ಭಾರತದಲ್ಲಿ ಬಿಡುಗಡೆಗೆ ಸಿದ್ದವಾದ ಫೋಕ್ಸ್‌ವ್ಯಾಗನ್ ಐಡಿ.4 ಎಲೆಕ್ಟ್ರಿಕ್ ಎಸ್‌ಯುವಿ
ಭಾರತದಲ್ಲಿ ಪ್ರಮುಖ ಕಾರು ತಯಾರಕ ಕಂಪನಿಗಳು ತಮ್ಮ ಬಹುನೀರಿಕ್ಷಿತ ಎಲೆಕ್ಟ್ರಿಕ್ ಕಾರು ಮಾದರಿಗಳನ್ನು ಹಂತ-ಹಂತವಾಗಿ ಬಿಡುಗಡೆಗೊಳಿಸುತ್ತಿದ್ದು, ಜರ್ಮನ್ ಕಾರು ಉತ್ಪಾದನಾ ಕಂಪನಿಯಾಗಿರುವ ಫೋಕ್ಸ್‌ವ್ಯಾಗನ್ ಕೂಡಾ ಭಾರತದಲ್ಲಿ ತನ್ನ ಜನಪ್ರಿಯ ಇವಿ ಮಾದರಿಗಳನ್ನು ಪರಿಚಯಿಸುವ ಸುಳಿವು ನೀಡಿದೆ.

ಫೋಕ್ಸ್‌ವ್ಯಾಗನ್ ಕಂಪನಯು ಶೀಘ್ರದಲ್ಲೇ ತನ್ನ ಪ್ರಮುಖ ಎಲೆಕ್ಟ್ರಿಕ್ ಕಾರು ಮಾದರಿಗಳ ಮಾರಾಟವನ್ನು ವಿಶ್ವದ ಪ್ರಮುಖ ಮಾರುಕಟ್ಟೆಗಳಿಗೆ ವಿಸ್ತರಣೆ ಮಾಡುತ್ತಿದ್ದು, ಕಂಪನಿಯ ಹೊಸ ಐಡಿ ಸರಣಿಯಲ್ಲಿ ಪ್ರಮುಖ ಇವಿ ಕಾರುಗಳ ಭಾರತದಲ್ಲೂ ಬಿಡುಗಡೆ ಮಾಡುವ ಬೃಹತ್ ಯೋಜನೆ ರೂಪಿಸಿದೆ.

ಮ್ಯಾಡುಲರ್ ಎಲೆಕ್ಟ್ರಿಕ್ ಡ್ರೈವ್ ಮ್ಯಾಟ್ರಿಕ್ಸ್ ಉತ್ಪಾದನಾ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿ ಸಿದ್ದಗೊಂಡಿರುವ ಫೋಕ್ಸ್‌ವ್ಯಾಗನ್ ಕಂಪನಿಯ ಹೊಸ ಇವಿ ಕಾರು ಮಾದರಿಗಳು ಈಗಾಗಲೇ ಯುರೋಪಿನ ಪ್ರಮುಖ ಮಾರುಕಟ್ಟೆಗಳಲ್ಲಿ ಮಾರಾಟ ಮಾಡುತ್ತಿದ್ದು, 2023ರ ವೇಳೆಗೆ ಭಾರತ ಸೇರಿದಂತೆ ವಿಶ್ವದ ಪ್ರಮುಖ ಮಾರುಕಟ್ಟೆಗಳಿಗೆ ಲಗ್ಗೆಯಿಡಲಿವೆ.

ಯುರೋಪಿನ್ ಪ್ರಮುಖ ಮಾರುಕಟ್ಟೆಗಳಲ್ಲಿ ಐಡಿ ಸರಣಿಯಲ್ಲಿ ಕಂಪನಿಯು ಈಗಾಗಲೇ ಐಡಿ.3 ಮತ್ತು ಐಡಿ.4 ಮತ್ತು ಮಧ್ಯಮ ಕ್ರಮಾಂಕದಲ್ಲಿ ಇ-ಗಾಲ್ಪ್ ಹಾಗೂ ಇ-ಅಪ್ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡುತ್ತಿದ್ದು, ಐಡಿ.4 ಮಾದರಿಯ ಮೂಲಕ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿದೆ.

ಸದ್ಯ ಮಾಲಿನ್ಯ ತಗ್ಗಿಸುವ ಉದ್ದೇಶದಿಂದ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳನ್ನು ಪರಿಣಾಮಕಾರಿಯಾಗಿ ತಗ್ಗಿಸುವ ಉದ್ದೇಶದಿಂದ ಹಲವಾರು ಕಠಿಣಕ್ರಮಗಳನ್ನು ಜಾರಿಗೆ ತರುತ್ತಿದ್ದು, ಬಹುತೇಕ ಆಟೋ ಉತ್ಪಾದನಾ ಕಂಪನಿಗಳು ಸಂಪೂರ್ಣವಾಗಿ ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ವಾಹನ ಉತ್ಪಾದನೆಯತ್ತ ಹೆಚ್ಚು ಗಮಹರಿಸುತ್ತಿವೆ.

ಫೋಕ್ಸ್‌ವ್ಯಾಗನ್ ಕಂಪನಿಯು ಕೂಡಾ ಡೀಸೆಲ್ ಎಂಜಿನ್ ಹಗರಣದಲ್ಲಿ ಸಿಲುಕಿದ ನಂತರ ಡೀಸೆಲ್ ಎಂಜಿನ್ ಕಾರುಗಳ ಮಾರಾಟವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ ಪೆಟ್ರೋಲ್ ಮಾದರಿಗಳ ಜೊತೆಗೆ ಎಲೆಕ್ಟ್ರಿಕ್ ಕಾರು ಮಾದರಿಗಳ ಮಾರಾಟ ಮಾಡುತ್ತಿದ್ದು, ಮುಂಬರುವ ದಿನಗಳಲ್ಲಿ ಪೆಟ್ರೋಲ್ ಕಾರುಗಳ ಮಾರಾಟವನ್ನು ಸಹ ಹಂತ-ಹಂತವಾಗಿ ಸ್ಥಗಿತಗೊಳಿಸಲಿರುವ ಆಟೋ ಉತ್ಪಾದನಾ ಕಂಪನಿಗಳು ಹೈಬ್ರಿಡ್ ಅಥವಾ ಸಂಪೂರ್ಣವಾಗಿ ಎಲೆಕ್ಟ್ರಿಕ್ ಮಾದರಿಗಳನ್ನು ಮಾತ್ರ ಬಿಡುಗಡೆ ಮಾಡಲಿವೆ.

ಇಂಗಾಲ ಉತ್ಪಾದನೆ ಅತಿದೊಡ್ಡ ಕೊಡುಗೆ ಹೊಂದಿರುವ ಪ್ರಯಾಣಿಕರ ಬಳಕೆಯ ಕಾರು ಮಾದರಿಗಳನ್ನು ಗಣನೀಯವಾಗಿ ತಗ್ಗಿಸುವತ್ತ ಯುರೋಪಿನ ಪ್ರಮುಖ ರಾಷ್ಟ್ರಗಳು ಈಗಾಗಲೇ ಹಲವಾರು ಹೊಸ ಯೋಜನೆಗಳನ್ನು ಜಾರಿಗೆ ತಂದಿದ್ದು, ಪರಿಣಾಮಕಾರಿಯಾದ ಇವಿ ವಾಹನ ಅಳವಡಿಕೆಗಾಗಿ ಕಂಪನಿಯು ಇದೀಗ ಯುರೋಪಿನ್ ಒಕ್ಕೂಟವು ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ.

2030ರ ವೇಳೆಗೆ ಶೇ.50ರಷ್ಟು ಇವಿ ವಾಹನ ಬಳಕೆಯ ಗುರಿಯೊಂದಿಗೆ ಇಂಧನ ಚಾಲಿತ ವಾಹನಗಳ ಮೇಲೆ ಹೆಚ್ಚಿನ ನಿರ್ಬಂಧಗಳನ್ನು ವಿಧಿಸಲಾಗುತ್ತಿದ್ದು, ಕಳೆದ ಎರಡು ವರ್ಷಗಳಲ್ಲಿ ಸಾಕಷ್ಟು ಪ್ರಮಾಣದ ಇವಿ ವಾಹನಗಳ ಮಾರಾಟವು ದಾಖಲಾಗಿದೆ.

ಆದರೆ ಇಂಧನ ಚಾಲಿತ ವಾಹನಗಳಿಗೆ ಹೋಲಿಕೆ ಮಾಡಿದರೆ ಇವಿ ವಾಹನಗಳ ಬಳಕೆಯು ಇನ್ನು ಕೂಡಾ ಸಾಕಷ್ಟು ಸುಧಾರಿಸಬೇಕಿದ್ದು, ಈ ಹಿನ್ನಲೆಯಲ್ಲಿ ಮತ್ತೊಂದು ಮಹತ್ವದ ನಿರ್ಧಾರ ಪ್ರಕಟಿಸಿರುವ ಯುರೋಪಿಯನ್ ಒಕ್ಕೂಟವು 2035ರ ವೇಳೆಗೆ ಶೇ.100 ರಷ್ಟು ಇಂಧನ ಚಾಲಿತ ವಾಹನಗಳನ್ನು ನಿಷೇಧಿಸುವುದಾಗಿ ಘೋಷಣೆ ಮಾಡಿದೆ.

ಇದೇ ಕಾರಣಕ್ಕೆ ಇಂಧನ ಚಾಲಿತ ವಾಹನ ತಗ್ಗಿಸುವ ನಿಟ್ಟಿನಲ್ಲಿ 27 ದೇಶಗಳನ್ನು ಒಳಗೊಂಡಿರುವ ಯುರೋಪಿಯನ್ ಒಕ್ಕೂಟವು ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸಲು ಮತ್ತು ವಿದ್ಯುದ್ದೀಕರಣದಲ್ಲಿ ಹೆಚ್ಚಿನ ಹೂಡಿಕೆಗೆ ಸಹಕಾರಿಯಾಗುವಂತೆ ಹೊಸ ನಿರ್ಣಯ ಪ್ರಕಟಿಸಿದೆ.

ಈ ನಿಟ್ಟಿನಲ್ಲಿ ಮಹತ್ವದ ಬದಲಾವಣೆಯ ನೀರಿಕ್ಷೆಯಲ್ಲಿರುವ ಫೋಕ್ಸ್‌ವ್ಯಾಗನ್ ಕಂಪನಿಯು ವಿವಿಧ ಇವಿ ಕಾರು ಮಾದರಿಗಳೊಂದಿಗೆ ಜಾಗತಿಕ ಆಟೋ ಉದ್ಯಮದಲ್ಲಿ ಗಮನಸೆಳೆಯಲು ಮುಂದಾಗಿದ್ದು, ಭಾರತದಲ್ಲೂ ಕೂಡಾ ತನ್ನ ಐಡಿ.4 ಇವಿ ಮೂಲಕ ಉತ್ತಮ ಬೇಡಿಕೆ ಪಡೆದುಕೊಳ್ಳುವ ತವಕದಲ್ಲಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಐಡಿ.4 ಎಲೆಕ್ಟ್ರಿಕ್ ಕಾರು ಮಾದರಿಯು ಹಲವು ವಿಶೇಷತೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದ್ದು, ಪ್ರತಿ ಚಾರ್ಜ್‌ಗೆ 513 ಕಿ.ಮೀ ಗೂ ಅಧಿಕ ಮೈಲೇಜ್ ಹಿಂದಿರುಗಿಸುವ ವೈಶಿಷ್ಟ್ಯತೆ ಹೊಂದಿದೆ.

ಜೊತೆಗೆ ಹೊಸ ಕಾರಿನಲ್ಲಿ ಸಾಮಾನ್ಯ ಮಾದರಿಯ ಜೊತೆಗೆ ಪರ್ಫಾಮೆನ್ಸ್ ಪ್ರಿಯರಿಗಾಗಿ ಐಡಿ.4 ಜಿಟಿಎಕ್ಸ್ ಮಾದರಿಯೊಂದಿಗೆ ಗಮನಸೆಳೆಯಲಿದ್ದು, ರಿಯರ್ ವ್ಹೀಲ್ ಡ್ರೈವ್ ಮತ್ತು ಆಲ್ ವ್ಹೀಲ್ ಡ್ರೈವ್ ಸಿಸ್ಟಂ ಪಡೆದುಕೊಂಡಿರುವ ಹೊಸ ಕಾರಿನಲ್ಲಿ ಕ್ವಿಕ್ ಚಾರ್ಜ್ ಮೂಲಕ 30 ನಿಮಿಷ ಕಾಲ ಚಾರ್ಜ್ ಮಾಡಿ ಕನಿಷ್ಠ 320 ಕಿ.ಮೀ ಮೈಲೇಜ್ ಸುಲಭವಾಗಿ ಪಡೆಯಬಹುದಾಗಿದೆ.

ಆರಂಭಿಕ ಹಂತವಾಗಿ ಐಡಿ.4 ಎಲೆಕ್ಟ್ರಿಕ್ ಕಾರಿನಲ್ಲಿ ರಿಯರ್ ಡ್ರೈವ್ ಸಿಸ್ಟಂ ನೀಡಲಿರುವ ಫೋಕ್ಸ್‌ವ್ಯಾಗನ್ ಕಂಪನಿಯು ಗ್ರಾಹಕರ ಬೇಡಿಕೆಗೆ ಆಧರಿಸಿ ಆಲ್ ವೀಲ್ಹ್ ಡ್ರೈವ್ ಸಿಸ್ಟಂ ಮಾದರಿಯನ್ನು ನೀಡಲಿದ್ದು, ರಿಯರ್ ಡ್ರೈವ್ ಸಿಸ್ಟಂ ಹೊಂದಿರುವ ಕಾರು ಮಾದರಿಯು 204-ಬಿಎಚ್‌ಪಿ ಮಾಡಿದ್ದಲ್ಲಿ ಆಲ್ ವೀಲ್ಹ್ ಡ್ರೈವ್ ಮಾದರಿಯು 310-ಬಿಎಚ್‌ಪಿ ಉತ್ಪಾದನೆ ಮಾಡಲಿದೆ.

ಹೊಸ ಕಾರು 4,592-ಎಂಎಂ ಉದ್ದ, 1,852-ಎಂಎಂ ಅಗಲ ಮತ್ತು 1,629-ಎಂಎಂ ಎತ್ತರದ ವಿನ್ಯಾಸದೊಂದಿಗೆ ಅತ್ಯುತ್ತಮ ಆಸನ ಸೌಲಭ್ಯವನ್ನು ಹೊಂದಿದ್ದು, ತಾಂತ್ರಿಕ ಅಂಶಗಳ ಧ್ವನಿ ಗ್ರಹಿಕೆಯ ಮೂಲಕ ನಿಯಂತ್ರಣ ಮಾಡಬಹುದಾದ ಸೌಲಭ್ಯಗಳ ಜೋಡಣೆಯನ್ನು ಪಡೆದುಕೊಂಡಿದೆ.


Click it and Unblock the Notifications








