ಭಾರತದಲ್ಲಿ 2023ಕ್ಕೆ ಬಿಡುಗಡೆಯಾಗಲಿರುವ ಟಾಪ್ 3 ಮಹೀಂದ್ರಾ ಎಸ್‌ಯುವಿಗಳು
ದೇಶೀಯ ಮಾರುಕಟ್ಟೆಯಲ್ಲಿ ಮಹೀಂದ್ರಾ ಕಂಪನಿ ತನ್ನ ಎಸ್‌ಯುವಿ ವಿಭಾಗವನ್ನು ಬಲಪಡಿಸುತ್ತಿದೆ. ಮೂರು ವರ್ಷಗಳಲ್ಲಿ ಮಹೀಂದ್ರಾ ಬಿಡುಗಡೆ ಮಾಡಿದ ಎಲ್ಲಾ 3 ಎಸ್‌ಯುವಿಗಳು ಭಾರೀ ಬೇಡಿಕೆ ಪಡೆದುಕೊಂಡಿವೆ (ಥಾರ್, XUV 700 ಮತ್ತು ಸ್ಕಾರ್ಪಿಯೋ-ಎನ್). 2023ರಲ್ಲಿಯೂ ಕಂಪನಿ ಮತ್ತೆ ಮೂರು ಹೊಸ ಎಸ್‌ಯುವಿಗಳನ್ನು ಲಾಂಚ್ ಮಾಡಲು ಸಿದ್ಧವಾಗಿದೆ.
ಮಹೀಂದ್ರಾ XUV 400 ಇವಿ:
ಮಹೀಂದ್ರಾ ಕಂಪನಿ ಇತ್ತೀಚೆಗೆ ತನ್ನ ಮೊದಲ ಎಲೆಕ್ಟ್ರಿಕ್ ಎಸ್‌ಯುವಿ XUV400 ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿತ್ತು. ಕಂಪನಿಯು ಜನವರಿ 2023ರಲ್ಲಿ ಈ ಎಸ್‌ಯುವಿಯನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಗ್ರಾಹಕರು ಹೊಸ ಮಹೀಂದ್ರಾ XUV400 ಅನ್ನು ಜನವರಿ 2023ರಿಂದ ಆನ್‌ಲೈನ್‌ನಲ್ಲಿ ಅಥವಾ ಹತ್ತಿರದ ಮಹೀಂದ್ರಾ ಡೀಲರ್‌ಶಿಪ್ ಮೂಲಕ ಬುಕ್ ಮಾಡಬಹುದು. ಆರಂಭದಲ್ಲಿ, ಮುಂಬೈ, ಹೈದರಾಬಾದ್, ದೆಹಲಿ, ಬೆಂಗಳೂರು, ಕೋಲ್ಕತ್ತಾ, ಚೆನ್ನೈ, ಪುಣೆ, ಅಹಮದಾಬಾದ್, ಗೋವಾ, ಜೈಪುರ, ಸೂರತ್, ನಾಗ್ಪುರ, ತಿರುವನಂತಪುರಂ, ನಾಸಿಕ್, ಚಂಡೀಗಢ, ಕೊಚ್ಚಿ ಸೇರಿದಂತೆ 16 ನಗರಗಳಲ್ಲಿ ಬಿಡುಗಡೆಯಾಗಲಿದೆ.

ಮಹೀಂದ್ರಾ XUV400 ಆರ್ಕ್ಟಿಕ್ ಬ್ಲೂ, ಎವರೆಸ್ಟ್ ವೈಟ್, ಗ್ಯಾಲಕ್ಸಿ ಗ್ರೇ, ನಪೋಲಿ ಬ್ಲಾಕ್ ಮತ್ತು ಇನ್ಫಿನಿಟಿ ಬ್ಲೂ ಸೇರಿದಂತೆ ಐದು ಬಣ್ಣಗಳ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. IP 67 ಕಂಪ್ಲೈಂಟ್ 39.5 kWh ಬ್ಯಾಟರಿ ಪ್ಯಾಕ್ ಮತ್ತು PSM ಮೋಟಾರ್ ಹೊಂದಿದ್ದು, ಇದು 149.5 PS ಗರಿಷ್ಠ ಪವರ್ ಮತ್ತು 310 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದುಕೊಂಡಿದೆ. ಈ ಎಲೆಕ್ಟ್ರಿಕ್ ಎಸ್‌ಯುವಿ 150 kmph ಟಾಪ್ ಸ್ವೀಡ್ ಹೊಂದಿದ್ದು, 8.3 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆಯಲಿದೆ.
ಮಹೀಂದ್ರಾ XUV400 ಎಸ್‌ಯುವಿ ಸಂಪೂರ್ಣ ಚಾರ್ಜ್‌ನಲ್ಲಿ 456 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿದೆ. 50kW DC ಫಾಸ್ಟ್ ಚಾರ್ಜರ್‌ನೊಂದಿಗೆ ಬ್ಯಾಟರಿಯು 0-80% ರಿಂದ ಚಾರ್ಜ್ ಮಾಡಲು ಕೇವಲ 50 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. 7.2 kW/32A ಔಟ್‌ಲೆಟ್ ಮೂಲಕ ಚಾರ್ಜ್ ಮಾಡಿದಾಗ ಇದು 0-100% ಚಾರ್ಜ್ ಆಗಲು 6 ಗಂಟೆ 30 ನಿಮಿಷ ಬೇಕಾಗುತ್ತದೆ. ಆದರೆ, ಸ್ಟ್ಯಾಂಡರ್ಡ್ 3.3 kW/16A ದೇಶೀಯ ಸಾಕೆಟ್‌ನೊಂದಿಗೆ 13 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು.
ಮಹೀಂದ್ರಾ ಥಾರ್ 5-ಡೋರ್:
5-ಡೋರ್ ಮಹೀಂದ್ರಾ ಥಾರ್ ಹೊಸ ಸ್ಕಾರ್ಪಿಯೋ-ಎನ್‌ನ ಅದೇ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ ಎಂದು ಹೇಳಲಾಗಿದೆ. ಥಾರ್ 5-ಡೋರ್ ಎಂಜಿನ್ ಸಹ 3-ಡೋರ್ ಥಾರ್‌ನಂತೆಯೇ ಇರಲಿದೆ. ಇದು 150 bhp ಪವರ್ ಉತ್ಪಾದಿಸುವ 2.0-ಲೀಟರ್ ಟರ್ಬೊ ಪೆಟ್ರೋಲ್ ಮೋಟಾರ್ ಮತ್ತು 130 bhp ಪವರ್ ಉತ್ಪಾದಿಸುವ 2.2-ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಹೊಂದಿದೆ. 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ಪಡೆಯಲಿದೆ.
ಫೋರ್-ವೀಲ್-ಡ್ರೈವ್ ಆಯ್ಕೆಯನ್ನು ಹೊಂದಿರುವ ಥಾರ್ 5-ಡೋರ್, 3-ಡೋರ್ ಥಾರ್‌ನಂತೆಯೇ ಸ್ಮಾರ್ಟ್‌ಫೋನ್ ಸಂಪರ್ಕದೊಂದಿಗೆ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ನ್ಯಾವಿಗೇಷನ್, ಕ್ರೂಸ್ ಕಂಟ್ರೋಲ್, ಫಾಲೋ-ಮಿ-ಹೋಮ್ ಹೆಡ್‌ಲ್ಯಾಂಪ್‌ಗಳು, ಟೈರ್ ಡೈರೆಕ್ಷನ್ ಮಾನಿಟರಿಂಗ್ ಸಿಸ್ಟಮ್, ಡ್ಯುಯಲ್ ಏರ್‌ಬ್ಯಾಗ್, EBD ಜೊತೆಗೆ ABS, ರಿವರ್ಸ್ ಪಾರ್ಕಿಂಗ್ ಸೆನ್ಸರ್ಸ್ ಸೇರಿದಂತೆ ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿರಲಿದೆ. ಮಹೀಂದ್ರಾ ಥಾರ್ 5-ಡೋರ್ ಮುಂಬರುವ ಫೋರ್ಸ್ ಗೂರ್ಖಾ 5-ಡೋರ್ ಮತ್ತು ಮಾರುತಿ ಸುಜುಕಿ ಜಿಮ್ನಿ 5-ಡೋರ್‌ಗಳೊಂದಿಗೆ ಭಾರೀ ಪೈಪೋಟಿ ನೀಡಲಿದೆ.
ಮಹೀಂದ್ರಾ ಥಾರ್ 2WD:
ಗ್ರಾಹಕರಿಗೆ ಯಾವಾಗಲು ಹತ್ತಿರವಾಗಲು ಪ್ರಯತ್ನಿಸುವ ಮಹೀಂದ್ರಾ ಮತ್ತು ಮಹೀಂದ್ರಾ ಕಂಪನಿ ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಥಾರ್‌ನ ಕೈಗೆಟುಕುವ ರೂಪಾಂತರವನ್ನು ಬಿಡುಗಡೆ ಮಾಡಲಿದೆ ಎಂದು ವರದಿಯಾಗಿದೆ. ಈ ಎಸ್‌ಯುವಿ ಡೀಲರ್‌ಶಿಪ್‌ಗಳಲ್ಲಿಯೂ ಕಾಣಿಸಿಕೊಳ್ಳುವ ಕಾಲ ಸನ್ನಿಹಿತವಾಗಿದೆ ಎಂಬ ಸುಳಿವನ್ನು ಕಂಪನಿ ನೀಡಿದೆ. ಖರೀದಿದಾರರಿಗೆ ಥಾರ್‌ನ ಈ ರೂಪಾಂತರವನ್ನು ಸಣ್ಣ ಡೀಸೆಲ್ ಎಂಜಿನ್‌ನೊಂದಿಗೆ ನೀಡಲಾಗುತ್ತದೆ. ಇದು RWD ಡ್ರೈವ್‌ಟ್ರೇನ್ ಅನ್ನು ಮಾತ್ರ ಹೊಂದಿರುತ್ತದೆ.
ಈ ಎಸ್‌ಯುವಿ ಚಿಕ್ಕದಾದ 1.5-ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಅನ್ನು ಮಾತ್ರ ಹೊಂದಿರಲಿದ್ದು, ಇದು 116 bhp ಪವರ್ ಮತ್ತು 300 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಮಹೀಂದ್ರಾ XUV 300 ಮತ್ತು ಮರಾಝೋಗೆ ಪವರ್ ಒದಗಿಸುವ ಅದೇ ಎಂಜಿನ್ ಅನ್ನು ಇಲ್ಲಿಯೂ ಬಳಸಲಾಗಿದೆ ಎಂಬುದು ಗಮನಾರ್ಹ. ಈ ಮಹೀಂದ್ರಾ ಥಾರ್ 2WD, ಟೂ-ವೀಲ್ ಡ್ರೈವ್ ಆಯ್ಕೆಯೊಂದಿಗೆ ಮಾತ್ರ ಖರೀದಿಗೆ ಲಭ್ಯವಾಗಲಿದೆ ಎಂದು ಹೇಳಬಹುದು.


Click it and Unblock the Notifications








