ಭಾರತದಲ್ಲಿ ಶೀಘ್ರದಲ್ಲಿಯೇ ಹೊಸ ನವೀಕರಣದೊಂದಿಗೆ ಬಿಡುಗಡೆಯಾಗಲಿವೆ ಈ ಮೂರು ಎಲೆಕ್ಟ್ರಿಕ್ ಕಾರುಗಳು!
ದೇಶಿಯ ಮಾರುಕಟ್ಟೆಯಲ್ಲಿನ ಪ್ರಯಾಣಿಕ ಬಳಕೆಯ ಇವಿ ವಾಹನ ಮಾರಾಟವು ಸಾಕಷ್ಟು ಬೆಳವಣಿಗೆ ಸಾಧಿಸುತ್ತಿದ್ದು, ಕಳೆದ ಎರಡು ವರ್ಷಗಳಲ್ಲಿ ಹಲವಾರು ಹೊಸ ಇವಿ ಕಾರು ಮಾದರಿಗಳು ಮಾರುಕಟ್ಟೆ ಪ್ರವೇಶಿಸಿವೆ. ಇನ್ನು ಕೆಲವು ಇವಿ ಕಾರು ಮಾದರಿಗಳು ಈಗಾಗಲೇ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿ ಮಾದರಿಗಳು ಸಹ ಶೀಘ್ರದಲ್ಲಿಯೇ ಮತ್ತಷ್ಟು ಹೊಸ ನವೀಕರಣದೊಂದಿಗೆ ಮಾರುಕಟ್ಟೆ ಪ್ರವೇಶಿಸಲಿವೆ.

ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಸದ್ಯ ಟಾಟಾ ಮೋಟಾರ್ಸ್ ಕಂಪನಿಯು ಅಗ್ರಸ್ಥಾನ ಕಾಯ್ದುಕೊಂಡಿದ್ದು, ತದನಂತರ ಎಂಜಿ ಮೋಟಾರ್ ಮತ್ತು ಹ್ಯುಂಡೈ ಕಂಪನಿಯು ಸಹ ಇವಿ ಕಾರು ಮಾರಾಟದಲ್ಲಿ ಮುಂಚೂಣಿಯಲ್ಲಿವೆ. ಟಾಟಾ ನೆಕ್ಸಾನ್ ಇವಿ, ಎಂಜಿ ಜೆಡ್ಎಸ್ ಇವಿ ಮತ್ತು ಹ್ಯುಂಡೈ ಕೊನಾ ಇವಿ ಕಾರುಗಳು ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿಯಲ್ಲಿದ್ದು, ಶೀಘ್ರದಲ್ಲಿಯೇ ಈ ಮೂರು ಕಾರು ಮಾದರಿಗಳು ಗ್ರಾಹಕರ ಬೇಡಿಕೆಯೆಂತೆ ಹೊಸ ಬದಲಾವಣೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಲು ಸಿದ್ದವಾಗಿವೆ.

ಮೊದಲ ಬಾರಿಗೆ ಬಿಡುಗಡೆಯ ನಂತರ ಈ ಮೂರು ಇವಿ ಕಾರು ಮಾದರಿಗಳು ಸಣ್ಣ ಪುಟ್ಟ ಬದಲಾವಣೆ ಹೊರತುಪಡಿಸಿ ಯಾವುದೇ ದೊಡ್ಡ ಮಟ್ಟದ ಉನ್ನತೀಕರಣ ಪಡೆಯದೆ ಇದ್ದರೂ ಬೇಡಿಕೆಯಲ್ಲಿ ಮುಂಚೂಣಿಯಲ್ಲಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಈ ಮೂರು ಕಾರು ಮಾದರಿಗಳು ಹೆಚ್ಚಿನ ಮಟ್ಟದ ಮೈಲೇಜ್ ರೇಂಜ್ ಸೇರಿದಂತೆ ಹೊಸ ಸುರಕ್ಷಾ ಫೀಚರ್ಸ್‌ಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಲಿವೆ.

ಟಾಟಾ ನೆಕ್ಸಾನ್ ಇವಿ
ನೆಕ್ಸಾನ್ ಇವಿ ಮಾದರಿಯು 2019ರಲ್ಲಿ ಮೊದಲ ಬಿಡುಗಡೆಯ ನಂತರ ಹಲವಾರು ಹೊಸ ಬದಲವಾಣೆಗಳೊಂದಿಗೆ ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದಕೊಂಡಿದ್ದು, ಬಿಡುಗಡೆಯ ನಂತರ ನೆಕ್ಸಾನ್ ಇವಿ ಇದುವರೆಗೆ ಸುಮಾರು 13,500 ಯುನಿಟ್ ಮಾರಾಟಗೊಂಡಿದೆ.

ನೆಕ್ಸಾನ್ ಇವಿ ಎಆರ್‌ಎಐ ಸಂಸ್ಥೆಯು ಪ್ರಮಾಣಿಕರಿಸಿದಂತೆ ಇಕೋ ಡ್ರೈವ್ ಮೋಡ್‌ನಲ್ಲಿ ಗರಿಷ್ಠ 312 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, 2022ರ ಆವೃತ್ತಿಯಲ್ಲಿ ಮೈಲೇಜ್ ರೇಂಜ್ ಪ್ರಮಾಣವನ್ನು 380 ಕಿ.ಮೀ ನಿಂದ 420 ಕಿ.ಮೀ ಹೆಚ್ಚಿಸುವ ಸಾಧ್ಯತೆಗಳಿವೆ. ಸದ್ಯ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 14.29 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ.16.90 ಲಕ್ಷ ಬೆಲೆ ಪಡೆದುಕೊಂಡಿದ್ದು, ನವೀಕೃತ ಮಾದರಿಯು ಪ್ರಸ್ತುತ ಮಾದರಿಯ ಬೆಲೆಗಿಂತಲೂ ರೂ.50 ಸಾವಿರದಿಂದ ರೂ.1 ಲಕ್ಷದ ತನಕ ಹೆಚ್ಚುವರಿ ಬೆಲೆ ಹೊಂದಬಹುದಾಗಿದೆ.

ಜಿಪ್‌ಟ್ರಾನ್ ತಂತ್ರಜ್ಞಾನವು ಟಾಟಾ ಕಂಪನಿಯನ್ನು ಜಾಗತಿಕ ಮಟ್ಟದಲ್ಲಿ ಗಮನಸೆಳೆಯುವಂತೆ ಮಾಡಿದ್ದು, ಎಲೆಕ್ಟ್ರಿಕ್ ಕಾರುಗಳ ಕಾರ್ಯಕ್ಷಮತೆ, ಬ್ಯಾಟರಿ ದಕ್ಷತೆ ಮತ್ತು ಗ್ರಾಹಕರ ಸ್ನೇಹಿ ಎಲೆಕ್ಟ್ರಿಕ್ ಕಾರುಗಳ ಅಭಿವೃದ್ದಿಯಲ್ಲಿ ಸಹಕಾರಿಯಾಗುತ್ತಿದೆ.

ಎಂಜಿ ಜೆಡ್ಎಸ್ ಇವಿ
ಎಂಜಿ ಮೋಟಾರ್ ಇಂಡಿಯಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ನವೀಕೃತ ಜೆಡ್ಎಸ್ ಎಲೆಕ್ಟ್ರಿಕ್ ಎಸ್‌ಯುವಿ ಮಾದರಿಯನ್ನು ಬಿಡುಗಡೆ ಮಾಡಲು ಸಿದ್ದವಾಗುತ್ತಿದ್ದು, ಹೊಸ ಕಾರು ಬಿಡುಗಡೆಗೂ ಮುನ್ನ 2022ರ ಮಾದರಿಯ ತಾಂತ್ರಿಕ ಮಾಹಿತಿಯನ್ನು ಬಹಿರಂಗಪಡಿಸಿದೆ.

2022ರ ಜೆಡ್ಎಸ್ ಎಲೆಕ್ಟ್ರಿಕ್ ಎಸ್‌ಯುವಿ ಮಾದರಿಯಲ್ಲಿ ಕಂಪನಿಯು ಬಾಹ್ಯ ವಿನ್ಯಾಸದಲ್ಲಿ ಕೆಲವೇ ಕೆಲವು ಬದಲಾವಣೆಗಳನ್ನು ಪರಿಚಯಿಸಿದ್ದು, ಹೊಸ ಕಾರಿನಲ್ಲಿ ಮಹತ್ವದ ಬದಲಾವಣೆ ಅಂದರೆ ಅದು ನವೀಕರಿಸಿದ ಬ್ಯಾಟರಿ ಪ್ಯಾಕ್ ಗಮನಸೆಳೆಯಲಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಜೆಡ್ಎಸ್ ಎಲೆಕ್ಟ್ರಿಕ್ ಕಾರು ಮಾದರಿಯು 44.5 kWh ಬ್ಯಾಟರಿ ಪ್ಯಾಕ್ ಮೂಲಕ ಪ್ರತಿ ಚಾರ್ಚ್‌ಗೆ 419 ಕಿ.ಮೀ ಮೈಲೇಜ್ ಹಿಂದಿರುಗಿಸುವ ಸಾಮರ್ಥ್ಯ ಹೊಂದಿದ್ದು, 2022ರ ಮಾದರಿಯಲ್ಲಿ ಕಂಪನಿಯು 51 kWh ಬ್ಯಾಟರಿ ಪ್ಯಾಕ್ ಜೋಡಣೆ ಮಾಡುತ್ತಿದೆ.

51 kWh ಬ್ಯಾಟರಿ ಪ್ಯಾಕ್ ಮೂಲಕ ಹೊಸ ಕಾರಿನ ಮೈಲೇಜ್ ರೇಂಜ್ ಇದೀಗ ಪ್ರತಿ ಚಾರ್ಜ್‌ಗೆ 480 ಕಿ.ಮೀ ಗೆ ಹೆಚ್ಚಳವಾಗಿದ್ದು, ಮೈಲೇಜ್ ಹೆಚ್ಚಳದೊಂದಿಗೆ ಕಾರಿನ ಪರ್ಫಾಮೆನ್ಸ್ ಕೂಡಾ ಸಾಕಷ್ಟು ಸುಧಾರಣೆಗೊಂಡಿರುವುದು ಎಲೆಕ್ಟ್ರಿಕ್ ಎಸ್‌ಯುವಿ ಪ್ರಿಯರನ್ನು ಸೆಳೆಯಲಿದೆ.

ಇದರೊಂದಿಗೆ ಹೊಸ ಜೆಡ್ಎಸ್ ಇವಿ ಕಾರಿನಲ್ಲಿ ಎಂಜಿ ಕಂಪನಿಯು ಆಸ್ಟರ್ ಎಸ್‌ಯುವಿಯಲ್ಲಿ ನೀಡಲಾಗಿರುವ ಭಾರತದ ಮೊದಲ ವ್ಯಯಕ್ತಿಕರಣಗೊಳಿಸಿದ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಸೌಲಭ್ಯವನ್ನು ಜೋಡಣೆ ಮಾಡುತ್ತಿದ್ದು, ಲೆವಲ್ 2 ಅಡ್ವಾನ್ಸ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ(ಎಡಿಎಎಸ್) ಹೊಸ ಕಾರಿಗೆ ಮತ್ತಷ್ಟು ಸುರಕ್ಷತೆ ನೀಡಲಿದೆ.

ಹ್ಯುಂಡೈ ಕೊನಾ ಇವಿ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ಕಂಪನಿಯು ಸದ್ಯ ಕೊನಾ ಮಾದರಿಗಾಗಿ 64kWh ಮತ್ತು 39.2kWh ಬ್ಯಾಟರಿ ಪ್ಯಾಕ್ ಮಾದರಿಯ ಕೊನಾ ಇವಿ ಮಾರಾಟ ಮಾಡುತ್ತಿದ್ದು, ಭಾರತದಲ್ಲಿ ಮಾತ್ರ ಸದ್ಯಕ್ಕೆ 39.2kWh ಬ್ಯಾಟರಿ ಪ್ಯಾಕ್ ಹೊಂದಿರುವ ಮಾದರಿಯನ್ನು ಮಾತ್ರವೇ ಮಾರಾಟ ಮಾಡುತ್ತಿದೆ.

ಫೇಸ್‌ಲಿಫ್ಟ್ ಮಾದರಿಯೊಂದಿಗೆ ಹ್ಯುಂಡೈ ಕಂಪನಿಯು ಭಾರತದಲ್ಲಿ 64kWh ಬ್ಯಾಟರಿ ಪ್ಯಾಕ್ ಹೊಂದಿರುವ ಕೊನಾ ಮಾದರಿಯನ್ನು ಬಿಡುಗಡೆ ಮಾಡುವ ಸಾಧ್ಯತೆಗಳಿದ್ದು, ಇದು 39.2kWh ಮಾದರಿಗಿಂತಲೂ ತುಸು ದುಬಾರಿ ದರದೊಂದಿಗೆ ಹೆಚ್ಚಿನ ಮಟ್ಟದ ಮೈಲೇಜ್ ಹೊಂದಿರಲಿದೆ.

ಹ್ಯುಂಡೈ ಹೊಸ ಎಲೆಕ್ಟ್ರಿಕ್ ಕಾರು ಪರ್ಫಾಮೆನ್ಸ್ ಕಾರುಗಳಂತೆಯೇ ಉತ್ತಮ ಮುನ್ನಡೆ ಕಾಯ್ದುಕೊಂಡಿದ್ದು, 100kW ಫ್ರಂಟ್ ವೀಲ್ಹ್ ಮೋಟಾರ್ ಪವರ್ ಮೂಲಕ 131-ಬಿಎಚ್‌ಪಿ ಮತ್ತು 395-ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಕೇವಲ 9.7-ಸೇಕೆಂಡುಗಳಲ್ಲಿ ಸೊನ್ನೆಯಿಂದ 100ಕಿ.ಮಿ ವೇಗ ತಲುಪಬಲ್ಲದು.

ಜೊತೆಗೆ ಸಾಮಾನ್ಯ ಕಾರುಗಳಿಂತ ಶೇ.80ರಷ್ಟು ಕಡಿಮೆ ರನ್ನಿಂಗ್ ಕಾಸ್ಟ್ ಹೊಂದಿರುವ ಕೊನಾ ಕಾರು ಪ್ರತಿ ಕಿ.ಮೀ ಗೆ ರೂ.1 ಕ್ಕಿಂತಲೂ ಕಡಿಮೆ ನಿರ್ವಹಣಾ ವೆಚ್ಚ ಹೊಂದಿದ್ದು, 39.2kWh ಬ್ಯಾಟರಿ ಸಾಮರ್ಥ್ಯದೊಂದಿಗೆ ಪ್ರತಿ ಚಾರ್ಜ್‌ಗೆ ಗರಿಷ್ಠ 452 ಕಿ.ಮಿ ಮೈಲೇಜ್ ಹಿಂದಿರುಗಿಸಬಲ್ಲದು.


Click it and Unblock the Notifications








