BYD Seagull EV: 400 ರೇಂಜ್ ನೀಡುವ 'ಬಿವೈಡಿ ಸೀಗಲ್' ಇವಿ ಬರುತ್ತೆ: ವೆಚ್ಚ ಕಡಿತಕ್ಕೆ ಮೊದಲಸಲ ಸೋಡಿಯಂ ಬ್ಯಾಟರಿ ಬಳಕೆ!
ವಿಶ್ವದಲ್ಲೇ ಎಲಾನ್ ಮಾಸ್ಕ್ ಮಾಲೀಕತ್ವದ ಟೆಸ್ಲಾ ನಂತರ ಎರಡನೇ ಅತಿದೊಡ್ಡ ಎಲೆಕ್ಟ್ರಿಕ್ ಕಾರು ತಯಾರಕ ಕಂಪನಿಯಾಗಿ ಚೀನಾ ಮೂಲದ ಬಿವೈಡಿ ಗುರುತಿಸಿಕೊಂಡಿದೆ. ಇದೀಗ, ಗ್ರಾಹಕರ ಕೈಗೆಟುಕುವ ಬೆಲೆಯ ಸೀಗಲ್ (Seagull) ಕಾಂಪ್ಯಾಕ್ಟ್ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಚಿತ್ರಗಳನ್ನು ಮೊದಲ ಬಾರಿಗೆ ಬಹಿರಂಗ ಪಡಿಸಿದೆ.
ಭಾರತದ ಮಾರುಕಟ್ಟೆಯಲ್ಲೂ ಗರಿಷ್ಠ ರೇಂಜ್ ನೀಡುವ ಆಟ್ಟೋ3 ಎಸ್‌ಯುವಿ ಹಾಗೂ ಇ6 ಎಲೆಕ್ಟ್ರಿಕ್ ಎಂಪಿವಿಯನ್ನು ಮಾರಾಟ ಮಾಡಿ, ಬಿವೈಡಿ ಜನಪ್ರಿಯವಾಗಿದೆ. ಏಪ್ರಿಲ್ 18ರಂದು ನಡೆಯುವ ಶಾಂಘೈ ಆಟೋ ಶೋನಲ್ಲಿ 'ಸೀಗಲ್' ಇವಿಯನ್ನು ಅಧಿಕೃತವಾಗಿ ಅನಾವರಗೊಳಿಸಲಾಗುವುದು ಎಂದು ಕಂಪನಿ ಘೋಷಿಸಿದ್ದು, ಈ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಅನ್ನು ಚೀನಾ, ಯುರೋಪ್, ಇಸ್ರೇಲ್, ಥೈಲ್ಯಾಂಡ್ ಮತ್ತು ನ್ಯೂಜಿಲೆಂಡ್‌ನಲ್ಲಿ ಮಾರಾಟ ಮಾಡಲಾಗುವುದು ಎಂದು ಹೇಳಿದೆ.

ಬಿವೈಡಿಯ ನೂತನ ಸೀಗಲ್ ಇವಿ, 4 ಆಸನ ವ್ಯವಸ್ಥೆಯನ್ನು ಹೊಂದಿದ್ದು, ಟಾಟಾ ಟಿಯಾಗೊ ಇವಿಗಿಂತ ಕೊಂಚ ಉದ್ದವಾಗಿದೆ. ಇದರ ಸುತ್ತಳತೆ ಬಗ್ಗೆ ಹೇಳುವುದಾದರೆ, 3,780 ಎಂಎಂ ಉದ್ದ, 1,715 ಎಂಎಂ ಅಗಲ ಮತ್ತು 1,540 ಎಂಎಂ ಎತ್ತರವಿದೆ. ಜೊತೆಗೆ 4 ಡೋರ್ ಆಯ್ಕೆಯನ್ನು ಪಡೆದಿದ್ದು, ಪ್ರತಿಯೊಬ್ಬರನ್ನು ತನ್ನತ್ತ ಸೆಳೆಯುವ ಲುಕ್ ಹೊಂದಿದೆ.
ಸೀಗಲ್ ಎಲೆಕ್ಟ್ರಿಕ್ ಕಾರನ್ನು 'ಬಿವೈಡಿ' ಎರಡು ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಖರೀದಿಗೆ ನೀಡಲಿದೆಯಂತೆ. ಅವುಗಳೆಂದರೆ, 30 kWh ಹಾಗೂ 38 kWh (ಲಿಥಿಯಂ ಐಯಾನ್) ಬ್ಯಾಟರಿ ಪ್ಯಾಕ್. ಆದರೆ, ಹಲವು ಮಾಧ್ಯಮಗಳ ವರದಿ ಪ್ರಕಾರ, ನಿರ್ವಹಣಾ ವೆಚ್ಚವನ್ನು ಕಡಿಮೆಗೊಳಿಸಿ, ಗ್ರಾಹಕರಿಗೆ ದೊಡ್ಡ ಮಟ್ಟದ ಲಾಭ ನೀಡಲು ಬಿವೈಡಿ, ಈ ಸೀಗಲ್ ಕಾರಿನಲ್ಲಿ ಇದೇ ಮೊದಲ ಬಾರಿಗೆ ಸೋಡಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಉಪಯೋಗಿಸಿರಬಹುದು ಎಂದು ಹೇಳಲಾಗಿದೆ. ಅದಕ್ಕಾಗಿ ಶಾಂಘೈ ಆಟೋ ಶೋ ಆರಂಭವಾಗುವ ತನಕ ಕಾಯಲೇಬೇಕು.

ಬಿವೈಡಿ, ಸೀಗಲ್ ಎಲೆಕ್ಟ್ರಿಕ್ ಕಾರಿನಲ್ಲಿ ಬಳಕೆ ಮಾಡಿರುವ ಎಲೆಕ್ಟ್ರಿಕ್ ಮೋಟಾರ್, 74 hp ಅಥವಾ 94 hp ಪವರ್ ಉತ್ಪಾದಿಸಬಹುದು. ಜೊತೆಗೆ 130 kmph ಟಾಪ್ ಸ್ವೀಡ್ ಹೊಂದಿರಲಿದೆಯಂತೆ. ದೊಡ್ಡ ಬ್ಯಾಟರಿ ಪ್ಯಾಕ್ ಪಡೆದಿರುವ ಕಾರು, ಸಂಪೂರ್ಣ ಚಾರ್ಜಿನಲ್ಲಿ 405 km ಹಾಗೂ ಚಿಕ್ಕ ಬ್ಯಾಟರಿ ಪ್ಯಾಕ್ ಹೊಂದಿರುವ ಕಾರು, 305 km ರೇಂಜ್ ನೀಡುವ ಸಾಮರ್ಥ್ಯ ಪಡೆದಿರಲಿದೆ.
ಈ ಬಿವೈಡಿ ಸೀಗಲ್ ಎಲೆಕ್ಟ್ರಿಕ್ ಕಾರಿನ ಹೊರ ಭಾಗದ ವಿನ್ಯಾಸದ ಬಗ್ಗೆ ಕೊಂಚವೇ ಮಾಹಿತಿ ದೊರೆತಿದ್ದು, ಇದು ಆಕರ್ಷಕ ಹೆಡ್‌ಲೈಟ್ ಹೊಂದಿದೆ. ಫ್ರಂಟ್ ಬಂಪರ್‌ನ ಕೆಳ ಭಾಗದಲ್ಲಿ ದೊಡ್ಡದಾದ ಟ್ರೆಪೆಜಾಯ್ಡಲ್ ಏರ್ ಇನ್‌ಟೇಕ್ ಅನ್ನು ಪಡೆದುಕೊಂಡಿದೆ. ಆದರೆ, ಕ್ಯಾಬಿನ್ ಹೇಗಿರಲಿದೆ ಎಂಬುದರ ಬಗ್ಗೆ ಕಂಪನಿ ಯಾವುದೇ ವಿಚಾರವನ್ನು ಬಹಿರಂಗಪಡಿಸಿಲ್ಲ. ದೊಡ್ಡದಾದ ಡಿಜಿಟಲ್ ಇನ್ಸ್ಟ್ರುಮೆಂಟ್ ಪ್ಯಾನೆಲ್, ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಹೊಂದಿರಬಹುದು.
ಭಾರತದ ಮಾರುಕಟ್ಟೆಯಲ್ಲಿ ಬಿವೈಡಿ ಸೇಲ್ ಮಾಡುವ ಕಾರುಗಳ ಬಗ್ಗೆ ಒಂದಷ್ಟು ಮಾತನಾಡೋಣ. ಆಟ್ಟೋ3 ಎಲೆಕ್ಟ್ರಿಕ್ ಎಸ್‌ಯುವಿ ರೂ. 33.99 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು, ಫುಲ್ ಚಾರ್ಜಿನಲ್ಲಿ 521 km ರೇಂಜ್ ನೀಡಲಿದೆ. ಇ6 ಎಲೆಕ್ಟ್ರಿಕ್ ಎಂಪಿವಿ, ರೂ.29.15 ಲಕ್ಷ ಆರಂಭಿಕ ದರದಲ್ಲಿ ಸಿಗಲಿದ್ದು, 415 km ರೇಂಜ್ ಕೊಡಲಿದೆ.
ಇನ್ನು, ಬಿವೈಡಿಯ ಸೀಗಲ್ ಕಾಂಪ್ಯಾಕ್ಟ್ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಶಾಂಘೈ ಆಟೋ ಶೋದಲ್ಲಿ ಪ್ರದರ್ಶನಗೊಳ್ಳಲಿದ್ದು, ಅಲ್ಲೇ ಈ ಕಾರಿನ ಬಗ್ಗೆ ಸಂಪೂರ್ಣ ಮಾಹಿತಿ ದೊರೆಯಲಿದೆ. ಬಹುತೇಕ ವಿದೇಶಿ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುತ್ತಿದ್ದು, ದೇಶೀಯ ಮಾರುಕಟ್ಟೆಯಲ್ಲಿ ಯಾವಾಗ ಬರಲಿದೆ ಎಂಬುದರ ಬಗ್ಗೆ ಖಚಿತ ಮಾಹಿತಿಯಿಲ್ಲ. ಒಂದೊಮ್ಮೆ ಲಾಂಚ್ ಆದ್ರೆ ಟಾಟಾ ಟಿಯಾಗೊ ಇವಿ ಹಾಗೂ ಸಿಟ್ರಸ್ ಇಸಿ3 ಎಲೆಕ್ಟ್ರಿಕ್ ಕಾರುಗಳಿಗೆ ಭಾರೀ ಪೈಪೋಟಿ ನೀಡಲಿದೆ.


Click it and Unblock the Notifications








