Bharat NCAP: ಸುರಕ್ಷತೆಯಲ್ಲಿ ಟಾಟಾ ಹ್ಯಾರಿಯರ್, ಸಫಾರಿಗೆ ಮೊದಲ 5-ಸ್ಟಾರ್ ರೇಟಿಂಗ್.. ಇನ್ನೂ ಗಟ್ಟಿಯಾಯಿತು ನಂಬಿಕೆ!
ದೇಶದ ವಾಹನ ಸುರಕ್ಷತಾ ಪರೀಕ್ಷಾ ಸಂಸ್ಥೆ 'ಭಾರತ್ ನ್ಯೂ ಕಾರ್ ಅಸೆಸ್ಮೆಂಟ್ ಪ್ರೋಗ್ರಾಂ' (ಭಾರತ್ ಎನ್‌ಸಿಎಪಿ - Bharat NCAP), ಡಿ.15ರಿಂದ ಕಾರ್ಯಾರಂಭ ಮಾಡಿತ್ತು. ಟಾಟಾ ಹ್ಯಾರಿಯರ್ (Tata Harrier) ಮತ್ತು ಸಫಾರಿ (Safari)ಯನ್ನು ಭಾರತದಲ್ಲಿ ಕ್ರ್ಯಾಶ್ ಟೆಸ್ಟ್ ಮಾಡಿದ ಮೊದಲ ಕಾರುಗಳೆಂದು ಭಾರತ್ ಎನ್‌ಸಿಎಪಿ ಘೋಷಣೆ ಮಾಡಿದೆ.
ಭಾರತ್ ಎನ್‌ಸಿಎಪಿ ನಡೆಸಿದ ಸುರಕ್ಷತಾ ಪರೀಕ್ಷೆಯ ವಯಸ್ಕರ ರಕ್ಷಣೆ (Adult Occupant Protection) ಹಾಗೂ ಮಕ್ಕಳ ರಕ್ಷಣೆ (Child Occupant Protection) ವಿಭಾಗದಲ್ಲಿ ಟಾಟಾ ಹ್ಯಾರಿಯರ್, ಸಫಾರಿ ಎಸ್‌ಯುವಿಗಳು 5 - ಸ್ಟಾರ್ ರೇಟಿಂಗ್ ಪಡೆದುಕೊಂಡಿವೆ. ಭಾರತ್ ಎನ್‌ಸಿಎಪಿ ಸೈಡ್ ಇಂಪ್ಯಾಕ್ಟ್, ಫ್ರಂಟಲ್ ಇಂಪ್ಯಾಕ್ಟ್, ಪೋಲ್ ಸೈಡ್ ಇಂಪ್ಯಾಕ್ಟ್ ಸೇರಿದಂತೆ ವಿವಿಧ ಪರೀಕ್ಷೆಗಳನ್ನು ನಡೆಸಿದೆ.

ಟಾಟಾ ಹ್ಯಾರಿಯರ್, ಸಫಾರಿ ಕಾರುಗಳು, ವಯಸ್ಕರ ರಕ್ಷಣೆ ವಿಭಾಗದಲ್ಲಿ ಗರಿಷ್ಠ 32ಕ್ಕೆ 30.08 ಹಾಗೂ ಮಕ್ಕಳ ರಕ್ಷಣೆ ವಿಭಾಗದಲ್ಲಿ 49ಕ್ಕೆ 44.54 ಅಂಕಗಳನ್ನು ಪಡೆದಿವೆ. ಈ ಹಿಂದೆ, ಇವೆರೆಡು ಎಸ್‌ಯುವಿಗಳು ಗ್ಲೋಬಲ್ ಎನ್‌ಸಿಎಪಿ (Global NCAP) ನಡೆಸುವ ಕ್ರ್ಯಾಶ್ ಟೆಸ್ಟ್ ನಲ್ಲಿಯೂ 5 - ಸ್ಟಾರ್ ರೇಟಿಂಗ್ ಗಳಿಸುವ ಮೂಲಕ ಅತ್ಯುತ್ತಮ ಸುರಕ್ಷತಾ ಕಾರುಗಳಾಗಿ ಹೊರಹೊಮ್ಮಿದ್ದವು.
ವಯಸ್ಕರ ರಕ್ಷಣೆ ವಿಭಾಗದಲ್ಲಿ ಕನಿಷ್ಠ 27 ಮತ್ತು ಮಕ್ಕಳ ರಕ್ಷಣೆ ವಿಭಾಗದಲ್ಲೂ 41 ಅಂಕ ಪಡೆದ ಕಾರು, ಭಾರತ್ ಎನ್‌ಸಿಎಪಿಯಿಂದ 5 - ಸ್ಟಾರ್ ರೇಟಿಂಗ್ ಪಡೆಯುತ್ತದೆ. 3 - ಸ್ಟಾರ್ ರೇಟಿಂಗ್ ಹೊಂದಬೇಕಾದರೆ, 6 ಏರ್‌ಬ್ಯಾಗ್, ಫ್ರಂಟ್ & ರೇರ್ ಸೀಟ್ ಗಳಲ್ಲಿ ಸೀಟ್‌ಬೆಲ್ಟ್ ರಿಮೆಂಡರ್ ಸೇರಿದಂತೆ ವಿವಿಧ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿರಬೇಕು.

ಟಾಟಾ ಮೋಟಾರ್ಸ್, ಹ್ಯಾರಿಯರ್, ಸಫಾರಿ ಕಾರುಗಳಲ್ಲಿ ಹಲವು ಸುರಕ್ಷತಾ ವೈಶಿಷ್ಟ್ಯಗಳನ್ನು ನೀಡುತ್ತದೆ. ಈ ಎಸ್‌ಯುವಿಗಳು 7 - ಏರ್‌ಬ್ಯಾಗ್, ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಹಿಲ್ ಅಸಿಸ್ಟ್, 360-ಡಿಗ್ರಿ ಕ್ಯಾಮೆರಾ, TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಸೆಕೆಂಡ್ ರೋ ISOFIX ಚೈಲ್ಡ್ ಸೀಟ್ ಆಂಕಾರೇಜ್, ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್) ಸೇರಿದಂತೆ ಹಲವು ಸೇಫ್ಟಿ ಫೀಚರ್ಸ್ ಒಳಗೊಂಡಿದೆ.
ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಟಾಟಾ ಸಫಾರಿ ಫೇಸ್‌ಲಿಫ್ಟ್ ಎಸ್‌ಯುವಿಗಳು ಬಗ್ಗೆ ಮಾತನಾಡುವುದಾದರೆ, ಇದು ರೂ.16.19 ಲಕ್ಷ ಆರಂಭಿಕ ಬೆಲೆಯನ್ನು ಹೊಂದಿದೆ. ಸ್ಮಾರ್ಟ್ (ಒ), ಪ್ಯೂರ್ (ಒ), ಅಡ್ವೆಂಚರ್, ಅಡ್ವೆಂಚರ್ ಪ್ಲಸ್ ಸೇರಿದಂತೆ 10 ರೂಪಾಂತರಗಳು ಹಾಗೂ 7 ಬಣ್ಣದ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ.

ಟಾಟಾ ಸಫಾರಿ, 2 - ಲೀಟರ್ ಡೀಸೆಲ್ ಎಂಜಿನ್ ಮತ್ತು 6 - ಸ್ವೀಡ್ ಮ್ಯಾನುವಲ್/ 6 - ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ದೊರೆಯುತ್ತದೆ. 16.30 ಕಿ.ಮೀ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ. 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಡಿಜಿಟಲ್ ಡ್ರೈವರ್‌ಸ್ ಡಿಸ್ಪ್ಲೇ, ವೈರ್‌ಲೆಸ್ ಆಂಡ್ರಾಯ್ಡ್, ಆಪಲ್ ಕಾರ್ ಪ್ಲೇ, ಆಂಬಿಯೆಂಟ್ ಲೈಟಿಂಗ್ ಒಳಗೊಂಡಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.
ಟಾಟಾ ಹ್ಯಾರಿಯರ್ ಫೇಸ್‌ಲಿಫ್ಟ್ ಕುರಿತು ಹೇಳುವುದಾದರೆ, ರೂ.15.49 ಲಕ್ಷದಿಂದ ರೂ.26.44 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದರ 2.0 - ಲೀಟರ್ ಡೀಸೆಲ್ ಎಂಜಿನ್, 70 hp ಪವರ್ ಹಾಗೂ 350 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 6 - ಸ್ವೀಡ್ ಮ್ಯಾನುವಲ್, ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ದೊರೆಯುತ್ತದೆ.
ಹ್ಯಾರಿಯರ್ ಫೇಸ್‌ಲಿಫ್ಟ್ ವಿನ್ಯಾಸ ದೃಷ್ಟಿಯಿಂದ ಅತ್ಯುತ್ತಮವಾಗಿದ್ದು, ಗ್ರಿಲ್ ಹಾಗೂ ಸ್ಪ್ಲಿಟ್ ಹೆಡ್‌ಲೈಟ್ ಒಳಗೊಂಡಿದೆ. 12.3 - ಇಂಚಿನ ಇನ್ಫೋಟೈನ್‌ಮೆಂಟ್ ಟಚ್‌ಸ್ಕ್ರೀನ್ ಸಿಸ್ಟಮ್, ಎಲ್ಇಡಿ ಆಂಬಿಯೆಂಟ್ ಲೈಟಿಂಗ್, 10.25 - ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಹೊಸದಾದ 4 - ಸ್ಪೋಕ್ ಸ್ಟೀರಿಂಗ್ ವೀಲ್, ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.


Click it and Unblock the Notifications