ಶೀಘ್ರದಲ್ಲಿ ಅನಾವರಣಗೊಳ್ಳಲಿದೆ ಟಾಟಾ ಬಹುನೀರಿಕ್ಷಿತ ಟಾಟಾ ಆಲ್‌ಟ್ರೊಜ್ ಇವಿ
ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ಶೀಘ್ರದಲ್ಲಿಯೇ ಮತ್ತಷ್ಟು ಹೊಸ ಇವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲು ಸಿದ್ದವಾಗುತ್ತಿದ್ದು, ಬಹುನೀರಿಕ್ಷಿತ ಆಲ್‌ಟ್ರೊಜ್ ಇವಿ ಕಾರು ಮಾದರಿಯು ಟಾಟಾ ಮುಂದಿನ ಹೊಸ ಇವಿ ಕಾರು ಮಾದರಿಯಾಗಿ ರಸ್ತೆಗಿಳಿಯಲು ಸಿದ್ದವಾಗುತ್ತಿದೆ.

ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ಹೊಸ ಕಾರು ಮಾರಾಟದಲ್ಲಿ ಸಾಕಷ್ಟು ಬದಲಾವಣೆ ಪರಿಚಯಿಸಿರುವ ಟಾಟಾ ಮೋಟಾರ್ಸ್ ಕಂಪನಿಯು ಉತ್ತಮ ಬೇಡಿಕೆ ಕಾಯ್ದುಕೊಂಡಿದ್ದು, ಎಲೆಕ್ಟ್ರಿಕ್ ಕಾರು ಮಾರಾಟದಲ್ಲೂ ಮುಂಚೂಣಿ ಸಾಧಿಸುತ್ತಿದೆ. ಕಂಪನಿಯು ನೆಕ್ಸಾನ್ ಎಲೆಕ್ಟ್ರಿಕ್ ಮತ್ತು ಟಿಗೋರ್ ಎಲೆಕ್ಟ್ರಿಕ್ ಕಾರುಗಳ ಸದ್ಯ ಇವಿ ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದು, ಹೊಸ ಆಲ್‌ಟ್ರೊಜ್ ಇವಿ ಕೂಡಾ ಭರ್ಜರಿ ಬೇಡಿಕೆ ತಂದುಕೊಡುವ ನೀರಿಕ್ಷೆಗಳಿವೆ.

ಟಾಟಾ ಮೋಟಾರ್ಸ್ ಕಂಪನಿಯು ನೆಕ್ಸಾನ್ ಇವಿ ಕಾರು ಮಾದರಿಯೊಂದಿಗೆ ಹಲವಾರು ಹೊಸ ದಾಖಲೆಗಳಿಗೆ ಕಾರಣವಾಗಿದ್ದು, ಹೊಸದಾಗಿ ಬಿಡುಗಡೆಯಾಗಲಿರುವ ಆಲ್‌ಟ್ರೊಜ್ ಕಾರು ಕೂಡಾ ಉತ್ತಮ ಬೇಡಿಕೆ ಪಡೆದುಕೊಳ್ಳಲಿದೆ.

ಹೊಸ ಆಲ್‌ಟ್ರೊಜ್ ಇವಿ ಮಾದರಿಯನ್ನು ಕಂಪನಿಯು ಏಪ್ರಿಲ್ 6 ರಂದು ಉತ್ಪಾದನಾ ಮಾದರಿಯೊಂದಿಗೆ ಅನಾವರಣಗೊಳ್ಳುವ ಸಾಧ್ಯತೆಗಳಿದ್ದು, ಅನಾವರಣಗೊಂಡ ಕೆಲವೇ ದಿನಗಳಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ.

ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಟಾಟಾ ಮೋಟಾರ್ಸ್ ಜಿಪ್‌ಟ್ರಾನ್ ತಂತ್ರಜ್ಞಾನದ ಆಧಾರದ ಮೇಲೆ ನಿರ್ಮಾಣಗೊಳಿಸುತ್ತಿದ್ದು, ಮುಂಬರುವ ಎಲೆಕ್ಟ್ರಿಕ್ ಕಾರುಗಳನ್ನು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಇವಿ ಕಾರುಗಳಿಂತಲೂ ಹೆಚ್ಚಿನ ಮಟ್ಟದ ಮೈಲೇಜ್ ರೇಂಜ್ ಹೊಂದಿರುವ ಬ್ಯಾಟರಿ ಪ್ಯಾಕ್ ನೀಡುವ ಸುಳಿವು ನೀಡಿದೆ.

ನೆಕ್ಸಾನ್ ಇವಿ ಮತ್ತು ಟಿಗೋರ್ ಇವಿ ಮೂಲಕ ಗ್ರಾಹಕರ ಗರಿಷ್ಠ ಬೇಡಿಕೆಗಳನ್ನು ಪೂರೈಸುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ಭವಿಷ್ಯದ ಕಾರುಗಳಲ್ಲಿ ಇನ್ನು ಕೆಲವು ಬದಲಾವಣೆಗಳನ್ನು ಪರಿಚಯಿಸಲು ಸಿದ್ದವಾಗಿದ್ದು, ಹೊಸದಾಗಿ ಬಿಡುಗಡೆಯಾಗಲಿರುವ ಆಲ್‌ಟ್ರೊಜ್ ಇವಿಯಲ್ಲಿ ಪ್ರತಿ ಚಾರ್ಜ್‌ಗೆ 400 ಕಿ.ಮೀ ಗಿಂತಲೂ ಅಧಿಕ ಮೈಲೇಜ್ ಹೊಂದಿರುವ ಬ್ಯಾಟರಿ ಪ್ಯಾಕ್ ನೀಡಲು ನಿರ್ಧರಿಸಿದೆ.

ಟಾಟಾ ಮೋಟಾರ್ಸ್ ಕಂಪನಿಯು ಭವಿಷ್ಯದ ಇವಿ ಕಾರುಗಳಿಗಾಗಿ ಪ್ರಸ್ತುತ ಬಳಕೆಯಲ್ಲಿರುವ ಬ್ಯಾಟರಿ ರೇಂಜ್‌ಗಿಂತಲೂ ಶೇ.20 ರಿಂದ ಶೇ.40 ರಷ್ಟು ಸುಧಾರಣೆ ಕಂಡಿರುವ ಬ್ಯಾಟರಿ ಪ್ಯಾಕ್ ಜೋಡಣೆ ಮಾಡಲು ನಿರ್ಧರಿಸಿದ್ದು, ಆಲ್‌ಟ್ರೊಜ್ ಇವಿ ಕಾರು ಸಹ ಸರಾಸರಿಯಾಗಿ ಪ್ರತಿ ಚಾರ್ಜ್‌ಗೆ 400 ಕಿ.ಮೀ ಗಿಂತಲೂ ಮೈಲೇಜ್ ನೀಡುವ ಬ್ಯಾಟರಿ ಜೋಡಣೆ ಹೊಂದುವುದು ಸ್ಪಷ್ಟವಾಗಿದೆ.

ಸದ್ಯ ನೆಕ್ಸಾನ್ ಇವಿ ಕಾರಿನಲ್ಲಿ ಟಾಟಾ ಕಂಪನಿಯು ಪ್ರತಿ ಚಾರ್ಜ್‌ಗೆ ಗರಿಷ್ಠ 312 ಕಿ.ಮೀ ಮೈಲೇಜ್ ಹಿಂದಿರುಗಿಸುವ 30.2kWh ಬ್ಯಾಟರಿ ಜೋಡಣೆ ಮಾಡಿದ್ದು, ಹೊಸ ಬ್ಯಾಟರಿ ಪ್ಯಾಕ್ ಪ್ರಸ್ತುತ ಮಾದರಿಗಿಂತಲೂ ಹೆಚ್ಚು ಮೈಲೇಜ್ ನೀಡುವುದರ ಜೊತೆಗೆ ಅತಿ ಕಡಿಮೆ ಅವಧಿಯಲ್ಲಿ ಗರಿಷ್ಠ ಚಾರ್ಜ್ ಆಗುವ ವೈಶಿಷ್ಟ್ಯತೆ ಹೊಂದಿರಲಿದೆ.

ಹೊಸ ಆಲ್‌ಟ್ರೊಜ್ ಇವಿ ಕಾರಿನ ಬ್ಯಾಟರಿ ಪ್ಯಾಕ್ ಪರೀಕ್ಷೆಗಾಗಿ ವಿವಿಧ ಹಂತದ ರೋಡ್ ಟೆಸ್ಟಿಂಗ್ ನಡೆಸುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ಹೊಸ ಕಾರಿನ ಮೂಲಕ ಇವಿ ಕಾರು ಮಾರಾಟದಲ್ಲಿ ಸಂಚಲನ ಮೂಡಿಸುವ ತವಕದಲ್ಲಿದೆ.

ಹೊಸ ಕಾರು ಕೇಂದ್ರ ಸರ್ಕಾರದ ಸಬ್ಸಡಿಯೊಂದಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.10 ಲಕ್ಷದಿಂದ ರೂ. 13 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳುವ ನೀರಿಕ್ಷೆಗಳಿದ್ದು, ಸಾಮಾನ್ಯ ಮಾದರಿಗಿಂತಲೂ ಹೆಚ್ಚಿನ ಮಟ್ಟದ ಪ್ರೀಮಿಯಂ ಫೀಚರ್ಸ್ ಮತ್ತು ಸುರಕ್ಷಾ ಸೌಲಭ್ಯಗಳು ಇವಿ ಮಾದರಿಯಲ್ಲಿವೆ.

ಇನ್ನು ಎಲೆಕ್ಟ್ರಿಕ್ ವಾಹನ ಮಾರಾಟ ಆರಂಭಿಸಿದ ನಂತರ ಹಲವಾರು ಹೊಸ ಬದಲಾವಣೆಗಳನ್ನು ಪರಿಚಯಿಸಿರುವ ಟಾಟಾ ಮೋಟಾರ್ಸ್ ಕಂಪನಿಯು ಹೊಸ ಇವಿ ವಾಹನಗಳ ಮೂಲಕ ಉತ್ತಮ ಬೇಡಿಕೆ ಕಂಡುಕೊಳ್ಳುವಲ್ಲಿ ಯಶಸ್ವಿಯಾಗುತ್ತಿದೆ.

2019ರಲ್ಲಿ ಮೊದಲ ಬಾರಿಗೆ ಪ್ರಯಾಣಿಕ ಬಳಕೆಯ ಎಲೆಕ್ಟ್ರಿಕ್ ಕಾರು ಪರಿಚಯಿಸಿದ ನಂತರ ಕಂಪನಿಯು ಇದುವರೆಗೆ ಸುಮಾರು 20 ಸಾವಿರಕ್ಕೂ ಹೆಚ್ಚು ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡಿದ್ದು, ನೆಕ್ಸಾನ್ ಇವಿ ಕಾರು ಕಂಪನಿಯ ಇವಿ ವಾಹನ ಉತ್ಪಾದನಾ ಯೋಜನೆಗೆ ಹೊಸ ಆಯಾಮ ನೀಡಿದೆ.

ಇದೇ ಕಾರಣಕ್ಕೆ ಕಂಪನಿಯು ಇವಿ ವಾಹನಗಳ ಅಭಿವೃದ್ದಿ, ಉತ್ಪಾದನೆ ಮತ್ತು ಮಾರಾಟಕ್ಕಾಗಿ ಪ್ರತ್ಯೇಕ ಪ್ಲ್ಯಾಟ್‌ಫಾರ್ಮ್ ಆರಂಭಿಸಿದ್ದು, ಪ್ರತ್ಯೇಕ ನಿಯಂತ್ರಣ ಹೊಂದಿರುವ ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್ (TPEML) ಅಂಗಸಂಸ್ಥೆಯನ್ನು ತೆರೆದಿದೆ.

ಟಾಟಾ ಮೋಟಾರ್ಸ್ ಕಂಪನಿಯ ಹೊಸ ಅಂಗಸಂಸ್ಥೆಯನ್ನು ರೂ. 700 ಕೋಟಿ ರೂಪಾಯಿ ಆರಂಭಿಕ ಹೂಡಿಕೆಯೊಂದಿಗೆ ಆರಂಭಗೊಳಿಸಿದ್ದು, ಪ್ರತ್ಯೇಕ ಪ್ಲ್ಯಾಟ್‌ಫಾರ್ಮ ಮೂಲಕ ಇವಿ ವಾಹನಗಳ ಮೇಲೆ ಹೆಚ್ಚಿನ ಗಮನಹರಿಸಲು ನಿರ್ಧರಿಸಿದೆ.

ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್ ಕಂಪನಿಯು ಇವಿ ವಾಹನಗಳ ಎಂಜಿನ್, ಮೋಟಾರ್, ಬಿಡಿಭಾಗಗಳು, ಪರಿಕರಗಳು, ಪರಿಕರಗಳ ಸ್ಥಾಪನೆ, ಸ್ವಾಧೀನಪಡಿಸಿಕೊಳ್ಳುವಿಕೆ, ಜೊತೆಗೆ ಜೋಡಣೆ, ನಿರ್ಮಾಣ, ತಯಾರಿಕೆ, ಮಾರಾಟ, ಮಾರಾಟದ ನಂತರದ ಸೇವೆಗಳು, ಮಾರ್ಕೆಟಿಂಗ್ ಮತ್ತು ಸೇವಾ ಸೌಲಭ್ಯಗಳನ್ನು ಪ್ರತ್ಯೇಕವಾಗಿ ನಿರ್ವಹಿಸಲಿದೆ.


Click it and Unblock the Notifications








