VRL ಸಂಸ್ಥೆಯಿಂದ 1,300 ವಾಣಿಜ್ಯ ವಾಹನಗಳ ಆರ್ಡರ್ ಪಡೆದುಕೊಂಡ ಟಾಟಾ ಮೋಟಾರ್ಸ್
ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕ ಟಾಟಾ ಮೋಟಾರ್ಸ್ VRL ಲಾಜಿಸ್ಟಿಕ್ಸ್ ಲಿಮಿಟೆಡ್‌ನಿಂದ 1,300 ವಾಣಿಜ್ಯ ವಾಹನಗಳ ಪೂರೈಕೆಗೆ ಆರ್ಡರ್ ಪಡೆದುಕೊಂಡಿದೆ. VRL ಲಾಜಿಸ್ಟಿಕ್ಸ್ ಭಾರತದಲ್ಲಿ ತನ್ನ ಲಾಜಿಸ್ಟಿಕ್ಸ್ ಸರಣಿಯನ್ನು ದೊಡ್ಡ ಮತ್ತು ಸಣ್ಣ ವಾಹನಗಳೊಂದಿಗೆ ವಿಸ್ತರಿಸುವ ತವಕದಲ್ಲಿದ್ದು, ಅತಿ ಶೀಘ್ರದಲ್ಲೇ ಟಾಟಾ ಉತ್ಪನ್ನಗಳು VRL ಸಂಸ್ಥೆಗೆ ತಲುಪಲಿವೆ.

ಈ ಆರ್ಡರ್ ಟಾಟಾ ಮೋಟಾರ್ಸ್‌ನ ಮಧ್ಯಮ ಮತ್ತು ಭಾರೀ ವಾಣಿಜ್ಯ ವಾಹನ ಮತ್ತು ಭಾರತದಾದ್ಯಂತ ಕಂಪನಿಯ ಲಾಜಿಸ್ಟಿಕ್ಸ್ ಕಾರ್ಯಾಚರಣೆಗಳಿಗೆ ಸೂಕ್ತವಾದ ವಾಹನಗಳ ಶ್ರೇಣಿಯನ್ನು ಒಳಗೊಂಡಿದೆ. ವಾಹನಗಳನ್ನು ಉತ್ತಮ ಪ್ರಯಾಣ, ಹೆಚ್ಚಿನ ಇಂಧನ ದಕ್ಷತೆ ಮತ್ತು ಕಡಿಮೆ ಮಾಲೀಕತ್ವ ವೆಚ್ಚದ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ.

ಟಾಟಾ ಮೋಟಾರ್ಸ್‌ನ ವಾಣಿಜ್ಯ ವಾಹನಗಳನ್ನು 'ಪವರ್ ಆಫ್ 6' ವಿನ್ಯಾಸದ ಫಿಲಾಸಫಿ ಆಧಾರದ ಮೇಲೆ ವಿನ್ಯಾಸಗೊಳಿಸಿದೆ. ಇದು ಅತ್ಯುತ್ತಮ-ಇನ್-ಕ್ಲಾಸ್ ಡ್ರೈವಿಬಿಲಿಟಿ, ಒಟ್ಟು ಕಾರ್ಯಾಚರಣೆ ವೆಚ್ಚ, ಸೌಕರ್ಯ, ಅನುಕೂಲತೆ ಮತ್ತು ಸಂಪರ್ಕವನ್ನು ನೀಡುತ್ತದೆ. ಪ್ರಮಾಣಿತ ಫಿಟ್‌ಮೆಂಟ್‌ಗಳೊಂದಿಗೆ ಮುಂದಿನ ಪೀಳಿಗೆಯ ಡಿಜಿಟಲ್ ಪರಿಹಾರಗಳಲ್ಲಿ ಸಹಾಯ ಮಾಡುತ್ತದೆ. ಧೀರ್ಘ ಕಾಲ ಬಾಳಿಕೆಯೊಂದಿಗೆ ಮಾಲೀಕತ್ವದ ವೆಚ್ಚವನ್ನು ಕಡಿಮೆ ಮಾಡುತ್ತದೆ.

ಟಾಟಾ ಮೋಟಾರ್ಸ್ ತನ್ನ ವಾಣಿಜ್ಯ ವಾಹನಗಳಿಗೆ ಸಂಪೂರ್ಣ ಸೇವಾ ಪ್ಯಾಕೇಜ್ ಅನ್ನು ಸಹ ನೀಡುತ್ತದೆ. ಇದರ ಅಡಿಯಲ್ಲಿ, ಕಂಪನಿಯು ತನ್ನ ವಾಹನಗಳಿಗೆ ಸ್ಥಗಿತ ನೆರವು, ವಿಮೆ, ಆಕಸ್ಮಿಕ ದುರಸ್ತಿ, ವಿಸ್ತೃತ ವಾರಂಟಿ ಮತ್ತು ನಿರ್ವಹಣೆಗೆ ಸಂಬಂಧಿಸಿದ ವಿವಿಧ ಸೇವೆಗಳನ್ನು ಒದಗಿಸುತ್ತದೆ. ಈ ಹಲವಾರು ಸೇವೆಗಳನ್ನು ಗ್ರಾಹಕರು ತಮ್ಮ ಇಚ್ಛೆಗೆ ಅನುಗುಣವಾಗಿ ಕಸ್ಟಮೈಸ್ ಮಾಡಬಹುದು.

ಈ ಸಂಬಂಧ ಪ್ರತಿಕ್ರಿಯಿಸಿದ ಟಾಟಾ ಮೋಟಾರ್ಸ್ ವಾಣಿಜ್ಯ ವ್ಯವಹಾರ ಘಟಕದ ಉಪಾಧ್ಯಕ್ಷ ರಾಜೇಶ್ ಕೌಲ್, "ವಿಆರ್ಎಲ್ ಲಾಜಿಸ್ಟಿಕ್ಸ್ ಲಿಮಿಟೆಡ್‌ನಿಂದ 1,300 ವಾಹನಗಳ ಬೃಹತ್ ಆರ್ಡರ್ ಸ್ವೀಕರಿಸಲು ನಾವು ಉತ್ಸುಕರಾಗಿದ್ದೇವೆ. ನಮ್ಮ ವಾಹನಗಳು ಗ್ರಾಹಕರಿಗೆ ಸಂಪೂರ್ಣ ತೃಪ್ತಿಯನ್ನು ನೀಡುವಂತೆ ಕಾರ್ಯನಿರ್ವಹಿಸುತ್ತವೆ ಎಂಬ ವಿಶ್ವಾಸವಿದೆ. ಟಾಟಾ ಮೋಟಾರ್ಸ್‌ನಲ್ಲಿ ನಮ್ಮ ವಾಹನಗಳಿಗೆ ಮಾಲಿಕತ್ವದ ಕಡಿಮೆ ವೆಚ್ಚವನ್ನು ನೀಡಲು ಪ್ರಯತ್ನಿಸುತ್ತಿದ್ದೇವೆ ಎಂದರು.

ಅತ್ಯುತ್ತಮ ಚಾಲನಾ ಸಾಮರ್ಥ್ಯ, ಹೆಚ್ಚಿನ ಮೈಲೇಜ್ ಮತ್ತು ಕಡಿಮೆ ನಿರ್ವಹಣಾ ವೆಚ್ಚದ ಆಧಾರದ ಮೇಲೆ ನಮ್ಮ ವಾಹನಗಳನ್ನು ಆಯ್ಕೆ ಮಾಡಲಾಗಿದೆ. ನಮ್ಮ ವ್ಯಾಪಕ ಸೇವಾ ನೆಟ್‌ವರ್ಕ್ ದೇಶದ ಎಲ್ಲಾ ಮೂಲೆಗಳಲ್ಲಿ ಉತ್ತಮ ಸೇವಾ ಬೆಂಬಲವನ್ನು ಖಾತ್ರಿಗೊಳಿಸುತ್ತದೆ. ನಾವು VRL ಲಾಜಿಸ್ಟಿಕ್ಸ್ ಲಿಮಿಟೆಡ್‌ನೊಂದಿಗೆ ಫಲಪ್ರದ ಪಾಲುದಾರಿಕೆಯನ್ನು ಎದುರು ನೋಡುತ್ತಿದ್ದೇವೆ. ಅವರ ಸುಗಮ ಕಾರ್ಯಾಚರಣೆಗಳಿಗೆ ಸಾಧ್ಯವಾದಷ್ಟು ಉತ್ತಮ ಬೆಂಬಲವನ್ನು ನೀಡುತ್ತೇವೆ ಎಂದರು."

ಟಾಟಾ ಮೋಟಾರ್ಸ್ ಪ್ರಸ್ತುತ ಪ್ರಯಾಣಿಕ ವಾಹನಗಳ ಎಲೆಕ್ಟ್ರಿಕ್ ಮತ್ತು ಸಿಎನ್‌ಜಿ ಕಾರುಗಳತ್ತ ಗಮನ ಹರಿಸುತ್ತಿದೆ. ಟಾಟಾ ಮೋಟಾರ್ಸ್‌ನ ಟಿಯಾಗೋ ಹ್ಯಾಚ್‌ಬ್ಯಾಕ್ ಮತ್ತು ಟಿಗೋರ್ ಸೆಡಾನ್‌ನ CNG ಆವೃತ್ತಿಗಳನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಯಿತು. ಟಾಟಾ ಮೋಟಾರ್ಸ್ ಇತ್ತೀಚೆಗೆ ಟಾಟಾ ಕರ್ವ್ವ್ ಎಲೆಕ್ಟ್ರಿಕ್ ಎಸ್‌ಯುವಿ ಕೂಪೆ ಪರಿಕಲ್ಪನೆಯನ್ನು ಅನಾವರಣಗೊಳಿಸಿದೆ.

ಇದನ್ನು ಕರ್ವ್ ಎಂದೂ ಸಹ ಕರೆಯುತ್ತಾರೆ. ಈ ಕಾರಿನ ಉತ್ಪಾದನಾ ಆವೃತ್ತಿಯು 2024 ರಲ್ಲಿ ಮಾರಾಟಕ್ಕೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ. ತಿಂಗಳ ಆರಂಭದಲ್ಲಿ, ಟಾಟಾ ಮೋಟಾರ್ಸ್ ತನ್ನ ನೆಕ್ಸಾನ್ ಎಲೆಕ್ಟ್ರಿಕ್ ಎಸ್‌ಯುವಿಯ ನವೀಕರಿಸಿದ ಆವೃತ್ತಿಯನ್ನು ಬಿಡುಗಡೆ ಮಾಡಿದೆ, ಅದು ಈಗಾಗಲೇ ಮಾರಾಟದಲ್ಲಿದೆ.

ಇದರ ನಂತರ ಟಾಟಾ ಮೋಟಾರ್ಸ್, ಅಲ್ಟ್ರಾಸ್ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಐಸಿ ಎಂಜಿನ್ ಮಾದರಿಯ ಎಲೆಕ್ಟ್ರಿಕ್ ಆವೃತ್ತಿಯನ್ನು ಬಿಡುಗಡೆ ಮಾಡಲಿದೆ. ಪ್ರಸ್ತುತ, ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ SUV ಅದರ ಕಡಿಮೆ ಬೆಲೆಯಿಂದಾಗಿ ಭಾರತೀಯ ಮಾರುಕಟ್ಟೆಯಲ್ಲಿ ನಂ. 1 ಸ್ಥಾನಕ್ಕೇರಿದೆ. ಆದರೆ ಅಲ್ಟ್ರಾಸ್ ಎಲೆಕ್ಟ್ರಿಕ್ ಪ್ರೀಮಿಯಂ ಹ್ಯಾಚ್‌ಬ್ಯಾಕ್ ನೆಕ್ಸಾನ್ ಎಲೆಕ್ಟ್ರಿಕ್ ಎಸ್‌ಯುವಿ ಕಾರಿಗೆ ಹೋಲಿಸಿದರೆ ಕಡಿಮೆ ಬೆಲೆಗೆ ಮಾರಾಟವಾಗುವ ನಿರೀಕ್ಷೆಯಿದೆ.

ಹಾಗಾಗಿ ಈ ಮಾದರಿಯು ಗ್ರಾಹಕರಲ್ಲಿ ಕುತೂಹಲ ಮೂಡಿಸಿದೆ. ಟಾಟಾ ಮೋಟಾರ್ಸ್ ಇತ್ತೀಚೆಗೆ ಅಲ್ಟ್ರಾಸ್ ಕಾರಿನ ಡ್ಯುಯಲ್-ಕ್ಲಚ್ ಸ್ವಯಂಚಾಲಿತ ಮಾದರಿಯನ್ನು ಪರಿಚಯಿಸಿದೆ. ಇದರ ನಂತರ ಅಲ್ಟ್ರಾಸ್ ಕಾರಿನ ಎಲೆಕ್ಟ್ರಿಕ್ ಆವೃತ್ತಿಯು ಬರಲಿದೆ. ಮಾರುತಿ ಸುಜುಕಿ ಮತ್ತು ಹ್ಯುಂಡೈ ನಂತರ ಟಾಟಾ ಮೋಟಾರ್ಸ್ ಭಾರತೀಯ ಮಾರುಕಟ್ಟೆಯಲ್ಲಿ ಕಾರುಗಳ ಮಾರಾಟದಲ್ಲಿ ಮೂರನೇ ಸ್ಥಾನದಲ್ಲಿದೆ.

ಪ್ರಯಾಣಿಕ ವಾಹನಗಳಲ್ಲದೆ, ಟಾಟಾ ಮೋಟಾರ್ಸ್ ಲಾರಿ ಮತ್ತು ಬಸ್‌ಗಳಂತಹ ವಾಣಿಜ್ಯ ವಾಹನಗಳನ್ನು ಸಹ ತಯಾರಿಸುತ್ತುದ್ದು, ವಾಣಿಜ್ಯ ವಾಹನವಾಗಿ ಟಾಟಾ ಮೋಟಾರ್ಸ್ ಭಾರತದ ಅತಿದೊಡ್ಡ ಕಂಪನಿಯಾಗಿ ಹೊರಹೊಮ್ಮಿದೆ. ಈ ಹಿನ್ನೆಲೆಯಲ್ಲೇ ಟಾಟಾ ಮೋಟಾರ್ಸ್ ಇದೀಗ ಅತಿ ದೊಡ್ಡ 'ಆರ್ಡರ್' ಪಡೆದುಕೊಂಡಿದೆ.


Click it and Unblock the Notifications