ಹೊಸ ಸಿಗ್ಮಾ ಪ್ಲಾಟ್‌ಫಾರ್ಮ್‌ನಡಿಯಲ್ಲಿ ಉತ್ಪಾದನೆಗೊಳ್ಳಲಿದೆ ಟಾಟಾ ಹೊಸ ಸಿಯೆರಾ ಇವಿ ಕಾರು
ದೇಶಿಯ ಮಾರುಕಟ್ಟೆಯಲ್ಲಿನ ಕಾರು ಮಾರಾಟದಲ್ಲಿ ಸದ್ಯ ಮುಂಚೂಣಿಯಲ್ಲಿರುವ ಟಾಟಾ ಮೋಟಾರ್ಸ್ ಕಂಪನಿಯು ಮುಂದಿನ ಐದು ವರ್ಷಗಳಲ್ಲಿ ತನ್ನ ಇವಿ ಶ್ರೇಣಿಯನ್ನು ಹೆಚ್ಚಿಸುವ ಯೋಜನೆಯಲ್ಲಿದ್ದು, ಹೊಸ ಯೋಜನೆಗಾಗಿ ಕಂಪನಿಯು ಭಾರೀ ಪ್ರಮಾಣದಲ್ಲಿ ಹೂಡಿಕೆ ಮಾಡಿದೆ.

ಟಾಟಾ ಮೋಟಾರ್ಸ್ ಕಂಪನಿಯು ನೆಕ್ಸಾನ್ ಇವಿ, ಟಿಗೋರ್ ಇವಿ ನಂತ ಗ್ರಾಹಕರ ಬೇಡಿಕೆಯೆಂತೆ ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಕಾರು ಮಾದರಿಗಳನ್ನು ಬಿಡುಗಡೆ ಮಾಡುವ ಸಿದ್ದತೆಯಲ್ಲಿದ್ದು, ಕಂಪನಿಯು ಇವಿ ವಾಹನಗಳ ಅಭಿವೃದ್ದಿ, ಉತ್ಪಾದನೆ ಮತ್ತು ಮಾರಾಟಕ್ಕಾಗಿ ಪ್ರತ್ಯೇಕ ಪ್ಲ್ಯಾಟ್‌ಫಾರ್ಮ್ ಕೂಡಾ ಆರಂಭಿಸಿದೆ.

ಸದ್ಯ ಮಾರುಕಟ್ಟೆಯಲ್ಲಿರುವ ಇವಿ ಕಾರುಗಳನ್ನು ಸಾಮಾನ್ಯ ಕಾರುಗಳ ಉತ್ಪಾದನಾ ಪ್ಲ್ಯಾಟ್‌ಫಾರ್ಮ್‌ನಲ್ಲಿ ಅಭಿವೃದ್ದಿಪಡಿಸುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ಭವಿಷ್ಯದ ಬೃಹತ್ ಯೋಜನೆಗಳಿಗಾಗಿ ಇದೀಗ ಪ್ರತ್ಯೇಕ ನಿಯಂತ್ರಣ ಹೊಂದಿರುವ ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್ (TPEML) ಅಂಗಸಂಸ್ಥೆಯನ್ನು ಆರಂಭಿಸಿದೆ.

ಟಾಟಾ ಮೋಟಾರ್ಸ್ ಕಂಪನಿಯ ಹೊಸ ಅಂಗಸಂಸ್ಥೆಯನ್ನು ರೂ. 700 ಕೋಟಿ ರೂಪಾಯಿ ಆರಂಭಿಕ ಹೂಡಿಕೆಯೊಂದಿಗೆ ಆರಂಭಗೊಳಿಸಿದ್ದು, ಪ್ರತ್ಯೇಕ ಪ್ಲ್ಯಾಟ್‌ಫಾರ್ಮ ಮೂಲಕ ಇವಿ ವಾಹನಗಳ ಮೇಲೆ ಹೆಚ್ಚಿನ ಗಮನಹರಿಸಲು ನಿರ್ಧರಿಸಿದೆ.

ಎಲೆಕ್ಟ್ರಿಕ್ ವಾಹನಗಳ ಅಭಿವೃದ್ದಿಗಾಗಿ ಈಗಾಗಲೇ ಐಸಿ ಎಂಜಿನ್ ಪರಿವರ್ತಿತ ಪ್ಲ್ಯಾಟ್‌ಫಾರ್ಮ್ ಬಳಸುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ಭವಿಷ್ಯದ ಇವಿ ಮಾದರಿಗಳಿಗಾಗಿ ಸಿಗ್ಮಾ ಆರ್ಕಿಟೆಕ್ಚರ್ ಮತ್ತು ಸ್ಕೇಟ್‌ಬೋರ್ಡ್ ಪ್ಲ್ಯಾಟ್‌ಫಾರ್ಮ್ ತೆರೆಯುತ್ತಿದೆ.

ಐಸಿ ಎಂಜಿನ್ ಪರಿವರ್ತಿತ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿಯೇ ಇದೀಗ ಟಿಗೋರ್ ಇವಿ, ನೆಕ್ಸಾನ್ ಇವಿ ಮಾದರಿಗಳನ್ನು ಅಭಿವೃದ್ದಿಗೊಳಿಸುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ಸಿಗ್ಮಾ ಪ್ಲಾಟ್‌ಫಾರ್ಮ್ ಮೂಲಕ ಸಂಪೂರ್ಣವಾಗಿ ಇವಿ ವಾಹನಗಳ ಉತ್ಪಾದನೆ ಮೀಸಲಿರಿಸಿದೆ.

ಸಿಗ್ಮಾ ಪ್ಲಾಟ್‌ಫಾರ್ಮ್ ಮೂಲಕ ಮೊದಲ ಇವಿ ಕಾರು ಮಾದರಿಯಾಗಿ ಟಾಟಾ ಮೋಟಾರ್ಸ್ ಕಂಪನಿಯು ತನ್ನ ಬಹುನೀರಿಕ್ಷಿತ ಸಿಯೆರಾ ಇವಿ ಕಾರು ಮಾದರಿಯನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದ್ದು, ಸಿಗ್ಮಾ ಪ್ಲಾಟ್‌ಫಾರ್ಮ್ ಅಡಿಯಲ್ಲಿ ನಿರ್ಮಾಣವಾಗುವ ಇವಿ ಕಾರುಗಳು ಐಸಿ ಎಂಜಿನ್ ಪರಿವರ್ತಿತ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿ ಇವಿ ಕಾರುಗಳಿಂತಲೂ ಹೆಚ್ಚು ಹಗುರ ಮತ್ತು ಹೆಚ್ಚಿನ ಕಾರ್ಯಕ್ಷಮತೆ ಪಡೆದುಕೊಂಡಿವೆ.

ಹಾಗೆಯೇ ಕಂಪನಿಯ ಮತ್ತೊಂದು ಸ್ಕೇಟ್‌ಬೋರ್ಡ್ ಪ್ಲ್ಯಾಟ್‌ಫಾರ್ಮ್ ಅಡಿ ಅಭಿವೃದ್ದಿಗೊಳ್ಳಲಿರುವ ಇವಿ ಕಾರುಗಳು ಇನ್ನು ಹೆಚ್ಚಿನ ಮಟ್ಟದ ತಂತ್ರಜ್ಞಾನ ಪ್ರೇರಣೆ ಹೊಂದಿರಲಿದ್ದು, ಸದ್ಯಕ್ಕೆ ಐಸಿ ಎಂಜಿನ್ ಪರಿವರ್ತಿತ ಪ್ಲ್ಯಾಟ್‌ಫಾರ್ಮ್ ನಿಂದ ಸಿಗ್ಮಾ ಪ್ಲಾಟ್‌ಫಾರ್ಮ್‌ಗೆ ಬದಲಾಗುತ್ತಿರುವ ಕಂಪನಿಯು ಸ್ಕೇಟ್‌ಬೋರ್ಡ್ ಪ್ಲ್ಯಾಟ್‌ಫಾರ್ಮ್ ಅನ್ನು ಇನ್ನು ಕೆಲವು ವರ್ಷಗಳ ನಂತರ ಬಳಕೆಗೆ ಯೋಜನೆ ರೂಪಿಸಿದೆ.

2020ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಲಾಗಿದ್ದ ಸಿಯೆರಾ ಎಲೆಕ್ಟ್ರಿಕ್ ಕಾನ್ಸೆಪ್ಟ್ ಮಾದರಿಯನ್ನು ಟಾಟಾ ಕಂಪನಿಯು ಸಿಗ್ಮಾ ಪ್ಲಾಟ್‌ಫಾರ್ಮ್ ಅಡಿಯಲ್ಲಿ ಉತ್ಪಾದನೆ ಆರಂಭಿಸುತ್ತಿರುವ ಬಗೆಗೆ ಸುಳಿವು ನೀಡಿದ್ದು, ಹೊಸ ಕಾರು ಮುಂದಿನ ಕೆಲವೇ ವರ್ಷಗಳಲ್ಲಿ ಮಾರುಕಟ್ಟೆ ಪ್ರವೇಶಿಸಬಹುದಾಗಿದೆ.

ಸಿಯೆರಾ ಕಾರು ಮಾದರಿಯು 90ರ ದಶಕದಲ್ಲಿ ಟಾಟಾ ಮೋಟಾರ್ಸ್ ನಿರ್ಮಾಣದ ಜನಪ್ರಿಯ ಕಾರು ಮಾದರಿಯಾಗಿ ಮಿಂಚಿತ್ತು. ಕಾಲಾನಂತರ ಪ್ರಮುಖ ಕಾರುಗಳ ಸ್ಪರ್ಧೆ ನಡುವೆ ಸಿಯೆರಾ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಕಂಪನಿಯು ಸಿಯೆರಾ ಕಾರು ಮಾದರಿಯನ್ನು ಎಲೆಕ್ಟ್ರಿಕ್ ರೂಪದಲ್ಲಿ ಪುನಃ ಮಾರುಕಟ್ಟೆಗೆ ಪರಿಚಯಿಸಲು ನಿರ್ಧರಿಸಿದೆ.

ಪ್ರಸ್ತುತ ಬಳಕೆಯಲ್ಲಿರುವ ಅಲ್ಪಾ ಪ್ಲ್ಯಾಟ್‌ಫಾರ್ಮ್‌ನೊಂದಿಗೆ ಇವಿ ಮಾದರಿಗಾಗಿ ಬದಲಾವಣೆಗೊಂಡಿರುವ ಸಿಗ್ಮಾ ಪ್ಯೂರ್ ಇವಿ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿ ಮೊದಲ ಕಾರು ಮಾದರಿಯಾಗಿ ಸಿಯೆರಾ ಇವಿ ಕಾರು ಬಿಡುಗಡೆಯಾಗುತ್ತಿದ್ದು, ಹೆಚ್ಚು ಕಾರ್ಯಕ್ಷಮತೆ ಹೊಂದಿರುವ ಎಲೆಕ್ಟ್ರಿಕ್ ಮೋಟಾರ್, ಬ್ಯಾಟರಿ ಪ್ಯಾಕ್ ಮತ್ತು ಬಲಿಷ್ಠವಾದ ವಿನ್ಯಾಸವನ್ನು ಪಡೆದುಕೊಳ್ಳಲಿದೆ.

ಸಿಯೆರಾ ಇವಿ ಕಾರು ಮಾದರಿಯು ಪ್ರಸ್ತುತ ಮಾರುಕಟ್ಟೆಯಲ್ಲಿನ ನೆಕ್ಸಾನ್ ಇವಿ ಮಾದರಿಗಿಂತಲೂ ಹೆಚ್ಚಿನ ಮಟ್ಟದ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಳ್ಳಲಿದ್ದು, ಬ್ಯಾಟರಿ ರೇಂಜ್ ಸಹ ನೆಕ್ಸಾನ್ ಇವಿ ಕಾರಿಗಿಂತಲೂ ಅಧಿಕವಾಗಿರಲಿದೆ.

ಟಾಟಾ ಮೋಟಾರ್ಸ್ ಕಂಪನಿಯು ಸಿಯೆರಾ ಇವಿ ಬ್ಯಾಟರಿ ಪ್ಯಾಕ್, ಎಲೆಕ್ಟ್ರಿಕ್ ಮೋಟಾರ್ ಕುರಿತಂತೆ ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲವಾದರೂ ಸಿಯೆರಾ ಇವಿ ಕಾರು ಪ್ರತಿ ಚಾರ್ಜ್‌ಗೆ ಕನಿಷ್ಠ 500 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.

ಜೊತೆಗೆ ಹೊಸ ಕಾರಿನಲ್ಲಿ ಸೂಪರ್ ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನ ಸುಧಾರಣೆಗೊಳಿಸುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು 15 ನಿಮಿಷ ಚಾರ್ಜ್ ಮೂಲಕ ಶೇ.80 ರಷ್ಟು ಚಾರ್ಜ್ ಮಾಡಬಹುದಾದ ಸೌಲಭ್ಯವನ್ನು ಈ ಕಾರಿನ ಅಳವಡಿಸುತ್ತಿದೆ.

ನೆಕ್ಸಾನ್ ಇವಿ ಕಾರು ಮಾದರಿಯು ಸದ್ಯ ಪ್ರತಿ ಚಾರ್ಜ್‌ಗೆ 312 ಕಿ.ಮೀ ಮೈಲೇಜ್ ಹೊಂದಿದ್ದು, ಮುಂದಿನ ತಿಂಗಳು ಬಿಡುಗಡೆಯಾಗಲಿರುವ 2022ರ ನೆಕ್ಸಾನ್ ಇವಿ ಕಾರು 420 ಕಿ.ಮೀ ಮೈಲೇಜ್ ಹೊಂದಿರುವ ಬ್ಯಾಟರಿ ಪ್ಯಾಕ್ ಪಡೆದುಕೊಳ್ಳುತ್ತಿದೆ. ಹೀಗಾಗಿ ನೆಕ್ಸಾನ್ ಇವಿ ಮಾದರಿಗಿಂತಲೂ ಉನ್ನತ ಸ್ಥಾನದಲ್ಲಿ ಮಾರಾಟವಾಗಲಿರುವ ಸಿಯೆರಾ ಇವಿ ಮಾದರಿಯಲ್ಲಿ ಕಂಪನಿಯು ಕನಿಷ್ಠ 500 ಕಿ.ಮೀ ಮೈಲೇಜ್ ಪ್ರೇರಿತ ಬ್ಯಾಟರಿ ಪ್ಯಾಕ್ ನೀಡಬಹುದಾಗಿದೆ.

ಇನ್ನು ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್ ಕಂಪನಿಯು ಇವಿ ವಾಹನಗಳ ಎಂಜಿನ್, ಮೋಟಾರ್, ಬಿಡಿಭಾಗಗಳು, ಪರಿಕರಗಳು, ಪರಿಕರಗಳ ಸ್ಥಾಪನೆ, ಸ್ವಾಧೀನಪಡಿಸಿಕೊಳ್ಳುವಿಕೆ, ಜೊತೆಗೆ ಜೋಡಣೆ, ನಿರ್ಮಾಣ, ತಯಾರಿಕೆ, ಮಾರಾಟ, ಮಾರಾಟದ ನಂತರದ ಸೇವೆಗಳು, ಮಾರ್ಕೆಟಿಂಗ್ ಮತ್ತು ಸೇವಾ ಸೌಲಭ್ಯಗಳನ್ನು ಪ್ರತ್ಯೇಕವಾಗಿ ನಿರ್ವಹಿಸಲಿದೆ.
ಎಲೆಕ್ಟ್ರಿಕ್ ವಾಹನಗಳ ಅಭಿವೃದ್ದಿ, ಉತ್ಪಾದನೆ ಮತ್ತು ಮಾರಾಟಕ್ಕಾಗಿ ಬಹುತೇಕ ವಾಹನ ಕಂಪನಿಗಳು ಪ್ರತ್ಯೇಕ ವಿಭಾಗಗಳನ್ನು ತೆರೆಯುತ್ತಿದ್ದು, ಟಾಟಾ ಮೋಟಾರ್ಸ್ ಕೂಡಾ ಇದೀಗ ಅಂಗಸಂಸ್ಥೆಯ ಮೂಲಕ ಇವಿ ಕಾರುಗಳ ಮಾರಾಟದಲ್ಲಿ ಮತ್ತಷ್ಟು ಮುಂಚೂಣಿ ಸಾಧಿಸಲಿದೆ.


Click it and Unblock the Notifications








