಬನ್ ವೆರಿಯೆಂಟ್‌ಗಳೊಂದಿಗೆ ಮಾರಾಟಗೊಳ್ಳುತ್ತಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಎರಡು ಮಾದರಿಯಲ್ಲೂ ಖರೀದಿಗೆ ಲಭ್ಯವಿದೆ.

ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನ ಎಲ್ಲಾ ರೂಪಾಂತರಗಳಲ್ಲೂ 1.2 ಲೀಟರ್ ರೆವೊಟ್ರಾನ್ ಪೆಟ್ರೋಲ್ ಮತ್ತು 1.5 ಲೀಟರ್ ಟರ್ಬೊ ಚಾರ್ಜ್ಡ್ ರೆವೊಟಾರ್ಕ್ ಡೀಸೆಲ್ ಎಂಜಿನ್ ಆಯ್ಕೆ ಹೊಂದಿದ್ದು, ಸದ್ಯಕ್ಕೆ ಆಲ್‌ಟ್ರೊಜ್ ಕಾರಿನಲ್ಲಿ ಕೇವಲ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯನ್ನು ಮಾತ್ರ ನೀಡಲಾಗುತ್ತಿದೆ.

ಆಲ್‌ಟ್ರೊಜ್ ಕಾರಿನಲ್ಲಿ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 1.2-ಲೀಟರ್ ಪೆಟ್ರೋಲ್ ಎಂಜಿನ್ 86-ಬಿಎಚ್‌ಪಿ, 113-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದರೆ 1.5-ಲೀಟರ್ ಡೀಸೆಲ್ ಆವೃತ್ತಿಯು 90-ಬಿಎಚ್‌ಪಿ, 200-ಎನ್ಎಂ ಟಾರ್ಕ್ ಉತ್ಪಾದನಾ ಗುಣ ಹೊಂದಿದೆ.

ಇದೀಗ ಹೊಸದಾಗಿ ಬಿಡುಗಡೆಯಾಗಲಿರುವ 5-ಸ್ಪೀಡ್ ಆಟೋಮ್ಯಾಟಿಕ್ ಆವೃತ್ತಿಯನ್ನು ಪಂಚ್ ಮಾದರಿಯೊಂದಿಗೆ ಹಂಚಿಕೊಳ್ಳಲಿದ್ದು, ನಗರ ಪ್ರದೇಶಗಳಲ್ಲಿ ಚಾಲನೆಯನ್ನು ಸುಲಭವಾಗಿಸಲು ಎಎಂಟಿ ಮಾದರಿಯು ಹೆಚ್ಚಿನ ಬೇಡಿಕೆ ಪಡೆದುಕೊಳ್ಳಲಿದೆ.

ಜೊತೆಗೆ ಆಲ್‌ಟ್ರೊಜ್ ಆಟೋಮ್ಯಾಟಿಕ್ ಆವೃತ್ತಿಗಳಿಗಾಗಿ ವಿಶೇಷ ಬಣ್ಣದ ಆಯ್ಕೆ ನೀಡಲಾಗಿದ್ದು, ಹೊಸ ಒಪೆರಾ ಬ್ಲ್ಯೂ ಬಣ್ಣವನ್ನು ಹೊಸ ಎಎಂಟಿ ಮಾದರಿಗಳಿಗಾಗಿ ನೀಡಲಾಗಿದೆ.

ಆಲ್‌ಟ್ರೊಜ್ ಮಾದರಿಯಲ್ಲಿ ಟಾಟಾ ಕಂಪನಿಯು ಕಳೆದ ಒಂದು ವರ್ಷದಲ್ಲಿ ಹಲವಾರು ಹೊಸ ಬದಲಾವಣೆಗಳನ್ನು ಪರಿಚಯಿಸಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಸದ್ಯ ಆರಂಭಿಕವಾಗಿ ರೂ.6 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 10 ಲಕ್ಷ ಬೆಲೆ ಹೊಂದಿದೆ.

ಇದೀಗ ಬಿಡುಗಡೆಯಾಗಲಿರುವ ಆಟೋಮ್ಯಾಟಿಕ್ ಮಾದರಿಯು ಪೆಟ್ರೋಲ್ ಮಾದರಿಯಲ್ಲಿ ಜೋಡಣೆ ಮಾಡಲಾಗುತ್ತಿದ್ದು, ಟಾಪ್ ಎಂಡ್ ಮಾದರಿಗಳಲ್ಲಿ ಮಾತ್ರ ಖರೀದಿಗೆ ಲಭ್ಯವಾಗಲಿರುವ ಆಟೋಮ್ಯಾಟಿಕ್ ಆವೃತ್ತಿಯು ಮ್ಯಾನುವಲ್ ಮಾದರಿಗಿಂತಲೂ ತುಸು ದುಬಾರಿಯಾಗಿರಲಿವೆ.

ನಗರಪ್ರದೇಶಗಳಲ್ಲಿ ಕಾರು ಚಾಲನೆಗೆ ಹೆಚ್ಚಿನ ಗ್ರಾಹಕರು ಮ್ಯಾನುವಲ್‌ಗಿಂತಲೂ ಹೆಚ್ಚು ಆಟೋಮ್ಯಾಟಿಕ್ ಆವೃತ್ತಿಗಳ ಖರೀದಿಗೆ ಆದ್ಯತೆ ನೀಡುತ್ತಿದ್ದು, ಆಟೋಮ್ಯಾಟಿಕ್ ಆವೃತ್ತಿಯ ನಂತರ ಹೊಸ ಕಾರು ಹ್ಯುಂಡೈ ಐ20 ಮಾದರಿಗೆ ಮತ್ತಷ್ಟು ಪೈಪೋಟಿ ನೀಡಲಿದೆ.


Click it and Unblock the Notifications