85ರ ವೃದ್ಧನಿಗೆ ಕಾರುಗಳೆ ಪ್ರಪಂಚ: ಡ್ರೈವಿಂಗ್ ಅಂದ್ರೆ ಪಂಚಪ್ರಾಣ... 60ಕ್ಕೂ ಹೆಚ್ಚು ಕಾರುಗಳ ಖರೀದಿ
ಇತ್ತೀಚಿನ ಯುವ ಪೀಳಿಗೆಗೆ ಬೈಕ್ ಅಥವಾ ಕಾರುಗಳ ಕ್ರೇಜ್ ಇದೆ ಅಂದ್ರೆ ನಂಬೋ ವಿಚಾರ ಹೌದು. ಆದ್ರೆ 85ರ ವೃದ್ಧನಿಗೆ ಕಾರುಗಳಂದ್ರೆ ಇಂದಿಗೂ ಡ್ರೈವಿಂಗ್ ಮಾಡುವ ಸಖತ್ ಕ್ರೇಜ್ ಇದೆ ಅಂದ್ರೆ ಕೇಳುಗರಿಗೆ ಆಶ್ಚರ್ಯವೆನಿಸಬಹುದು. ಈ ಲೇಖನದಲ್ಲಿ ಹೇಳಲು ಹೊರಟಿರುವ ವೃದ್ಧ ಬರೋಬ್ಬರಿ 60ಕ್ಕೂ ಹೆಚ್ಚು ಕಾರುಗಳನ್ನು ಖರೀದಿಸಿ ತನ್ನ ಆಸೆಗಳನ್ನು ಪೂರೈಸಿಕೊಂಡಿದ್ದಾನೆ.
ನಮ್ಮಲ್ಲಿ ಅನೇಕರು ತಮ್ಮ ಸಂಪತ್ತನ್ನು ತೋರಿಸಿಕೊಳ್ಳಲು ದುಬಾರಿ ವಾಹನಗಳನ್ನು ಖರೀದಿಸುತ್ತಾರೆ. ಇವರನ್ನು ಕಾರು ಉತ್ಸಾಹಿಗಳು ಎಂದು ಕರೆಯಲು ಸಾಧ್ಯವಿಲ್ಲ. ಬದಲಿಗೆ ಕೇವಲ ಕಾರಿನ ಮೇಲೆ ಒಲವಿದ್ದು, ಅವುಗಳನ್ನು ಹೇಗಾದರೂ ದಕ್ಕಿಸಿಕೊಂಡು ಓಡಿಸಲೇಬೇಕು ಎಂಬ ಹಂಬಲವಿರುವವರನ್ನು ಕಾರು ಉತ್ಸಾಹಿಗಳೆಂದು ಕರೆಯಬಹುದು. ಅಂಥವರಲ್ಲಿ ಒಬ್ಬರೇ ಕೇರಳದ 85 ವರ್ಷದ ನಾರಾಯಣನ್ ಪಿಳ್ಳೈ.

ಕಾರು ಮತ್ತು ಬೈಕ್‌ಗಳ ಮೇಲಿನ ಪ್ರೀತಿಯು ಕೇವಲ ಯುವ ಪೀಳಿಗೆಗೆ ಮಾತ್ರ ಸೀಮಿತವಾಗಿಲ್ಲ ಎಂದು ಈ 85 ವರ್ಷದ ನಾರಾಯಣನ್ ಪಿಳ್ಳೈ ಸಾಭೀತುಪಡಿಸಿದ್ದಾರೆ. ಇವರು ಇಲ್ಲಿಯವರೆಗೆ 60ಕ್ಕೂ ಹೆಚ್ಚು ಕಾರುಗಳನ್ನು ಸಂಗ್ರಹಿಸಿರುವ ಕೇರಳದ 85 ವರ್ಷದ ಡೈ ಹಾರ್ಡ್ ಕಾರು ಪ್ರೇಮಿ ಅಂದ್ರೂ ತಪ್ಪಗೋದಿಲ್ಲ. ಈ ವ್ಯಕ್ರಿಯ ಅದ್ಬುತ ಕಾರು ಸಂಗ್ರಹ ಹಾಗೂ ಅವರ ಪ್ರಯಾಣದ ಬಗ್ಗೆ ಇಲ್ಲಿ ನೋಡೋಣ.
ಕೇರಳದ ಮಾವೆಲಿಕ್ಕಾರದ 85 ವರ್ಷದ ನಾರಾಯಣನ್ ಪಿಳ್ಳೈ ಮಾಜಿ ವಕೀಲ ಮತ್ತು ಆಸ್ಟ್ರೇಲಿಯಾದ ಪ್ರಜೆ. ನಾರಾಯಣನ್ ಅವರು ಯಾವಾಗಲೂ ಹೊಸ ಕಾರುಗಳ ಬಗ್ಗೆ ಒಲವು ಹೊಂದಿದ್ದಾರೆ. ಅವರ ಸಂಪಾದನೆ ಆರಂಭಿಸಿದ ಬಳಿಕ ಅವರ ಮೊದಲ ಕಾರು ಆಡಿ ಫಾಕ್ಸ್ ಆಗಿತ್ತು, ಇದು ಅವರು ಆಸ್ಟ್ರೇಲಿಯಾದಲ್ಲಿ ಖರೀದಿಸಿದ ಆಡಿ 80ರ ಮರುಬ್ಯಾಡ್ಜ್ ಆವೃತ್ತಿಯಾಗಿದೆ.

ಇವರ ಕಾರು ಕ್ರೇಜ್ ಹೇಗಿರುತ್ತದೆ ಅಂದ್ರೆ 60ಕ್ಕೂ ಹೆಚ್ಚು ಕಾರುಗಳನ್ನು ಇಂದಿಗೂ ಹೊಂದಿಲ್ಲ. ಬದಲಿಗೆ ಅವರು ಒಂದು ಕಾರನ್ನು ಖರೀದಿಸಿದರೆ ಅದನ್ನು ಒಂದೆರಡು ವರ್ಷ ಬಳಸಿ ಆ ಕಾರನ್ನು ಮತ್ತೊಂದು ಮಾದರಿ ಅಥವಾ ಬ್ರ್ಯಾಂಡ್‌ಗೆ ಮಾರುವುದು ಅಥವಾ ಬದಲಿ (EXchang) ಮಾಡಿಕೊಳ್ಳುತ್ತಾರೆ. ಹೀಗೆ ಆಸ್ಟ್ರೇಲಿಯಾ ಹಾಗೂ ಲಂಡನ್‌ನಲ್ಲಿ ಅವರು ಹಲವು ಕಾರುಗಳನ್ನು ಬಳಸಿದ್ದಾರೆ.
ಅವರ ಪ್ರಕಾರ ಸುಮಾರು 43 ವರ್ಷಗಳನ್ನು ಆಸ್ಟ್ರೇಲಿಯಾದಲ್ಲಿ ಮತ್ತು 7 ವರ್ಷಗಳನ್ನು ಯುಕೆಯಲ್ಲಿ ಕಳೆದಿದ್ದಾರೆ. ಬಳಿಕ ಅವರು ಭಾರತಕ್ಕೆ ಬಂದಾಗ, ಅವರ ಮೊದಲ ಕಾರು ಫೋಕ್ಸ್‌ವ್ಯಾಗನ್ ಜೆಟ್ಟಾ ಆಗಿತ್ತು, ಅದನ್ನು ಅವರು ಮತ್ತೊಂದು ಕಾರಿಗೆ ವಿನಿಮಯ ಮಾಡಿಕೊಳ್ಳುವ ಮೊದಲು ಸುಮಾರು ಒಂದು ವರ್ಷ ಬಳಸಿದ್ದರು ಎಂದು ತಿಳಿಸಿದ್ದಾರೆ.

ಕ್ರಮೇಣ, ಅವರು ಐಷಾರಾಮಿ ಕಾರುಗಳತ್ತ ಆಕರ್ಷಿತರಾಗಿ ಸದ್ಯ ಅವರು ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲ್ಲಾ ಬ್ರ್ಯಾಂಡ್‌ಗಳಲ್ಲಿ, BMW ಬಗ್ಗೆ ಅಪಾರ ಒಲವನ್ನು ಹೊಂದಿದ್ದಾರೆ. 2008 ರಿಂದ ಅವರು ಪ್ರತ್ಯೇಕವಾಗಿ BMW ವಾಹನಗಳನ್ನು ಬಳಸಿದ್ದಾರೆ. ಕೇರಳದ EVM ಗ್ರೂಪ್ ಡೀಲರ್‌ಶಿಪ್‌ಗಳಿಂದ ಸುಮಾರು 14 ವಾಹನಗಳನ್ನು ಈವರೆಗೆ ಖರೀದಿಸಿರುವುದಾಗಿ ತಿಳಿಸಿದ್ದಾರೆ.
ಸದ್ಯ ನಾರಾಯಣನ್ ಪಿಳ್ಳೈ ಅವರ ಬಳಿ BMW 2 ಸರಣಿಯ ಸೆಡಾನ್ ಇದೆ. ಮೊದಲೇ ಹೇಳಿದಂತೆ ಅವರಿಗೆ ಡ್ರೈವಿಂಗ್ ಅಂದ್ರೆ ಸಖತ್ ಇಷ್ಟ, ಹಾಗಾಗಿಯೇ ಈ ವಯಸ್ಸಿನಲ್ಲಿಯೂ ಡ್ರೈವರ್‌ನನ್ನು ನೇಮಿಸಿಕೊಳ್ಳದೇ ಸ್ವತಃ ಅವರೇ ಓಡಿಸುತ್ತಾರೆ. ಲಾಂಗ್ ಡ್ರೈವ್ ಕೂಡ ಹೋಗುತ್ತಾರೆ. ಅವರು ತಮ್ಮ ಕಾರಿನಲ್ಲಿ ಆಸ್ಟ್ರೇಲಿಯದ ಪ್ರತಿಯೊಂದು ಭಾಗವನ್ನೂ ಕವರ್ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ.
ಸದ್ಯ ಐಷಾರಾಮಿ ಕಾರುಗಳ ಮೇಲೆ ಒಲವಾಗಲು ಕಾರಣ ಕೂಡ ತಿಳಿಸಿದ್ದಾರೆ. ಇತರ ಕಾರುಗಳಿಗೆ ಹೋಲಿಸಿದರೆ ಈ ಕಾರುಗಳು ಹೆಚ್ಚಿನ ಸುರಕ್ಷತೆ ನೀಡುತ್ತವೆ ಎಂದು ಹೇಳಿದ್ದಾರೆ. ನಾರಾಯಣನ್ ಪಿಳ್ಳೈ ಸದ್ಯಕ್ಕಿರುವ BMW 2 ವಾಹನವನ್ನು ಒಂದು ವರ್ಷದವರೆಗೆ ಬಳಸಿ ಬಳಿಕ ಮಾರುಕಟ್ಟೆಯಲ್ಲಿ ಉತ್ತಮ ಕಾರು ಬಂದರೆ ಬದಲಾಯಿಸುವುದಾಗಿ ಹೇಳಿದ್ದಾರೆ. ಈ ವಯಸ್ಸಿನಲ್ಲೂ ವೃದ್ಧನಿಗಿರುವ ಕಾರುಗಳ ಮೇಲಿನ ಕ್ರೇಜ್ ಕುರಿತು ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ಗಲ್ಲಿ ತಿಳಿಸಿ.
Source: behindwoods Ink/YouTube


Click it and Unblock the Notifications