ಒಂದೇ ಬಾರಿಗೆ 250 ಎಲೆಕ್ಟ್ರಿಕ್ ಕಾರುಗಳ ವಿತರಣೆಗೆ ಬೇಡಿಕೆ ಪಡೆದುಕೊಂಡ ಟಾಟಾ ಮೋಟಾರ್ಸ್
ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಪರಿಸರ ಸ್ನೇಹಿ ವಾಹನಗಳಾದ ಎಲೆಕ್ಟ್ರಿಕ್ ಮಾದರಿಗಳ ಬಳಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಕೇಂದ್ರ ಮತ್ತ ರಾಜ್ಯ ಸರ್ಕಾರಗಳ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಮುಖ ಇಲಾಖೆಗಳು ತಮ್ಮ ಅಧಿಕೃತ ವಾಹನಗಳನ್ನು ಸಾಂಪ್ರಾದಾಯಿಕ ಡೀಸೆಲ್ ವಾಹನಗಳಿಂದ ಇವಿ ಮಾದರಿಗಳತ್ತ ಬದಲಾವಣೆ ಮಾಡಿಕೊಳ್ಳುತ್ತಿವೆ.

ಇತ್ತೀಚೆಗೆ ಮಹರಾಷ್ಟ್ರ ಸರ್ಕಾರವು ಔರಂಗಾಬಾದ್ ಮಿಷನ್ ಗ್ರಿನ್ ಮೊಲಿಬಿಟಿಗಾಗಿ ಒಂದೇ ಬಾರಿಗೆ ಸುಮಾರು 250 ಟಾಟಾ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸಿದ್ದು, ಮಿಷನ್ ಗ್ರಿನ್ ಮೊಲಿಬಿಟಿ ಅಡಿ ಪ್ರಮುಖ ಸರ್ಕಾರಿ ಇಲಾಖೆಗಳ ಅಧಿಕೃತ ಡೀಸೆಲ್ ಕಾರುಗಳನ್ನು ಎಲೆಕ್ಟ್ರಿಕ್ ಮಾದರಿಗಳಿಗೆ ಬದಲಾಯಿಸುತ್ತಿದೆ.

ಔರಂಗಾಬಾದ್ ಮಿಷನ್ ಗ್ರಿನ್ ಮೊಲಿಬಿಟಿ ಯೋಜನೆ ಅಡಿ ಖರೀದಿಸಲಾದ 250 ಎಲೆಕ್ಟ್ರಿಕ್ ಕಾರುಗಳಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಶೀಘ್ರದಲ್ಲಿಯೇ 101 ಕಾರುಗಳನ್ನು ವಿತರಣೆ ಮಾಡುವುದಾಗಿ ಹೇಳಿಕೊಂಡಿದ್ದು, ಎರಡನೇ ಹಂತದಲ್ಲಿ ಇನ್ನುಳಿದ ಕಾರುಗಳನ್ನು ವಿತರಣೆ ಮಾಡುವ ಯೋಜನೆ ಹೊಂದಿದೆ.

ಟಾಟಾ ಮೋಟಾರ್ಸ್ ಕಂಪನಿಗೆ ಸಲ್ಲಿಕೆಯಾಗಿರುವ 250 ಎಲೆಕ್ಟ್ರಿಕ್ ಕಾರುಗಳಲ್ಲಿ 175 ಯನಿಟ್ ನೆಕ್ಸಾನ್ ಇವಿ ಮಾದರಿಗಳಾಗಿದ್ದರೆ ಇನ್ನುಳಿದ 75 ಯುನಿಟ್ ಟಿಗೋರ್ ಇವಿ ಮಾದರಿಯಾಗಿದ್ದು, ಟಾಟಾ ಮೋಟಾರ್ಸ್ ಕಂಪನಿಗೆ ಇದುವರೆಗೆ ಸಲ್ಲಿಕೆಯಾದ ಅತಿ ದೊಡ್ಡ ಬೇಡಿಕೆಯಿದಾಗಿದೆ.

ಟಾಟಾ ಮೋಟಾರ್ಸ್ ಕಂಪನಿಯು ಸದ್ಯ ಇವಿ ಕಾರು ಮಾರಾಟದಲ್ಲಿ ವಿವಿಧ ಮಾದರಿಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದ್ದು, ನೆಕ್ಸಾನ್ ಇವಿ, ಟಿಗೋರ್ ಇವಿ, ಎಕ್ಸ್‌ಪ್ರೆಸ್-ಟಿ ಮಾದರಿಗಳ ಮೂಲಕ ಇವಿ ಕಾರು ಮಾರಾಕಟ್ಟೆಯಲ್ಲಿ ಶೇ. 87 ರಷ್ಟು ಪಾಲು ತಮ್ಮದಾಗಿಸಿಕೊಂಡಿವೆ.

ನೆಕ್ಸಾನ್ ಇವಿ ಮತ್ತು ಟಿಗೋರ್ ಇವಿ ಮಾದರಿಗಳ ಮೂಲಕ ಪ್ರಯಾಣಿಕ ಕಾರು ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿರುವ ಟಾಟಾ ಕಂಪನಿಯು ವಾಣಿಜ್ಯ ವಾಹನ ಬಳಕೆದಾರರಿಗಾಗಿಯೇ ವಿಶೇಷವಾಗಿ ಸಿದ್ದಗೊಂಡಿರುವ ಎಕ್ಸ್‌ಪ್ರೆಸ್-ಟಿ ಇವಿ ಮಾದರಿಯ ಮುಲಕ ಕ್ಯಾಬ್ ಸೇವಾ ವಿಭಾಗದಲ್ಲೂ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದೆ.

ಎಲೆಕ್ಟ್ರಿಕ್ ವಾಹನ ಮಾರಾಟ ಆರಂಭಿಸಿದ ನಂತರ ಹಲವಾರು ಹೊಸ ಬದಲಾವಣೆಗಳನ್ನು ಪರಿಚಯಿಸಿರುವ ಟಾಟಾ ಮೋಟಾರ್ಸ್ ಕಂಪನಿಯು ಹೊಸ ಇವಿ ವಾಹನಗಳ ಮೂಲಕ ಉತ್ತಮ ಬೇಡಿಕೆ ಕಂಡುಕೊಳ್ಳುವಲ್ಲಿ ಯಶಸ್ವಿಯಾಗುತ್ತಿದೆ.

ದಿನೇ ದಿನೇ ದುಬಾರಿಯಾಗುತ್ತಿರುವ ಇಂಧನಗಳ ಬೆಲೆ ಪರಿಣಾಮ ಹೊಸ ವಾಹನ ಖರೀದಿ ಯೋಜನೆಯಲ್ಲಿರುವ ಗ್ರಾಹಕರು ಇವಿ ವಾಹನ ಖರೀದಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಮುಂಬರುವ ದಿನಗಳಲ್ಲಿ ಇವಿ ವಾಹನಗಳ ಮಾರಾಟವು ಇನ್ನಷ್ಟು ಹೆಚ್ಚಳವಾಗುವ ನೀರಿಕ್ಷೆಯಿವೆ.

ಟಾಟಾ ಮೋಟಾರ್ಸ್ ಕಂಪನಿಯು 2019ರಲ್ಲಿ ಮೊದಲ ಬಾರಿಗೆ ಪ್ರಯಾಣಿಕ ಬಳಕೆಯ ಎಲೆಕ್ಟ್ರಿಕ್ ಕಾರು ಪರಿಚಯಿಸಿದ ನಂತರ ಟಾಟಾ ಕಂಪನಿಯು ಇದುವರೆಗೆ ಸುಮಾರು 20 ಸಾವಿರ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡಿದ್ದು, ನೆಕ್ಸಾನ್ ಇವಿ ಕಾರು ಕಂಪನಿಯ ಇವಿ ವಾಹನ ಉತ್ಪಾದನಾ ಯೋಜನೆಗೆ ಹೊಸ ಆಯಾಮ ನೀಡಿದೆ.

ಆರಂಭದಲ್ಲಿ ಟಿಗೋರ್ ಇವಿ ಪರಿಚಯಿಸಿದ್ದ ಟಾಟಾ ಮೋಟಾರ್ಸ್ ಕಂಪನಿಯು ತದನಂತರ ನೆಕ್ಸಾನ್ ಇವಿ ಮಾದರಿಯನ್ನು ಪರಿಚಯಿಸಿತ್ತು. ತದನಂತರ ವಾಣಿಜ್ಯ ಬಳಕೆದಾರರಿಗಾಗಿ ಹೊಸದಾಗಿ ಎಕ್ಸ್‌ಪ್ರೆಸ್-ಟಿ ಇವಿ ಮಾದರಿಯ ಮಾರಾಟಕ್ಕೆ ಚಾಲನೆ ನೀಡಿತ್ತು.

ಟಿಗೋರ್ ಇವಿ ಮಾದರಿಯನ್ನು ಇತ್ತೀಚೆಗೆ ಹೊಸ ತಂತ್ರಜ್ಞಾನ ಪ್ರೇರಣೆಯೊಂದಿಗೆ ಬಿಡುಗಡೆ ಮಾಡಲಾಗಿದ್ದು, ಟಿಗೋರ್ ಇವಿ ಕಾರು ನೆಕ್ಸಾನ್ ಇವಿ ಮಾದರಿಯಲ್ಲೇ ಅತ್ಯುತ್ತಮ ಮೈಲೇಜ್, ಪರ್ಫಾಮೆನ್ಸ್ ಮೂಲಕ ಗ್ರಾಹಕರನ್ನು ಸೆಳೆಯುತ್ತಿದೆ.

ಟಾಟಾ ಮೋಟಾರ್ಸ್ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಕಾರು ಮಾದರಿಗಳನ್ನು ಬಿಡುಗಡೆ ಮಾಡುವ ಸಿದ್ದತೆಯಲ್ಲಿದ್ದು, ಕಂಪನಿಯು ಇವಿ ವಾಹನಗಳ ಅಭಿವೃದ್ದಿ, ಉತ್ಪಾದನೆ ಮತ್ತು ಮಾರಾಟಕ್ಕಾಗಿ ಪ್ರತ್ಯೇಕ ಪ್ಲ್ಯಾಟ್‌ಫಾರ್ಮ್ ಆರಂಭಿಸಿದೆ.

ಸದ್ಯ ಮಾರುಕಟ್ಟೆಯಲ್ಲಿರುವ ಇವಿ ಕಾರುಗಳನ್ನು ಸಾಮಾನ್ಯ ಕಾರುಗಳ ಉತ್ಪಾದನಾ ಪ್ಲ್ಯಾಟ್‌ಫಾರ್ಮ್‌ನಲ್ಲಿ ಅಭಿವೃದ್ದಿಪಡಿಸುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ಭವಿಷ್ಯದ ಬೃಹತ್ ಯೋಜನೆಗಳಿಗಾಗಿ ಇದೀಗ ಪ್ರತ್ಯೇಕ ನಿಯಂತ್ರಣ ಹೊಂದಿರುವ ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್ (TPEML) ಅಂಗಸಂಸ್ಥೆಯನ್ನು ಆರಂಭಿಸಿದೆ.

ಟಾಟಾ ಮೋಟಾರ್ಸ್ ಕಂಪನಿಯ ಹೊಸ ಅಂಗಸಂಸ್ಥೆಯನ್ನು ರೂ. 700 ಕೋಟಿ ರೂಪಾಯಿ ಆರಂಭಿಕ ಹೂಡಿಕೆಯೊಂದಿಗೆ ಆರಂಭಗೊಳಿಸಿದ್ದು, ಪ್ರತ್ಯೇಕ ಪ್ಲ್ಯಾಟ್‌ಫಾರ್ಮ ಮೂಲಕ ಇವಿ ವಾಹನಗಳ ಮೇಲೆ ಹೆಚ್ಚಿನ ಗಮನಹರಿಸಲು ನಿರ್ಧರಿಸಿದೆ.

ಎಲೆಕ್ಟ್ರಿಕ್ ವಾಹನಗಳ ಅಭಿವೃದ್ದಿ, ಉತ್ಪಾದನೆ ಮತ್ತು ಮಾರಾಟಕ್ಕಾಗಿ ಬಹುತೇಕ ವಾಹನ ಕಂಪನಿಗಳು ಪ್ರತ್ಯೇಕ ವಿಭಾಗಗಳನ್ನು ತೆರೆಯುತ್ತಿದ್ದು, ಟಾಟಾ ಮೋಟಾರ್ಸ್ ಕೂಡಾ ಇದೀಗ ಅಂಗಸಂಸ್ಥೆಯ ಮೂಲಕ ಇವಿ ಕಾರುಗಳ ಮಾರಾಟದಲ್ಲಿ ಮತ್ತಷ್ಟು ಮುಂಚೂಣಿ ಸಾಧಿಸಲಿದೆ.


Click it and Unblock the Notifications








