BYD Seagull: 405 ಕಿಮೀ ರೇಂಜ್‌ನ ತೀರಾ ಕಡಿಮೆ ಬೆಲೆಯ ಬಿವೈಡಿ ಸೀಗಲ್ ಇವಿ ಹೆಸರು ನೋಂದಣಿ, ಪ್ರಳಯ ಪಕ್ಕಾ..!
ಚೀನಾದ ಪ್ರಮುಖ ಕಾರು ತಯಾರಕ ಕಂಪನಿ ಬಿವೈಡಿ (BYD), ಭಾರತದ ಮಾರುಕಟ್ಟೆಯಲ್ಲಿ ಇ6, ಆಟ್ಟೋ 3 ಎಂಬ ಎಲೆಕ್ಟ್ರಿಕ್ ಕಾರುಗಳನ್ನು ಸೇಲ್ ಮಾಡುತ್ತಿದೆ. ಅವೆಲ್ಲ ಕೊಂಚ ದುಬಾರಿಯಾಗಿವೆ. ಈ ಕಾರಣಕ್ಕೆ ದೇಶದ ಮಧ್ಯಮ ವರ್ಗದ ಜನರಿಗೆ ಕೈಗೆಟುಕುವ ಬೆಲೆಯಲ್ಲಿ ಎಲೆಕ್ಟ್ರಿಕ್ ಕಾರನ್ನು ನೀಡಲು ಕಂಪನಿ ತೀರ್ಮಾನಿಸಿದಂತೆ ಕಾಣುತ್ತಿದೆ.
ಇದೀಗ, ವಿದೇಶಿ ಮಾರುಕಟ್ಟೆಯಲ್ಲಿ ಅಬ್ಬರಿಸುತ್ತಿರುವ ಕಡಿಮೆ ಬೆಲೆಯ 'ಸೀಗಲ್' ಇವಿ ಹೆಸರನ್ನು ಬಿವೈಡಿ ಭಾರತದಲ್ಲಿ ಟ್ರೇಡ್ ಮಾರ್ಕ್ ಮಾಡಿದೆ. ಈ ಮೂಲಕ ಮುಂಬರುವ ತಿಂಗಳಲ್ಲಿ ದೇಶದಲ್ಲಿ ಸೀಗಲ್ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸುತ್ತೇವೆ ಎಂಬ ಸ್ಪಷ್ಟ ಸಂದೇಶ ನೀಡಿದೆ. ಒಂದೊಮ್ಮೆ ಈ ಕಾರು ಲಾಂಚ್ ಆದ್ರೆ, ಟಾಟಾ ಟಿಯಾಗೊ ಇವಿ, ಎಂಜಿ ಕಾಮೆಟ್ ಇವಿ ಹಾಗೂ ಸಿಟ್ರಸ್ ಇಸಿ3 ಕಾರುಗಳಿಗೆ ಪ್ರಬಲ ಪ್ರತಿಸ್ಪರ್ಧಿಯಾಗಲಿದೆ.

ಚೀನಾದಲ್ಲಿ ಖರೀದಿಗೆ ಸಿಗುವ ಬಿವೈಡಿ ಸೀಗಲ್ ಇವಿ ವಿಶೇಷತೆಗಳ ಬಗ್ಗೆ ಮಾತನಾಡುವುದಾದರೆ, ಅಲ್ಲಿ ಈ ಕಾರು, ಎರಡು ಬ್ಯಾಟರಿ ಪ್ಯಾಕ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಅವುಗಳೆಂದರೆ, 30 kWh ಹಾಗೂ 38 kWh ಬ್ಯಾಟರಿ ಪ್ಯಾಕ್. ಅದಕ್ಕೆ ಅನುಗುಣವಾಗಿ ಕ್ರಮವಾಗಿ ಸಂಪೂರ್ಣ ಚಾರ್ಜಿನಲ್ಲಿ 305 km ರಿಂದ 405 km ರೇಂಜ್ ನೀಡಲಿದ್ದು, 130 km/h ಟಾಪ್ ಸ್ವೀಡ್ ಹೊಂದಿದೆ.
'ಸೀಗಲ್' ಬಿವೈಡಿಯ ಓಷನ್ ಸೀರಿಯಸ್ ಕಾರಾಗಿದ್ದು, ಈ ಸರಣಿಯಲ್ಲಿ ಕಂಪನಿಯು ಈಗಾಗಲೇ, ಸೀ ಲಯನ್ ಎಸ್‌ಯುವಿ, ಡಾಲ್ಫಿನ್ ಹಾಗೂ ಸೀಲ್ ಸೆಡಾನ್ ಅನ್ನು ಮಾರಾಟ ಮಾಡುತ್ತಿದೆ. ವಿನ್ಯಾಸದ ದೃಷ್ಟಿಯಿಂದ ಹೇಳುವುದಾದರೆ, ಸೀಗಲ್ ಕಾರು ಅತ್ಯುತ್ತಮವಾಗಿದೆ. ಅತ್ಯಾಧುನಿಕ ಪ್ರೊಜೆಕ್ಟರ್ ಹೆಡ್‌ಲೈಟ್ಸ್, ಎಲ್ಇಡಿ ಟೈಲ್ ಲೈಟ್ಸ್ ಅನ್ನು ಹೊಂದಿದೆ. ಜೊತೆಗೆ 2500 ಎಂಎಂ ವೀಲ್‌ಬೇಸ್ ಪಡೆದಿದೆ.

ಬಿವೈಡಿ ಸೀಗಲ್ ಇವಿ ಪಡೆದುಕೊಂಡಿರುವ ವೈಶಿಷ್ಟ್ಯದ ಬಗ್ಗೆ ಮಾತನಾಡುವುದಾದರೆ, ಇದು, 5 ಇಂಚಿನ ಇನ್‌ಸ್ಟ್ರುಮೆಂಟ್ ಕನ್ಸೋಲ್, 12.8 ಇಂಚಿನ ಇನ್ಫೋಟೈನ್‌ಮೆಂಟ್ ಸ್ಕ್ರೀನ್, ಪವರ್ಡ್ ಡ್ರೈವರ್ ಸೀಟ್ ಹಾಗೂ ವೈರ್‌ಲೆಸ್ ಚಾರ್ಜಿಂಗ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಬೆಲೆ ವಿಚಾರವಾಗಿ ಹೇಳುವುದಾದರೆ, ಚೀನಾದಲ್ಲಿ ಈ ಕಾರು, CNY 78,800 (ಭಾರತ ರೂಪಾಯಿ 9.4 ಲಕ್ಷ) ದಿಂದ CNY 95,800 (ರೂ.11.43 ಲಕ್ಷ) ದರದಲ್ಲಿ ಖರೀದಿಗೆ ಸಿಗಲಿದೆ.
ಭಾರತದಲ್ಲೂ ಹೆಚ್ಚುಕಮ್ಮಿ ಇದೇ ಬೆಲೆ ಹಾಗೂ ವೈಶಿಷ್ಟ್ಯದೊಂದಿಗೆ ಖರೀದಿಗೆ ಸಿಗುವ ಸಾಧ್ಯತೆಯಿದೆ. ಬಿವೈಡಿ ಸೀಗಲ್ ಇವಿ ಮಾತ್ರವಲ್ಲದೆ, ಸೀ ಲಯನ್ (Sea Lion) ಎಲೆಕ್ಟ್ರಿಕ್ ಕಾರಿನ ಹೆಸರನ್ನು ಟ್ರೇಡ್ ಮಾರ್ಕ್ ಮಾಡಿದೆ. ಈ ಕಾರು, 82.5 kWh ಬ್ಯಾಟರಿ ಪ್ಯಾಕ್ ಹೊಂದಿರುವ ನೀರಿಕ್ಷೆಯಿದ್ದು, ಫುಲ್ ಚಾರ್ಜಿನಲ್ಲಿ 700 km ರೇಂಜ್ ನೀಡಬಹುದು ಎಂದು ಅಂದಾಜಿಸಲಾಗಿದೆ. ವಿದೇಶಿ ಮಾರುಕಟ್ಟೆಯಲ್ಲಿ ಸೀ ಲಯನ್ ಕಾರಿಗೆ ಟೆಸ್ಲಾ ಮಾಡೆಲ್ ವೈ ಪ್ರಬಲ ಪ್ರತಿಸ್ಪರ್ಧಿಯಾಗಿದೆ.
ಬಿವೈಡಿ ಸೀ ಲಯನ್, ರೇರ್ ವೀಲ್ ಡ್ರೈವ್ ಹಾಗೂ ಆಲ್ ವೀಲ್ ಡ್ರೈವ್ ಆಯ್ಕೆಯೊಂದಿಗೆ ಮುಂಬರುವ ದಿನಗಳಲ್ಲಿ ಭಾರತದಲ್ಲಿ ಖರೀದಿಗೆ ಸಿಗಬಹುದು. ಇದರ ಎಲೆಕ್ಟ್ರಿಕ್ ಮೋಟಾರ್ ಆಟ್ಟೋ 3ನಂತೆಯೇ 204 hp ಗರಿಷ್ಠ ಪವರ್ ಹಾಗೂ 310 Nm ಪೀಕ್ ಟಾರ್ಕ್ ಉತ್ಪಾದಿಸಬಹುದು. ಆಲ್ ವೀಲ್ ಡ್ರೈವ್ ತಂತ್ರಜ್ಞಾನ ಹೊಂದಿರುವ ಕಾರು, ಡುಯಲ್ ಮೋಟಾರ್ ಸೆಟಪ್ ಪಡೆದಿರಲಿದ್ದು, 530 hp ಪವರ್ ಹೊರಹಾಕಬಹುದು.
ಬಿವೈಡಿ ಸೀ ಲಯನ್ ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿರಲಿದ್ದು, ಪ್ರಮುಖವಾಗಿ ದೇಶದಲ್ಲಿ ಖರೀದಿಗೆ ಸಿಗಬೇಕಾದರೆ, 15.6 - ಇಂಚಿನ ಟಚ್‌ಸ್ಕ್ರೀನ್ ಮತ್ತು 10.25 - ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಪಡೆದಿರುವ ಸಾಧ್ಯತೆಯಿದೆ. ಬೆಲೆ ವಿಚಾರವಾಗಿ ಮಾತನಾಡಬೇಕಾದರೇ ಬಿವೈಡಿ ಸೀ ಲಯನ್, ಆಟ್ಟೋ 3ಗಿಂತ ಹೆಚ್ಚಿನ ಬೆಲೆಯನ್ನು ಹೊಂದಿರುವ ಸಾಧ್ಯತೆಯಿದೆ. ಸದ್ಯ, ಭಾರತದಲ್ಲಿ ಆಟ್ಟೋ 3 ಎಲೆಕ್ಟ್ರಿಕ್ ಕಾರು ರೂ.33.99 ಲಕ್ಷ ಆರಂಭಿಕ ಬೆಲೆಯನ್ನು ಹೊಂದಿದೆ.
ಇನ್ನು, 405 ಕಿಮೀ ರೇಂಜ್‌ನ ತೀರಾ ಕಡಿಮೆ ಬೆಲೆಯ ಸೀಗಲ್ ಇವಿ ಹೆಸರನ್ನು ಬಿವೈಡಿ ಟ್ರೇಡ್ ಮಾರ್ಕ್ ಮಾಡಿದೆ. ಇದರಿಂದ ಗ್ರಾಹಕರಿಗೆ ಸಾಕಷ್ಟು ನೀರಿಕ್ಷೆಗಳು ಹೆಚ್ಚಾಗಿದೆ. ಟಾಟಾ ಟಿಯಾಗೊ ಇವಿ, ಎಂಜಿ ಕಾಮೆಟ್ ಇವಿ ಹಾಗೂ ಸಿಟ್ರಸ್ ಇಸಿ3 ಕಾರುಗಳಿಗೆ ಈ ಕಾರು ಟಫ್ ಫೈಟ್ ನೀಡಲಿದೆ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ. ಎಲ್ಲದಕ್ಕೂ ಸೀಗಲ್ ಇವಿ ಬಿಡುಗಡೆಯಾದ ಮೇಲೆ ಉತ್ತರ ಸಿಗಲಿದೆ.


Click it and Unblock the Notifications








