9 ಲಕ್ಷ ಕಿ.ಮೀ ಓಡಿದ್ರೂ ಇನ್ನೂ ನಿಂತಿಲ್ಲ 66 ವರ್ಷದ ಹಳೆಯ Fiat 1100 Elegant... ಮಾರಲ್ವಂತೆ ಮಾಲೀಕ

ಹಳೆಯ ಕಾರುಗಳಿಗೆ ಈಗ ಅದೇನೋ ಕ್ರೇಜ್, ವಾಹನಗಳನ್ನು ಓಡಿಸದಿದ್ರೂ ಅವುಗಳನ್ನು ಬಂಗಾರದಂತೆ ಕಾಪಾಡಿಕೊಳ್ಳುವವರು ಭಾರತದಲ್ಲಿ ಹಲವರಿದ್ದಾರೆ. ವಿಶೇಷವಾಗಿ ಮುಂಬೈ ಸುತ್ತಮುತ್ತ ವಾಸಿಸುವವರು, ಹಿಂದಿನ ಯುಗದ ವಿಂಟೇಜ್ ಕಾರುಗಳನ್ನು ಇಂದಿಗೂ ಉತ್ತಮ ಕಂಡಿಷನ್‌ನಲ್ಲಿಟ್ಟು ಕಾಪಾಡಿಕೊಂಡು ಬಂದಿದ್ದಾರೆ. ಅದರಲ್ಲೊಂದು 66 ವರ್ಷದ ಹಳೆಯ ಫಿಯೆಟ್ 1100 ಎಲಿಗಂಟ್.

ಇತ್ತೀಚಗೆ 1957 ರ ಫಿಯೆಟ್ 1100 ಎಲಿಗಂಟ್ ಕಾರು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಈ ಕಾರು ಮುಂಬೈ ಮೂಲದ ಫ್ರಾಮ್ ಮತ್ತು ಅನೋಶ್ ಧೋಂಡಿ ಎಂಬ ತಂದೆ-ಮಗನ ಮಾಲೀಕತ್ವದಲ್ಲಿದೆ. ಈ ಅದ್ಬುತ ಆ್ಯಂಟಿಕ್ ಪೀಸ್ ಅನ್ನು ವಿಂಟೇಜ್ ಕಾರುಗಳನ್ನು ಪ್ರದರ್ಶಿಸುವ DW Rev - ಕಾರ್ಸ್ ಮತ್ತು ಮೊಬಿಲಿಟಿಯ YouTube ಚಾನಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ.

fiat-1100-elegant

ಈ ನಿರ್ದಿಷ್ಟ ಫಿಯೆಟ್ 1100 ಎಲಿಗಂಟ್ 1991 ರಲ್ಲಿ ಅದರ ಓಡೋಮೀಟರ್‌ನಲ್ಲಿ 9 ಲಕ್ಷ ಕಿ.ಮೀ ಮಾರ್ಕ್ ಅನ್ನು ಮೀರಿದೆ ಎಂದು ವೀಡಿಯೊದಲ್ಲಿ ಹೇಳಲಾಗಿದೆ. ನಂತರ ಮಾಲೀಕರು ಕ್ರಮಿಸಿದ ದೂರವನ್ನು ಗಮನಿಸುವುದನ್ನು ನಿಲ್ಲಿಸಿಬಿಟ್ಟಿದ್ದಾರೆ. ಈ ಹಳೆಯ ಫಿಯೆಟ್‌ನ ಮಾಲೀಕತ್ವದ ಉದ್ದಕ್ಕೂ ಅವರು ಲಾಗ್‌ಬುಕ್ ಅನ್ನು ನಿರ್ವಹಿಸಿರುವುದಾಗಿ ಮಾಲೀಕರು ಹೇಳಿದ್ದಾರೆ.

ಅವರ ಲಾಗ್‌ಬುಕ್ ಪ್ರಕಾರ 1970 ರ ದಶಕದಲ್ಲಿ ಟೈರ್ ಬದಲಾವಣೆಗಳನ್ನು ಒಳಗೊಂಡಂತೆ ಎಲ್ಲಾ ನಿರ್ವಹಣೆ ಮತ್ತು ಸ್ಪೇರ್ ಪಾರ್ಟ್‌ಗಳ ಬದಲಾವಣೆ ಸೇರಿದಂತೆ ಹಲವು ವಿವರಗಳನ್ನು ಇದರಲ್ಲಿ ದಾಖಲಿಸಲಾಗಿದೆ. ಪ್ರಸ್ತುತ ಮಾಲೀಕರಾದ 69 ವರ್ಷದ ಫ್ರಾಂ ಧೋಂಡಿ ಅವರು ತಮ್ಮ ತಂದೆಯಿಂದ ಈ ಕಾರನ್ನು ಪಡೆದಿರುವುದಾಗಿ ಹೇಳಿಕೊಂಡಿದ್ದಾರೆ. ಸದ್ಯ ಈ ಕಾರನ್ನು ಫ್ರಾಂ ಧೋಂಡಿ ಅವರ ಮಗ ಅನೋಶ್ ಧೋಂಡಿ ನಿರ್ವಹಿಸುತ್ತಿದ್ದಾರೆ.

66 ವರ್ಷ ಹಳೆಯ ಈ ಫಿಯೆಟ್ 1100 ಎಲಿಗಂಟ್ ಸದ್ಯ ಉತ್ತಮ ಸ್ಥಿತಿಯಲ್ಲಿಲ್ಲ. ಕಾರನ್ನು ತಂದೆ, ಮಗ ನಿತ್ಯ ಬಳಸಲಾಗುತ್ತಿದೆಯಾದರೂ, ಇದನ್ನು ಹೆಚ್ಚಾಗಿ ಹೊರಾಂಗಣದಲ್ಲಿ ನಿಲ್ಲಿಸಲಾಗುತ್ತದೆ. ಹಾಗಾಗಿ ಹೆಡ್‌ಲ್ಯಾಂಪ್ ಮತ್ತು ಟೈಲ್ ಲ್ಯಾಂಪ್, ಮುಂಭಾಗದ ಗ್ರಿಲ್, ಕ್ರೋಮ್ ಭಾಗಗಳಲ್ಲಿ ತುಕ್ಕು ಕಾಣಿಸಿಕೊಂಡಿದೆ. ಆದರೂ ಇಂದಿಗೂ ಯಾವುದೇ ಸಮಸ್ಯೆಯಿಲ್ಲದೇ ಚಲಿಸುತ್ತದೆ ಎಂದು ಮಾಲೀಕ ಹೇಳಿದ್ದಾರೆ.

ಮಾಲೀಕ ಹೊಸ ತಲೆಮಾರಿನ ಕಾರುಗಳನ್ನು ಹೊಂದಿದ್ದರೂ, ಈ ಹಳೆಯ ಫಿಯೆಟ್ ಅನ್ನು ಮಾರಾಟ ಮಾಡುವುದು ಇಷ್ಟವಿಲ್ಲವಂತೆ. ಕಾರನ್ನು ನಿರ್ವಹಿಸುವಲ್ಲಿ ಕೆಲ ಸವಾಲುಗಳ ಹೊರತಾಗಿ, ಇದು ಇಷ್ಟು ವರ್ಷಗಳಲ್ಲಿ ಅತ್ಯಂತ ವಿಶ್ವಾಸಾರ್ಹವಾಗಿ ಉಳಿದಿದೆ ಎಂದುಹೇಳುತ್ತಾರೆ. ಓಡಿಸುವ ಸಮಯದಲ್ಲಿ ಎಂದೂ ಕೂಡ ಸಮಸ್ಯೆ ಎದುರಿಸಿಲ್ಲ, ತಳ್ಳಿರುವ ಉದಾಹರಣೆಯೂ ಇಲ್ಲ ಎಂದು ಹೆಮ್ಮೆಯಿಂದ ಹೇಳುತ್ತಾರೆ.

ಈ ಅದ್ಬುತ ವಿಂಟೇಜ್ ಕಾರನ್ನು 1950 ರ ದಶಕದ ಅಂತ್ಯದಲ್ಲಿ ಭಾರತಕ್ಕೆ ಆಮದು ಮಾಡಿಕೊಂಡು ಪ್ರೀಮಿಯರ್ ಆಟೋಮೊಬೈಲ್ಸ್ ಲಿಮಿಟೆಡ್‌ನಿಂದ ಮಾರಾಟವಾಯಿತು. ಫಿಯೆಟ್ 1100 ಎಲಿಗಂಟ್ 1.1-ಲೀಟರ್, 38 PS ಪೆಟ್ರೋಲ್ ಎಂಜಿನ್ ಅನ್ನು 4-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. ಇಂದಿಗೂ ಕಾರು ಓಡುತ್ತಿದೆಯೆಂದರೆ ಆಗಿನ ಕಾಲದ ಗುಣಮಟ್ಟ ಹಾಗೂ ಮಾಲೀಕರ ನಿರ್ವಹಣೆಯನ್ನು ನಾವು ಮೆಚ್ಚಲೇಬೇಕು.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: ಭಾರತದಲ್ಲಿ ಫಿಯೆಟ್ 1100 ಎಲಿಗಂಟ್ ಹಿಂದಿನ ಕಾಲದ ಕುರುಹಾಗಿದ್ದರೂ, ಫ್ರಾಮ್ ಧೋಂಡಿಯಂತಹ ಕೆಲ ಕಾರು ಸಂಗ್ರಾಹಕಾರರು ಈ ಪ್ರಾಚೀನ ವಿಂಟೇಜ್ ಕಾರುಗಳನ್ನು ಇಂದಿಗೂ ನಿರ್ವಹಿಸುತ್ತಿದ್ದಾರೆ. ಇಂತಹ ಕಾರುಗಳನ್ನು ಹೀಗೆ ಸಂಗ್ರಹಿಸಿಡುವುದು ಇಂದಿನ ಕಾಲದ ಕಾರು ಉತ್ಸಾಹಿಗಳಿಗೆ ಅವುಗಳ ಮಹತ್ವ ತಿಳಿಯಲು ಸಹಕಾರಿಯಾಗಿದೆ.

Video Code:

Article Published On: Saturday, June 17, 2023, 13:37 [IST]
English summary
66 year old fiat 1100 elegant still running
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+