ಹೆಚ್ಚಿದ ಬೇಡಿಕೆ: ಇವಿ ಕಾರು ಉತ್ಪಾದನೆ ದ್ವಿಗುಣಗೊಳಿಸಲು ಮುಂದಾದ ಟಾಟಾ ಮೋಟಾರ್ಸ್
ದುಬಾರಿ ಇಂಧನಗಳ ಪರಿಣಾಮ ಇವಿ ವಾಹನಗಳಿಗೆ ಉತ್ತಮ ಬೇಡಿಕೆ ಹರಿದುಬರುತ್ತಿದ್ದು, ಸದ್ಯ ಇವಿ ಕಾರು ಮಾರಾಟದಲ್ಲಿ ಅಗ್ರಸ್ಥಾನದಲ್ಲಿರುವ ಟಾಟಾ ಮೋಟಾರ್ಸ್ ಕಂಪನಿಯು ನಿಗದಿತ ಸಮಯದಲ್ಲಿ ಬೇಡಿಕೆ ಪೂರೈಕೆಗಾಗಿ ಶೀಘ್ರದಲ್ಲಿಯೇ ಉತ್ಪಾದನಾ ಪ್ರಮಾಣವನ್ನು ದ್ವಿಗುಣಗೊಳಿಸಲು ಮುಂದಾಗಿದೆ.

ದೇಶಿಯ ಮಾರುಕಟ್ಟೆಯಲ್ಲಿ ಸದ್ಯ ಇವಿ ಕಾರು ಮಾರಾಟದಲ್ಲಿ ಅಗ್ರಸ್ಥಾನದಲ್ಲಿರುವ ಟಾಟಾ ಮೋಟಾರ್ಸ್ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ನೆಕ್ಸಾನ್ ಇವಿ(Nexon EV), ಟಿಗೋರ್ ಇವಿ(Tigor EV) ಮತ್ತು ಎಕ್ಸ್‌ಪ್ರೆಸ್-ಟಿ ಇವಿ(XPres-T EV) ಕಾರು ಮಾದರಿಗಳ ಮಾರಾಟದೊಂದಿಗೆ ಹೊಸ ದಾಖಲೆಗಳಿಗೆ ಕಾರಣವಾಗಿದೆ.

ನೆಕ್ಸಾನ್ ಇವಿ ಮತ್ತು ಟಿಗೋರ್ ಇವಿ ಮಾದರಿಗಳ ಮೂಲಕ ಪ್ರಯಾಣಿಕರ ಬಳಕೆಯ ಇವಿ ಕಾರು ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ವಾಣಿಜ್ಯ ವಾಹನ ಬಳಕೆದಾರರಿಗಾಗಿಯೇ ವಿಶೇಷವಾಗಿ ಸಿದ್ದಗೊಂಡಿರುವ ಎಕ್ಸ್‌ಪ್ರೆಸ್-ಟಿ ಇವಿ ಮಾದರಿಯು ಕೂಡಾ ಕ್ಯಾಬ್ ಸೇವಾ ವಿಭಾಗಗಳಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದೆ.

ವರದಿಗಳ ಪ್ರಕಾರ ಟಾಟಾ ಮೋಟಾರ್ಸ್ ಕಂಪನಿಯು ಪ್ರತಿ ತಿಂಗಳು 5,500 ರಿಂದ 6,000 ಯುನಿಟ್ ಎಲೆಕ್ಟ್ರಿಕ್ ಕಾರುಗಳಿಗೆ ಬುಕಿಂಗ್ ತೆಗೆದುಕೊಳ್ಳುತ್ತಿದ್ದು, ಸದ್ಯ ಕಂಪನಿಯು ಪ್ರತಿ ತಿಂಗಳು ಮೂರು ಸಾವಿರದಿಂದ ಮೂರುವರೆ ಸಾವಿರ ಯುನಿಟ್ ಮಾತ್ರ ಉತ್ಪಾದನೆ ಮಾಡಿ ವಿತರಣೆಗೊಳಿಸುತ್ತಿದೆ.

ಹೀಗಾಗಿ ಶೀಘ್ರದಲ್ಲೇ ನಿಗದಿತ ಅವಧಿಯಲ್ಲಿ ಗ್ರಾಹಕರ ಬೇಡಿಕೆಗಳ ಪೂರೈಕೆಗಾಗಿ ಉತ್ಪಾದನಾ ಪ್ರಮಾಣ ಹೆಚ್ಚಿಸಲು ನಿರ್ಧರಿಸಿದ್ದು, ಉತ್ಪಾದನಾ ಪ್ರಮಾಣವು ಹೆಚ್ಚಳಗೊಂಡರೆ ವಿತರಣೆ ಅವಧಿಯನ್ನು ತಗ್ಗಿಸಲು ಸಹಕಾರಿಯಾಗಲಿದೆ.

ಎಲೆಕ್ಟ್ರಿಕ್ ವಾಹನಗಳ ಅಭಿವೃದ್ದಿಗಾಗಿ ಈಗಾಗಲೇ ಐಸಿ ಎಂಜಿನ್ ಪರಿವರ್ತಿತ ಪ್ಲ್ಯಾಟ್‌ಫಾರ್ಮ್ ಬಳಸುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ಭವಿಷ್ಯದ ಇವಿ ಮಾದರಿಗಳಿಗಾಗಿ ಸಿಗ್ಮಾ ಆರ್ಕಿಟೆಕ್ಚರ್ ಮತ್ತು ಸ್ಕೇಟ್‌ಬೋರ್ಡ್ ಪ್ಲ್ಯಾಟ್‌ಫಾರ್ಮ್ ತೆರೆಯುತ್ತಿದೆ.

ಐಸಿ ಎಂಜಿನ್ ಪರಿವರ್ತಿತ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿ ಕಂಪನಿಯು ಸದ್ಯಕ್ಕೆ ಟಿಗೋರ್ ಇವಿ, ನೆಕ್ಸಾನ್ ಇವಿ ಮಾದರಿಗಳನ್ನು ಅಭಿವೃದ್ದಿಗೊಳಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಸಿಗ್ಮಾ ಪ್ಲಾಟ್‌ಫಾರ್ಮ್ ಮೂಲಕ ಸಂಪೂರ್ಣವಾಗಿ ಇವಿ ವಾಹನಗಳ ಉತ್ಪಾದನೆ ಮೀಸಲಿರಿಸಿದೆ.

ಸಿಗ್ಮಾ ಪ್ಲಾಟ್‌ಫಾರ್ಮ್ ಮೂಲಕ ಮೊದಲ ಇವಿ ಕಾರು ಮಾದರಿಯಾಗಿ ಟಾಟಾ ಮೋಟಾರ್ಸ್ ಕಂಪನಿಯು ತನ್ನ ಬಹುನೀರಿಕ್ಷಿತ ಸಿಯೆರಾ ಇವಿ ಕಾರು ಮಾದರಿಯನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದ್ದು, ಸಿಗ್ಮಾ ಪ್ಲಾಟ್‌ಫಾರ್ಮ್ ಅಡಿಯಲ್ಲಿ ನಿರ್ಮಾಣವಾಗುವ ಇವಿ ಕಾರುಗಳು ಐಸಿ ಎಂಜಿನ್ ಪರಿವರ್ತಿತ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿ ಇವಿ ಕಾರುಗಳಿಂತಲೂ ಹೆಚ್ಚು ಹಗುರ ಮತ್ತು ಹೆಚ್ಚಿನ ಕಾರ್ಯಕ್ಷಮತೆ ಪಡೆದುಕೊಂಡಿರಲಿವೆ.

ಸದ್ಯಕ್ಕೆ ಐಸಿ ಎಂಜಿನ್ ಪರಿವರ್ತಿತ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿ ಇವಿ ಕಾರುಗಳ ಉತ್ಪಾದನೆಯನ್ನು ಹೆಚ್ಚಿಸುತ್ತಿದ್ದು, ನೆಕ್ಸಾನ್ ಇವಿ ಮಾದರಿಯು ಹೆಚ್ಚಿನ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಿದೆ.

ಕಳೆದ ತಿಂಗಳು ಮಾರ್ಚ್ ಅವಧಿಯಲ್ಲಿನ ಇವಿ ಕಾರು ಮಾರಾಟವು ಕಳೆದ ವರ್ಷದ ಮಾರ್ಚ್ ಅವಧಿಯಲ್ಲಿನ 492 ಯುನಿಟ್ ಮಾರಾಟಕ್ಕೆ ಹೋಲಿಕೆ ಮಾಡಿದರೆ ಕಳೆದ ತಿಂಗಳು ಶೇ.432 ರಷ್ಟು ಹೆಚ್ಚು ಬೆಳವಣಿಗೆ ಸಾಧಿಸಿದ್ದು, 3,357 ಯುನಿಟ್ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡಿದೆ.

ಈ ಮೂಲಕ ಕಂಪನಿಯು 2021-22ರ ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ ಒಟ್ಟು 9,095 ಯುನಿಟ್ ಇವಿ ಕಾರು ಮಾರಾಟ ಮಾಡಿದ್ದು, ಇದು ಕಳೆದ ವರ್ಷದ ಅವಧಿಯಲ್ಲಿ ಇವಿ ಕಾರು ಮಾರಾಟಕ್ಕಿಂತ ಶೇ.353 ರಷ್ಟು ಹೆಚ್ಚು ಬೆಳವಣಿಗೆ ಸಾಧಿಸಿದೆ.

ನೆಕ್ಸಾನ್ ಇವಿ ಮಾದರಿಯು 2019ರಲ್ಲಿ ಮೊದಲ ಬಿಡುಗಡೆಯಾದ ನಂತರ ಹಲವಾರು ಹೊಸ ಬದಲಾವರಣೆಗಳೊಂದಿಗೆ ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದಕೊಂಡಿದ್ದು, ಬಿಡುಗಡೆಯ ನಂತರ ನೆಕ್ಸಾನ್ ಇವಿ ಇದುವರೆಗೆ ಸುಮಾರು 23 ಸಾವಿರಕ್ಕೂ ಹೆಚ್ಚು ಯುನಿಟ್ ಮಾರಾಟಗೊಂಡಂತಾಗಿದೆ.

ದಿನೇ ದಿನೇ ದುಬಾರಿಯಾಗುತ್ತಿರುವ ಇಂಧನಗಳ ಬೆಲೆ ಪರಿಣಾಮ ಹೊಸ ವಾಹನ ಖರೀದಿ ಯೋಜನೆಯಲ್ಲಿರುವ ಗ್ರಾಹಕರು ಇವಿ ವಾಹನ ಖರೀದಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಮುಂಬರುವ ದಿನಗಳಲ್ಲಿ ಇವಿ ವಾಹನಗಳ ಮಾರಾಟವು ಇನ್ನಷ್ಟು ಹೆಚ್ಚಳವಾಗುವ ನೀರಿಕ್ಷೆಯಿವೆ.

ನೆಕ್ಸಾನ್ ಇವಿ ಮೂಲಕ ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಸದ್ಯ ಅಗ್ರಸ್ಥಾನ ಕಾಯ್ದುಕೊಂಡಿರುವ ಟಾಟಾ ಮೋಟಾರ್ಸ್ ಕಂಪನಿಯು ಶೀಘ್ರದಲ್ಲಿಯೇ 2022ರ ನೆಕ್ಸಾನ್ ಇವಿ ಆವೃತ್ತಿಯನ್ನು ಹಲವು ಸುಧಾರಿತ ತಂತ್ರಜ್ಞಾನ ಪ್ರೇರಣೆಯೊಂದಿಗೆ ಬಿಡುಗಡೆ ಮಾಡಲು ಸಿದ್ದಗೊಳ್ಳುತ್ತಿದ್ದು, ಹೊಸ ಕಾರು ಪ್ರಸ್ತುತ ಮಾರುಕಟ್ಟೆಯಲ್ಲಿ ಮಾದರಿಗಿಂತಲೂ ಹೆಚ್ಚಿನ ಮೈಲೇಜ್‌ನೊಂದಿಗೆ ಹೆಚ್ಚುವರಿ ಫೀಚರ್ಸ್ ಪಡೆದುಕೊಳ್ಳಲಿದೆ.

ಸದ್ಯ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಮಾದರಿಯು ಎಕ್ಸ್‌ಎಂ, ಎಕ್ಸ್‌ಝಡ್ ಪ್ಲಸ್, ಎಕ್ಸ್‌ಝಡ್ ಪ್ಲಸ್ ಲಕ್ಸ್ ಎನ್ನುವ ಮೂರು ಪ್ರಮುಖ ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಮೂರು ವೆರಿಯೆಂಟ್‌ಗಳಲ್ಲೂ ಹಲವಾರು ಹೊಸ ಪ್ರೀಮಿಯಂ ಫೀಚರ್ಸ್‌ಗಳಿವೆ. ನೆಕ್ಸಾನ್ ಇವಿ ಕಾರಿನಲ್ಲಿ 95kW ಎಲೆಕ್ಟ್ರಿಕ್ ಮೋಟಾರ್ ಮತ್ತು 30kWh ಲಿಥೀಯಂ ಅಯಾನ್ ಬ್ಯಾಟರಿ ಪ್ಯಾಕ್ ಅಳವಡಿಸಲಾಗಿದ್ದು, 2020ರ ಆವೃತ್ತಿಯು 40kWh ಲಿಥೀಯಂ ಅಯಾನ್ ಬ್ಯಾಟರಿ ಪ್ಯಾಕ್ ಹೊಂದಬಹುದಾಗಿದೆ.

ಎಆರ್‌ಎಐ ಸಂಸ್ಥೆಯು ಪ್ರಮಾಣಿಕರಿಸದಂತೆ 30kWh ಲಿಥೀಯಂ ಅಯಾನ್ ಬ್ಯಾಟರಿ ಪ್ಯಾಕ್ ಹೊಂದಿರುವ ನೆಕ್ಸಾನ್ ಇವಿ ಕಾರು ಇಕೋ ಡ್ರೈವ್ ಮೋಡ್‌ನಲ್ಲಿ ಗರಿಷ್ಠ 312 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, 2022ರ ಆವೃತ್ತಿಯಲ್ಲಿ ಮೈಲೇಜ್ ರೇಂಜ್ ಪ್ರಮಾಣವು ಪ್ರತಿ ಚಾರ್ಜ್ 400 ಕಿ.ಮೀ ಗೆ ಹೆಚ್ಚಳವಾಗುವ ಸಾಧ್ಯತೆಗಳಿವೆ.


Click it and Unblock the Notifications








