ಭಾರತದಲ್ಲಿ ಬಿಡುಗಡೆಗಾಗಿ ಸಿದ್ದವಾಗಿರುವ ಪ್ರಮುಖ ಬಜೆಟ್ ಇವಿ ಕಾರು ಮಾದರಿಗಳಿವು!
ಇಂಧನ ಚಾಲಿತ ವಾಹನಗಳಿಂದಾಗಿ ಹೆಚ್ಚುತ್ತಿರುವ ಮಾಲಿನ್ಯ ತಡೆಗಾಗಿ ವಿವಿಧ ರಾಷ್ಟ್ರಗಳು 2030ರ ವೇಳೆಗೆ ಶೇ.50 ರಷ್ಟು ಎಲೆಕ್ಟ್ರಿಕ್ ವಾಹನಗಳ ಬಳಕೆ ಗುರಿಸಾಧಿಸುವ ನಿರ್ಣಯ ಕೈಗೊಂಡಿದ್ದು, ಇದಕ್ಕೆ ಪೂರಕವಾಗಿ ಪರಿಸರ ಸ್ನೇಹಿ ವಾಹನಗಳ ಬಳಕೆ ಉತ್ತೇಜಿಸಲು ಮಹತ್ವದ ಯೋಜನೆಗಳನ್ನು ಜಾರಿಗೆ ತರಲಾಗಿದೆ.

ಎಲೆಕ್ಟ್ರಿಕ್ ವಾಹನಗಳಿಗೆ ಪೂರಕವಾಗಿ ಈಗಾಗಲೇ ಯುರೋಪ್ ಒಕ್ಕೂಟದಲ್ಲಿನ ಪ್ರಮುಖ ರಾಷ್ಟ್ರಗಳ ಮಹತ್ವದ ನಿರ್ಣಯದ ಪರಿಣಾಮ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಮಾರಾಟವು ಸಾಕಷ್ಟು ಇಳಿಕೆಯಾಗುತ್ತಿದ್ದು, ಹೈಬ್ರಿಡ್ ಮತ್ತು ಪೂರ್ಣ ಪ್ರಮಾಣದ ಎಲೆಕ್ಟ್ರಿಕ್ ವಾಹನಗಳ ಮಾರಾಟವದಲ್ಲಿ ಸಾಕಷ್ಟು ಬೆಳವಣಿಗೆ ಕಂಡುಬಂದಿದೆ. ಮುಂಬರುವ ದಿನಗಳಲ್ಲಿ ವಿವಿಧ ಕಾರು ಕಂಪನಿಗಳು ವಿಶ್ವಾದ್ಯಂತ ಮತ್ತಷ್ಟು ಇವಿ ಮಾರಾಟವನ್ನು ಹೆಚ್ಚಿಸಲು ಸಜ್ಜಾಗುತ್ತಿದ್ದು, ಭಾರತದಲ್ಲೂ ಕೂಡಾ ಇವಿ ಕಾರುಗಳಿಗೆ ಹೆಚ್ಚಿನ ಬೇಡಿಕೆ ಹರಿದುಬರುತ್ತಿದೆ.

ಭಾರತದಲ್ಲೂ ಈಗಾಗಲೇ ಪ್ರಮುಖ ಕಾರು ಕಂಪನಿಗಳು ವಿವಿಧ ಮಾದರಿಯ ಎಲೆಕ್ಟ್ರಿಕ್ ಕಾರು ಮಾದರಿಗಳನ್ನು ಬಿಡುಗಡೆ ಮಾಡಿದ್ದು, 2022ರ ಅವಧಿಯಲ್ಲಿ ಮತ್ತಷ್ಟು ಎಲೆಕ್ಟ್ರಿಕ್ ಕಾರುಗಳು ರಸ್ತೆಗಿಳಿಯಲು ಸಜ್ಜುಗೊಂಡಿವೆ. ಇವಿ ಕಾರುಗಳು ಸದ್ಯ ಪೆಟ್ರೋಲ್ ಮತ್ತು ಡೀಸೆಲ್ ಮಾದರಿಗೆ ಹೋಲಿಕೆ ಮಾಡಿದರೆ ತುಸು ದುಬಾರಿ ಎನ್ನಿಸಲಿದ್ದು, ಗ್ರಾಹಕರು ಸದ್ಯ ಬಜೆಟ್ ಇವಿ ಮಾದರಿಗಳಿಗೆ ಎದುರು ನೋಡುತ್ತಿದ್ದಾರೆ.

ಹೀಗಾಗಿ ಇವಿ ತಯಾರಕ ಕಂಪನಿಗಳು ಬಜೆಟ್ ಇವಿ ಕಾರುಗಳ ಮೇಲೆ ಹೆಚ್ಚಿನ ಗಮನಹರಿಸಿವೆ. ಹಾಗಾದರೆ ಬಿಡುಗಡೆಯಾಗಲಿರುವ ಬಜೆಟ್ ಇವಿ ಕಾರುಗಳು ಯಾವವು? ಅವುಗಳ ವಿಶೇಷತೆ ಏನು ಎನ್ನುವುದನ್ನು ಈ ಲೇಖನದಲ್ಲಿ ತಿಳಿಯೋಣ.

ಮಹೀಂದ್ರಾ ಇಕೆಯುವಿ100
2020ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡಿದ್ದ ಮಹೀಂದ್ರಾ ಇಕೆಯುವಿ100 ಎಲೆಕ್ಟ್ರಿಕ್ ಕಾರು ಮಾದರಿಯು ಈ ವರ್ಷಾಂತ್ಯಕ್ಕ ಮಾರುಕಟ್ಟೆ ಪ್ರವೇಶಿಸಲು ಸಜ್ಜಾಗುತ್ತಿದ್ದು, ಹೊಸ ಎಲೆಕ್ಟ್ರಿಕ್ ಕಾರು ಬಿಡುಗಡೆಗೊಂಡಿದ್ದರೂ ಕರೋನಾ ವೈರಸ್ ಪರಿಣಾಮ ಕಾರಿನ ವಿತರಣೆಯನ್ನು ಮುಂದೂಡಿಕೆ ಮಾಡಲಾಗಿತ್ತು.

ಇದೀಗ ಹೊಸ ಕಾರಿನ ವಿತರಣೆಯನ್ನು ಆರಂಭಿಸುತ್ತಿರುವ ಮಹೀಂದ್ರಾ ಕಂಪನಿಯು ಇಕೆಯುವಿ100 ಎಲೆಕ್ಟ್ರಿಕ್ ಕಾರಿನ ಬೆಲೆಯನ್ನು ಎಕ್ಸ್‌ಶೋರೂಂ ಪ್ರಕಾರ ರೂ. 8.25 ಲಕ್ಷಕ್ಕೆ ನಿಗದಿಪಡಿಸಿದ್ದು, ಹೊಸ ಕಾರು 40kW ಎಲೆಕ್ಟ್ರಿಕ್ ಮೋಟಾರ್ ಪ್ರತಿ ಚಾರ್ಜ್‌ಗೆ 150 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಪ್ರಸ್ತುತ ಮಾರುಕಟ್ಟೆಯಲ್ಲಿನ ಎಲೆಕ್ಟ್ರಿಕ್ ವಾಣಿಜ್ಯ ವಾಹನ ಮಾರಾಟದಲ್ಲಿ ಮುಂಚೂಣಿ ಸಾಧಿಸಿರುವ ಮಹೀಂದ್ರಾ ಕಂಪನಿಯ ಮಹೀಂದ್ರಾ ಎಲೆಕ್ಟ್ರಿಕ್ ವಿಭಾಗವು ಮತ್ತಷ್ಟು ಹೊಸ ಇವಿ ವಾಹನ ಉತ್ಪನ್ನಗಳನ್ನು ಬಿಡುಗಡೆ ಮಾಡಲು ಸಿದ್ದವಾಗುತ್ತಿದ್ದು, ವಾಣಿಜ್ಯ ವಾಹನಗಳ ಮಾದರಿಗಳಂತೆಯೇ ಪ್ರಯಾಣಿಕರ ಎಲೆಕ್ಟ್ರಿಕ್ ವಾಹನ ಮಾದರಿಯ ಮಾರಾಟದಲ್ಲೂ ಮುಂಚೂಣಿ ಸಾಧಿಸುವ ನೀರಿಕ್ಷೆಯಲ್ಲಿದೆ.

ಟಾಟಾ ಆಲ್‌ಟ್ರೊಜ್ ಎಲೆಕ್ಟ್ರಿಕ್
ನೆಕ್ಸಾನ್ ಎಲೆಕ್ಟ್ರಿಕ್ ಮತ್ತು ಟಿಗೋರ್ ಎಲೆಕ್ಟ್ರಿಕ್ ಮೂಲಕ ಇವಿ ಕಾರು ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿರುವ ಟಾಟಾ ಮೋಟಾರ್ಸ್ ಕಂಪನಿಯು ಶೀಘ್ರದಲ್ಲೆ ಆಲ್‌ಟ್ರೊಜ್ ಇವಿ ಮಾದರಿಯನ್ನು ಸಹ ಬಿಡುಗಡೆ ಮಾಡಲಿದೆ. ಹೊಸ ಕಾರು 2022ರ ಕೊನೆಯಲ್ಲಿ ಬಿಡುಗಡೆಯಾಗಲಿದ್ದು, ಆಕರ್ಷಕ ಬೆಲೆಯೊಂದಿಗೆ ಒಂದು ಬಾರಿ ಚಾರ್ಜ್ ಮಾಡಿದರೆ ಕನಿಷ್ಠ 300 ರಿಂದ ಗರಿಷ್ಠ 320 ಕಿ.ಮೀ ಪ್ರಯಾಣ ಮಾಡಬಹುದಾಗಿದೆ.

ಟಾಟಾ ಮೋಟಾರ್ಸ್ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಕಾರು ಮಾದರಿಗಳನ್ನು ಬಿಡುಗಡೆ ಮಾಡುವ ಸಿದ್ದತೆಯಲ್ಲಿದ್ದು, ಕಂಪನಿಯು ಇವಿ ವಾಹನಗಳ ಅಭಿವೃದ್ದಿ, ಉತ್ಪಾದನೆ ಮತ್ತು ಮಾರಾಟಕ್ಕಾಗಿ ಪ್ರತ್ಯೇಕ ಪ್ಲ್ಯಾಟ್‌ಫಾರ್ಮ್ ಆರಂಭಿಸಿದೆ.

ಸದ್ಯ ಮಾರುಕಟ್ಟೆಯಲ್ಲಿರುವ ಇವಿ ಕಾರುಗಳನ್ನು ಸಾಮಾನ್ಯ ಕಾರುಗಳ ಉತ್ಪಾದನಾ ಪ್ಲ್ಯಾಟ್‌ಫಾರ್ಮ್‌ನಲ್ಲಿ ಅಭಿವೃದ್ದಿಪಡಿಸುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ಭವಿಷ್ಯದ ಬೃಹತ್ ಯೋಜನೆಗಳಿಗಾಗಿ ಇದೀಗ ಪ್ರತ್ಯೇಕ ನಿಯಂತ್ರಣ ಹೊಂದಿರುವ ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್ (TPEML) ಅಂಗಸಂಸ್ಥೆಯನ್ನು ಆರಂಭಿಸಿದೆ.

ಮಹೀಂದ್ರಾ ಇಎಕ್ಸ್‌ಯುವಿ300
2020ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡಿದ್ದ ಹೊಸ ಇಎಕ್ಸ್‌ಯುವಿ(eXUV300) ಕಾರನ್ನು ಮಾರುಕಟ್ಟೆಯಲ್ಲಿನ ಸನ್ನಿವೇಶವನ್ನು ಆಧರಿಸಿ ಇದೀಗ ಬಿಡುಗಡೆ ಮಾಡಲು ಮುಂದಾಗಿದ್ದು, ಹೊಸ ಕಾರು ಬಿಡುಗಡೆಗೂ ಮುನ್ನ ವಿವಿಧ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಕೈಗೊಂಡಿದೆ.

ಹೊಸ ಕಾರು ಈ ವರ್ಷಾಂತ್ಯಕ್ಕೆ ಬಿಡುಗಡೆಯಾಗುವ ಸಾಧ್ಯತೆಗಳಿದ್ದು, ಕಂಪನಿಯು ಇಎಕ್ಸ್‌ಯುವಿ300 ಬಿಡುಗಡೆಗೂ ಮುನ್ನ ಇಕೆಯುವಿ100 ಎಲೆಕ್ಟ್ರಿಕ್ ಕಾರು ಮಾದರಿಯನ್ನು ಬಿಡುಗಡೆ ಮಾಡುತ್ತಿದ್ದು, ಹೊಸ ಇಎಕ್ಸ್‌ಯುವಿ300 ಮಾದರಿಯು ಪ್ರಸ್ತುತ ಮಾರುಕಟ್ಟೆಯಲ್ಲಿ ಇವಿ ಕಾರು ಮಾರಾಟದಲ್ಲಿ ಮುಂಚೂಣಿಯಲ್ಲಿ ಟಾಟಾ ನೆಕ್ಸಾನ್ ಇವಿ ಮಾದರಿಗೆ ಪೈಪೋಟಿಯಾಗಿ ಬಿಡುಗಡೆಯಾಗುತ್ತಿದೆ.

ಹೊಸ ಇಎಕ್ಸ್‌ಯುವಿ300 ಮಾದರಿಯು ಪ್ರತಿ ಚಾರ್ಜ್‌ಗೆ ಕನಿಷ್ಠ 380 ಕಿ.ಮೀ ನಿಂದ 420 ಕಿ.ಮೀ ಮೈಲೇಜ್ ಪ್ರೇರಿತ ಬ್ಯಾಟರಿ ಪ್ಯಾಕ್‌ನೊಂದಿಗೆ ಟಾಟಾ ನೆಕ್ಸಾನ್ ಇವಿ ಬೆಲೆಗೆ ಸರಿಸಮನಾಗಿ ಬಿಡುಗಡೆ ಹೊಂದಬಹುದಾಗಿದ್ದು, ಹೊಸ ಕಾರು ಎಂಜಿ ಜೆಡ್ಎಸ್ ಇವಿ ಮಾದರಿಗೂ ಸಹ ಪೈಪೋಟಿ ನೀಡಲಿದೆ.


Click it and Unblock the Notifications








