ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಟಾಟಾ ಮೋಟಾರ್ಸ್ ಹೊಸ ದಾಖಲೆ
ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಸದ್ಯ ಅಗ್ರಸ್ಥಾನ ಪಡೆದುಕೊಂಡಿರುವ ಟಾಟಾ ಮೋಟಾರ್ಸ್(Tata Motors) ಕಂಪನಿಯು 2021ರ ಡಿಸೆಂಬರ್ ಅವಧಿಯಲ್ಲಿ ಗರಿಷ್ಠ ಮಟ್ಟದ ಬೇಡಿಕೆ ಪಡೆದುಕೊಂಡಿದ್ದು, ಕಂಪನಿಯು ವಿವಿಧ ಮಾದರಿಯ ಇವಿ ಆವೃತ್ತಿಗಳೊಂದಿಗೆ ಅತ್ಯುತ್ತಮ ಬೇಡಿಕೆ ದಾಖಲಿಸಿದೆ.

ಟಾಟಾ ಮೋಟಾರ್ಸ್ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ನೆಕ್ಸಾನ್ ಇವಿ(Nexon EV), ಟಿಗೋರ್ ಇವಿ(Tigor EV) ಮತ್ತು ಎಕ್ಸ್‌ಪ್ರೆಸ್-ಟಿ ಇವಿ(XPres-T EV) ಕಾರು ಮಾದರಿಗಳ ಮಾರಾಟದೊಂದಿಗೆ ಹೊಸ ದಾಖಲೆಗಳನ್ನು ನಿರ್ಮಿಸುತ್ತಿದ್ದು, ಡಿಸೆಂಬರ್ ಅವಧಿಯಲ್ಲಿ ಕಂಪನಿಯು ಇದುವರೆಗೆ ಇವಿ ಕಾರು ಮಾರಾಟದಲ್ಲಿಯೇ ಹೆಚ್ಚಿನ ಬೇಡಿಕೆ ಪಡೆದುಕೊಂಡಿದೆ.

ನೆಕ್ಸಾನ್ ಇವಿ ಮತ್ತು ಟಿಗೋರ್ ಇವಿ ಮಾದರಿಗಳ ಮೂಲಕ ಪ್ರಯಾಣಿಕ ಕಾರು ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿರುವ ಟಾಟಾ ಕಂಪನಿಯು ವಾಣಿಜ್ಯ ವಾಹನ ಬಳಕೆದಾರರಿಗಾಗಿಯೇ ವಿಶೇಷವಾಗಿ ಸಿದ್ದಗೊಂಡಿರುವ ಎಕ್ಸ್‌ಪ್ರೆಸ್-ಟಿ ಇವಿ ಮಾದರಿಯ ಮುಲಕ ಕ್ಯಾಬ್ ಸೇವಾ ವಿಭಾಗದಲ್ಲೂ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದೆ.

ಎಲೆಕ್ಟ್ರಿಕ್ ವಾಹನ ಮಾರಾಟ ಆರಂಭಿಸಿದ ನಂತರ ಹಲವಾರು ಹೊಸ ಬದಲಾವಣೆಗಳನ್ನು ಪರಿಚಯಿಸಿರುವ ಟಾಟಾ ಮೋಟಾರ್ಸ್ ಕಂಪನಿಯು ಹೊಸ ಇವಿ ವಾಹನಗಳ ಮೂಲಕ ಉತ್ತಮ ಬೇಡಿಕೆ ಕಂಡುಕೊಳ್ಳುವಲ್ಲಿ ಯಶಸ್ವಿಯಾಗುತ್ತಿದೆ.

2021ರ ಡಿಸೆಂಬರ್ ಅವಧಿಯಲ್ಲಿನ ಒಟ್ಟಾರೆ ಕಾರು ಮಾರಾಟದಲ್ಲಿ ಶೇ. 50ರಷ್ಟು ಬೆಳವಣಿಗೆ ಸಾಧಿಸಿರುವ ಟಾಟಾ ಮೋಟಾರ್ಸ್ ಕಂಪನಿಯು ಇವಿ ಕಾರುಗಳ ಮಾರಾಟದಲ್ಲಿ ಶೇ. 439ರಷ್ಟು ಬೆಳವಣಿಗೆ ಸಾಧಿಸಿದೆ.

ಡಿಸೆಂಬರ್ ಅವಧಿಯಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಮೊದಲ ಬಾರಿಗೆ 2,255 ಯುನಿಟ್ ಇವಿ ಕಾರುಗಳನ್ನು ಮಾರಾಟ ಮಾಡಿದ್ದು, ಇದು ಟಾಟಾ ಮೋಟಾರ್ಸ್ ಕಂಪನಿಯ ಇದುವರೆಗಿನ ಇವಿ ಕಾರು ಮಾರಾಟದಲ್ಲಿಯೇ ಅತಿದೊಡ್ಡ ಸಂಖ್ಯೆಯಾಗಿದೆ.

ದಿನೇ ದಿನೇ ದುಬಾರಿಯಾಗುತ್ತಿರುವ ಇಂಧನಗಳ ಬೆಲೆ ಪರಿಣಾಮ ಹೊಸ ವಾಹನ ಖರೀದಿ ಯೋಜನೆಯಲ್ಲಿರುವ ಗ್ರಾಹಕರು ಇವಿ ವಾಹನ ಖರೀದಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಮುಂಬರುವ ದಿನಗಳಲ್ಲಿ ಇವಿ ವಾಹನಗಳ ಮಾರಾಟವು ಇನ್ನಷ್ಟು ಹೆಚ್ಚಳವಾಗುವ ನೀರಿಕ್ಷೆಯಿವೆ.

ಟಾಟಾ ಮೋಟಾರ್ಸ್ ಕಂಪನಿಯು 2019ರಲ್ಲಿ ಮೊದಲ ಬಾರಿಗೆ ಪ್ರಯಾಣಿಕ ಬಳಕೆಯ ಎಲೆಕ್ಟ್ರಿಕ್ ಕಾರು ಪರಿಚಯಿಸಿದ ನಂತರ ಟಾಟಾ ಕಂಪನಿಯು ಇದುವರೆಗೆ ಸುಮಾರು 15 ಸಾವಿರ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡಿದ್ದು, ನೆಕ್ಸಾನ್ ಇವಿ ಕಾರು ಕಂಪನಿಯ ಇವಿ ವಾಹನ ಉತ್ಪಾದನಾ ಯೋಜನೆಗೆ ಹೊಸ ಆಯಾಮ ನೀಡಿದೆ.

ಆರಂಭದಲ್ಲಿ ಟಿಗೋರ್ ಇವಿ ಪರಿಚಯಿಸಿದ್ದ ಟಾಟಾ ಮೋಟಾರ್ಸ್ ಕಂಪನಿಯು ತದನಂತರ ನೆಕ್ಸಾನ್ ಇವಿ ಮಾದರಿಯನ್ನು ಪರಿಚಯಿಸಿದ್ದು, ಕಂಪನಿಯು ಇತ್ತೀಚೆಗೆ ವಾಣಿಜ್ಯ ಬಳಕೆದಾರರಿಗಾಗಿ ಹೊಸದಾಗಿ ಎಕ್ಸ್‌ಪ್ರೆಸ್-ಟಿ ಇವಿ ಮಾದರಿಯ ಮಾರಾಟಕ್ಕೆ ಚಾಲನೆ ನೀಡಿದೆ.

ಟಿಗೋರ್ ಇವಿ ಮಾದರಿಯನ್ನು ಇತ್ತೀಚೆಗೆ ಹೊಸ ತಂತ್ರಜ್ಞಾನ ಪ್ರೇರಣೆಯೊಂದಿಗೆ ಬಿಡುಗಡೆ ಮಾಡಲಾಗಿದ್ದು, ಟಿಗೋರ್ ಇವಿ ಕಾರು ನೆಕ್ಸಾನ್ ಇವಿ ಮಾದರಿಯಲ್ಲೇ ಅತ್ಯುತ್ತಮ ಮೈಲೇಜ್, ಪರ್ಫಾಮೆನ್ಸ್ ಮೂಲಕ ಗ್ರಾಹಕರನ್ನು ಸೆಳೆಯುತ್ತಿದೆ.

ಟಾಟಾ ಮೋಟಾರ್ಸ್ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಕಾರು ಮಾದರಿಗಳನ್ನು ಬಿಡುಗಡೆ ಮಾಡುವ ಸಿದ್ದತೆಯಲ್ಲಿದ್ದು, ಕಂಪನಿಯು ಇವಿ ವಾಹನಗಳ ಅಭಿವೃದ್ದಿ, ಉತ್ಪಾದನೆ ಮತ್ತು ಮಾರಾಟಕ್ಕಾಗಿ ಪ್ರತ್ಯೇಕ ಪ್ಲ್ಯಾಟ್‌ಫಾರ್ಮ್ ಆರಂಭಿಸಿದೆ.

ಸದ್ಯ ಮಾರುಕಟ್ಟೆಯಲ್ಲಿರುವ ಇವಿ ಕಾರುಗಳನ್ನು ಸಾಮಾನ್ಯ ಕಾರುಗಳ ಉತ್ಪಾದನಾ ಪ್ಲ್ಯಾಟ್‌ಫಾರ್ಮ್‌ನಲ್ಲಿ ಅಭಿವೃದ್ದಿಪಡಿಸುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ಭವಿಷ್ಯದ ಬೃಹತ್ ಯೋಜನೆಗಳಿಗಾಗಿ ಇದೀಗ ಪ್ರತ್ಯೇಕ ನಿಯಂತ್ರಣ ಹೊಂದಿರುವ ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್ (TPEML) ಅಂಗಸಂಸ್ಥೆಯನ್ನು ಆರಂಭಿಸಿದೆ.

ಟಾಟಾ ಮೋಟಾರ್ಸ್ ಕಂಪನಿಯ ಹೊಸ ಅಂಗಸಂಸ್ಥೆಯನ್ನು ರೂ. 700 ಕೋಟಿ ರೂಪಾಯಿ ಆರಂಭಿಕ ಹೂಡಿಕೆಯೊಂದಿಗೆ ಆರಂಭಗೊಳಿಸಿದ್ದು, ಪ್ರತ್ಯೇಕ ಪ್ಲ್ಯಾಟ್‌ಫಾರ್ಮ ಮೂಲಕ ಇವಿ ವಾಹನಗಳ ಮೇಲೆ ಹೆಚ್ಚಿನ ಗಮನಹರಿಸಲು ನಿರ್ಧರಿಸಿದೆ.

ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್ ಕಂಪನಿಯು ಇವಿ ವಾಹನಗಳ ಎಂಜಿನ್, ಮೋಟಾರ್, ಬಿಡಿಭಾಗಗಳು, ಪರಿಕರಗಳು, ಪರಿಕರಗಳ ಸ್ಥಾಪನೆ, ಸ್ವಾಧೀನಪಡಿಸಿಕೊಳ್ಳುವಿಕೆ, ಜೊತೆಗೆ ಜೋಡಣೆ, ನಿರ್ಮಾಣ, ತಯಾರಿಕೆ, ಮಾರಾಟ, ಮಾರಾಟದ ನಂತರದ ಸೇವೆಗಳು, ಮಾರ್ಕೆಟಿಂಗ್ ಮತ್ತು ಸೇವಾ ಸೌಲಭ್ಯಗಳನ್ನು ಪ್ರತ್ಯೇಕವಾಗಿ ನಿರ್ವಹಿಸಲಿದೆ.

ಎಲೆಕ್ಟ್ರಿಕ್ ವಾಹನಗಳ ಅಭಿವೃದ್ದಿ, ಉತ್ಪಾದನೆ ಮತ್ತು ಮಾರಾಟಕ್ಕಾಗಿ ಬಹುತೇಕ ವಾಹನ ಕಂಪನಿಗಳು ಪ್ರತ್ಯೇಕ ವಿಭಾಗಗಳನ್ನು ತೆರೆಯುತ್ತಿದ್ದು, ಟಾಟಾ ಮೋಟಾರ್ಸ್ ಕೂಡಾ ಇದೀಗ ಅಂಗಸಂಸ್ಥೆಯ ಮೂಲಕ ಇವಿ ಕಾರುಗಳ ಮಾರಾಟದಲ್ಲಿ ಮತ್ತಷ್ಟು ಮುಂಚೂಣಿ ಸಾಧಿಸಲಿದೆ.


Click it and Unblock the Notifications