ಟಾಟಾದಿಂದ ಮುಂಬರಲಿವೆ 13 ಕಾರುಗಳು: ಹೇಗಿವೆ ಗೊತ್ತಾ?
ಭಾರತದ ಪ್ರಮುಖ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿರುವ ಟಾಟಾ ಮೋಟಾರ್ಸ್, ಮುಂದಿನ ಮೂರು ವರ್ಷಗಳಲ್ಲಿ ಇಂಧನ ಹಾಗೂ ಎಲೆಕ್ಟ್ರಿಕ್ ಚಾಲಿತ ಕಾರುಗಳನ್ನು ಬಿಡುಗಡೆ ಮಾಡಲಿದೆ. ಅವುಗಳಲ್ಲಿ 10 ಎಸ್‌ಯುವಿ ಹಾಗೂ 3 ಹ್ಯಾಚ್‌ಬ್ಯಾಕ್‌ಗಳು ಸೇರಿದ್ದು, ಆ ಬಗ್ಗೆ ಹೆಚ್ಚಿನ ವಿವರವನ್ನು ತಿಳಿಸಿಕೊಡುವ ಪ್ರಯತ್ನ ಮಾಡಲಾಗಿದೆ.
ಟಾಟಾ ನೆಕ್ಸಾನ್ & ಹ್ಯಾರಿಯರ್ ಫೇಸ್‌ಲಿಫ್ಟ್ ಎಸ್‌ಯುವಿ: ದೇಶೀಯ ಮಾರುಕಟ್ಟೆಯಲ್ಲಿ ಟಾಟಾ ಕಂಪನಿಯು ರೂ.12.35 ಲಕ್ಷದಿಂದ ರೂ.14.35 ಲಕ್ಷ ಬೆಲೆಯಲ್ಲಿ ನೆಕ್ಸಾನ್ ರೆಡ್ ಡಾರ್ಕ್ ಎಡಿಷನ್ ಹಾಗೂ ರೂ.21.77 ಲಕ್ಷದಿಂದ ರೂ.24.07 ಲಕ್ಷ ದರದಲ್ಲಿ ಹ್ಯಾರಿಯರ್ ರೆಡ್ ಡಾರ್ಕ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಇವೆರೆಡು ಎಸ್‌ಯುವಿಗಳನ್ನು ಕಂಪನಿಯು ಈಗಾಗಲೇ ಪರೀಕ್ಷಿಸುತ್ತಿದ್ದು, ಹಲವಾರು ನವೀಕರಣಗಳನ್ನು ಪಡೆಯಬಹುದು. ಅದರಲ್ಲೂ ನೆಕ್ಸಾನ್ ಫ್ರಂಟ್, ರೇರ್ ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆಯಾಗಲಿದ್ದು, ಮುಂದಿನ ವರ್ಷ ಬಿಡುಗಡೆಯಾಗಬಹುದು.

ಟಾಟಾ ಸಫಾರಿ ಫೇಸ್‌ಲಿಫ್ಟ್ & ಟಿಯಾಗೊ ಇವಿ ಬ್ಲಿಟ್ಜ್: ಬಹುನೀರಿಕ್ಷಿತ ಸಫಾರಿ ಫೇಸ್‌ಲಿಫ್ಟ್ 2024ರಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಈಗಾಗಲೇ ಸೋರಿಕೆಯಾಗಿರುವ ಸ್ಪೈ ಚಿತ್ರಗಳ ಪ್ರಕಾರ, ಈ ಕಾರಿನ ಒಳಭಾಗದ ವೈಶಿಷ್ಟ್ಯಗಳಲ್ಲಿ ಬದಲಾವಣೆಯಾದಂತೆ ತೋರುತ್ತದೆ. ಟಿಯಾಗೊ ಇವಿ ಬ್ಲಿಟ್ಜ್ ವಿಚಾರಕ್ಕೆ ಬರುವುದಾದರೆ, ಇದನ್ನು ಕಳೆದ ಜನವರಿಯಲ್ಲಿ ಮುಕ್ತಾಯಗೊಂಡ ದೆಹಲಿಯ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾಯಿತು. ಇದು ಟಿಯಾಗೊ ಇವಿ ಸ್ಪೋರ್ಟಿಯರ್ ಆವೃತ್ತಿಯಾಗಿದ್ದು, ಕೆಲವೊಂದು ಕಾಸ್ಮೆಟಿಕ್ ಬದಲಾವಣೆಯನ್ನು ಪಡೆದುಕೊಂಡಿರಲಿದೆ.
ಟಾಟಾ ಹ್ಯಾರಿಯರ್ ಇವಿ & ಆಲ್ಟ್ರೋಜ್ ರೇಸರ್: ಭಾರತದ ಮಾರುಕಟ್ಟೆಯಲ್ಲಿ ಟಾಟಾ ಈಗಾಗಲೇ ನೆಕ್ಸಾನ್ ಹಾಗೂ ಟಿಯಾಗೊ ಇವಿಗಳನ್ನು ಮಾರಾಟ ಮಾಡುತ್ತಿದೆ. ಇದೀಗ, ಆಟೋ ಎಕ್ಸ್‌ಪೋದಲ್ಲಿ ಹ್ಯಾರಿಯರ್ ಇವಿಯನ್ನು ಅನಾವರಣ ಮಾಡಿತ್ತು. ಇದು 4WD ಆಯ್ಕೆಯಲ್ಲಿ ಖರೀದಿಗೆ ಸಿಗಬಹುದು. ಹ್ಯುಂಡೈ i i20 N ಎನ್ ಮಾದರಿಗಳಿಗೆ ಪೈಪೋಟಿ ನೀಡಲು ಟಾಟಾ, ಆಲ್ಟ್ರೋಜ್ ರೇಸರ್ ಅನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ. ಇದು 1.2 ಲೀಟರ್ ಟರ್ಬೊಚಾರ್ಜ್ಡ್ ಎಂಜಿನ್ ಹೊಂದಿರಲಿದ್ದು, 120 PS ಪವರ್ ಹಾಗೂ 170 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ.

ಟಾಟಾ CURVV: ನೆಕ್ಸಾನ್ ಕಾರಿನ ಮಾಡಿಫೈಗೊಳಿಸಿದ ಪ್ಲಾಟ್‌ಫಾರ್ಮ್ ಆಧಾರದ ಮೇಲೆ ಟಾಟಾ, ಕರ್ವಿವ್ (CURVV) ಕಾರನ್ನು ಅಭಿವೃದ್ಧಿಪಡಿಸುತ್ತಿದೆ. ದೆಹಲಿಯ ಆಟೋ ಎಕ್ಸ್‌ಪೋದಲ್ಲಿಯೂ ಈ ಕಾರಿನ ಪರಿಕಲ್ಪನೆ (concept)ಯನ್ನು ಅನಾವರಣ ಮಾಡಲಾಗಿತ್ತು. ಇದು 1.2 ಲೀಟರ್ ಟರ್ಬೋಚಾರ್ಜ್ಡ್ ಡೈರೆಕ್ಟ್ ಇಂಜೆಕ್ಷನ್ ಪೆಟ್ರೋಲ್ ಎಂಜಿನ್ ಒಳಗೊಂಡಿರುವ ಟಾಟಾದ ಮೊದಲ ಕಾರು ಆಗಿರಲಿದ್ದು, ಮುಂಬರುವ ವರ್ಷಗಳಲ್ಲಿ ಮಾರುಕಟ್ಟೆಗೆ ಬರಲಿದ್ದು, ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಹಾಗೂ ಹ್ಯುಂಡೈ ಕ್ರೆಟಾಗೆ ಭಾರೀ ಪೈಪೋಟಿ ನೀಡಲಿದೆ.
ಟಾಟಾ ಪಂಚ್ & ಆಲ್ಟ್ರೋಜ್ CNG: ಭಾರತದ ಮಾರುಕಟ್ಟೆಯಲ್ಲಿ ಪಂಚ್ ಐ ಸಿಎನ್‌ಜಿ ರೂ.10.14 ಲಕ್ಷ ಆರಂಭಿಕ ಬೆಲೆಯಲ್ಲಿ ಖರೀದಿಗೆ ಸಿಗಬಹುದು. ಬಹುತೇಕ ಇದೇ ವರ್ಷದ ಆಗಸ್ಟ್ ತಿಂಗಳಲ್ಲಿ ಬಿಡುಗಡೆಯಾಗಲಿದ್ದು, ಉತ್ತಮ ಇಂಧನ ದಕ್ಷತೆಯನ್ನು ಹೊಂದಿರಲಿದೆ ಎಂದು ಹೇಳಲಾಗಿದೆ. ಆಲ್ಟ್ರೋಜ್ ಸಿಎನ್‌ಜಿ ಕೂಡ ಈ ವರ್ಷವೇ ಲಾಂಚ್ ಆಗಲಿದೆ. ಇದು ಟ್ವಿನ್ ಸಿಲಿಂಡರ್ ತಂತ್ರಜ್ಞಾನ ಹೊಂದಿರಲಿದ್ದು. ಹಲವು ನವೀನ ವೈಶಿಷ್ಟ್ಯಗಳೊಂದಿಗೆ ಖರೀದಿಗೆ ಸಿಗಬಹುದು. ರೂ.10.55 ಲಕ್ಷ ಬೆಲೆಯನ್ನು ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ.

ಟಾಟಾ ಸಿಯೆರಾ & ಸಫಾರಿ ಇವಿ: ಟಾಟಾ ಮೋಟಾರ್ಸ್ ತನ್ನ ಬಹುನೀರಿಕ್ಷಿತ ಸಿಯೆರಾವನ್ನು ಪೆಟ್ರೋಲ್ ಹಾಗೂ ಎಲೆಕ್ಟ್ರಿಕ್ ಪವರ್‌ಟ್ರೇನ್ ಆಯ್ಕೆಯಲ್ಲಿ ಗ್ರಾಹಕರಿಗೆ ನೀಡಬಹುದು. ಇದು 1.5 ಲೀಟರ್ 4-ಸಿಲಿಂಡರ್ ಟರ್ಬೊ ಎಂಜಿನ್ ಹೊಂದಿರಬಹುದು. ಇದರ ಎಲೆಕ್ಟ್ರಿಕ್ ಪವರ್‌ಟ್ರೇನ್ ಪಡೆದಿರುವ ಕಾರು, ಸಂಪೂರ್ಣ ಚಾರ್ಜಿನಲ್ಲಿ 500 km ರೇಂಜ್ ನೀಡಬಹುದು. ಅಲ್ಲದೆ, ಹತ್ತಾರು ನವೀನ ವೈಶಿಷ್ಟ್ಯಗಳೊಂದಿಗೆ ಟಾಟಾ ಸಫಾರಿ ಇವಿಯನ್ನು ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ನೀಡಬಹುದು. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಿಲ್ಲ.
ಟಾಟಾ ಅವಿನ್ಯಾ: ಈ ಕಾರು, 2026ರಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಅತ್ಯಾಧುನಿಕ ವೈಶಿಷ್ಟ್ಯದೊಂದಿಗೆ ಗ್ರಾಹಕರಿಗೆ ಖರೀದಿಗೆ ದೊರೆಯಲಿದೆ. ಒಟ್ಟಾರೆಯಾಗಿ ಟಾಟಾ ಮುಂದಿನ ಮೂರು ವರ್ಷಗಳಲ್ಲಿ 13 ಕಾರುಗಳನ್ನು ಬಿಡುಗಡೆಗೊಳಿಸಲು ಹೊರಟಿದ್ದು, ಒಂದಕ್ಕಿಂತ ಒಂದು ಆಕರ್ಷಕವಾಗಿವೆ ಎಂದು ಹೇಳಬಹುದು. ಅಲ್ಲದೆ, ಬೆಲೆಯು ಕೈಗೆಟುಕಲಿದೆ ಎಂದು ಅಂದಾಜಿಸಲಾಗಿದ್ದು, ಇವು ಭಾರತದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತವೆ ಎಂದು ಹೇಳಬಹುದು.


Click it and Unblock the Notifications